ದಂಗಲ್: ಮುಪ್ಪಿನ ಅಪ್ಪ ಮತ್ತವನ ಜಿದ್ದಿನ ಕಥನ

ಚಂದ್ರಶೇಖರ ಐಜೂರ್

ಗಳ ಅಂತಿಮ ಸುತ್ತಿನ ಕುಸ್ತಿ ಹಣಾಹಣಿ ಇನ್ನೇನೂ ಜರುಗಲಿದೆ ಅನ್ನುವಷ್ಟರಲ್ಲಿ ಆ ಅಪ್ಪನನ್ನು ಮರೆಮೋಸದಿಂದ ಶೌಚಾಲಯದಲ್ಲಿ ಬಂಧಿಯಾಗುವಂತೆ ಮಾಡಲಾಗುತ್ತದೆ. ಆ ಅಪ್ಪ ಎಷ್ಟಾದರೂ ನಮ್ಮ ಹೀರೋ. ಇನ್ನೇನೂ ನಮ್ಮ ಹೀರೋ ತಾನು ಬಂಧಿಯಾಗಿದ್ದ ಶೌಚಾಲಯದ ಬಾಗಿಲುಗಳ ಛಿದ್ರಮಾಡಿ ಮುರಿದು ಥಟ್ಟನೇ ಮಗಳ ಎದುರು ನಿಲ್ಲುತ್ತಾನೆ ಎಂದು ನಾನು ಅಂದುಕೊಂಡಿದ್ದೆ. ಹಾಗೇ ಅಂದುಕೊಳ್ಳುವಂತೆ ಭಾರತೀಯ ಜಡ್ಡುಗಟ್ಟಿದ ಸವಕಲು ಸಿನಿಮಾಗಳು ನನ್ನನ್ನು ಸಜ್ಜುಗೊಳಿಸಿಬಿಟ್ಟಿದ್ದವು. ಆದರೆ, ಘಟಿಸುವುದೇ ಬೇರೆ. ಮುಪ್ಪಿನ ಬಾಗಿಲ ಬಳಿ ನಿಂತಿರುವ ನಮ್ಮ ಹೀರೋಗೆ ಆ ಗೋಡೆ-ಬಾಗಿಲುಗಳು ಮುರಿಯಲು ಎಷ್ಟು ಪ್ರಯತ್ನಿಸಿದರೂ ಆಗುವುದಿಲ್ಲ. ಬಾಗಿಲು ಮುರಿಯುವ ಪ್ರಯತ್ನದಲ್ಲಿ ಸೋತು ಅಲ್ಲೇ ಕುಸಿದು ಕೂತುಬಿಡುತ್ತಾನೆ. ಅವನು ನಮ್ಮ ಹೀರೋ ಅಮೀರ್ ಖಾನ್. ಇಲ್ಲಿ ಅವನು ಅಳುವುದಿಲ್ಲ. ನಮ್ಮನ್ನು ಅಳಿಸುತ್ತಾನೆ.

ತಮಿಳಿನಲ್ಲಿ ಚೇರನ್ ನಿರ್ದೇಶನದ ‘ಆಟೋಗ್ರಾಫ್’ ನೋಡಿದ ನಂತರ ಸಿನಿಮಾ ಅನ್ನುವುದು ಸಂಪೂರ್ಣ ನಿರ್ದೇಶಕನ ಮಾಧ್ಯಮ ಅನ್ನಿಸತೊಡಗಿತು. ‘ನಿರ್ದೇಶಕ ಯಾರು?’ ಅನ್ನುವುದರ ಮೇಲೆಯೇ ನಾನೊಂದು ಚಿತ್ರ ನೋಡಬೇಕೋ ಬೇಡವೋ ಅನ್ನುವ ಗೋಜಿಗೆ ಬೀಳುತ್ತೇನೆ. ಅಮೀರ್ ಖಾನ್ ಇದೊಂದು ವಿಚಾರದಲ್ಲಿ ನನ್ನ ಪಾಲಿಗೆ ಬಹುದೊಡ್ಡ exception.

ಅಮೀರ್ ಖಾನ್ ಯಾವ ಕಾರಣಕ್ಕೂ ನಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಲಾರ. ಮನೆಗೊಬ್ಬ ಹಿರಿಯಣ್ಣನಂತಿರುವ ಈ ಅಮೀರ್ ಹೆಗಲ ಮೇಲೆ ನಮ್ಮೆಲ್ಲ ಸಂಕಟದ ನೋವಿನ ಭಾರಗಳನ್ನು ಇಳಿಸಿ ಎರಡೂವರೆ ಗಂಟೆಗಳ ಮಟ್ಟಿಗೆ ಜೀವ ಒಂದಿಷ್ಟು ಹಗುರಾಗಿಸಿಕೊಳ್ಳಬಹುದು ಅನ್ನಿಸಿಬಿಡುತ್ತದೆ. ಹರೆಯದ ಹೆಣ್ಣುಮಕ್ಕಳ ನಡುವೆ ನಮ್ಮ ಹೀರೋ ಅಮೀರ್ ಖಾನ್ ‘ನಾನಿದ್ದೇನೆ, ಭಯಬೇಡ ಎಂದೆಂದೂ ನಿಮ್ಮ ಕೈಬಿಡಲಾರೆ’ ಎಂದು ‘ದಂಗಲ್’ ಚಿತ್ರದ ಪೋಸ್ಟರಿನೊಳಗೆ ಸೇರಿಕೊಂಡು ಕೈಬೀಸಿ ಕರೆಯುತ್ತಿರುವಂತೆ ತೋರುತ್ತಿದೆ. ಯಾಕೋ ನನ್ನ ಕಣ್ಣು ನಿರ್ದೇಶಕನ ಹೆಸರಿನತ್ತ ನಾಟುತ್ತಲೇ ಇಲ್ಲ. ಕತೆ, ಚಿತ್ರಕತೆ, ನಿರ್ದೇಶನ… ಕಣ್ಣು ಅಮೀರ್ ಖಾನನ ಮೇಲೆ ನೆಟ್ಟಿದೆ.

ಕನ್ನಡದ ಮನಸ್ಸುಗಳು ತಾವು ನೋಡುವ ಡಾ.ರಾಜ್’ಕುಮಾರ್ ಚಿತ್ರದ ಪ್ರತಿ ದೃಶ್ಯದಲ್ಲೂ, ಪ್ರತಿ ಫ್ರೇಮಿನಲ್ಲೂ ಆ ರಾಜಕುಮಾರನೇ ಕಾಣಿಸಿಕೊಳ್ಳಲಿ ಎಂದು ಚಡಪಡಿಸುತ್ತವಲ್ಲ ಅಂಥದೊಂದು ಹಸಿಹಸಿ ಅನುಭೂತಿಗೆ ನನ್ನನ್ನು ಕೊಂಡೋಯ್ದವನು ಈ ಅಮೀರ್ ಖಾನ್. ಈಗ ‘ದಂಗಲ್’ನಲ್ಲಿ ಅಮೀರ್ ಖಾನ್ ನಟನೆಯನ್ನು ನೋಡಿ ಬೆಚ್ಚಿ ಬೆರಗಾಗಿ ಈತನ ಮೇಲಿನ ನನ್ನ ಪ್ರೀತಿ ಇನ್ನಷ್ಟು ತೀವ್ರಗೊಂಡು ಈ ಸರಿರಾತ್ರಿಯಲಿ ಈ ಪುಟ್ಟ ಟಿಪ್ಪಣಿ ಬರೆಯಲು ಕೂತಿದ್ದೇನೆ.

ರಂಗೀಲಾ, ರಾಜಾ ಹಿಂದೂಸ್ತಾನಿ, ತಾರೇ ಜಮೀನ್ ಪರ್, ಲಗಾನ್, 3 Idiots, ಪೀಕೆ ಚಿತ್ರಗಳಲ್ಲಿ ಅಮೀರ್ ಅಳುವುದಿಲ್ಲ ನಮ್ಮನ್ನು ಅಳಿಸುತ್ತಾನೆ. ಒಬ್ಬ ನಟನ ಮೇಲೆ ಇಷ್ಟೊಂದು ಭರವಸೆಯಿಟ್ಟು ಚಿತ್ರವೊಂದು ನೋಡಲು ಸಾಧ್ಯವಾ? ಅನ್ನುವ ಜಿಜ್ಞಾಸೆಗೆ ಅನೇಕ ಸಲ ನಾನೇ ಸಿಕ್ಕುಬಿದ್ದು ಗೊಂದಲಕ್ಕೊಳಗಾಗಿದ್ದೇನೆ. ಇದು ನನ್ನ ದೌರ್ಬಲ್ಯವೂ ಇರಬಹುದು.

ಈ ಅಮೀರ್ ಖಾನ್ ಪಾತ್ರವೊಂದಕ್ಕೆ ಹೇಗೆ ತೆತ್ತುಕೊಳ್ಳುತ್ತಾನೆ ಅನ್ನುವುದಕ್ಕೊಂದು ಚಿಕ್ಕ ಉದಾಹರಣೆ ಕೊಡುತ್ತೇನೆ: ‘ದಂಗಲ್’ ಚಿತ್ರದಲ್ಲಿ ಅಮೀರ್ ಮಡದಿ ಪಾತ್ರದಲ್ಲಿ ನಟಿಸಿರುವ ‘ಸಾಕ್ಷಿ ತನ್ವರ್’ ಹಿಂದಿ ಮತ್ತು ಮರಾಠಿ ಕಿರುತೆರೆ ಚಿತ್ರ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿರುವ ನಟಿ. ಆಕೆಯ ಜನಪ್ರಿಯತೆ ಬಹುಶಃ ಕನ್ನಡಿಗರಿಗೆ ಗೊತ್ತಿರಲಿಕ್ಕಿಲ್ಲ. ಮಹಾವೀರ್ ಫೋಗಟ್ ಜೀವಂತ ಪಾತ್ರವನ್ನೇ ಆವಾಹಿಸಿಕೊಂಡಂತೆ ನಟಿಸಿರುವ ಅಮೀರ್ ಖಾನ್ ಎದುರು ಸಾಕ್ಷಿ ತನ್ವರ್ ಗೌಣವಾಗಿಬಿಡುತ್ತಾಳೆ ಅಥವಾ ಈ ಚಿತ್ರದಲ್ಲಿ ಆಕೆ ನಟಿಸಿಯೇ ಇಲ್ಲವೇನೋ ಅನ್ನಿಸತೊಡಗುತ್ತದೆ. ಇನ್ನೂ ಮಗಳು ಗೀತಾಳ ಮೇಲೆ ಮಹಾವೀರನ ಪ್ರಭಾವಳಿ ಎಷ್ಟಿರುತ್ತದೆಂದರೆ ರಾಷ್ಟ್ರಮಟ್ಟದ ರೆಸ್ಲಿಂಗ್ ಕೋಚ್’ನ ‘ನಿನ್ನ ಹಳ್ಳಿ ಶೈಲಿ ಬದಲಿಸಿಕೋ’ ಎಂಬ ಅಬ್ಬರದ ಕೂಗು ಅವಳನ್ನು ಕೊಂಚವೂ ತಾಗುವುದಿಲ್ಲ; ನಮ್ಮನ್ನು ಕೂಡ. ‘ಗೀತಾ ತೂ ಅಟಾಕಿಂಗ್ ಪ್ಲೇಯರ್ ಹೋ, ಬಸ್ ಅಟಾಕ್ ಕರೋ; ಡಿಫೆನ್ಸ್ ಮತ್ ಕರೋ’ ಎಂಬ ಮಹಾವೀರನ ಕೂಗು ಕ್ರೀಡಾಪಟುವೊಬ್ಬನ ಜಯಭೇರಿಗೆ ಕಾರಣವಾಗಬಹುದಾದರೆ ರಪರಪನೆ ಸುರಿದು ಮರೆಯಾದ ವೀರೇಂದ್ರ ಸೆಹ್ವಾಗ್ ಮೇಲೂ ಅಭಿಮಾನ ಮೂಡಿಬಿಡುತ್ತದೆ.

ಕ್ರೀಡೆಯನ್ನು ಚಿತ್ರದ ಮುಖ್ಯ ಭೂಮಿಕೆಯಾಗಿಸಿಕೊಂಡ ಸಿನಿಮಾಗಳು ಹಿಂದಿಯಲ್ಲಿ ಆಗೀಗಾ ಒಂದಷ್ಟು ಕಾಣಿಸಿಕೊಂಡಿವೆ. ಅದೆಷ್ಟೇ ಕಲ್ಲುಮುಳ್ಳು ಕಂದಕವಿದ್ದರೂ ಕಡೆಗೇ ಹೀರೋನೇ ಅಲ್ಲವೇ ಗೆಲ್ಲಬೇಕಿರುವುದು ಎಂಬುದೊಂದು ‘ಲಾಜಿಕ್’ ಸಾಂಪ್ರದಾಯಿಕವಾಗಿ ರೀಲು ಸುತ್ತುವ ಭಾರತೀಯ ಸಿನಿಮಾಗಳಿಗೆ ಶಾಪದಂತೆ ಅಂಟಿಕೊಂಡುಬಿಟ್ಟಿದೆ. ಆದರೆ, ‘ದಂಗಲ್’ ಚಿತ್ರವನ್ನು ನೋಡುವಾಗ ನನಗೆ ಕಂಠೀರವ ಸ್ಟೇಡಿಯಂನಲ್ಲಿ ಮಿತ್ರರಾದ ಶ್ರೀಧರ್ ಪ್ರಭು ಅವರೊಂದಿಗೆ ಉಸಿರು ಬಿಗಿಹಿಡಿದು ನೋಡಿದ ಪ್ರೊ-ಕಬಡ್ಡಿ ಪಂದ್ಯವೊಂದರ ನೆನಪು ತರಿಸಿತು.

‘ದಂಗಲ್’ ಬರೀ ಕುಸ್ತಿ ಕತೆಯನ್ನು ಮಾತ್ರ ಹೇಳಲು ಹೊರಟಿದ್ದಿದ್ದರೆ ಹತ್ತರಲ್ಲೊಂದಾಗಿ ಬಿಡುತ್ತಿತ್ತು. ಹಾಗಾಗಲೂ ನಮ್ಮ ಅಮೀರ್ ಖಾನ್ ಬಿಡಬೇಕಲ್ಲ. ‘ದಂಗಲ್’ ರಚ್ಚೆ ಹಿಡಿದ ಮಗುವೊಂದು ತನಗೆ ಬೇಕಾದ್ದನ್ನು ಪಡೆದೇ ತೀರುವಂತೆ ‘ದಂಗಲ್’ನ ಹಳ್ಳಿಗಾಡಿನ ಮುಪ್ಪಿನ ಅಪ್ಪ ಕೂಡ ಜಿದ್ದಿಗೆ ಬಿದ್ದಿದ್ದಾನೆ. ತನ್ನಿಂದಾಗದ್ದನ್ನು ಎದೆಮಟ್ಟ ಬೆಳೆದು ನಿಂತಿರುವ ತನ್ನಿಬ್ಬರು ಹೆಣ್ಣುಮಕ್ಕಳ ಮೂಲಕ ಸಾಧಿಸಿ ತೋರುವ ಕಥನ ‘ದಂಗಲ್’.

ಲಗಾನ್, ತಾರೇ ಜಮೀನ್ ಪರ್’ನಂತಹ ಮೇರು ಚಿತ್ರಗಳ ಸಾಲಿಗೆ ‘ದಂಗಲ್’ ಅನನ್ಯ ಸೇರ್ಪಡೆ.

Related Tags: Dangal Movie Review, Kannada Review, Chandrashekhar Aijoor, Bollywood Cinema, Kalpana Talkies, Karavali Karnataka
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ