ಇಂಗ್ಲೀಷ್ ವ್ಯಾಮೋಹಕ್ಕೆ ಸೊರಗಿದ ಕನ್ನಡ ಮಾಧ್ಯಮ
ಉಳ್ಳೂರು-ಕಂದಾವರ ಶಾಲೆಯಲ್ಲಿ ಅದ್ದೂರಿಯ ಪ್ರತಿಭೆಗಳ ಚಿಲುಮೆ - ಚೈತನ್ಯ ಕಾರ್ಯಕ್ರಮ ಉದ್ಘಾಟಿಸಿ ಅಪ್ಪಣ್ಣ ಹೆಗ್ಡೆ

ಕರಾವಳಿ ಕರ್ನಾಟಕ ವರದಿ
ಕುಂದಾಪುರ:
ಸರ್ಕಾರ ನೀಡಿರುವ ಬೇಕಾಬಿಟ್ಟಿ ಇಂಗ್ಲೀಷ್ ಮೀಡಿಯಂ ಶಾಲೆಗಳ ಪರವಾನಿಗೆ ಹಾಗೂ ಪೋಷಕರ ಇಂಗ್ಲೀಷ್ ವ್ಯಾಮೋಹ ಇವೆರಡು ಕಾರಣಗಳಿಂದ ಇಂದು ಸರ್ಕಾರಿ ಶಾಲೆಗಳು ಸೊರಗಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಉಳ್ಳೂರು - ಕಂದಾವರ ಶಾಲೆಯಲ್ಲಿ ಇಂಥದ್ದೊಂದು ಅದ್ದೂರಿಯ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಒಂದು ಉತ್ತಮ ವೇದಿಕೆ ನಿರ್ಮಾಣ ಮಾಡುವುದರ ಮೂಲಕ ಇಡೀ ತಾಲೂಕಿನ ಗಮನ ಸೆಳೆಯುತ್ತಿರುವುದು ನಿಜಕ್ಕೂ ಸಂತೋಷದ ವಿಷಯ ಎಂದು ಬಸ್ರೂರಿನ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಧರ್ಮದರ್ಶಿಗಳಾದ ಬಿ. ಅಪ್ಪಣ್ಣ ಹೆಗ್ಡೆಯವರು ಅಭಿಪ್ರಾಯಪಟ್ಟರು.

ಅವರು ಸ.ಹಿ.ಪ್ರಾ. ಶಾಲೆ, ಉಳ್ಳೂರು - ಕಂದಾವರದಲ್ಲಿ ನಡೆದ ಪ್ರತಿಭೆಗಳ ಚಿಲುಮೆ 'ಚೈತನ್ಯ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಮತಿ ವಿಶಾಲಾಕ್ಷಿ ದಿನಕರ ಶೆಟ್ಟಿಯವರು ಶಾಲೆಗೆ ಕೊಡಮಾಡಿದ ಶಾಲಾ ನಾಮಫಲಕ ಮತ್ತು ಸ್ವಾಗತ ಗೋಪುರವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಲಕ್ಷ್ಮೀ ಮಂಜು ಬಿಲ್ಲವ, ಇಂತಹ ಕಾರ್ಯಕ್ರಮ ಸರ್ಕಾರಿ ಶಾಲೆಗಳಲ್ಲಿ ನೋಡ ಸಿಗುವುದು ಬಹಳ ಅಪರೂಪ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ನೂತನ ಯೋಜನೆ ನಮ್ಮ ಶಾಲೆ, ನಮ್ಮ ಹೆಮ್ಮೆ - ದೃಷ್ಟಿಕೋನ 2020ಯನ್ನು ಅನಾವರಣಗೊಳಿಸಿ ಮಾತನಾಡಿದ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಚಂದ್ರಲೇಖಾ ಸುರೇಶ್ ಪೂಜಾರಿಯವರು ಶುಭ ಹಾರೈಸಿದರು.

ಗ್ರಾಮ ಪಂಚಾಯತ್ ಸದಸ್ಯ ಶ್ರೀರಾಮಚಂದ್ರ ಶೇರೆಗಾರ್ ಶಾಲೆಯ ಅಭಿವೃದ್ಧಿಯ ಕುರಿತು ಸಂತಸ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸೀತಾರಾಮ ಶೆಟ್ಟಿಯವರು ಶಾಲಾ ಶಿಕ್ಷಕ ವರ್ಗದವರ ಪ್ರಯತ್ನವನ್ನು ಶ್ಲಾಘಿಸಿದರು. ಶ್ರೀ ಕೆ. ದಿನಕರ ಶೆಟ್ಟಿಯವರು ಪ್ರಮುಖ ದಾನಿಗಳಾಗಿದ್ದು ವಿದ್ಯಾರ್ಥಿಗಳು ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ಉದ್ಘಾಟಿಸಿದರು. ಶಾಲಾ ಹಳೆಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಆಕ್ಸೆಂಚೂರ್ ಕಂಪೆನಿಯ ಉಪಾಧ್ಯಕ್ಷ ಸ್ವಸ್ತಿ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ನಮ್ಮ ಶಾಲೆ, ನಮ್ಮ ಹೆಮ್ಮೆ - ದೃಷ್ಟಿಕೋನ 2020 ಯೋಜನೆಯಡಿ ದಾನಿಗಳಿಂದ ಕೊಡ ಮಾಡಿದ ಮರದ ಡಯಾಸ್, ಆಕ್ವಾಗಾರ್ಡ್, ಟೀಪಾಯಿ, ವಾಚನಾಲಯ ಕಪಾಟು, ಆಫೀಸ್ ಕಪಾಟು, ವಿದ್ಯುತ್ ಘಂಟೆ, ರಂಗಪರದೆ, ಗ್ರೀನ್ ಬೋರ್ಡ್ ಗಳು, ಕುರ್ಚಿಗಳು, ವಾಚನಾಲಯ, ಮೇಜು, ದಿನಪತ್ರಿಕೆ ಓದುವ ಸ್ಟ್ಯಾಂಡ್, ಫ್ಯಾನ್ಗಳು, ವಿಜ್ಞಾನ ಉಪಕರಣಗಳು, ಕಸದ ತೊಟ್ಟಿ, ರಾಷ್ಟ್ರ ನಾಯಕರ ಫೋಟೋಗಳು, ಮರದ ಪೋಡಿಯಂ, ಮರದ ಸ್ಟೂಲ್ ಮುಂತಾದ ವಸ್ತುಗಳನ್ನು ವೇದಿಕೆಯಲ್ಲಿ ಹಸ್ತಾಂತರಿಸಲಾಯಿತು.

ಅಲ್ಲದೇ ಕಾರ್ಯಕ್ರಮದ ಎಲ್ಲಾ ಪ್ರಾಯೋಜಕರು ಮತ್ತು ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಿದವರನ್ನು ಸನ್ಮಾನಿಸಲಾಯಿತು. ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಲಾಯಿತು ಮತ್ತು ಎಸ್.ಡಿ.ಎಂ.ಸಿ.ಯ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಯಕ್ಷಗಾನ, ನಾಟಕ ಹಾಗೂ ವಿವಿಧ ನೃತ್ಯಗಳನ್ನು ಪ್ರದರ್ಶಿಸಲಾಯಿತು. ಝೀ ಕನ್ನಡ ವಾಹಿನಿಯ ಜನಮೆಚ್ಚಿದ ಕಾರ್ಯಕ್ರಮ 'ಡ್ರಾಮಾ ಜ್ಯೂನಿಯರ್ಸ್'ನ ಬಾಲನಟ ಕುಂದಾಪುರದ ಸ್ಥಳೀಯ ಪ್ರತಿಭೆ ಮಾಸ್ಟರ್ ಆದಿತ್ಯ ಹಾಗೂ ವಾಟ್ಸಾಪ್ ಹೀರೋ ಮನು ಹಂದಾಡಿಯವರನ್ನು ವಿಶೇಷವಾಗಿ ಆಹ್ವಾನಿಸಿ ಮನರಂಜನೆ ನೀಡಲಾಯಿತು.

ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿದ ಕಾರ್ಯಕ್ರಮ 'ಚೈತನ್ಯ'ದಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಉದಯ ಬಿ. ಎಲ್ಲರನ್ನೂ ಸ್ವಾಗತಿಸಿ ವರದಿಯನ್ನು ಮಂಡಿಸಿದರು. ಹಿರಿಯ ಶಿಕ್ಷಕ ವಿದ್ಯಾಧರ ಪುಷ್ಕರ ಮತ್ತು ಹಳೆ ವಿದ್ಯಾರ್ಥಿ ಜಗದೀಶ್ ಕಾರ್ಯಕ್ರಮ ನಿರೂಪಣೆಗೈದರು. ಸಹಶಿಕ್ಷಕಿ ಪೂರ್ಣಿಮಾ ವಿವಿಧ ಶಾಲೆಗಳಿಂದ ಬಂದಿರುವ ಶುಭ ಹಾರೈಕೆಗಳನ್ನು ಓದಿದರು. ಹಿರಿಯ ಶಿಕ್ಷಕಿ ಸುಮತಿ ಶೆಟ್ಟಿ ವಂದನಾರ್ಪಣೆ ಗೈದರು. ಗೌರವ ಶಿಕ್ಷಕಿಯರಾದ ಸೀಮಾ ಮತ್ತು ಶೋಭಾ ಸಹಕರಿಸಿದರು. ಸುಮಾರು 13 ವರ್ಷಗಳ ನಂತರ ನಡೆದ ಈ ಕಾರ್ಯಕ್ರಮವನ್ನು ಸಾವಿರಾರು ಗ್ರಾಮಸ್ಥರು ವೀಕ್ಷಿಸಿ ಪ್ರಶಂಶಿಸಿದರು.

Related Tags: Kandavara Ullor School, Uday Kota, Appanna Hegde, Kannda News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ