104 ಉಪಗ್ರಹ ಉಡಾವಣೆ: ಇಸ್ರೋ ದಾಖಲೆ

ಕರಾವಳಿ ಕರ್ನಾಟಕ ವರದಿ
ಶ್ರೀಹರಿಕೋಟಾ:
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಬಹು ನಿರೀಕ್ಷಿತ ಮತ್ತು ವಿಶ್ವದಾಖಲೆಯ ಏಕಕಾಲಕ್ಕೆ 104 ಉಪಗ್ರಹಗಳನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಸ್ರೋದ ಯಶಸ್ವೀ ಉಡಾವಣಾ ವಾಹಕಗಳಲ್ಲಿ ಒಂದಾದ ಪಿಎಸ್‌ಎಲ್‌ವಿ ಸಿ 37 ವಾಹಕದ ಮೂಲಕ ಕಾರ್ಟೋಸ್ಯಾಟ್-2 ಸೇರಿದಂತೆ ಇತರೆ 103 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆಂಧ್ರ ಪ್ರದೇಶದ  ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ ಸುಮಾರು 9.28ರ ವೇಳೆಗೆ ಉಡಾವಣೆ ಮಾಡಲಾಯಿತು. ಕಾರ್ಟೋಸ್ಯಾಟ್ -2 ಭೂವೀಕ್ಷಣಾ ಕಾರ್ಯ ನಡೆಸುವ ಉಪಗ್ರಹವಾಗಿದ್ದು, ಇದರೊಂದಿಗೆ  ಅಮೆರಿಕ, ಜರ್ಮನಿ, ಇಸ್ರೋಲ್‌, ಯುಎಇ, ನೆದರ್‌ಲ್ಯಾಂಡ್, ಬೆಲ್ಜಿಯಂ ಸೇರಿದಂತೆ ವಿದೇಶದ 101 ವಾಣಿಜ್ಯ ಉದ್ದೇಶಿತ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.

104 ಉಪಗ್ರಹಗಳ ಪೈಕಿ ಭೂವೀಕ್ಷಣಾ ಕಾರ್ಯ ನಡೆಸುವ ಅಮೆರಿಕ ಸಂಸ್ಥೆಯ 88 ಚಿಕ್ಕ ಉಪಗ್ರಹ(ಕ್ಯೂಬ್‌ಸ್ಯಾಟ್‌)ಗಳು ಕಕ್ಷೆ ಸೇರಿದ್ದು, ಭಾರತದ ಇದಲ್ಲದೆ ಕಾರ್ಟೋಸ್ಯಾಟ್–2, ಐಎನ್‌ಎಸ್‌-1ಎ ಹಾಗೂ ಐಎನ್‌ಎಸ್‌–1ಬಿ  ಸೇರಿದಂತೆ  ಭಾರತದ ಮೂರು ಉಪಗ್ರಹಗಳು ಉಡಾವಣೆಯಾಗಿವೆ. ಪಿಎಸ್‌ಎಲ್‌ವಿ–ಸಿ37 ಉಡಾವಣಾ ವಾಹಕ ಒಟ್ಟು1500 ಕೆ.ಜಿ. ತೂಕದ 104 ಉಪಗ್ರಹಗಳನ್ನು ಯಶಸ್ವಿಯಾಗಿ ಹೊತ್ತೊಯ್ಯುವ ಮೂಲಕ ಇಸ್ರೋ ಹೊಸ  ಮೈಲಿಗಲ್ಲು ತಲುಪಿದೆ.
 
ಪಿಎಸ್ ಎಲ್ ವಿ-37 ಮೂಲಕ 104 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡುವ ಮೂಲಕ ಭಾರತ ಗರಿಷ್ಠ ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿದ ಮೊದಲ ದೇಶ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ  2014ರ ಜೂನ್ ನಲ್ಲಿ ರಷ್ಯಾದ ಡ್ನೆಪ್ರ್ ರಾಕೆಟ್ 37 ಉಪಗ್ರಹಗಳನ್ನು ಏಕಕಾಲಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ಈ ವರೆಗಿನ ಗರಿಷ್ಠ ದಾಖಲೆಯಾಗಿತ್ತು. ಬಳಿಕ ನಾಸಾ ಕೂಡ 29 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತು. ಇದೀಗ  ಭಾರತ ಅದನ್ನೂ ಮಿರಿ ಅಂದರೆ ಬರೊಬ್ಬರಿ 104 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡುವ ಮೂಲಕ ಗರಿಷ್ಟ ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿದ ದೇಶ ಎಂಬ ಕೀರ್ತಿಗೆ ಭಾಜನವಾಗಿದೆ.

ಬೆಳಗ್ಗೆ ಸುಮಾರು 9.28ರ ವೇಳೆಗೆ ನಭಕ್ಕೆ ಹಾರಿದ ಪಿಎಸ್‌ಎಲ್‌ವಿ ಸಿ 37 ರಾಕೆಟ್ ಅರ್ಧ ಗಂಟೆಯ ಬಳಿಕ ಅಂದರೆ ಸುಮಾರು 10.00 ಸುಮಾರಿಗೆ ಎಲ್ಲ 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಕಳೆದ ವರ್ಷ ಇಸ್ರೊ ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. 2018 ರಲ್ಲಿ ಚಂದ್ರಯಾನ–2 ಮತ್ತು ಸೂರ್ಯನನ್ನು ಅಧ್ಯಯನ ಮಾಡಲು 2019ರಲ್ಲಿ ಆದಿತ್ಯಾ–ಎಲ್‌1 ಉಪಗ್ರಹಗಳ ಉಡಾವಣೆ ಇಸ್ರೊದ  ಮುಂದಿನ ಯೋಜನೆಗಳಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Related Tags: ISRO Creates History, 104 Satelites Launch, Shriharikota
 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ