ಯುಪಿಎ ನಿರ್ಧಾರಗಳ ಬಹಿರಂಗಕ್ಕೆ ನಿರ್ಧಾರ

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ಯುಪಿಎ ಸರ್ಕಾರದ ಅವಧಿಯಲ್ಲಿದ್ದ ಸೋನಿಯಾ ಗಾಂಧಿ ಅಧ್ಯಕ್ಷತೆಯ ರಾಷ್ಟ್ರೀಯ ಸಲಹಾ ಮಂಡಳಿ (ಎನ್‌ಎಸಿ) ಕೈಗೊಂಡ ನಿರ್ಣಯಗಳನ್ನು ಬಹಿರಂಗಪಡಿಸಲು ಪ್ರಧಾನಿ ಕಾರ್ಯಾಲಯ ನಿರ್ಧರಿಸಿದೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಕಾರ್ಯಾಲಯ ಕೈಗೊಂಡ ಈ ತೀರ್ಮಾನ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ರಾಜಕೀಯ ಲಾಭ ತರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಪ್ರಧಾನಿ ಕಾರ್ಯಾಲಯವು ಈ ತೀರ್ಮಾನವನ್ನು ಕಳೆದ ತಿಂಗಳಲ್ಲೇ ಕೈಗೊಂಡಿದೆ ಎನ್ನಲಾಗಿದೆ.

ಎನ್‌ಎಸಿ ಸಭೆಗಳ ವಿವರಗಳು, ಎನ್‌ಎಸಿ ಸದಸ್ಯರು ಕೈಗೊಂಡ ವಿದೇಶ ಪ್ರವಾಸಗಳು, ಸರ್ಕಾರಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಎನ್‌ಎಸಿ ಸದಸ್ಯರು ಹೇಗೆ ನಿಭಾಯಿಸುತ್ತಿದ್ದರು ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ.

ಎನ್‌ಎಸಿಯು 2004ರಿಂದ 2014ರವರೆಗೆ ಅಸ್ತಿತ್ವದಲ್ಲಿತ್ತು. ಆಗ ಬಿಜೆಪಿಯು ಇದನ್ನು ಮನಮೋಹನ್ ಸಿಂಗ್ ಸರ್ಕಾರವನ್ನು ನಿಯಂತ್ರಿಸಲು ಸೋನಿಯಾ ಗಾಂಧಿ ಅವರಿಗೆ ಅಧಿಕಾರ ನೀಡುವ ಸಂವಿಧಾನಕ್ಕೂ ಅತೀತವಾಗಿರುವ ಪ್ರಾಧಿಕಾರ ಎಂದು ಟೀಕಿಸಿತ್ತು. ಆದರೆ ಎನ್‌ಎಸಿಯನ್ನು ರೂಪಿಸಿರುವುದು ಆರೋಗ್ಯಕರ ಪ್ರಜಾತಂತ್ರದ ಲಕ್ಷಣ. ಎನ್‌ಎಸಿಯಿಂದಾಗಿ ವಿಸ್ತೃತ ಚರ್ಚೆಗಳು ಸಾಧ್ಯವಾಗುತ್ತಿವೆ ಎಂದು ಕಾಂಗ್ರೆಸ್ ಹೇಳಿತ್ತು.

ಎರಡು ಅವಧಿಗೆ ಆಡಳಿತ ನಡೆಸಿದ ಯುಪಿಎ ಸರ್ಕಾರವನ್ನು ನಿಯಂತ್ರಿಸುತ್ತಿದ್ದುದು ಸೋನಿಯಾ ಗಾಂಧಿ ಅವರೇ ಹೊರತು ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಲ್ಲ ಎಂಬುದು ಈ ಕಡತಗಳು ಬಹಿರಂಗಗೊಂಡ ನಂತರ ಜನರಿಗೆ ಅರಿವಾಗಲಿದೆ ಎನ್ನುವ ಲೆಕ್ಕಾಚಾರ ಕೇಂದ್ರ ಸರ್ಕಾರದ್ದು  ಎನ್ನಲಾಗುತಿದೆ.

Related Tags: UPA Govt, NDA Govt, NAC, Sonia Gandhi, Narendra Modi, Manmohan Singh
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ