ಹೃದಯಾಘಾತ ಮತ್ತು ಹೃದಯ ಸ್ತಂಭನ: ವ್ಯತ್ಯಾಸವೇನು?

ಕರಾವಳಿ ಕರ್ನಾಟಕ ಬ್ಯೂರೊ ವರದಿ

ಚೆನ್ನೈ:
ತಮಿಳುನಾಡಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭಾನುವಾರ ಹೃದಯ ಸ್ತಂಭನ ಉಂಟಾಗಿದ್ದು ಹಲವು ಮಾಧ್ಯಮಗಳು ಅದನ್ನು ಹೃದಯಾಘಾತ ಎಂದು ವರದಿ ಮಾಡಿವೆ. ಹೆಚ್ಚಾಗಿ ಈ ಎರಡೂ ಪದಗಳನ್ನು ಬಳಸುವಾಗ ವ್ಯತ್ಯಾಸಗಳನ್ನು ಗಮನಿಸಿರುವುದಿಲ್ಲ. ಹಾಗಿದ್ದರೆ  ಹೃದಯಾಘಾತ (heart attack) ಮತ್ತು ಹೃದಯ ಸ್ತಂಭನದ (cardiac arrest) ನಡುವೆ ವ್ಯತ್ಯಾಸಗಳೇನು? ಬನ್ನಿ ತಿಳಿಯೋಣ.


ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡೂ ಸಹ ಹೃದಯದ ತೊಂದರೆಯನ್ನು ಸೂಚಿಸುವ ಪದಗಳು. ಅದರೂ ಇವೆರಡರ ರೋಗಲಕ್ಷಣಗಳು ಮತ್ತು ಪರಿಣಾಮಗಳು ಭಿನ್ನವಾಗಿರುತ್ತವೆ. ಇವೆರಡೂ ಹೃದಯದ ಭಿನ್ನ ಸ್ಥಿತಿಗಳಾಗಿವೆ. ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಎರಡೂ ಸಹ ಮಾರಣಾಂತಿಕವಾಗಬಹುದಾದ ವೈದ್ಯಕೀಯ ಸ್ಥಿತಿಗಳು.

ಹೃದಯಾಘಾತ ಎಂದರೆನು?
ಹೃದಯಕ್ಕೆ ರಕ್ತ ಪೂರೈಕೆ ಮಾಡುವ ಅಪಧಮನಿಗಳಿಗೆ ತಡೆ (block) ಉಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಹೃದಯದ ಸ್ನಾಯುವಿಗೆ ಆಮ್ಲಜನಕದ ಪೂರೈಕೆ ತುಂಡರಿಸಲ್ಪಡುತ್ತದೆ. ಹೃದಯಾಘಾತವಾದಾಗ ಹೃದಯಕ್ಕೆ ಆಮ್ಲಜನಕದ ಪೂರೈಕೆ ಕೊರತೆಯಾದರೂ ಸಹ ಹೃದಯ ಆಗಲೂ ಬಡಿದುಕೊಳ್ಳುತ್ತಿರುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಹೃದಯದ ಸ್ನಾಯುಗಳು ಸಾಯಲು ಆರಂಭಿಸುತ್ತವೆ. ಇದು ಮಾರಣಾಂತಿಕವೂ ಆಗಬಹುದು.

ಹೃದಯಾಘಾತದ ರೋಗಲಕ್ಷಣಗಳೆಂದರೆ ಎದುಸಿರು, ಎದೆಯಲ್ಲಿ ಆರಂಭವಾಗುವ ನೋವು ತೋಳು, ಕುತ್ತಿಗೆ, ಬೆನ್ನು ಮತ್ತು ಕಿಬ್ಬೊಟ್ಟೆಯ ತನಕ ವಿಸ್ತರಿಸುವುದು, ಕೆಮ್ಮು, ಉಬ್ಬಸ, ಬೆವರುವಿಕೆ, ನಿಶ್ಯಕ್ತಿ ಮುಂತಾದವು.

ಹೃದಯ ಸ್ತಂಭನ ಎಂದರೇನು?
ಹೃದಯ ಸ್ತಂಭನ  ಸಂಭವಿಸಿದರೆ ಹೃದಯ ಬಡಿತ ಸಂಪೂರ್ಣವಾಗಿ ನಿಂತುಹೋಗುತ್ತದೆ.  ಹೃದಯಾಘಾತವಾದಾಗ ಹೃದಯಕ್ಕೆ ಆಮ್ಲಜನಕದ ಕೊರತೆ ಇದ್ದಾಗಲೂ ಅದು ಬಡಿಯುತ್ತಿರುತ್ತದೆ. ಆದರೆ ಹೃದಯ ಸ್ತಂಭನದಲ್ಲಿ ಹಾಗೆ ಆಗುವುದಿಲ್ಲ. ಮನುಷ್ಯನ ಎದೆ ಬಡಿತ ಮತ್ತು ನಾಡಿಮಿಡಿತ ಎರಡೂ ಸಹ ನಿಂತು ಹೋಗುತ್ತದೆ. ದೇಹದ ಅಂಗಾಗಂಗಳಿಗೆ ರಕ್ತ ಪೂರೈಕೆ ತಕ್ಷಣ ನಿಂತು ಹೋಗುವ ಕಾರಣ ಸಾವು ಸಹ ತಕ್ಷಣವೇ ಸಂಭವಿಸುವ ಸಾಧ್ಯತೆಯೂ ಇರುತ್ತದೆ.

ಹೃದಯ ಸ್ತಂಭನ ಉಂಟಾದ ಸಂದರ್ಭದಲ್ಲಿ ವ್ಯಕ್ತಿಯನ್ನು ತಕ್ಷಣವೇ ಲೈಫ್ ಸಪೋರ್ಟ್ ಸಿಸ್ಟಮ್ ಮೇಲೆ ಹಾಕಲಾಗುತ್ತದೆ. ಹೃದಯಾಘಾತವೆ ಹೃದಯ ಸ್ತಂಭನವಾಗಿ ಮುಂದುವರಿಯಬಹುದು. ಆದರೆ ಹೃದಯ ಸ್ತಂಭನ ಹೃದಯಾಘಾತವನ್ನು ಉಂಟುಮಾಡುವುದಿಲ್ಲ.

ಜಯಲಲಿತಾ ಅವರಿಗೆ ಸಂಭವಿಸಿರುವುದು ಹೃದಯ ಸ್ತಂಭನವಾಗಿರುವುದು ಇದೀಗ ಹೆಚ್ಚು ಆತಂಕಕ್ಕೆ ಕಾರಣವಾಗಿದೆ.

 


 

Related Tags: Heart Attack and Cardia Arrest, Differences, Jayalalitha, Yogakshema, Health, Kannada Article, ಹೃದಯಾಘಾತ ಮತ್ತು ಹೃದಯ ಸ್ತಂಭನ
 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ