ಗೇರಮರಡಿ ಕತೆಗಳು

ರಹಮತ್ ತರೀಕೆರೆ
ಸಾಹಿತ್ಯ ಸಮ್ಮೇಳನದ ಮಳಿಗೆಗಳಲ್ಲಿ ನಾನು 35 ವರುಷಗಳ ಹಿಂದೆ ಸಂಗ್ರಹಿಸಿ ಸಂಪಾದಿಸಿದ ಜನಪದ ಕತೆಗಳ ಸಂಕಲನದ ಪರಿಷ್ಕೃತ ಮತ್ತು ಹಿಗ್ಗಿದ ಆವೃತ್ತಿಯೊಂದು ಲಭ್ಯವಿದೆ. ಮೊದಲ ಮುದ್ರಣದಲ್ಲಿ ಇಲ್ಲದ ಕತೆಗಳನ್ನು ಸೇರಿಸಿರುವೆ. ಕೆಲವನ್ನು ತೆಗೆದಿರುವೆ. ಇದು ಮೊದಲ ಸಲ ಪ್ರಕಟವಾಗುವಾಗ ನಾನು ಬಿಎ ಕೊನೆಯ ವರುಷದಲ್ಲಿದ್ದೆ. ಪ್ರಿಯ ಮಿತ್ರರಾದ ಅರುಣಕುಮಾರ್ ಮುಖಪುಟ ರಚಿಸಿದ್ದಾರೆ. ಒಳಪುಟಗಳಲ್ಲಿ ತಮ್ಮ ಅಪೂರ್ವವಾದ ರೇಖಾಚಿತ್ರಗಳನ್ನು ಹೊಸಮಿತ್ರರಾಗಿರುವ ಜಿ.ಕೆ.ಶಿವಣ್ಣನವರು ಬಿಡಿಸಿಕೊಡಿಸಿಕೊಟ್ಟಿದ್ದಾರೆ..ಅರುಣ್ ಪ್ರಕಾಶನ ಪ್ರಕಟಿಸಿದೆ.

ಇದರ ಬೆನ್ನುಡಿಯಲ್ಲಿ ಹೀಗೆ ಬರೆದಿರುವೆ.
ಗೇರಮರಡಿ, ತರೀಕೆರೆ ಸೀಮೆಯ ಒಂದು ಪುಟ್ಟ ಹಟ್ಟಿ. ಕಾಡುಗೇರಿನ ಮರಗಳು ತುಂಬಿದ ಮೊರಡಿಗಳ ತಪ್ಪಲಿನಲ್ಲಿ ಅದಿದೆ. ಕಾಡುಗೊಲ್ಲರೇ ವಾಸವಾಗಿರುವ ಈ ಹಟ್ಟಿಯ ಜನ, ಸಣ್ಣ ರೈತಾಪಿಗಳು. ಪಶುಗಾಹಿಗಳು. ನಮ್ಮೂರಿಗೆ ಬೆಳಬೆಳಗ್ಗೆಯೇ ಹಾಲು ಮೊಸರು ಮಾರು ಬರುತ್ತಿದ್ದವರು. ದನ ಕುರಿ ಆಡು ಬಿಟ್ಟುಕೊಂಡು ಅಡವಿಗೂ ಹೊಲದ ಕೆಲಸಕ್ಕೂ ಹೋಗುತ್ತಿದ್ದ ದುಡಿಮೆಗಾರರು. ಪ್ರಣಯ ಸಾಹಸದ ಹಲವಾರು ಕತೆಗಳಿಗೆ ಕಾರಣಕರ್ತರಾಗಿದ್ದವರು. ಇಡೀ ಊರೇ ಕಥಿಸುವ ಹಾಡುವ ಕಲಾವಿದರಿಂದ ತುಂಬಿತ್ತು. ಅಕ್ಷರದ ಸಹವಾಸವಿದ್ದಿದ್ದರೆ ಇವರೆಲ್ಲ ಕನ್ನಡದ ಪ್ರತಿಭಾವಂತ ಲೇಖಕರಾಗಿರುತ್ತಿದ್ದರು ಅನಿಸುತ್ತಿತ್ತು.

ಇಂತಹ ಹಳ್ಳಿಯಲ್ಲಿ ನನ್ನ ತಾರುಣ್ಯದ ಹತ್ತು ವರ್ಷಗಳು ಕಳೆದವು. ಅವು ನನ್ನನ್ನು ಇನ್ನಿಲ್ಲದಂತೆ ಸೃಜನಶೀಲಗೊಳಿಸಿದವು. ನನ್ನ ಪಾಲಿಗೆ ಗೇರಮರಡಿ ಜನಪದ ಪ್ರತಿಭೆಯ ಪ್ರತೀಕ. ಪ್ರಸ್ತುತ ಸಂಕಲನದ ಕತೆಗಳನ್ನು ಬೇರೆಬೇರೆ ಜಾತಿ ಧರ್ಮ ಸ್ಥಳಗಳಿಗೆ ಸೇರಿದ ಕತೆಗಾರರು ನಿರೂಪಿಸಿದ್ದರೂ, ಇವನ್ನೆಲ್ಲ ನಾನು ಕೇಳಿದ್ದು ಮತ್ತು ಸಂಗ್ರಹಿಸಿದ್ದು ಗೇರಮರಡಿಯಲ್ಲಿ. ಈ ಕತೆಗಳಲ್ಲಿ ಈ ಸೀಮೆಯ ಪರಿಸರದ ವಿವರಗಳಿವೆ. ಎಂತಲೇ ಇವು ಗೇರಮರಡಿ ಕತೆಗಳು. 36 ವರುಷದ ಹಿಂದೆ ಸಂಗ್ರಹ ಮಾಡಿದ ಈ ಕತೆಗಳು ಈಗಲೂ ತಾಜಾತನದಿಂದ ನಳನಳಿಸುತ್ತಿವೆ. ಇವನ್ನು ನಿರೂಪಿಸಿದ ಕತೆಗಾರರೆಲ್ಲರೂ ನಿಧನರಾಗಿದ್ದಾರೆ. ಆದರೆ ಕತೆಗಳಲ್ಲಿ ಅವರ ಕಲಾಚೈತನ್ಯ ಮತ್ತು ಲೋಕದೃಷ್ಟಿಗಳು ಜೀವಂತವಾಗಿವೆ


 

Related Tags: Geramaradi Kathegalu, Dr. Rahamath Tarikere
 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ