ಯಾವ ಸಂಸ್ಕೃತಿ? ಮತ್ತು ಯಾರು ಉಳಿಸುವುದು?

ದಿನೇಶ್ ಅಮೀನ್ ಮಟ್ಟು
ಜಲ್ಲಿಕಟ್ಟು,ಕಂಬಳ ನಿಷೇಧದ ಹಿನ್ನೆಲೆಯಲ್ಲಿ ಸಂಸ್ಕೃತಿ ಉಳಿಸಬೇಕೆಂಬ ಕೂಗೆದ್ದಿದೆ. ನಮ್ಮ ಸಂಸ್ಕೃತಿಯನ್ನು ಖಂಡಿತ ಉಳಿಸಿಕೊಳ್ಳಬೇಕು. ಆದರೆ ಯಾವ ಸಂಸ್ಕೃತಿ? ಯಾರು ಉಳಿಸುವುದು? ಮತ್ತು ಹೇಗೆ ಉಳಿಸುವುದು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಬೇಡವೇ?

ನನ್ನೂರಿನಿಂದಲೇ ಪ್ರಾರಂಭಿಸುವ. ಭೂತದ ಕೋಲವನ್ನು ತುಳುನಾಡ ಸಂಸ್ಕೃತಿ ಎಂದು ಜಗವೆಲ್ಲ ಹಾಡಿ ಕೊಂಡಾಡುತ್ತಿದೆ. ಅದನ್ನು ಉಳಿಸಿಕೊಂಡು ಹೋಗಬೇಕೆನ್ನುವ ಕೂಗು ಜತೆಯಲ್ಲಿಯೇ ಕೇಳುತ್ತಿದೆ. ಹಾಗಿದ್ದರೆ ಅದನ್ನು ಉಳಿಸುವವರು ಯಾರು? ಭೂತದ ಪಾತ್ರಧಾರಣೆ ಮಾಡಿ ಕೋಲ ಕಟ್ಟುವವರು (ಪ್ರದರ್ಶಿಸುವವರು) ದಲಿತ ಸಮುದಾಯಕ್ಕೆ ಸೇರಿರುವ ನಲ್ಕೆಯವರು ಮತ್ತು ಪಂಬದರು, ಬೇರೆ ಯಾರು ಕಟ್ಟುವಂತಿಲ್ಲ. ಅವರು ನಾಳೆ ಕೋಲ ಕಟ್ಟಲು ನಿರಾಕರಿಸಿದರೆ ಭೂತದ ಕೋಲ ಎಂಬ ತುಳುನಾಡ ಸಂಸ್ಕೃತಿ ಅಳಿದುಹೋಗುತ್ತದೆ.

ಮನುಷ್ಯರೆನಿಸಿಕೊಂಡ ನಾವೆಲ್ಲ ನಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಯಿದೆ: ನಮ್ಮ ಮಕ್ಕಳು ಡಾಕ್ಟರ್,ಎಂಜನಿಯರ್, ಪತ್ರಕರ್ತರು, ಅಧಿಕಾರಿಗಳಾಗಬೇಕು. ಆದರೆ ನಲ್ಕೆಯವರ, ಪಂಬದರ ಮಕ್ಕಳು ಮಾತ್ರ ಶಾಲೆಗೆ ಹೋಗದೆ, ಬೇರೆ ನೌಕರಿಯನ್ನೂ ಮಾಡದೆ ತುಳುನಾಡ ಸಂಸ್ಕೃತಿಯನ್ನು ಉಳಿಸಲು ವಂಶಪಾರಂಪರ್ಯವಾಗಿ ಕೋಲ ಕಟ್ಟುತ್ತಾ, ಆಟಿದ ಕಳಂಜ, ಕಂಗೀಲು ಕುಣಿಯುತ್ತಾ ಇರಬೇಕೇ? ಅವರು ಡಾಕ್ಟರ್,ಎಂಜನಿಯರ್, ಅಧಿಕಾರಿಗಳು ಆಗುವುದು ಬೇಡವೇ?

ಹೌದು, ಭೂತದ ಕೋಲ ನೋಡುವುದೇ ಒಂದು ಸಂಭ್ರಮ. ಭೂತದ ಪಾತ್ರಧಾರಿಗಳ ಆವೇಶವೇನು, ಕುಣಿದು ಕುಪ್ಪಳಿಸುವುದೇನು, ಬೆಂಕಿಯ ಜತೆ ಆಟವಾಡುವುದೇನು, ತಲೆಗೆ ಬಡಿದು ರಕ್ತ ಸುರಿಸುವುದೇನು, ಹಸಿಕೋಳಿ ತಿನ್ನುವುದೇನು,.. ಈ ರೀತಿ ಮಾಡಿದ ಆ ಪಾತ್ರಧಾರಿಗೆ 40ಕ್ಕೆ ಮುಪ್ಪು ಬರುತ್ತದೆ. ಸೊಂಟ,ಬೆನ್ನು,ಕುತ್ತಿಗೆ ನೋವು, ನಿದ್ದೆಕೆಟ್ಟ ಕಾರಣಕ್ಕೆ ನೂರೆಂಟು ಬಗೆಯ ಕಾಯಿಲೆ ಎಲ್ಲವನ್ನೂ ಆತ ಅನುಭವಿಸುತ್ತಾನೆ. ಈ ಭಾಗ್ಯಕ್ಕಾಗಿ ಆತನ ಮಗನೂ ತುಳುನಾಡ ಸಂಸ್ಕೃತಿ ಉಳಿಸಲು ಕೋಲ ಕಟ್ಟಲು ಅಂಗಣಕ್ಕೆ ಹಾರಬೇಕಾ?

Related Tags: Bhootada Kola, Culture, Tulunadu, Nalke, Pambadas, Dinesh Amin Mattu, Kambala, Bhootaaraadhane
 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ