ಹೊಸವರ್ಷದಲ್ಲಿ ಲೈಂಗಿಕ ಕಿರುಕುಳ: ನಾಲ್ವರ ಸೆರೆ

ಕರಾವಳಿಕರ್ನಾಟಕ ವರದಿ
ಬೆಂಗಳೂರು:
ಹೊಸ ವರ್ಷಾಚರಣೆ ವೇಳೆ ಕಮ್ಮನಹಳ್ಳಿಯಲ್ಲಿ ನಡೆದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ಖಾಸಗಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಸೇರಿದಂತೆ ನಾಲ್ವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ತನಿಖಾಧಿಕಾರಿಗಳು, ಆರೋಪಿಗಳನ್ನು ಐದು ದಿನ ವಶಕ್ಕೆ ಪಡೆದಿದ್ದಾರೆ.

ಲಿಂಗರಾಜಪುರದ ಅಯ್ಯಪ್ಪ ಅಲಿಯಾಸ್‌ ನಿತೀಶ್‌ ಕುಮಾರ್‌, ಚಿಕ್ಕಬಾಣಸವಾಡಿಯ ಲೆನೋ ಅಲಿಯಾಸ್‌ ಲೆನಿನ್‌ ಪ್ಯಾಟ್ರಿಕ್‌, ಸುದೇಶ್‌ ಅಲಿಯಾಸ್‌ ಸುದಿ ಹಾಗೂ ಸೋಮಶೇಖರ್‌ ಅಲಿಯಾಸ್‌ ಚಿನ್ನಿ ಬಂಧಿತರು. ಆರೋಪಿಗಳಾದ ಜೇಮ್ಸ್‌ ಹಾಗೂ ಪಪ್ಪಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೂರ್ವ ವಿಭಾಗದ ಪೊಲೀಸ್ ಕಾರ್ಯಾಚರಣೆ ಮುಂದುವರಿದಿದೆ.

 ಯುವತಿಯನ್ನು ಅಡ್ಡಗಟ್ಟಿ ಅಯ್ಯಪ್ಪ ಹಾಗೂ ಆತನ ಗೆಳೆಯರು ನಡೆಸಿದ ಲೈಂಗಿಕ ದೌರ್ಜನ್ಯದ ದೃಶ್ಯಾವಳಿಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇವುಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಜ.3ರಂದು ಸಂತ್ರಸ್ತ ಯುವತಿ ನಡೆದುಕೊಂಡು ಹೋಗುತ್ತಿದ್ದಾಗ ಮನೆಯ ಸಮೀಪದಲ್ಲಿ ವಾಸವಾಗಿರುವ ಪ್ರಶಾಂತ್‌ ಫ್ರಾನ್ಸಿಸ್‌ ಎಂಬುವರ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದನ್ನು ಗಮನಿಸಿದ್ದರು. ಅವರ ಮನೆಗೆ ತೆರಳಿ,  ದುಷ್ಕರ್ಮಿಗಳು ನಿಮ್ಮ ಮನೆ ಎದುರು ನನ್ನ ಪರ್ಸ್‌ ದೋಚಿ ಪರಾರಿಯಾಗಿದ್ದಾರೆ.  ಬೈಕ್‌ ನೊಂದಣಿ ಸಂಖ್ಯೆ ಪತ್ತೆಗೆ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸುವಂತೆ ಕೋರಿದ್ದರು. ಫ್ರಾನ್ಸಿಸ್‌, ಮನೆಯ ಸಿಸಿಟಿವಿ ಪರಿಶೀಲಿಸಿದಾಗ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿತ್ತು.

ಫ್ರಾನ್ಸಿಸ್‌ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಲಾರೆನ್ಸ್‌ ರಸ್ತೆ ಹಾಗೂ ಕುಳ್ಳಪ್ಪ ಸರ್ಕಲ್‌ ಸುತ್ತಮುತ್ತ ಆರು ಕಡೆ ಸಿಸಿಟಿವಿ ಕ್ಯಾಮೆರಾದಲ್ಲಿ ಶನಿವಾರ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಒಂದು ಕ್ಯಾಮೆರಾದಲ್ಲಿ ಸೋಮಶೇಖರ್‌ ಮುಖಚಹರೆ ಸ್ಪಷ್ಟವಾಗಿತ್ತು. ಕೂಡಲೇ ಪೊಲೀಸರು ಕೆ.ಆರ್‌.ಪುರ ಬಳಿ ಗೆಳೆಯನ ಮನೆಯಲ್ಲಿ ಆಶ್ರಯ ಪಡೆದಿದ್ದ ಸೋಮಶೇಖರನನ್ನು ಸೆರೆ ಹಿಡಿದಿದ್ದಾರೆ. ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಇನ್ನುಳಿದವರ ಸುಳಿವು ಸಿಕ್ಕಿದೆ.

ಆರು ಮಂದಿ ಆರೋಪಿಗಳು ಡಿ.31ರಂದು ಕಮ್ಮನಹಳ್ಳಿ ಹತ್ತಿರದ ಡಾ.ರಾಜ್‌ಕುಮಾರ್‌ ಪಾರ್ಕ್‌ ಬಳಿ ಸೇರಿ ತಡ ರಾತ್ರಿಯ ತನಕ ಕಂಠಪೂರ್ತಿ ಮದ್ಯ ಸೇವಿಸಿದ ಬಳಿಕ  ಬೈಕ್‌ಗಳಲ್ಲಿ ಜೋರಾಗಿ ಕೇಕೆ ಹಾಕುತ್ತಾ ಮದ್ಯದ ಅಮಲಿನಲ್ಲಿ ದುಂಡಾವರ್ತನೆ ಮಾಡಿದ್ದರು.
 

Related Tags: Bangalore Molestation Case, Kammanahalli, New Year Party, Leno, Ayyappa, CC TV, Praveen Sood, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ