ಕತಾರ್: ಇಬ್ಬರು ಭಾರತೀಯರ ಗಲ್ಲು ಖಾಯಂ
ರಮಾದಾನ್ ಹಬ್ಬದ ಸಂದರ್ಭ ಕರುಣೆಯಿಂದ ಮನೆಗೆ ಕರೆದು ಊಟ ಹಾಕಿದ ವೃದ್ಧೆಯನ್ನು ಕೊಂದ ಕಿರಾತಕರಿಗೆ ಗಲ್ಲು ಶಿಕ್ಷೆ.
Jan 3 2017 11:21PM
ಕರಾವಳಿಕರ್ನಾಟಕ ವರದಿ
ದೋಹಾ: ಕತಾರ್ ಮಹಿಳೆಯೋರ್ವರನ್ನು ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಭಾರತೀಯರಿಗೆ ವಿಧಿಸಲಾದ ಗಲ್ಲು ಶಿಕ್ಷೆಯನ್ನು ದೇಶದ ಸರ್ವೋಚ್ಛ ನ್ಯಾಯಾಲಯವು ಖಾಯಂಗೊಳಿಸಿ ಆದೇಶ ನೀಡಿದೆ. ತಮಿಳುನಾಡಿನ ಚೆಲ್ಲುದೊರೈ ಪೆರುಮಾಳ್, ಅಳಗಪ್ಪ ಸುಬ್ರಹ್ಮಣ್ಯಂ ಅವರ ಮೇಲ್ಮನವಿಯನ್ನು ಕೋರ್ಟ್ ತಿರಸ್ಕರಿಸಿ ಗಲ್ಲು ಶಿಕ್ಷೆ ಖಾಯಂಗೊಳಿಸಿತು. ಮೂರನೇ ಆರೋಪಿ ಶಿವಕುಮಾರ್ ಅರಸ್ ಎಂಬವನಿಗೆ ನೀಡಲಾದ ಜೀವಾವಧಿ ಶಿಕ್ಷೆಯನ್ನು ಹದಿನೈದು ವರ್ಷ ಕಡಿತಗೊಳಿಸಿ ತೀರ್ಪಿತ್ತಿದೆ.

ನಾಲ್ಕು ವರ್ಷಗಳ ಹಿಂದೆ ಎಂಬತ್ತೆರಡು ವರ್ಷದ ಕತಾರ್ ಮಹಿಳೆಯೋರ್ವರು ರಮಾದಾನ್ ಹಬ್ಬದ ಸಂದರ್ಭ ಕಟ್ಟಡ ನಿರ್ಮಾಣ ಕಾಮಗಾರಿ ಕಾರ್ಮಿಕರಾದ ಆರೋಪಿಗಳ ಮೇಲೆ ಕರುಣೆಯಿಂದ ಮನೆಗೆ ಕರೆಸಿ ಊಟ ನೀಡಿದ್ದರು. ಮನೆಯಲ್ಲಿ ಮಹಿಳೆ ಮತ್ತು ಮನೆಗೆಲಸದಾಕೆ ಇಬ್ಬರೇ ಇರುವುದನ್ನು ಗಮನಿಸಿದ ಆರೋಪಿಗಳು ಮನೆಯಾಕೆ ಮತ್ತು ಮನೆಗೆಲಸದಾಕೆ ನಿದ್ರೆ ಮಾಡಿದ ಸಮಯ ಸಾಧಿಸಿ ಊಟ ನೀಡಿದ ವೃದ್ಧೆಯನ್ನು ನಿರ್ದಾಕ್ಷಿಣ್ಯವಾಗಿ ಕೊಲೆಗೈದಿದ್ದರು. ಈ ಸಂದರ್ಭ ಮನೆಗೆಲಸದಾಕೆ ಸದ್ದಿಗೆ ಎಚ್ಚರಗೊಂಡಿದ್ದು, ಆರೋಪಿಗಳು ಸಿಕ್ಕಿಬೀಳುವ ಭಯದಿಂದ ಪರಾರಿಯಾಗಿದ್ದರು.
ಮನೆಗೆಲಸದಾಕೆ ಈ ಪ್ರಕರಣದಲ್ಲಿ ಆರೋಪಿಗಳ ಕೃತ್ಯವನ್ನು ನ್ಯಾಯಾಲಯದಲ್ಲಿ ಬಯಲು ಮಾಡಿದ್ದರು. ಕೊಲೆಯಾದ ವೃದ್ಧೆಯ ಕುಟುಂಬಿಕರು ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ನ್ಯಾಯಾಲಯವನ್ನು ಆಗ್ರಹಿಸಿದ್ದರು.
Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿಕರ್ನಾಟಕ ಸುದ್ದಿ, ಕತಾರ್ ಸುದ್ದಿ, ಗಲ್ಲು ಶಿಕ್ಷೆ.