ನೋಟು ರದ್ದತಿ: ಯಾರಿಗೆ ಲಾಭ, ಯಾರಿಗೆ ನಷ್ಟ?
ಬಚ್ಚಿಟ್ಟ ಕಂತೆಕಂತೆ ಕಪ್ಪುಹಣವನ್ನು ಹೊರತೆಗೆಯಲೆಂದು ಹೇಳಲಾದ ಈ ಕಾರ್ಯಾಚರಣೆಯ ಅನುಷ್ಠಾನ ನೋಡುವಾಗ ಇದೊಂಥರಾ ಮಕ್ಕಳ ಕಳ್ಳ ಪೋಲಿಸ್ ಆಟದ ಹಾಗಿದೆ.

ಸುರೇಶ ಭಟ್ ಬಾಕ್ರಬೈಲ್

ಮೋದಿ ಸರ್ಕಾರದ ನೋಟು ರದ್ದತಿ ಕಾರ್ಯಾಚರಣೆ ಪ್ರಾರಂಭವಾದಂದಿನಿಂದ ದೇಶದೆಲ್ಲೆಡೆ ಸೃಷ್ಟಿಯಾಗಿರುವ ಗೊಂದಲ, ಸಮಸ್ಯೆ, ಹಾಹಾಕಾರಗಳಿಗೆ ಪೂರ್ವಸಿದ್ಧತೆಯ ಕೊರತೆಯೆ ಕಾರಣ ಎಂಬುದಕ್ಕೆ ಸರ್ಕಾರ ಹೊರಡಿಸಬೇಕಾಗಿ ಬಂದ ಸುಮಾರು 27 ಅಧಿಸೂಚನೆ, ಸುತ್ತೋಲೆಗಳೆ ಸ್ಪಷ್ಟ ರುಜುವಾತು. ಬಚ್ಚಿಟ್ಟ ಕಂತೆಕಂತೆ ಕಪ್ಪುಹಣವನ್ನು ಹೊರತೆಗೆಯಲೆಂದು ಹೇಳಲಾದ ಈ ಕಾರ್ಯಾಚರಣೆಯ ಅನುಷ್ಠಾನ ನೋಡುವಾಗ ಇದೊಂಥರಾ ಮಕ್ಕಳ ಕಳ್ಳ ಪೋಲಿಸ್ ಆಟದ ಹಾಗಿದೆ. ಇವರು ಚಾಪೆ ಅಡಿ ತೂರಲು ನೋಡಿದರೆ ಅವರಾಗಲೆ ರಂಗೋಲಿ ಕೆಳಗಿನ ಅವಕಾಶವನ್ನು ಕಂಡುಹಿಡಿದಿರುತ್ತಾರೆ! ಕೊನೆಯಲ್ಲಿ ಕಳ್ಳರು ಸಿಕ್ಕಿಬೀಳುತ್ತಾರೆ ಎಂದಿಟ್ಟುಕೊಂಡರೂ ಅಷ್ಟರೊಳಗಾಗಿ ನಗದು ರೂಪದ ಕಪ್ಪುಹಣವೆಲ್ಲಾ ಬಿಳಿಯಾಗಿರುವ ಸಾಧ್ಯತೆಗಳೆ ಹೆಚ್ಚು ಎಂದು ಇದುವರೆಗಿನ ಬೆಳವಣಿಗೆಗಳು ಸೂಚಿಸುತ್ತಿವೆ.

ಖುಲ್ಲಂಖುಲ್ಲಾ ಪಕ್ಷಪಾತ
ಇತ್ತೀಚಿನ ವರದಿಗಳ ಪ್ರಕಾರ ಕೋಟಿಗಟ್ಟಲೆ ಮೌಲ್ಯದ ಹೊಸ ರೂ 2000 ಮತ್ತು ಹಳೆಯ ನೋಟುಗಳೊಂದಿಗೆ ಸಿಕ್ಕಿಬಿದ್ದವರಲ್ಲಿ ಭಾರತೀಯ ಜನತಾ ಪಕ್ಷದ ಮಂದಿ ಕೂಡಾ ಇದ್ದಾರೆ. ಉದಾಹರಣೆಗೆ ತಮಿಳುನಾಡಿನ ಸೇಲಂನ ಬಿಜೆಪಿ ಯುವ ಘಟಕ ಕಾರ್ಯದರ್ಶಿ ಜೆ.ವಿ.ಆರ್.ಅರುಣ್ ಬಳಿ ರೂ 20.5 ಲಕ್ಷ ಮುಖಬೆಲೆಯ ಹೊಸ ನೋಟುಗಳು ಪತ್ತೆಯಾಗಿವೆ. ತಮಾಷೆಯೆಂದರೆ ಈತ ನೋಟು ರದ್ದತಿಯನ್ನು ಬೆಂಬಲಿಸಿ ಅದಕ್ಕೆ ಭಾರಿ ಪ್ರಚಾರ ನೀಡಿದವನು! ಮತ್ತೊಬ್ಬ ಅಭಿನವ್ ವರ್ಮಾ ಎಂಬಾತ ಕುರುಡರಿಗೋಸ್ಕರ ಅಭಿವೃದ್ಧಿಪಡಿಸಿದ ಹೊಸ ಸಾಧನವೊಂದು ಮೇಕ್ ಇನ್ ಇಂಡಿಯಕ್ಕೆ ಅತ್ಯುತ್ತಮ ನಿದರ್ಶನ ಎಂದು ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದ ವೇಳೆ ಮೋದಿಯಿಂದ ಶಹಬ್ಬಾಸ್‌ಗಿರಿ ಪಡೆದಿತ್ತು. ಇದೇ ವರ್ಮಾ ಈಗ ಚಂಡೀಗಢದಲ್ಲಿ ಇನ್ನೊಂದು ಸ್ಪೆಷಲ್ ಮೇಕ್ ಇನ್ ಇಂಡಿಯ ಮಾಡಲು ಹೊರಟು ಪೊಲೀಸರ ಅತಿಥಿಯಾಗಿದ್ದಾನೆ! ಈತನಿಂದ ಒಂದು ಖೋಟಾ ನೋಟು ಮುದ್ರಿಸುವ ಯಂತ್ರ ಮತ್ತು ರೂ 42 ಲಕ್ಷ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ! ರೂ 13,860 ಕೋಟಿ ಆದಾಯ ಘೋಷಿಸಿ ನಾಪತ್ತೆಯಾಗಿದ್ದ ಗುಜರಾತಿ ಉದ್ಯಮಿ ಮಹೇಶ್ ಶಾ ಪ್ರಕಾರ ಆ ಹಣವೆಲ್ಲ ವಿವಿಧ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಸೇರಿದ್ದಂತೆ. ಅವರ ಹೆಸರುಗಳನ್ನು ಬಹಿರಂಗಪಡಿಸುವುದಕ್ಕೂ ಮೊದಲೆ ಪೊಲೀಸರು ಟಿವಿ ಸ್ಟೂಡಿಯೊಗೆ ದಾಳಿ ಮಾಡಿ ಆತನನ್ನು ಬಂಧಿಸುತ್ತಾರೆಂದರೆ ಸದರಿ ವ್ಯಕ್ತಿಗಳು ಪೊಲೀಸರನ್ನು ನಿಯಂತ್ರಿಸುವಷ್ಟು ಪ್ರಭಾವಶಾಲಿ ಸ್ಥಾನದಲ್ಲಿ ಇರಲೇಬೇಕು. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಇದೇ ಶಾ ಆಗಾಗ ಮುಖ್ಯಮಂತ್ರಿ ಕಚೇರಿಗೆ ಭೇಟಿ ನೀಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷಾಧ್ಯಕ್ಷ ಅಮಿತ್ ಶಾ ಹೆಸರೂ ಕೇಳಿಬರುತ್ತಿದೆ.

ಮೋದಿಯ ಸಚಿವಸಂಪುಟದ 76 ಸದಸ್ಯರಲ್ಲಿ ಅನೇಕರು ಇದೇ ವರ್ಷದ ಮಾರ್ಚ್ 31ರ ವರೆಗೆ ಲಕ್ಷಗಟ್ಟಲೆ ನಗದು ಹಣ ಹೊಂದಿದ್ದರೆಂಬ ಸತ್ಯಾಂಶ ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಾಗಿದೆ. ಜೇಟ್ಲಿ ಬಳಿ ರೂ 65 ಲಕ್ಷಕ್ಕೂ ಅಧಿಕ, ಹಂಸರಾಜ ಅಹಿರ್ ಬಳಿ ರೂ 10 ಲಕ್ಷಕ್ಕೂ ಅಧಿಕ, ಶ್ರೀಪಾದ ಯೆಸೊ ನಾಯಕ್ ಬಳಿ ರೂ 22 ಲಕ್ಷ, ಮೋದಿ ಬಳಿ ರೂ 89,700 ನಗದು ಇತ್ತಂತೆ. ಇನ್ನು ಗಡ್ಕರಿ, ಉಮಾ ಭಾರತಿ, ಪರಿಕ್ಕರ್ ಸೇರಿದಂತೆ ಒಟ್ಟು 36 ಮಂದಿ ತಮ್ಮ ಆಸ್ತಿ ವಿವರಗಳನ್ನೆ ಸಲ್ಲಿಸಿಲ್ಲವಂತೆ. ಈ ಮಂತ್ರಿಗಳೆಲ್ಲ ಸರತಿಯ ಸಾಲಿನಲ್ಲಿ ನಿಂತು ತಮ್ಮ ಹಳೆ ನೋಟುಗಳನ್ನು ಬದಲಾಯಿಸಿಕೊಂಡರೆ ಅಥವಾ ತಮ್ಮ ನೌಕರ, ಚಾಕರರನ್ನು ಕಳುಹಿಸಿದರೆ? ಖಾತೆಗೆ ರೂ 2.5 ಲಕ್ಷಕ್ಕೂ ಹೆಚ್ಚು ಹಣ ತುಂಬಿಸುವಂಥ ಮಂತ್ರಿಗಳ ಮೇಲೆ ತೆರಿಗೆ ಇಲಾಖೆ ಕಣ್ಣಿಡಲಿದೆಯೆ? ಸಾಮಾನ್ಯ ಪ್ರಜೆಯೊಬ್ಬನಿಗೆ ವಾರಕ್ಕೆ ಬರೀ ರೂ 24000 ತೆಗೆಯುವ ಮಿತಿ ಇರುವಾಗ ತಮ್ಮ ಮಕ್ಕಳ ಅದ್ದೂರಿ ಮದುವೆಗಾಗಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ವ್ಯಯಿಸುವ ಗಡ್ಕರಿ, ಮಹೇಶ್ ಶರ್ಮನಂತಹ ಮಂತ್ರಿಗಳಿಗೆ ಅಷ್ಟೊಂದು ನಗದು ಎಲ್ಲಿಂದ, ಹೇಗೆ ಸಿಗುತ್ತದೆ ಎಂದು ಯಾರಾದರೂ ಪ್ರಶ್ನಿಸಲಿದ್ದಾರೆಯೇ?

ಇದ್ಯಾವುದರ ಬಗ್ಗೆಯೂ ತುಟಿಪಿಟಕ್ಕೆನ್ನದ ಮೋದಿ ಅದೇ ಕರ್ನಾಟಕ, ಕೇರಳ, ಪ.ಬಂಗಾಳಗಳಲ್ಲಿ ಭ್ರಷ್ಟ ಅಧಿಕಾರಿಗಳು ಹೊಸಾ ನೋಟುಗಳೊಂದಿಗೆ ಸಿಕ್ಕಿಬಿದ್ದಾಕ್ಷಣ ತೆರಿಗೆ ಇಲಾಖೆಗೆ ಕರೆ ಮಾಡಿ ಅಭಿನಂದನೆ ಹೇಳಿದನಂತೆ. ಈ ಎಲ್ಲಿಲ್ಲದ ಹುಮ್ಮಸ್ಸಿಗೆ ಸದರಿ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರಗಳಿರುವುದೆ ಕಾರಣವಿರಬಹುದೆ? ಪ್ರಶ್ನೆ ಏನೆಂದರೆ ಇಂತಹ ದಾಳಿ ಕಾರ್ಯಾಚರಣೆಗಳು ಇನ್ನುಳಿದ ರಾಜ್ಯಗಳಲ್ಲಿ ನಡೆಯುತ್ತಿಲ್ಲವೆ? ಉತ್ತರ ಹೌದು ಎಂದಾದರೆ ಮಾಧ್ಯಮಗಳಲ್ಲಿ ಏಕೆ ವರದಿಯಾಗುತ್ತಿಲ್ಲ? ಇಲ್ಲ ಎಂದಾದರೆ ತಕ್ಷಣ ಇನ್ನೊಂದು ಪ್ರಶ್ನೆ ಎದ್ದುನಿಲ್ಲುತ್ತದೆ: ಹಾಗಾದರೆ ಇತರ ರಾಜ್ಯಗಳ ನೀರಾವರಿ, ಲೋಕೋಪಯೋಗಿ, ವಿದ್ಯುತ್ತು ಮತ್ತಿತರ ಸರಕಾರಿ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಇಲ್ಲವೆ? ಅಲ್ಲೆಲ್ಲಾ ಕಪ್ಪುಹಣ ಉತ್ಪತ್ತಿ ಆಗುತ್ತಿಲ್ಲವೇ? ಹಾಸ್ಯಾಸ್ಪದ ವಿಷಯವೇನೆಂದರೆ ಬಿಜೆಪಿಗರು ನವಂಬರ್ 8ರ ನಂತರ ಬಂದ ದುಡ್ಡಿನ ಲೆಕ್ಕ ಕೊಡಬೇಕೆಂದು ಮೋದಿ ಆದೇಶಿಸಿದ್ದಾನಂತೆ. ಇಲ್ಲಿ ಮತದಾರರು ಎರಡು, ಮೂರು ಪ್ರಶ್ನೆಗಳನ್ನು ಕೇಳಬೇಕಾಗಿದೆ. ಬಿಜೆಪಿಗರು ಯಾಕೆ ಅಮಿತ್ ಷಾನಿಗೆ ಮಾತ್ರ ಲೆಕ್ಕ ಕೊಡಬೇಕು? ಸಾರ್ವಜನಿಕರಿಗೂ ಕೊಡಬೇಡವೆ? ಮೋದಿ ಯಾಕೆ ನವಂಬರ್ 8ಕ್ಕೂ ಹಿಂದಿನ ಲೆಕ್ಕಾಚಾರಗಳನ್ನು ಒಪ್ಪಿಸುವಂತೆ ಹೇಳಿಲ್ಲ? ಇದೆಲ್ಲವೂ ಖುಲ್ಲಂಖುಲ್ಲಾ ಪಕ್ಷಪಾತ ಅಲ್ಲದೆ ಇನ್ನೇನು?

ಅಪ್ರಾಮಾಣಿಕ ಹೋರಾಟ
ಇಂದು ಭ್ರಷ್ಟಾಚಾರದ ವಿರುದ್ಧ ರಣಕಹಳೆ ಊದಿರುವೆನೆನ್ನುವ ಇದೇ ಮೋದಿ ಅಂದು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ 12 ವರ್ಷಗಳ ಕಾಲ ಲೋಕಾಯುಕ್ತರ ನೇಮಕಾತಿಯನ್ನು ತಡೆಹಿಡಿದಿದ್ದ ಮಾತ್ರವಲ್ಲ ಈ ಕುರಿತಂತೆ ರಾಜ್ಯಪಾಲರ ಜತೆ ಸುದೀರ್ಘ ಕಾಲ ಜಟಾಪಟಿಯನ್ನೂ ಕಾನೂನು ಸಮರವನ್ನೂ ನಡೆಸಿದ್ದ. ಲೂಟಿಕೋರ ಎಸ್ಸಾರ್, ಅದಾನಿ ಮೊದಲಾದ ಕಾರ್ಪೊರೇಟ್‌ಗಳಿಗೆ, ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಪೂರಕವಾದ ವಾತಾವರಣ ನಿರ್ಮಿಸುವುದೆ ಇದರ ಉದ್ದೇಶವಾಗಿತ್ತು. ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳೆ ಕಳೆದರೂ ಲೋಕಪಾಲರನ್ನು ನೇಮಿಸದಿರುವುದು ಭ್ರಷ್ಟಾಚಾರ ತಡೆಗಟ್ಟುವ ವಿಚಾರದಲ್ಲಿ ಪ್ರಾಮಾಣಿಕತೆಯ ಕೊರತೆಯನ್ನು ತೋರಿಸುವುದಿಲ್ಲವೆ? ಇಂದು ತಾನು ದೇಶದ ಬಡವರಿಗೋಸ್ಕರ ಕಪ್ಪುಹಣದ ವಿರುದ್ಧ ಸಮರ ಸಾರಿರುವೆನೆಂದು ಭಾವನಾತ್ಮಕವಾಗಿ ಭಾಷಣ ಮಾಡುವ ಈ ನಟಸಾರ್ವಭೌಮನ ಈ ತಥಾಕಥಿತ ಹೋರಾಟ ಎಷ್ಟೊಂದು ಅಪ್ರಾಮಾಣಿಕ ಎನ್ನುವುದಕ್ಕೆ ಕೆಳಗಿನ ಮೂರೇ ನಿದರ್ಶನಗಳು ಸಾಕು:
1. ಕೃಷ್ಣಾ ಗೋದಾವರಿ ಜಲಾನಯನ ಕ್ಷೇತ್ರದಲ್ಲಿ ರಿಲಾಯನ್ಸ್ ಸಂಸ್ಥೆ ಒಎನ್ಜಿಸಿಯ ಕೊಳವೆಬಾವಿಯಿಂದ ಅನಿಲ ಕದ್ದಿರುವುದಾಗಿ ಅಂತಾರಾಷ್ಟ್ರೀಯ ಮಧ್ಯಸ್ಥಗಾರ ಸಂಸ್ಥೆ DeGolyer & MacNaughton ಅಕ್ಟೋಬರ್ 2015ರಷ್ಟು ಹಿಂದೆಯೆ ತನ್ನ ತೀರ್ಪು ನೀಡಿದೆ. ಅದರ ಬಾಬತ್ತು ರಿಲಾಯನ್ಸ್ ಸಂಸ್ಥೆ ಸರಕಾರಕ್ಕೆ ರೂ 10,000 ಕೋಟಿ ಪರಿಹಾರ ನೀಡುವುದರೊಂದಿಗೆ ಈಗ ಕದಿಯುತ್ತಿರುವ ಅನಿಲಕ್ಕೂ ಪರಿಹಾರ ಕೊಡಬೇಕೆಂದು ಹೇಳಿದೆ. ನಂತರ ಸರ್ಕಾರವೆ ರಚಿಸಿದ ಎ.ಪಿ.ಶಾ ಸಮಿತಿಯೂ ಇದನ್ನು ಎತ್ತಿಹಿಡಿದಿದೆ. ಈ ಮಹಾ ಭ್ರಷ್ಟಾಚಾರದಲ್ಲಿ ಭಾಗಿಯಾದ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮೇಲೂ ದಾಳಿಯಾಗಬೇಕಿತ್ತಲ್ಲವೇ?

2. ಉಷ್ಣ ವಿದ್ಯುತ್ ಸ್ಥಾವರಗಳನ್ನು ನಡೆಸುತ್ತಿರುವ ಎಸ್ಸಾರ್, ಅನಿಲ್ ಅಂಬಾನಿ, ಜಿಂದಾಲ್, ಅದಾನಿ ಮತ್ತಿತರ ಕಾರ್ಪೊರೇಟುಗಳು ಕಲ್ಲಿದ್ದಲು ಮತ್ತು ಸ್ಥಾವರ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳುವಾಗ ಇರುವುದಕ್ಕಿಂತಲೂ ಅಧಿಕ ಬೆಲೆ ತೋರಿಸಲಾಗಿತ್ತೆಂದು ತಿಳಿದುಬಂದಿದೆ. ಈ ಕಾಳಧನದ ಮೊತ್ತ ಸುಮಾರು ರೂ 50,000 ಕೋಟಿಯಷ್ಟಿದೆ. ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತಲ್ಲವೇ?

3. ವಾಜಪೇಯಿ ಕಾಲದಲ್ಲಿ ಬಹಿರಂಗಗೊಂಡಿದ್ದ ಎಸ್ಸಾರ್ ಪೇಪರ್ಸ್‌ನಲ್ಲಿ ಕೇಂದ್ರ ಮಂತ್ರಿಯೊಬ್ಬ ಒಳಗೊಂಡಿದ್ದ ಕೊಲೆ ಪ್ರಕರಣದಲ್ಲಿ ಕೈವಾಡ ನಡೆಸಿರುವುದು; ನ್ಯಾಯಾಧೀಶರೊಬ್ಬರಿಗೆ 2 ಕೋಟಿ ಲಂಚ ಒಡ್ಡಿರುವುದು; ಸೂಕ್ಷ್ಮ ಕಡತವೊಂದನ್ನು ನಾಪತ್ತೆಯಾಗಿಸಿ ಲಾಭ ಬಾಚಿಕೊಂಡಿರುವುದು; ಕಾರ್ಪೊರೇಟುಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವುದು; ಬ್ಯಾಂಕು ಸಾಲದ ನಿಯಮಾವಳಿಗಳನ್ನು ತಮಗನುಕೂಲಕರವಾಗಿ ಬದಲಾಯಿಸಿರುವುದು ಮುಂತಾದ ಹತ್ತುಹಲವು ಕ್ರಿಮಿನಲ್ ಪಿತೂರಿಗಳನ್ನು ಉಲ್ಲೇಖಿಸಲಾಗಿದೆ. ಇದರ ನಂತರ ಬಯಲಾದ ಪನಾಮಾ ಪೇಪರ್ಸ್‌ನಲ್ಲಿ ವಿದೇಶಗಳಲ್ಲಿ ಅಪಾರ ಸಂಪತ್ತನ್ನು ಶೇಖರಿಸಿದಂಥಾ ಹಲವಾರು ಪ್ರಭಾವಿ ವ್ಯಕ್ತ್ತಿಗಳ ಹೆಸರುಗಳಿವೆ. ಇತ್ತೀಚೆಗೆ ಹೊರಬಿದ್ದ ಸಹಾರಾ ಪೇಪರ್ಸ್‌ನಲ್ಲಿ ಬಿರ್ಲಾ ಮತ್ತು ಸಹಾರಾ ಸಂಸ್ಥೆಗಳಿಂದ ಗುಜರಾತ್ ಸಿಎಂ ಸೇರಿದಂತೆ ಹಲವಾರು ರಾಜಕಾರಣಿಗಳಿಗೆ ಕೋಟ್ಯಂತರ ಹಣ ಸಂದಾಯವಾಗಿರುವ ವಿವರಗಳಿವೆ. ಇವೆಲ್ಲವನ್ನು ತನಿಖೆಗೊಳಪಡಿಸಿ ತಪ್ಪಿತಸ್ಥ ಭ್ರಷ್ಟರಿಗೆ ಶಿಕ್ಷೆ ವಿಧಿಸಬೇಕಿತ್ತಲ್ಲವೇ?

ನೋಟು ರದ್ದತಿಯ ಅನಾಹುತಗಳು
ನೊಬೆಲ್ ಪ್ರಶಸ್ತಿ ವಿಜೇತರಾದ ಅಮಾತ್ರ್ಯ ಸೆನ್ ಮತ್ತು ಪೌಲ್ ಕ್ರುಗ್ಮನ್, ನೋಟು ರದ್ದತಿಯನ್ನು ಕಠಿಣ ಶಬ್ದಗಳಲ್ಲಿ ಟೀಕಿಸಿದ್ದಾರೆ. ನೋಟು ರದ್ದತಿ ವಿಶ್ವಾಸದ ಆಧಾರದಲ್ಲಿ ನಡೆಯುವ ಭಾರತದ ಆರ್ಥಿಕತೆಯ ಬುಡಕ್ಕೆ ಕೊಡಲಿ ಏಟು ನೀಡುವ ನಿರಂಕುಶ ಕ್ರಮ ಎಂದು ಅಮಾತ್ರ್ಯ ಸೆನ್ ಹೇಳಿದರೆ ಪೌಲ್ ಕ್ರುಗ್ಮನ್ ನೋಟು ರದ್ದತಿ ಹಿಂದಿನ ಉದ್ದೇಶ ನನಗೆ ಅರ್ಥವಾಗಿದೆ..... ಆದರೆ ಅದರಿಂದ ಕಾಳಧನಿಕರ ವರ್ತನೆಯಲ್ಲಿ ಗಮನ ಸೆಳೆಯುವ ಬದಲಾವಣೆ ಆಗಲಾರದು. ಅವರು ತಮ್ಮ ಕಪ್ಪನ್ನು ಬಿಳಿಯಾಗಿಸುವ ದಂಧೆಯಲ್ಲಿ ಮುಂದಿನ ಬಾರಿ ಸಿಕ್ಕಿಬೀಳದಂತಿರಲು ಇನ್ನಷ್ಟು ಎಚ್ಚರಿಕೆ ವಹಿಸಲಿದ್ದಾರೆ, ಇನ್ನಷ್ಟು ಆಧುನಿಕ ವಿಧಾನ ಬಳಸಲಿದ್ದಾರೆ ಎಂದಿದ್ದಾರೆ. ನೋಟು ರದ್ದತಿಯನ್ನು ವ್ಯವಸ್ಥಿತ ಲೂಟಿ, ಕಾನೂನುಬದ್ಧವಾಗಿಸಿದ ದರೋಡೆ ಎಂದು ಕರೆದಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಪ್ರಕಾರ ಜಿಡಿಪಿಯಲ್ಲಿ ಸುಮಾರು 2% ಇಳಿಕೆಯಾಗಲಿದೆ.

ನೋಟು ರದ್ದತಿ ವಿಷಯದಲ್ಲಿ ಶೇಕಡಾ 90ರಷ್ಟು ಜನ ತನ್ನನ್ನು ಬೆಂಬಲಿಸುತ್ತಿದ್ದಾರೆಂದು ತಾನೇ ನಡೆಸಿದಂಥಾ ಒಂದು ಪ್ರಶ್ನಾರ್ಹ ಸಮೀಕ್ಷೆಯ ಆಧಾರದಲ್ಲಿ ಮೋದಿ ಹೇಳುತ್ತಿದ್ದಾನೆ. ಆದರೆ ನಿಜ ಸಂಗತಿ ಏನೆಂದರೆ ಆತನ ಸಮೀಕ್ಷೆ ಕೇವಲ ಸ್ಮಾರ್ಟ್ ಫೋನ್ ಹೊಂದಿರುವ 5 ಲಕ್ಷ ಮಧ್ಯಮ ವರ್ಗದ ಜನರನ್ನಷ್ಟೆ ಒಳಗೊಂಡಿತ್ತು! ಈ ಸಂದರ್ಭದಲ್ಲಿ ಇಟೆಲಿಯ ದಾರ್ಶನಿಕ ಎಕೊ ಉಂಬೆರ್ಟೊ ಮಾತುಗಳು ನೆನಪಾಗುತ್ತವೆ: ಭವಿಷ್ಯದಲ್ಲಿ ನಾಯಕರು ಟಿವಿ ಅಥವಾ ಅಂತರ್ಜಾಲದ ಮೂಲಕ ಜನಪ್ರಿಯತೆ ಪಡೆಯಲಿದ್ದಾರೆ. ಆಯ್ದ ಗುಂಪುಗಳ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಜನತೆಯ ಧ್ವನಿ ಎಂದು ಬಿಂಬಿಸಲಿದ್ದಾರೆ. ಮೋದಿ ಇವತ್ತು 5 ಲಕ್ಷ ಜನರ ಗುಂಪಿನಲ್ಲಿ 4.5 ಲಕ್ಷ ಮಂದಿ ಬೆಂಬಲಿಸಿರುವುದನ್ನೆ ಭಾರತದ 125 ಕೋಟಿ ಜನತೆಯ ಬೆಂಬಲ ಎಂಬಂತೆ ಬಿಂಬಿಸುತ್ತಿದ್ದಾನೆ! ಜನಸಾಮಾನ್ಯರು ಭಾರಿ ಸಂಕಷ್ಟಕ್ಕೆ ತುತ್ತಾಗಿರುವುದನ್ನು, ದೇಶದ ಆರ್ಥಿಕತೆ ಕುಸಿದಿರುವುದನ್ನು ಆತ ಮರೆಮಾಚುತ್ತಿದ್ದಾನೆ. ದೇಶದಲ್ಲಿ ಉತ್ಪಾದನೆಯ ಪ್ರಮಾಣವನ್ನು ತೋರಿಸುವ ನಿಕ್ಕಿ ಸೂಚ್ಯಂಕ ಅಕ್ಟೋಬರ್ನಲ್ಲಿ 54.4 ಇದ್ದುದು ನವಂಬರ್‌ನಲ್ಲಿ 52.3ಕ್ಕೆ ಇಳಿದಿರುವುದೆ ಇದಕ್ಕೆ ಸಾಕ್ಷಿ. ಇನ್ನು ಇದುವರೆಗೆ ನಡೆದಿರುವ, ಈಗಲೂ ಮುಂದುವರಿದಿರುವ ಅನಾಹುತಗಳು ಒಂದೆ, ಎರಡೆ? ಡಿಸೆಂಬರ್ 1ರ ವೇತನದ ದಿನ ಅನೇಕ ಬ್ಯಾಂಕುಗಳು ಮತ್ತು ಎಟಿಎಂಗಳ ಮುಂದೆ ನೊ ಕ್ಯಾಷ್ ಬೋರ್ಡ್‌ಗಳು ಕಂಡುಬಂದಿವೆ. ಅನೇಕ ಪಿಂಚಣಿದಾರರಿಗೆ ಪಿಂಚಣಿ ಲಭಿಸಿಲ್ಲ. ಲಕ್ಷಾಂತರ ಬೀಡಿ ಕಾರ್ಮಿಕರಿಗೆ ವೇತನ ದೊರೆತಿಲ್ಲ. ಚಾತೋಟಗಳ ಕಾರ್ಮಿಕರು ಸಂಬಳಕ್ಕಾಗಿ ಪರದಾಡುತ್ತಿದ್ದಾರೆ. ಸೂರತ್ನ ವಜ್ರ; ಆಗ್ರಾ, ಕಾನಪುರಗಳ ಪಾದರಕ್ಷೆ; ಮೋರ್ಬೆಯ ಸೆರಾಮಿಕ್ ಟೈಲ್ಸ್, ಗಡಿಯಾರ, ಕಾಗದ; ಕಟ್ಟಡ ನಿರ್ಮಾಣ ಇವೇ ಮುಂತಾದ ಕಿರು ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಹೆಚ್ಚಿನವರನ್ನು ಮನೆಗೆ ಕಳುಹಿಸಲಾಗಿದೆ. ಕೆಲವೊಂದು ಕಡೆ ಕೆಲಸಗಾರರಿಗೆ ಸೂಪರ್‌ಮಾರ್ಕೆಟ್ ಕೂಪನ್‌ಗಳನ್ನು ವಿತರಿಸಲಾಗುತ್ತಿದೆಯಂತೆ. ಕೆಲವು ಡಾಕ್ಟರುಗಳ ಕ್ಲಿನಿಕ್ಕುಗಳಿಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಎಲ್ಲಕ್ಕೂ ಹೆಚ್ಚು ದುಃಖದ ವಿಷಯವೆಂದರೆ ನೋಟು ರದ್ದತಿ ದೇಶಾದ್ಯಂತ 82ಕ್ಕೂ ಅಧಿಕ ಜನರನ್ನು (ಡಿಸೆಂಬರ್ 1ರ ತನಕ) ಬಲಿ ತೆಗೆದುಕೊಂಡಿದೆ. ಇವರಲ್ಲಿ ಹೃದಯಾಘಾತದಿಂದ ತೀರಿಕೊಂಡವರಿದ್ದಾರೆ, ಆತ್ಮಹತ್ಯೆಗೆ ಶರಣಾದವರಿದ್ದಾರೆ, ಔಷಧ ಸಿಗದೆ ಸತ್ತವರಿದ್ದಾರೆ. ಈ ಎಲ್ಲಾ ನತದೃಷ್ಟರ ಬಗ್ಗೆ ಮೋದಿಗೆ ಯಾವ ಕಾಳಜಿಯೂ ಇರುವಂತಿಲ್ಲ. ಗುಜರಾತಿನ ಸಾವಿರಾರು ಪ್ರಜೆಗಳ ಮಾರಣಹೋಮಕ್ಕೇ ಕ್ಷಮೆ ಯಾಚಿಸಲೊಪ್ಪದವನು 82 ಜನರ ಸಾವಿಗಾಗಿ ಮರುಗಲಿದ್ದಾನೆಂದು ನಿರೀಕ್ಷಿಸುವುದೂ ತಪ್ಪೆಂದು ಕಾಣುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಗೆ ಧಕ್ಕೆ
ಭಾರತೀಯ ರಿಸರ್ವ್ ಬ್ಯಾಂಕು ಮೋದಿ ಸರ್ಕಾರದ ಕೇಸರೀಕರಣ ಪ್ರಕ್ರಿಯೆಯ ಇತ್ತೀಚಿನ ಬಲಿಪಶು. ಸ್ವಾತಂತ್ರ್ಯ, ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರು ಮಾಡಿದ್ದ ಆರ್‌ಬಿಐ ಇಂದು ಆ ಹೆಸರನ್ನು ಪೂರ್ತಿ ಮಣ್ಣುಪಾಲಾಗಿಸಿದಂತೆ ತೋರುತ್ತದೆ. ನವಂಬರ್ 8ರ ನಂತರದ ಇಷ್ಟೆಲ್ಲಾ ಕೋಲಾಹಲ, ಅನಾಹುತಗಳ ನಡುವೆ ಬ್ಯಾಂಕಿನ ನಿರ್ದೇಶಕ ಊರ್ಜಿತ್ ಪಟೇಲ್‌ರ ದೀರ್ಘ ಮೌನ ಎದ್ದುಕಾಣುವಂತಿತ್ತು. ಆರ್‌ಬಿಐ ಮೇಲಿಂದ ಮೇಲೆ ಬ್ಯಾಂಕುಗಳಿಗೆ ಅಧಿಸೂಚನೆಗಳನ್ನು ನೀಡಲು ಶುರುಮಾಡಿರುವುದು ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತಿದೆ. ರದ್ದು ಮಾಡಿದ ನೋಟುಗಳಿಗೆ ಬದಲಾಗಿ ಇಳಿಬಿಡಲು ಸಾಕಷ್ಟು ಹೊಸ ನೋಟುಗಳು ಇಲ್ಲವೆಂದು ರಿಸರ್ವ್ ಬ್ಯಾಂಕು ಮೋದಿ ಸರ್ಕಾರಕ್ಕೆ ಹೇಳಿತ್ತೊ ಇಲ್ಲವೊ ಗೊತ್ತಿಲ್ಲ. ಆದರೆ ಅದು ಈಗ ಜನಸಾಮಾನ್ಯರಿಗೆ ಹೇಳುತ್ತಿರುವುದೇನು? ಸಾಕಷ್ಟು ನೋಟುಗಳು ಮುದ್ರಣ ಆಗಿವೆ; ನಗದಿನ ಕೊರತೆ ಇಲ್ಲ; ಗ್ರಾಹಕರು ಆತಂಕ ಪಡಬೇಕಾಗಿಲ್ಲ! ವಾಸ್ತವವಾಗಿ ಹೊಸ ನೋಟುಗಳಲ್ಲಿ ಹೊಸ ನಿರ್ದೇಶಕರ ಸಹಿ ಇರುವುದರ ಅರ್ಥವೆಂದರೆ ಅದರ ಮುದ್ರಣ ಪ್ರಾರಂಭವಾಗಿರುವುದೆ ಊರ್ಜಿತ್ ಪಟೇಲ್ ಅಧಿಕಾರ ವಹಿಸಿಕೊಂಡ ಬಳಿಕ. ಈಗಿರುವ ಮುದ್ರಣಕೇಂದ್ರಗಳು ದಿನದ 24 ತಾಸು ಕೆಲಸ ಮಾಡಿದರೂ ರದ್ದಾದ ನೋಟುಗಳ ಬದಲಿಗೆ ಬೇಕಿರುವ ಹೊಸ ನೋಟುಗಳನ್ನು ಮುದ್ರಿಸಲು ಸುಮಾರು 6 ತಿಂಗಳುಗಳೆ ಬೇಕಾಗಬಹುದು!

ಅಷ್ಟಕ್ಕೂ ಎಷ್ಟು ಕಪ್ಪುಹಣ ಸಿಕ್ಕಲಿದೆ?
ಪರಿವರ್ತಿಸಲು ಆಗದೆ ಉಳಿಯುವ ಸುಮಾರು 3-5 ಲಕ್ಷ ಕೋಟಿಯಷ್ಟು ಕಪ್ಪುಹಣವೆಲ್ಲ ತನಗೆ ದಕ್ಕಿದಲ್ಲಿ ಲಕ್ಷಾಂತರ ಕೋಟಿ ಮೊತ್ತದ ಅನುತ್ಪಾದಕ ಆಸ್ತಿಯಿಂದ ಕಂಗೆಟ್ಟಿರುವ ಬ್ಯಾಂಕುಗಳಿಗೆ ಜೀವದಾನ ನೀಡಬಹುದೆಂದು ಮೋದಿ ಸರ್ಕಾರ ಲೆಕ್ಕ ಹಾಕಿದಂತೆ ಕಾಣುತ್ತದೆ. ಆದರೆ ಈ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗುವ ಸಾಧ್ಯತೆಗಳು ಗೋಚರಿಸತೊಡಗಿವೆ. ಇತ್ತೀಚಿನ ಒಂದು ಅಂದಾಜಿನ ಪ್ರಕಾರ ಈ ಕಪ್ಪುಹಣದ ಶೇಕಡಾ 95ಕ್ಕೂ ಅಧಿಕಾಂಶ ಬಿಳಿಯಾಗಬಹುದು. ಸರ್ಕಾರದ ಮತ್ತು ರಿಸರ್ವ್ ಬ್ಯಾಂಕಿನ ಅಂಕಿಅಂಶಗಳೆ ಹೇಳುವಂತೆ ರೂ 1000 ಮತ್ತು ರೂ 500ರ ನೋಟುಗಳ ರೂಪದಲ್ಲಿದ್ದ ಸುಮಾರು ರೂ 15.44 ಲಕ್ಷ ಕೋಟಿಯಲ್ಲಿ ಇದುವರೆಗೆ (ಒಂದು ತಿಂಗಳ ಅವಧಿಯಲ್ಲಿ) ಸುಮಾರು ರೂ 11.85 ಲಕ್ಷ ಕೋಟಿ ವ್ಯವಸ್ಥೆಯೊಳಗೆ ಮರಳಿಬಂದಿದೆಯಂತೆ. ಇದೇ ವೇಳೆ ಕಪ್ಪುಬಿಳುಪಿನ ದಂಧೆಯೊಂದು ನಡೆಯುತ್ತಿದ್ದು ಅದರಲ್ಲಿ ಕೆಲವೊಂದು ಬ್ಯಾಂಕು ಅಧಿಕಾರಿಗಳಷ್ಟೆ ಅಲ್ಲ, ಮಠಮಂದಿರಗಳೂ ಭಾಗಿಯಾಗಿದ್ದಾರೆ ಎನ್ನಲಾಗಿದೆ.  ಈಗಾಗಲೆ ಸುಮಾರು ರೂ 2 ಲಕ್ಷ ಕೋಟಿಯಷ್ಟು ಕಪ್ಪುಹಣ ಬಿಳಿಯಾಗಿ ಬದಲಾಗಿರುವ ಸುದ್ದಿಗಳಿವೆ. ಹೀಗಿರುವಾಗ ಮಿಕ್ಕ ರೂ 1-3 ಲಕ್ಷ ಕೋಟಿ ಕಪ್ಪುಹಣ ಡಿಸೆಂಬರ್ 30ರ ಒಳಗಾಗಿ ಜಮೆಯಾಗದಿದ್ದಲ್ಲಿ ಮಾತ್ರ ಅದು ಸರ್ಕಾರಕ್ಕೆ ಸಿಗಲಿದೆ. ಒಂದು ವೇಳೆ ಜಮೆಯಾದರೆ ಕಪ್ಪುಹಣವನ್ನೆಲ್ಲಾ ಬಿಳಿಯಾಗಿಸಲಾಗಿದೆ ಎಂದರ್ಥ. ಊಹಿಸಿದಷ್ಟು ಪ್ರಮಾಣದಲ್ಲಿ ಕಪ್ಪು ನೋಟುಗಳು ಹರಿದುಬಾರದ ಕಾರಣಕ್ಕೇ ಮೊನ್ನೆ ಲೋಕಸಭೆಯಲ್ಲಿ ಯಾವುದೇ ಚರ್ಚ್ ಅಥವಾ ತಿದ್ದುಪಡಿಗೂ ಅವಕಾಶ ನೀಡದೆ ತೆರಿಗೆ ತಿದ್ದುಪಡಿ ಕಾನೂನನ್ನು ಬುಲ್ಡೋಜ್ ಮಾಡಲಾಗಿದೆ. ಇದೊಂದು ತೆರಿಗೆಕಳ್ಳ, ಭ್ರಷ್ಟ, ಕಾಳಧನಿಕರನ್ನು ಬಚಾಯಿಸುವ ಯತ್ನದಂತೆ ತೋರುತ್ತದೆ.

ರಿಸರ್ವ್ ಬ್ಯಾಂಕಿನ ಸುತ್ತೋಲೆಯೆ ಹೇಳುವಂತೆ 2016ರ ಆಗಸ್ಟ್ ಮತ್ತು ಸಪ್ಟಂಬರ್ ತಿಂಗಳುಗಳಲ್ಲಿ ಬ್ಯಾಂಕುಗಳು ಒಟ್ಟು ರೂ 3.67 ಲಕ್ಷ ಕೋಟಿಯಷ್ಟು (ಸರಾಸರಿಗಿಂತ ಸುಮಾರು ನಾಲ್ಕು ಪಟ್ಟು ಜಾಸ್ತಿ!) ಠೇವಣಿಗಳನ್ನು ಸ್ವೀಕರಿಸಿವೆಯಂತೆ! ಇದರರ್ಥ ಕೆಲವರಿಗೆ (ಕಾಳಧನಿಕರಿಗೆ?) ನೋಟು ರದ್ದತಿಯ ಮುನ್ಸೂಚನೆ ಸಿಕ್ಕಿತ್ತು. ಇದರಲ್ಲಿ ಕಪ್ಪು ಎಷ್ಟು, ಬಿಳಿ ಎಷ್ಟು ಯಾರು ಬಲ್ಲರು? ಅಕ್ಟೋಬರ್ ತಿಂಗಳ ಠೇವಣಿ ವಿವರಗಳು ಇನ್ನು ಬರಬೇಕಷ್ಟೆ!

ಹಾಗಾದರೆ ನೋಟು ರದ್ದತಿಯಿಂದ ಏನು ಸಾಧಿಸಿದಂತಾಯಿತು? ಇತ್ತ ಶ್ರೀಸಾಮಾನ್ಯನಿಗೆ ಗಡಿ ಕಾಯುವ ಸೈನಿಕನ ಉದಾಹರಣೆ ಕೊಟ್ಟು, ಅವನು ತನ್ನೆಲ್ಲಾ ಕಷ್ಟಗಳನ್ನು ನುಂಗಿಕೊಳ್ಳುವಂತೆ ಮಾಡಿ, ಅವನನ್ನು ಅಚ್ಛೇ ದಿನ್ ಬರಲಿರುವ ಭ್ರಮೆಯಲ್ಲಿ ತೇಲಿಸಿ ಅತ್ತ ಕಾಳಧನಿಕರಿಗೆ ಅವರ ನಗದು ರೂಪದಲ್ಲಿದ್ದ ಕಪ್ಪುಹಣವನ್ನೆಲ್ಲ ಬಿಳಿಯಾಗಿಸಲು ಅವಕಾಶ ಕಲ್ಪಿಸಿಕೊಟ್ಟಂತಾಯಿತು! ಭ್ರಷ್ಟಾಚಾರವನ್ನು ಹಾಗೇ ಉಳಿಸಿದಂತಾಯಿತು.

ಕಪ್ಪುಹಣ ಬದಿಗೆ, ನಗದುರಹಿತ ವಹಿವಾಟು ಮುನ್ನೆಲೆಗೆ
ಮೋದಿ ಸರ್ಕಾರದ ಕಾಳಧನ ವಿರುದ್ಧ ಸರ್ಜಿಕಲ್ ದಾಳಿ ಈಗ ನಗದುರಹಿತ ಭಾರತ ಎಂಬುದಾಗಿ ಬದಲಾಗಿರುವಂತೆ ತೋರುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಚುನಾವಣಾ ಸಭೆಯೊಂದರಲ್ಲಿ ನಗದುರಹಿತ ಆರ್ಥಿಕತೆ ವಿಷಯವನ್ನು ಪ್ರಸ್ತಾಪಿಸಿದ ಮೋದಿ ಭಾರತೀಯರು ಸಮಯ ವ್ಯರ್ಥ ಮಾಡದೆ ಬದಲಾವಣೆಯನ್ನು ಸ್ವೀಕರಿಸುತ್ತಾರೆ ಎಂದು ಹೇಳುತ್ತಾ ಅದಕ್ಕೆ ಪುರಾವೆಯಾಗಿ ದಾನಿ ಮುಂದೆ ನಿಂತ ಭಿಕ್ಷುಕನೊಬ್ಬ ತನ್ನ ಜೋಳಿಗೆಯಿಂದ ಸ್ವೈಪ್ ಮಷೀನ್ ಹೊರತೆಗೆದು ಕ್ರೆಡಿಟ್ ಕಾರ್ಡ್ ಕೊಡಿ ಎಂದು ಕೇಳುವ ವಿಡಿಯೊ ಒಂದರ ಉದಾಹರಣೆ ಕೊಡುತ್ತಾನೆ. ಆದರೆ ಅದು ನಿಜವಾಗಿ ನಡೆದ ಘಟನೆಯ ವಿಡಿಯೊ ಅಲ್ಲ; ಎರಡು ವರ್ಷಗಳ ಹಿಂದೆ ನಗದುರಹಿತ ವಹಿವಾಟನ್ನು ಗೇಲಿ ಮಾಡಲೆಂದು ನಟರನ್ನು ಬಳಸಿ ತಯಾರಿಸಿದ್ದ ವ್ಯಂಗ್ಯಚಿತ್ರ! ಸರ್ವಾಧಿಕಾರಿ ಪ್ರವೃತ್ತಿಯ ನಾಯಕರು ಜನರನ್ನು ವಂಚಿಸುವ ನೂರಾರು, ಸಾವಿರಾರು ವಿಧಾನಗಳಲ್ಲಿ ಇದೂ ಒಂದು. ಅಮಾಯಕ ಜನ ಇದನ್ನೇ ಸತ್ಯವೆಂದು ನಂಬಿ ಮೋಸಹೋಗುತ್ತಿರುವುದು ದೊಡ್ಡ ದುರಂತ.

ನಗದುರಹಿತ ಆರ್ಥಿಕತೆಯನ್ನು ಅಳವಡಿಸಲು ಅವಸರದಿಂದಿರುವ ಮೋದಿಗೆ ಪ್ರಾಯಶಃ ಅಭಿವೃದ್ಧಿಯಾದ ದೇಶಗಳಲ್ಲಿ ವಿದ್ಯುನ್ಮಾನ ಪಾವತಿ ಎಷ್ಟಿದೆಯೆಂದು ಗೊತ್ತಿಲ್ಲ. ಅತ್ಯಧಿಕ ನಗದುರಹಿತ ವಹಿವಾಟಿನ ದೇಶವಾದ ಸಿಂಗಾಪುರದಲ್ಲಿ ಅದು 61% ಇದ್ದರೆ ಅಮೆರಿಕದಲ್ಲಿ 45% ಇದೆ ಅಷ್ಟೆ. 2% ವಹಿವಾಟಿನೊಂದಿಗೆ ತೀರ ಕೆಳಗಿನ ಮೆಟ್ಟಲಲ್ಲಿರುವ ಭಾರತ ಪಾಶ್ಚಿಮಾತ್ಯ ರಾಷ್ಟ್ರಗಳ ಮಟ್ಟಕ್ಕೆ ಬರಬೇಕಾದರೆ ಇನ್ನೂ ಹಲವಾರು ದಶಕಗಳೆ ಬೇಕಾಗಬಹುದು. ಅದೂ ಸಾಕ್ಷರತೆ, ಬ್ಯಾಂಕು ಶಾಖೆಗಳು ಮತ್ತು ಎಟಿಎಂಗಳ ಲಭ್ಯತೆ ಇತ್ಯಾದಿಗಳನ್ನು ಸಮರೋಪಾದಿಯಲ್ಲಿ ಮಾಡಿದರೆ. ನಗದುರಹಿತ ವಹಿವಾಟು ಪುಕ್ಕಟೆಯೆಂದು ಯಾರಾದರೂ ಭಾವಿಸಿದರೆ ಅದು ತಪ್ಪು ತಿಳಿವಳಿಕೆ. ನಮ್ಮ ಖರೀದಿಗಳಿಗೆ ಇಂತಿಷ್ಟೆಂದು ಕಮಿಷನ್ ನೀಡಬೇಕಾಗುತ್ತದೆ. ಉದಾಹರಣೆಗೆ ನೀವು ಪೆಟ್ರೋಲ್ ಬಂಕಿನಲ್ಲಿ ರೂ 2000ರ ಇಂಧನ ಹಾಕಿಸಿಕೊಂಡು ಎಟಿಎಂ ಕಾರ್ಡ್ ಸ್ವೈಪ್ ಮಾಡಿದರೆ ಬ್ಯಾಂಕು ಸುಮಾರು ರೂ 70ರಷ್ಟು ಕಮಿಷನ್ ಅನ್ನು ನಿಮ್ಮ ಖಾತೆಯಿಂದ ಮುರಿದುಕೊಳ್ಳುತ್ತದೆ. ಹೀಗೆ ಪ್ರತಿಯೊಂದು ಖರೀದಿಗೂ ಕಮಿಷನ್ ಕೊಡಬಲ್ಲವರು ಯಾರು? ಕೇವಲ ಮಧ್ಯಮ, ಮೇಲ್ಮಧ್ಯಮ ವರ್ಗಗಳ ಜನರಷ್ಟೆ ಹೊರತು ಸಾಮಾನ್ಯ ಜನರಲ್ಲ. ವಿದ್ಯುನ್ಮಾನ ಪಾವತಿಯ ಮತ್ತೊಂದು ಅಪಾಯವೆಂದರೆ ಹೆಚ್ಚಿನ Appಗಳು ವೈಯಕ್ತಿಕ ದತ್ತಾಂಶಗಳಿಗೆ ಕನ್ನ ಹಾಕುತ್ತವೆ.

ನಿರಂಕುಶ ಮನೋವೃತ್ತಿಯ ನಾಯಕರು ಅಂತಿಮವಾಗಿ ಒಂದು ದೇಶವನ್ನು ಎತ್ತ ಒಯ್ಯಲಿರುವರು ಎಂಬುದಕ್ಕೆ ಇತಿಹಾಸದಲ್ಲಿ ಹೇರಳ ನಿದರ್ಶನಗಳು ಸಿಗುತ್ತವೆ. ಪ್ರಶ್ನೆ ಏನೆಂದರೆ ಭಾರತೀಯರು ಈಗಲಾದರೂ ಎಚ್ಚತ್ತುಕೊಂಡು ತಮ್ಮ ಮೇಲೆ ಕವಿದಿರುವ ಭ್ರಮೆಯ ಪೊರೆಯನ್ನು ಹರಿದು ಭಾರತವನ್ನು ಸರಿದಾರಿಗೆ ತಿರುಗಿಸುವ ಬಗ್ಗೆ ಗಂಭೀರವಾಗಿ ಯೋಚಿಸುವರೆ?
**********
(ಆಧಾರ: ವಿವಿಧ ಮೂಲಗಳಿಂದ)


Related Tags: Demonetization, Manmohan Singh, Narendra Modi, Note Ban, Black Money, Suresh Bhat Article, Karavalik
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ