ರಷ್ಯಾದಿಂದ ಕಾರವಾರ: ಮೂಕ ಹಕ್ಕಿಗಳ ಕಲರವ
ಅನಸ್ಟಿಷಿಯಾ ವಿವಾಹ ಬಳಿಕ ಕರಾವಳಿ ಕರ್ನಾಟಕದ ಕ್ರೈಸ್ತ ಸಂಪ್ರದಾಯದಂತೆ ಪತಿಯೊಂದಿಗೆ ಇಲ್ಲಿಯೇ ವಾಸಿಸಲಿದ್ದಾರೆ.

ಕರಾವಳಿಕರ್ನಾಟಕ ವರದಿ
ಕಾರವಾರ:
ಪ್ರೀತಿಗೆ ದೇಶ-ಭಾಷೆಗಳ ಗಡಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾರವಾರದ ಮೆಲ್ವಿನ್‌, ರಷ್ಯಾದ ಯುವತಿ ಅನಸ್ಟಿಷಿಯಾರನ್ನು ಕ್ರೈಸ್ತ ಸಂಪ್ರದಾಯದಂತೆ ಸದಾಶಿವಗಡದ ಕ್ರೈಸ್ತ ಸಭಾಭವನದಲ್ಲಿ ವಿವಾಹವಾಗಿದ್ದಾರೆ.

ಮಾತು ಬಾರದ ಇವರಿಬ್ಬರು ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದು, ಗೆಳೆತನ ಮುಂದುವರಿದು ಪ್ರೀತಿ ಹುಟ್ಟಿತು.

ಅನಸ್ಟಿಷಿಯಾ ಅವರ ಮನೆಯಲ್ಲಿ ಈ ಮದುವೆಗೆ ಮೊದಲು ವಿರೋಧ ವ್ಯಕ್ತವಾಗಿದ್ದರೂ ಮಗಳ ಹಟ ಹಿಡಿದ ಕಾರಣ ಪಾಲಕರು ಒಪ್ಪಿಗೆ ಸೂಚಿಸಿದ್ದರು. ಪೋಷಕರೇ ಮುಂದೆ ನಿಂತು ವಿವಾಹ ನಡೆಸಿಕೊಟ್ಟರು.

ಐಟಿಐ ಓದಿರುವ ಮೆಲ್ವಿನ್‌ ವಾಹನಗಳಿಗೆ ಬಣ್ಣ ಸ್ಪ್ರೇ ಮಾಡುವ ಕೆಲಸದಲ್ಲಿದ್ದಾರೆ. ಅನಸ್ಟಿಷಿಯಾ ತಾಂತ್ರಿಕ ಶಿಕ್ಷಣ ಪಡೆದಿದ್ದಾರೆ ಎನ್ನಲಾಗಿದೆ.
ಮೆಲ್ವಿನ್ ಅವರಿಗೆ ತಾಯಿ ಮಾತ್ರ ಇದ್ದು, ಸಮಾರಂಭದಲ್ಲಿ ಮೆಲ್ವಿನ್‌ ಅವರ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಅನಸ್ಟಿಷಿಯಾ ವಿವಾಹ ಬಳಿಕ ಕರಾವಳಿ ಕರ್ನಾಟಕದ ಕ್ರೈಸ್ತ ಸಂಪ್ರದಾಯದಂತೆ ಪತಿಯೊಂದಿಗೆ ಇಲ್ಲಿಯೇ ವಾಸಿಸಲಿದ್ದಾರೆ.

ಮಾತಿಲ್ಲ-ಕತೆಯಿಲ್ಲ, ಪ್ರೀತಿ ಹುಟ್ಟಿತು ಹೇಗೆ?

ಕಾರವಾರದ ಗ್ಯಾರೇಜ್ ಒಂದರಲ್ಲಿ ಹೆಲ್ಪರ್ ಆಗಿರುವ ಮೆಲ್ವಿನ್ ಐದು ವರ್ಷಗಳ ಹಿಂದೆ ಕೆಲಸವೊಂದರ ಮೇಲೆ ಬೆಂಗಳೂರಿಗೆ ಹೋಗಿದ್ದರು. ಅಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ಬಂದ ಅನಸ್ಟಿಷಿಯಾರನ್ನು ಮೊದಲ ಬಾರಿ ನೋಡಿದರು. ಇಬ್ಬರಿಗೂ ತಮಗಿಬ್ಬರಿಗೂ ಮಾತಾಡಲು ಬಾರದು, ಕಿವಿ ಕೇಳಿಸದು ಎಂಬುದು ಅರಿವಾಯಿತು. ಸಂಜ್ನೆಗಳ ಮೂಲಕ ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದರು. ಆ ಬಳಿಕ ಮೆಲ್ವಿನ್ ಕಾರವಾರಕ್ಕೆ ಮರಳಿದ್ದು, ಅನಸ್ಟಿಷಿಯಾ ಮಾಸ್ಕೋಗೆ ತನ್ನ ತಾಯ್ನಾಡಿಗೆ ಮರಳಿದರು. ಆದರೆ ಫೇಸ್‌ಬುಕ್ ಮೂಲಕ ಇಬ್ಬರೂ ತಮ್ಮ ಗೆಳೆತನ ಮುಂದುವರಿಸಿದರು. ಎರಡು ವರ್ಷ ಹಿಂದೆ ಅನಸ್ಟಿಷಿಯಾ ಬೆಂಗಳೂರಿನಲ್ಲಿ ವಿಶೇಷ ಸ್ಲೀಚ್ ಎಂಡ್ ಹಿಯರಿಂಗ್ ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದು, ಮೆಲ್ವಿನ್ ಕೂಡ ಅದೇ ಶಾಲೆಗೆ ತರಬೇತಿಗೆ ದಾಖಲಾದರು. ಇದೇ ಸಂದರ್ಭ ತಾವಿಬ್ಬರೂ ಮದುವೆಯಾಗಿ ಜೀವನಪೂರ್ತಿ ಜೊತೆಯಾಗಿರಬೇಕೆಂಬ ಪ್ರಬಲ ಆಸೆಯೊಂದು, ಒಬ್ಬರನ್ನೊಬ್ಬರು ಅಗಲಿರಲಾರದ ಪ್ರೀತಿಯೊಂದು ಹೆಮ್ಮರವಾಗಿ ಅವರಲ್ಲಿ ಬೆಳೆಯಿತು.

ಮೆಲ್ವಿನ್ ತಾಯಿ ಮಗನ ಕನಸಿಗೆ ಆಸರೆಯಾದರು. ಮಗ ತನ್ನ ದುಡಿಮೆಗೆ ತಾನೇ ದಾರಿ ಮಾಡಿಕೊಂಡು ಕೆಲಸ ಮಾಡಿ ಜೀವನ ಸಾಗಿಸುತ್ತಾ ಇದೀಗ ಒಬ್ಬ ಸುಂದರ ಮತ್ತು ಒಳ್ಳೆಯ ಯುವತಿ ಅನಸ್ಟಿಷಿಯಾರನ್ನು ಮದುವೆಯಾಗಬಯಸಿದ್ದು, ಮಗನ ಬದುಕಿನಲ್ಲಿ ಒಳ್ಳೆಯ ದಿನಗಳು ಬಂದವು ಎಂದು ತಾಯಿಗೆ ಅನಿಸಿತು. ಮೆಲ್ವಿನ್ ತಂದೆ ಒಂದು ವರ್ಷದ ಹಿಂದಷ್ಟೇ ನಿಧನ ಹೊಂದಿದ್ದು, ಮಗನ ಹೊಸಬದುಕಿನ ನಿರ್ಧಾರವನ್ನು ತಾಯಿ ಪ್ರೋತ್ಸಾಹಿಸಿದರು.
ಆರಂಭದಲ್ಲಿ ಯುವತಿ ಅನಸ್ಟಿಷಿಯಾ ಫೋಷಕರಿಗೆ ಭಾರತೀಯ ಯುವಕನೊಡನೆ ತಮ್ಮ ಪುತ್ರಿ ಮದುವೆಯಾದರೆ ಜೀವನ ಹೇಗಿರಬಹುದೋ ಎಂಬ ಆತಂಕವಿತ್ತಾದರೂ ಕೊನೆಗೆ ಇವರ ಪ್ರೀತಿ ಮನವರಿಕೆಯಾದ ಮೇಲೆ ತುಂಬು ಹೃದಯದಿಂದ ಮದುವೆ ಮಾಡಿಕೊಟ್ಟಿದ್ದಾರೆ. ಮಾಸ್ಕೋದಿಂದ 25ಮಂದಿ ಸಂಬಂಧಿಕರು ಕೂಡ ಬಂದಿದ್ದರು.
ಮೆಲ್ವಿನ್-ಅನಸ್ಟಿಷಿಯಾ ಜೋಡಿ ಮಧುಚಂದ್ರಕ್ಕೆ ಮಾಸ್ಕೋಗೆ ಹೋಗಬಹುದಾಗಿದೆ.
 

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ರಷ್ಯಾ ಯುವತಿ, ವಿವಾಹ, ಕಾರವಾರದ ಯುವಕ, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ