ಬೂಟು ಬಳಸುವ ಭಾಷೆಯನ್ನು ವಿರೋಧಿಸುತ್ತೇನೆ
ಸರ್ಕಾರ ಎಂದಿಗೂ ಅಧಿಕಾರದ ಭಾಷೆಯನ್ನು ಮಾತನಾಡುತ್ತದೆ. ಆದರೆ ಈ ಪ್ರಕರಣದಲ್ಲಿ ಜನರೂ ಸಹ ಅಧಿಕಾರ ಪ್ರತಿಪಾದಿಸುವ ಹಿಂಸೆಯ ಭಾಷೆಯನ್ನು ಬಳಸುತ್ತಿದ್ದಾರೆ, ಸಮಾಜ ಈ ಕುರಿತು ಯೋಚಿಸಬೇಕಿದೆ.

ಮೂಲ: ರವೀಶ್ ಕುಮಾರ್, ಎನ್‌ಡಿಟಿವಿ
ಕನ್ನಡಕ್ಕೆ: ಕಿರಣ್ ಎಂ ಗಾಜನೂರು


ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೆ,
ನಾನು ನಿಮ್ಮಲ್ಲಿ ಕೇವಲ 50 ದಿನಗಳನ್ನು ಕೇಳುತ್ತಿದ್ದೇನೆ. ನನಗೆ ಡಿಸೆಂಬರ್ 30ರ ವರೆಗೆ ಕಾಲಾವಕಾಶ ನೀಡಿ. ಡಿಸೆಂಬರ್ 30ರ ರಾತ್ರಿ ನನ್ನ ಈ ನಿರ್ಣಯದಲ್ಲಿ ಯಾವುದಾದರೂ ದೋಷಗಳು ಕಂಡುಬಂದರೆ, ಅಥವಾ ನನ್ನ ಉದ್ದೇಶ ತಪ್ಪು ಎಂದು ಸಾಭಿತಾದರೆ ನಾನು ನನ್ನ ಸ್ವ-ಇಚ್ಚೆಯಿಂದ ನೀವು ಸೂಚಿಸುವ ಯಾವುದಾದರೂ ಸಾರ್ವಜನಿಕ ಸ್ಥಳದಲ್ಲಿ ಬಂದು ನಿಲ್ಲುತ್ತೇನೆ. ಮತ್ತು ದೇಶ ನಿರ್ಧಾರಮಾಡುವ ಶಿಕ್ಷೆಯನ್ನು ಒಪ್ಪಿಕೊಳ್ಳುತ್ತೇನೆ.
 
ನಾನು ಮಾನ್ಯ ಪ್ರಧಾನಿಗಳ ಈ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸಲು ಕಾರಣ, ಅವರು ನೀಡಿದಂತಹ ಗಡುವು ಮುಗಿಯುತ್ತಾ ಬಂದಿದೆ, ಯಾರು ಈ ನೋಟು ನಿಷೇಧ  ವಿಫಲ ಎಂದು ನಂಬುತ್ತಿದ್ದಾರೆಯೊ ಅವರು ಅದರ ಶಿಕ್ಷೆಯನ್ನು ’ಬೂಟು”ಗಳಿಂದ ನೀಡಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ನಾನು ಸಾಮಾಜಿಕ ಜಾಲತಾಣ ಮತ್ತು ರಾಜಕೀಯ ಚರ್ಚೆಗೆ ಬಿಟ್ಟುಬಿಡುತ್ತೇನೆ.

ನಾನು ಗಮನಿಸಿದಂತೆ ಹಲವಾರು ಜನ ಶಿಕ್ಷೆ ಬೂಟನ್ನು ಒಳಗೊಳ್ಳಬೇಕು ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಏಕೆ ಈ ರೀತಿ ಪ್ರತಿಕ್ರಿಯೆಗಳು ಬರುತ್ತಿವೆ! ಎಲ್ಲಾದರೂ ಪ್ರಧಾನಿಗಳು ನಮ್ಮ ಭಾಷಣದಲ್ಲಿ ಎಲ್ಲಾದರೂ ಬೂಟಿನ ಕುರಿತು ಪ್ರಸ್ತಾಪಿಸಿದ್ದಾರೆಯೇ, ಎಂದು ನೋಡಿದರೆ ಇಲ್ಲ! ಅವರು ತಮ್ಮ ಭಾಷಣದಲ್ಲಿ ಬೂಟಿನ ಕುರಿತು ಯಾವ ಪ್ರಸ್ತಾಪವನ್ನು ಮಾಡಿಲ್ಲ. ಆದರೂ ಜನ ಏಕೆ 50 ದಿನಗಳು ಮುಗಿಯುವ ಈ ಹಂತದಲ್ಲಿ ಬೂಟನ್ನು ನ್ಯಾಯ ದಾನದ ಸಾಧನವಾಗಿ ನೋಡುತ್ತಿದ್ದಾರೆ? ಅದೂ ಒಬ್ಬ ಪ್ರಧಾನಿಯನ್ನು ಕುರಿತು ಮಾತನಾಡುವಾಗ!

ನಿಜವಾದ ಅರ್ಥದಲ್ಲಿ ಪ್ರಧಾನಿಗಳ ಅಂದಿನ ಭಾಷಣವೇ ಸಮಸ್ಯೆಗಳಿಂದ ಕೂಡಿತ್ತು  ಎಂಬುದನ್ನು ನಾನು ಪ್ರತಿಪಾದಿಸುತ್ತೇನೆ: ಏಕೆಂದರೆ ಅವರು ಸ್ವತಃ ತಮ್ಮ ಮಾತುಗಳಲ್ಲಿ ಶಿಕ್ಷೆಯನ್ನು ಸಾರ್ವಜನಿಕ ಸ್ಥಳಲ್ಲಿ ನೀಡಿ ಎಂದಿದ್ದರು! ಇದರ ಅರ್ಥ ಒಂದೊ ಸ್ವತಃ ಪ್ರಧಾನಿಗಳೆ ಸಮೂಹ ಸನ್ನಿ ಮನಸ್ಥಿತಿಗೆ ಸಾಂವಿಧಾನಿಕ ಮಾನ್ಯತೆ ಇದೆ ಎಂದು ನಂಬಿದ್ದಾರೆ. ಅಥವಾ ಅವರನ್ನು ವಿರೋಧಿಸುವವರಿಗೆ ಯಾವ ರೀತಿಯ ಶಿಕ್ಷೆಯನ್ನು ನಿಡಬೇಕು ಎಂದು ಅವರು ತಿರ್ಮಾನಿಸುವಾಗ ಇದೇ ರೀತಿಯ ಯೋಚನೆಗಳು ಅವರ ತಲೆಯಲ್ಲಿ ಬರುತ್ತವೆ ಎಂಬುದನ್ನು ನಂಬಬೇಕಾಗುತ್ತದೆ. ಆ ಕಾರಣದಿಂದಲೇ ಅವರ ಭಾಷಣದಲ್ಲಿ ಅಚಾನಕ್ ಆಗಿ ಈ ಅರ್ಥದ ಮಾತುಗಳನ್ನು ಆಡಿದ್ದಾರೆ.

ನನ್ನ ಪ್ರಕಾರ ನಮಗೆ ಅರಿವಿಲ್ಲದಂತೆ ನಾವು ಬಳಸುವ ಭಾಷೆ ಮತ್ತು ನುಡಿಕಟ್ಟುಗಳಲ್ಲಿ ಸಮಾಜದ ಯಜಮಾನಿಕೆಯ (Feudal/ಉಳಿಗೆಮಾನ್ಯ) ಮನಸ್ಥಿತಿಯ ಪರಿಕಲ್ಪನೆಗಳನ್ನು ಬಳಸುತ್ತಿರುತ್ತೇವೆ. ಒಬ್ಬರನ್ನು ಬೂಟಿನಿಂದ ಹೊಡೆಯುವುದು ದಲಿತ ವಿರೋಧಿ ಗುಣ ಲಕ್ಷಣವಾಗಿದೆ. ನೀವು ಬೂಟಿನಲ್ಲಿ ಹೊಡೆಯುವ ಕಥೆಗಳ ಹಿನ್ನಲೆಯನ್ನು ಶೋಧಿಸಿದರೆ ನಿಮಗೆ ಈ ರೀತಿಯ ಭಾಷೆಯನ್ನು ಬಳಸುವವರು ಉನ್ನತ ಜಾತಿಗೆ ಸೇರಿದವರು ಎಂಬ ಅರಿವು ಧಕ್ಕುತ್ತದೆ. ಈ ಭಾಷೆಯನ್ನು ಸಾಮಾನ್ಯವಾಗಿ ದಲಿತರು ಮತ್ತು ಸಮಾಜದ ಅಂಚಿನ(ದುರ್ಬಲ) ಜನರನ್ನು ಉದ್ದೇಶಿಸಿ ಮಾತನಾಡುವಾಗ ಬಳಸಲಾಗುತ್ತದೆ.

ಒಬ್ಬರನ್ನು ಬೂಟಿನಿಂದ ಹೊಡೆಯಿರಿ ಎಂಬುದು ಹಿಂಸೆಯ ಭಾಷೆ. ನಾನು ಹಿಂಸೆಯ ಭಾಷೆ ಮತ್ತು ಹಿಂಸೆಯ ರಾಜಕೀಯ ಎರಡನ್ನು ವಿರೋಧಿಸುತ್ತೇನೆ. ಒಮ್ಮೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ನಾನೂ ಸಹ ಬೂಟನ್ನು ಎಸೆಯಬಹದು ಎಂಬ ವಾಕ್ಯವನ್ನು ಸಾಮಾನ್ಯವೆಂಬಂತೆ ಬಳಸಿಬಿಟ್ಟಿದ್ದೆ! ನಂತರ ಕಾರ್ಯಕ್ರಮದ ವ್ಯವಸ್ಥಾಪಕರಲ್ಲಿ ನನ್ನ ಆ ಪ್ರತಿಕ್ರಿಯೆ ಅಳಿಸಿ ಹಾಕಿದ್ದನ್ನು ಖಾತರಿಪಡಿಸಿಕೊಂಡೆ. ಆದರೆ ನಾನು ನನ್ನ ಭಾಷೆ ಬಳಕೆಯ ಕುರಿತು ಹೆಮ್ಮೆ ಪಡಲಾಗಲಿಲ್ಲ.

ಈ ದಿನ ನಾನು ಆ ಭಾಷೆಯನ್ನು ಮತ್ತೆ ವಿರೋಧಿಸುತ್ತಿದ್ದೇನೆ. ಅದು ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸಂವಿಧಾನಿಕ ಮುಖ್ಯಸ್ಥನೊಬ್ಬ ಜನರ-ಗುಂಪಿಗೆ ಸಾರ್ವಜನಿಕ ಸ್ಥಳದಲ್ಲಿ ಹೊಂದುವ ಶಿಕ್ಷೆ ವಿಧಿಸಿ ಎಂದು ಬೊಧಿಸುತ್ತಾನೆ? ನಮ್ಮ ವ್ಯವಸ್ಥೆಯಲ್ಲಿ ಶಿಕ್ಷೆಯನ್ನು ನಿರ್ಧರಿಸಲು ನ್ಯಾಯಲಯಗಳಿವೆ, ಅದಕ್ಕಾಗಿ ಕಾನೂನುಗಳಿವೆ. ಇನ್ನೊಂದು ಅರ್ಥದಲ್ಲಿ ಚುನಾವಣೆಗಳಲ್ಲಿ ಬಹುಮತ ಪಡೆಯುವುದು ವಿಜಯ ಅಂತಲೂ ಚುನಾವಣಾ ಸೋಲು ಶಿಕ್ಷೆ ಅಂತಲೂ ನಾವು ನೋಡಬಹುದಾಗಿದೆ. ಆದರೆ ಈ ೫೦ ದಿನಗಳ ಕೊನೆಯಲ್ಲಿ ಯಾವುದೇ ಚುನಾವಣೆಗಳು ಇರಲಿಲ್ಲ. ಅಥವಾ ಚುನಾವಣೆಗಳು ಮಾತ್ರವೆ ರಾಜಕಾರಣಿಗಳ ಸರಿ ಅಥವಾ ತಪ್ಪುಗಳನ್ನು ಅಳೆಯುವ ಮಾನದಂಡವಲ್ಲ ಎಂದು ನಾವು ವಾದಿಸಬಹುದು. 

 ಹಾಗೆ ನೋಡುವುದಾದರೆ ನೋಟು ನಿಷೇಧದ ಕುರಿತು ಹಲವಾರು ಲೇಖನಗಳು, ವಿಮರ್ಶೆಗಳು ಬಂದಿವೆ. ಆದರೆ ಪ್ರಧಾನಿಗಳು ಅದರಲ್ಲಿ ಒಂದನ್ನಾದರೂ ಒಪ್ಪಿದ್ದಾರೆಯೇ? ಅವರನ್ನು ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ ಆದರೆ ಅವರು ಆ ಯಾವ ಪ್ರಶ್ನೆಗಳಿಗೂ ನೆರವಾದ ಉತ್ತರವನ್ನು ನೀಡಿಲ್ಲ. ಅದಕ್ಕೆ ಬದಲಾಗಿ ಅವರನ್ನು ವಿರೋಧಿಸಿದವರ ಮೇಲೆ ದಾಳಿ ಮಾಡಲಾಗಿದೆ. ಅವರು ತಮ್ಮನ್ನು ವಿರೋಧಿಸುವವರನ್ನು ಟೀಕಿಸಲು ಸೃಜನಶೀಲ ತೆಗಳಿಕೆಗಳನ್ನು ಬಳಸಿದ್ದಾರೆ. ಈ ಎಲ್ಲಾ ಅಂಶಗಳನ್ನು ನಾವು ಪ್ರಧಾನಿಗಳು ಮಾಡಿದ ತಪ್ಪುಗಳು ಎಂದು ಪರಿಗಣಿಸಬಹುದಾಗಿದೆ. ಆದರೆ ಒಂದು ಗುಂಪು(ಸಮೂಹ) ಕಾಂಗರೂ ನ್ಯಾಯಾಲಯದ ಶೈಲಿಯಲ್ಲಿ ಅವರು ಯಾವ ತಪ್ಪುಗಳನ್ನು ಮಾಡಿದ್ದಾರೆ ಎಂದು ನಿರ್ಧರಿಸುವುದನ್ನು ಒಪ್ಪಲಾಗದು.

ಪ್ರಧಾನಿಗಳ ಭಾಷಣದ ಈ ಭಾಗ ಅಪ್ರಜಾಸತ್ತಾತ್ಮಕ ಮತ್ತು ಉಳಿಗೆಮಾನ್ಯ ಮನಸ್ಥಿತಿಯಿಂದ ಕೂಡಿದೆ ಮಾತ್ರವಲ್ಲದೆ ಅವರು ಸಾಮಾಜಿಕ ಜಾಲತಾಣದಲ್ಲಿ ಬಳಸುವ ಭಾಷೆಯೂ ಅಪ್ರಜಾಸತ್ತಾತ್ಮಕ ಮತ್ತು ಉಳಿಗೆಮಾನ್ಯ ಗುಣಲಕ್ಷಣಗಳನ್ನು ಹೊಂದುತ್ತಿದೆ.  ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಅವರ ಭಾಷಣದಲ್ಲಿ ಬೂಟಿನ ಪ್ರಸ್ತಾಪವೇ ಇಲ್ಲದಿದ್ದರೂ ಇದ್ದಕ್ಕಿಂದಂತೆ ಬೂಟಿನ ಪ್ರಸ್ತಾಪ ಏಕೆ ಬಂತು? ಏಕೆ ಬೂಟಿನ ಚಿತ್ರವನ್ನು 'ನ್ಯಾಯ'ವಾಗಿ  ಫೇಸ್ಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ಹರಡಲಾಗುತ್ತಿದೆ.

ಈ ಯೋಚನೆ ಸಾಮಾಜಿಕ ಜಾಲತಾಣದಲ್ಲಿ ಅವರು ನೀಡಿದ 50 ದಿನಗಳು ಕೊನೆಗೊಳ್ಳುತ್ತಿರುವ ಹಿನ್ನಲೆಯಲ್ಲಿ ಹುಟ್ಟಿಕೊಂಡಿದೆಯೇ? ಎಲ್ಲಿ ಅವರನ್ನು ಬೂಟಿನೊಂದಿಗೆ ಸ್ವಾಗತಿಸುವ ವ್ಯವಸ್ಥೆ ಮಾಡಲಾಗಿದೆ? ಒಂದು ವೇಳೆ ಅವರನ್ನು ವಿರೋಧಿಸುತ್ತಿರುವವರು ಗುಪ್ತವಾಗಿ ಸಂವೇದನೆಗಳು ಕಳೆದುಕೊಂಡು ’ಬೂಟುನ್ಯಾಯ’ ಪ್ರತಿಪಾಧಿಸುತ್ತಿರುವ ಸಮೂಹದ(ಗುಂಪಿನ) ಭಾಗವಾಗುವ ಅಭಿಲಾಷೆಯನ್ನು ಹೊಂದಿದ್ದಾರೆಯೇ? ಹಲವಾರು ಜನ ಮತ್ತೆ ಮತ್ತೆ ಏಕೆ “ ಬೂಟು ರೆಡಿ ಇದೆ ಹೇಳಿ ನಾವು ಎಲ್ಲಿ ಸಂಧಿಸೋಣ’ ಎಂದು ಬರೆಯುತ್ತಿದ್ದಾರೆ.

ಸರ್ಕಾರ ಎಂದಿಗೂ ಅಧಿಕಾರದ ಭಾಷೆಯನ್ನು ಮಾತನಾಡುತ್ತದೆ. ಆದರೆ ಈ ಪ್ರಕರಣದಲ್ಲಿ ಜನರೂ ಸಹ ಅಧಿಕಾರ ಪ್ರತಿಪಾದಿಸುವ ಹಿಂಸೆಯ ಭಾಷೆಯನ್ನು ಬಳಸುತ್ತಿದ್ದಾರೆ, ಸಮಾಜ ಈ ಕುರಿತು ಯೋಚಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಮುಕ್ತವಾದ ವಿಮರ್ಶೆಗೆ ಅವಕಾಶವನ್ನು ನೀಡಿದೆ. ಗೌರವಾನ್ವಿತ ನಾಗರಿಕನಾಗಿ ಜನ ಅದನ್ನು ಬಳಸಿಕೊಳ್ಳಬೇಕಿದೆ. ಏಕೆ ಸಾಮಾಜಿಕ ಜಾಲತಾಣದಲ್ಲಿ ಹಿಂಸೆಯನ್ನು ಒಳಗೊಂಡ ಭಾಷೆಯ ಟ್ರೂಲ್ಗಳನ್ನು ಇವರು ಆಶ್ರಯಿಸುತ್ತಿದ್ದಾರೆ? ಒಂದು ವೇಳೆ ನಾವು  ಅರ್ಥಪೂರ್ಣವಾಗಿ ವಿಮರ್ಶೆಯೊಂದನ್ನು ಸಭ್ಯವಾಗಿ ಸಾಮೂಹಿಕವಾಗಿ ನೆಲೆಯಲ್ಲಿ ಮುಂದಿಡುವ ಕ್ರಮವನ್ನು ಪ್ರೋತ್ಸಾಹಿಸುವ ಪ್ರಜಾಪ್ರಭುತ್ವದ ಆಶಯವನ್ನು ಕೊನೆಗಾಣಿಸುತ್ತಿದ್ದೆವೆಯೇ? ಯಾರು ಒಬ್ಬರನ್ನು ಬೂಟಿನಿಂದ ಹೊಡೆಯಬೇಕು ಎಂದು ಮಾತನಾಡುತ್ತಿದ್ದಾರೆಯೋ ಅವರು ಒಮ್ಮೆ ತಾವು ನೈತಿಕ(Moral) ಮತ್ತು ಕೋಮುವಾದಿ(Communal)ಟ್ರೊಲ್ ಆಗಿ ಬದಲಾಗಿದ್ದೆವೆಯೇ? ಎಂಬುದನ್ನು ತಪ್ಪದೆ ಪರಿಕ್ಷಿಸಿಕೊಳ್ಳಬೇಕಿದೆ.

ನೀವು ಪ್ರಧಾನಿಗಳನ್ನು ಹಾಸ್ಯಮಾಡಿ, ಅಗತ್ಯ ಬಿದ್ದಾಗ ಟೀಕಿಸಿ, ಅವರನ್ನು ತರಾಟೆಗೆ ತೆಗೆದುಕೊಳ್ಳಿ, ಆದರೆ ಬೂಟು ಎಸೆಯುವ ಯೋಚನೆಯಿಂದ ದೂರವಿರಿ. ಇದನ್ನು ನಾನು ಪ್ರಧಾನಿ ಹುದ್ದೆಯ ಮೇಲಿನ ಗೌರವಕ್ಕೆ ಹೇಳುತ್ತಿಲ್ಲ. ಮೂಲತಹಃ ಒಬ್ಬರ ಮೇಲೆ ಬೂಟನ್ನು ಎಸೆಯುವುದನ್ನು ಶಿಕ್ಷೆ ಎಂದು ಭಾವಿಸುವ ಉಳಿಗೆಮಾನ್ಯ ಮನಸ್ಥಿಯನ್ನು ನಾನು ವಿರೋಧಿಸುತ್ತೇನೆ. ಪ್ರಜಾಪ್ರಭುತ್ವದ ಭಾಷೆ ಸಮಾಜದ ದುರ್ಬಲ ಜನಸಮೂಹ ಸಹ ನಾವು ಈ ವ್ಯವಸ್ಥೆಯಲ್ಲಿ ಕ್ಷೇಮ ಎಂಬ ಭಾವನೆಯನ್ನು ಮೂಡಿಸುವಂತಿರಬೇಕು. ವಿಮರ್ಶೆಗಳ ಮತ್ತೊಂದು ಮಹತ್ವದ ಜವಾಬ್ದಾರಿ ಎಂದರೆ ಅವು ಹೊಸ ಅಲೋಚನೆಗಳನ್ನು/ಪರ್ಯಾಯಗಳನ್ನು ಸೂಚಿಸಬೇಕು. ಸರ್ಕಾರ ಅಧಿಕಾರದಲ್ಲಿ ಶ್ರಿಮಂತವಾಗಿರಬಹದು ಅದು ಆದಾಯ ತೆರಿಗೆ ನೊಟಿಸ್, ಜೈಲು, ವಿರೋಧಿಗಳ ಪೋನ್ ಕದ್ದಾಲಿಕೆಯಲ್ಲಿ ಸಮಾನವಾದ ಬೂಟು-ಎಸೆತದ ಕ್ರಮಗಳನ್ನು ಅನುಸರಿಸಬಹುದು. ಆದರೆ ಅವರು ಎದುರಿನವರು ಇದೆ ಆಚರಣೆ ಅನುಸರಿಸಲಿ ಎಂದು ಹೇಗೆ ವಾದಿಸುತ್ತಾರೆ?

ಅವರ ಒಂದು ಭಾಷಣದಲ್ಲಿ ಪ್ರಧಾನಿಗಳು ಕಪ್ಪುಹಣವನ್ನು ಹೊರತರುವ ಕೆಲಸಕ್ಕೆ ನಾನು ಒಂದು ಲಕ್ಷ ಜನರನ್ನು ಬೇಕಾದರೂ ನೇಮಿಸುತ್ತೇನೆ ಎಂಬ ಮಾತುಗಳನ್ನು ಹೇಳಿದ್ದರು. ಅವರನ್ನು ವಿರೋಧಿಸುವವರು ಈ ಮಾತುಗಳನ್ನು ಅವರಿಗೆ ಏಕೆ ಮತ್ತೆ ಮತ್ತೆ ನೆನಪಿಸುತ್ತಿಲ್ಲ? ನಿಜವಾಗಿಯೂ ಪ್ರಧಾನಿಗಳು ತಮ್ಮ ಈ ಯೋಜನೆಯ ಕುರಿತು ಗಂಭಿರವಾಗಿದ್ದರೆ ಲಕ್ಷ ಜನ ಯುವಕರು ಉದ್ಯೊಗ ಪಡೆಯುತ್ತಾರಲ್ಲವೆ? ಒಬ್ಬ ಪ್ರಧಾನಿಯಾಗಿ ಈ ಎರಡೂವರೆ ವರ್ಷಗಳಲ್ಲಿ ಒಬ್ಬ ಲೋಕಪಾಲರನ್ನು ನೇಮಿಸಲು ಆಗದಿದ್ದವರು ಒಂದು ಲಕ್ಷ ಜನರಿಗೆ ಉದ್ಯೋಗ ಕೊಡುವ ಮಾತುಗಳನ್ನು ಆಡುತ್ತಿದ್ದಾರೆ. ಈ ವಾಕ್ಯವನ್ನು ಎಲ್ಲರೂ ತಮ್ಮ ಗೋಡೆಗಳ ಮೇಲೆ ಬರೆದುಕೊಳ್ಳಬೇಕಿದೆ. ಆದಾಯ ತೆರಿಗೆ ಇಲಾಖೆಯೇ 20 ಸಾವಿರ ಅಧಿಕಾರಿ ಮತ್ತು ನೌಕರರ ಕೊರತೆಯನ್ನು ಅನುಭವಿಸುತ್ತಿದೆ.

ನೈಜ ಮತ್ತು ಪ್ರಜಾಸತ್ತಾತ್ಮಕ ಹೇಳಿಕೆಗಳಿಗೆ ಹೆಸರಾದ ಲಾಲೂ ಪ್ರಸಾದ್ ರಂತಹ ರಾಜಕಾರಣಿಗಳು ಉಳಿಗೆಮಾನ್ಯ ಚಿಹ್ನೆಗಳನ್ನು ಬಳಸುತ್ತಿರುವುದು ನನ್ನಲ್ಲಿ ಆಶ್ಚರ್ಯ ಉಂಟುಮಾಡುತ್ತಿದೆ. ಒಂದು ವೇಳೆ ನಮ್ಮ ನಾಯಕರುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಭಾಷೆಯನ್ನು ಬಳಸುತ್ತಿದ್ದಾರೆಯೇ? ಹಾಗಾಗಿದ್ದರೆ ನಿಜಕ್ಕೂ ಅದು ಸರಿಯಲ್ಲ.

ಹೇಳುವುದನ್ನು ಮರೆತಿದ್ದೆ, ಈ ಬೂಟು ಎಸೆಯುವ ಅಲೋಚನೆ ಮೂಲತಃ ಪ್ರಧಾನಿಗಳ ವಿಮರ್ಶಕರು ಮತ್ತು ಅವರನ್ನು ವಿರೋಧಿಸುವವರ ಕಡೆಯಿಂದ ಬಂದದ್ದಲ್ಲ! ಬದಲಾಗಿ ಕೆಲವು ದಿನಗಳ ಹಿಂದೆ ಅವರದೇ ಸಂಪುಟದ ರಾಜ್ಯ ವ್ಯವಹಾರಗಳ ಸಚಿವ ಕಿರಣ್ ರಿಜ್ಜು ಅರುಣಾಚಲ ಪ್ರದೇಶದಲ್ಲಿನ ಯೋಜನೆಯೊಂದಕ್ಕೆ ಹಣ ಬಿಡುಗಡೆಮಾಡುವ ಸಂಬಂಧದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಬಂದಿತ್ತು. ಈ ಸಂಬಂಧ ಅವರನ್ನು ಗೃಹ ಸಚಿವಾಲಯದ ಎದುರಿನಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದಾಗ ಅವರು “ಯಾರು ಈ ಸುದ್ದಿಯನ್ನು ಹರಡುತ್ತಿರುವುದು? ಅವರು ಅಲ್ಲಿಗೆ ಬಂದರೆ(ಅರುಣಾಚಲ ಪ್ರದೇಶ) ಅವರು ಬೂಟಿನ ಏಟು ತಿನ್ನುತ್ತಾರೆ ಎಂದಿದ್ದರು.

Related Tags: Demonetization, Narendra Modi, Shoe Pelting, Democracy, Ravish Kumar, Kiran Gajanur
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ