ಯಕ್ಷಮಾತೆಯ ಮಡಿಲು ಸೇರಿದ ರಸರಾಗ
ಸದಾಶಿವ ಅಮೀನರ ಕಂಠಸಿರಿಯೇ ಅಂತದ್ದು. ತನ್ನ ಗಾನ ರಸಧಾರೆಯಿಂದ ಯಕ್ಷಗಾನ ಕ್ಷೇತ್ರಕ್ಕೆ ಹೊಸ ಅಧ್ಯಾಯ ಬರೆದ ನಾವಡರ ಒಡನಾಡಿಯಾಗಿ ಮೇರು ಭಾಗವತರಾಗಿ ಮೆರೆದವರು.

       ಜಿ. ಸುರೇಶ್, ಪೇತ್ರಿ

ಸುಮಾರು ಎರಡು ದಶಕಗಳಿಂದ ತನ್ನ ಕಂಠಸಿರಿಗೆ ಬೀಗ ಮುದ್ರೆಯನ್ನು ಒತ್ತಿ ಯಕ್ಷ ರಂಗ ಹಾಗೂ ಅಭಿಮಾನಿ ವರ್ಗಗಳಿಂದ ಅಜ್ಞಾತವಾಗಿದ್ದ ಸುಮಧುರ ಕಂಠದ ಮತ್ತೊಬ್ಬ ಕಾಳಿಂಗ ನಾವುಡ ಎಂದು ಪ್ರೇಕ್ಷಕ ವರ್ಗದವರಿಂದ ಕರೆಸಲ್ಪಟ್ಟ ಸದಾಶಿವ ಅಮೀನರಿಗೆ ಕೊನೆಗೂ ಕೈಬೀಸಿ ಕರೆದುದು ಯಕ್ಷಮಾತೆ. ಈ ಸುದೀರ್ಘ ಅವಧಿಯಲ್ಲಿ ತನ್ನ ಕಂಠಸಿರಿಯನ್ನು ಅಭಿಮಾನಿಗಳಿಗೆ ನೀಡುತ್ತಿದ್ದರೆ ಅವರ ಕೀರ್ತಿ ಕಿರೀಟ ಮತ್ತಷ್ಟು ಪ್ರಜ್ವಲಿಸುತ್ತಿತ್ತು. ಹೌದು, ಸದಾಶಿವ ಅಮೀನರ ಕಂಠಸಿರಿಯೇ ಅಂತದ್ದು. ತನ್ನ ಗಾನ ರಸಧಾರೆಯಿಂದ ಯಕ್ಷಗಾನ ಕ್ಷೇತ್ರಕ್ಕೆ ಹೊಸ ಅಧ್ಯಾಯ ಬರೆದ ಕಾಳಿಂಗ ನಾವುಡರ ಒಡನಾಡಿಯಾಗಿ, ಸಹ ಭಾಗವತರಾಗಿ ತನ್ನ ಸಿರಿಕಂಠವನ್ನು ಜನಮಾನಸದಿಂದ ಅಚ್ಚಳಿಯದ ಮೇರು ಭಾಗವತರಾಗಿ ಮೆರೆದವರು. ಕಾಳಿಂಗ ನಾವುಡರ ನಿಧನದ ನಂತರ ಯಕ್ಷರಂಗದಿಂದ ಸಂಪೂರ್ಣ ಹಿಂದೆ ಸರಿದು ಮತ್ತೆ ದೀರ್ಘ ಕಾಲದ ನಂತರ ಯಕ್ಷಮಾತೆಯ ಮಡಿಲು ಸೇರಿದ್ದು ಅಮೀನರ ಯಕ್ಷರಂಗದ ಇತಿಹಾಸ. ಮತ್ತೆ ಯಕ್ಷರಂಗಕ್ಕೆ ಅಡಿ ಇಡಲು ಅಶೋಕ ಕುಂದದರರ ನಿಸ್ವಾರ್ಥ ಸೇವೆಯು ಒಳಗೊಗೊಂಡಿದೆ ಎಂಬುದು ಆಮೀನರ ಮಾತು.

ಉಡುಪಿ ತಾಲೂಕಿನ ಕೊಕ್ಕರಣೆ ಮೊಗವೀರ ಪೇಟೆಯ ಸುಕ್ರ ಬಂಗೇರಾ ಹಾಗೂ ತುಂಗಮ್ಮ ದಂಪತಿಯ ಮಗನಾಗಿ 1967ರ ಜೂನ್ 22 ರಂದು ಜನಿಸಿದ ಅಮೀನರು ಪ್ರಾಥಾಮಿಕ ಶಿಕ್ಷಣವನ್ನು ಕೊಕ್ಕರ್ಣೆಯಲ್ಲಿ ಮುಗಿಸಿದವರು. ಊರಿನ ಆಸುಪಾಸಿನಲ್ಲಿ ನೆಡೆಯುತ್ತಿರುವ ಯಕ್ಷಗಾನಕ್ಕೆ ಆಕರ್ಷಿಸಿತರಾಗಿದಲ್ಲದೆ ಶಾಲಾ ದಿನಗಳಲ್ಲಿ ಅಧ್ಯಾಪಕರಾದ ಸೀತಾರಾಮ ರಾಯ್, ಶ್ರೀಧರ ನಾಯಕ್ ಹಾಗೂ ಸುಬಣ್ಣ ಉಡುಪರ ಪ್ರೋತ್ಸಾಹ ಮುಂದೆ ಯಕ್ಷಗಾನಕ್ಕೆ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಾಯಿತು ಎನ್ನುತ್ತಾರೆ ಅಮೀನರು. ಗುರು ನೀಲಾವರ ರಾಮಕೃಷ್ಣಯ್ಯನವರಲ್ಲಿ ಕುಂಜಾಲು ಶೈಲಿಯನ್ನು, ಕಾಳಿಂಗ ನಾವುಡರನ್ನು ರಂಗದ ಗುರುವಾಗಿಯೂ, ಹೇರಂಜಾಲು ವೆಂಕಟರಮಣ ಗಾಣಿಗರಿಂದ ಹೆಜ್ಜೆಗಾರಿಕೆಯನ್ನು ಕಲಿತು ಗತಕಾಲದ "ಬನಶಂಕರಿ" ಪ್ರಸಂಗದಬಾಲಸುಧೀರನ ಪಾತ್ರವಲ್ಲದೆ, ಪ್ರಹಾಲ್ಲಾದ, ಪರಶುರಾಮ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲದೆ ಓರ್ವ ಪ್ರಸಂಗಕರ್ತರಾಗಿ ಅಮರಮಂಜರಿ, ಮಧುರಮಂಜರಿ, ಮಧುಮಾಲತಿ, ಸ್ವಪ್ನಮಾಂಗಲ್ಯ ಹಾಗೂ ಈ ವರ್ಷ "ಪದ್ಮಶ್ರೀ" ಪ್ರಸಂಗ ಅವರ ಹುಟ್ಟೂರಲ್ಲಿ ಅನಾವರಣಗೊಳ್ಳಲಿದೆ.
       
ಕಾಳಿಂಗ ನಾವುಡರು, ಮರಿಯಪ್ಪ ಆಚಾರ್, ಕಡತೋಕ ಮಂಜುನಾಥ ಭಾಗವತರು, ಸುರಿಗೆಕಟ್ಟೆ ಬಸವ ಗಾಣಿಗರು, ಹಾರಾಡಿ ಸರ್ವೂತ್ತಮ ಗಾಣಿಗರು, ಹೇರಂಜಾಲು ಸುಬಣ್ಣ ಗಾಣಿಗರು, ಸುಬ್ರಮಣ್ಯ ಧಾರೇಶ್ವರ, ರಾಘವೇಂದ್ರ ಮಯ್ಯ, ಕರ್ಕಿ ಪ್ರಭಾಕರ ಭಂಡಾರಿ, ರಾಮಕೃಷ್ಣ ಮಂದಾರ್ತಿ, ಶಂಕರ ಭಾಗವತ ಯಲ್ಲಾಪುರ, ಗಜಾನನ ಭಂಡಾರಿ, ಕೋಟ ಶಿವಾನಂದ, ಮೊಳಹಳ್ಳಿ ಹೆರಿಯ ನಾಯಕ, ಐರೋಡಿ ಗೋವಿಂದಪ್ಪ, ಅರಾಟೆ ಮಂಜುನಾಥ, ಜಲವಳ್ಳಿ ವೆಂಕಟೇಶ ರಾವು, ಗೋಡೆ ನಾರಾಯಣ ಹೆಗಡೆ, ಕುಂಜಾಲು ರಾಮಕೃಷ್ಣ, ಎಂ.ಎ. ನಾಯಕ್, ಕೋಟ ವೈಕುಂಠ, ಕೋಡಿ ವಿಶ್ವನಾಥ ಗಾಣಿಗ, ಪೇತ್ರಿ ಮಾಧವ ನಾಯ್ಕ, ಎಳ್ಳಂಪಳ್ಳಿ ಜಗನ್ನಾಥ ಆಚಾರ್ ಇನ್ನಿತರ ಅಗ್ರಮಾನ್ಯ ಕಲಾವಿದರ ಒಡನಾಟದಿಂದ ಮಂದಾರ್ತಿ, ಸಾಲಿಗ್ರಾಮ, ಸೌಕೂರು, ಕಮಲಶಿಲೆ, ಶಿರಸಿಮಾರಿಕಾಂಬ ಮೇಳಗಳಲ್ಲಿ ತಿರುಗಾಟ ಮಾಡಿದ ಅಮೀನರು ಈಗ ಪೂರ್ಣಪ್ರಮಾಣದಲ್ಲಿ ಮಂದಾರ್ತಿ ಮೇಳದಲ್ಲಿ ಹಾಗೂ ಅತಿಥಿ ಭಾಗವತರಾಗಿ ಯಕ್ಷಸೇವೆ ಮಾಡುತ್ತಿದ್ದಾರೆ. ಅಲ್ಲದೆ ಮಳೆಗಾಲದ ತಿರುಗಾಟದಲ್ಲಿ "ಕಪ್ಪಣ್ಣ ಯಕ್ಷ ಬಳಗ"ವನ್ನು ಹುಟ್ಟು ಹಾಕಿದ್ದಾರೆ.

ಕೊಕ್ಕರ್ಣೆ ಮೊಗವೀರ ಪೇಟೆಯ ಬಸ್ಸಿಜೆಡ್ಡು ವಿನ "ತುಂಗಾ ಸದನ" ದಲ್ಲಿ ತಾಯಿ ತುಂಗಮ್ಮ, ಪತ್ನಿ ಮೀನಾಕ್ಷಿ, ಮಕ್ಕಳ್ಳಾದ ಸುಜನಾ, ಶೋಧನರೊಂದಿಗೆ ನೆಲೆಸಿರುವ ಆಮೀನರು ಮುಂದೆ ಯಕ್ಷರಂಗಕ್ಕೆ ಜೀವನವನ್ನು ಮುಡಿಪಾಗಿರಿಸಿದ್ದಾರೆ. ಅವರ ಯಕ್ಷ ಜೀವನ ಹೀಗೆಯೇ ಮುಂದುವರಿಯಲಿ ಎಂಬುದು ಯಕ್ಷ ಅಭಿಮಾನಿಗಳ ಹಾರೈಕೆ.

Related Tags: Yakshagana, Yakshagana, Tenkuthittu and Badaguthittu, Sadashiva Ameen Kokkarne, Suresh Petri, Yakshagana, Kannada Article
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ