‘ಪ್ರಾಚಾರ್ಯ ಪಥ’ ಕೃತಿ ಲೋಕಾರ್ಪಣೆ
ನಾಗರಾಜ ಮತ್ತಿಗಾರರ ಸಂಪಾದಕೀಯದ ‘ಪ್ರಾಚಾರ್ಯ ಪಥ’ ಓದಿದರೆ ಕಣ್ಣ೦ಚು ಹನಿಗೂಡುವುದು. ಗುರುಗಳ ಪೂರ್ಣ ವ್ಯಕ್ತಿತ್ವ , ರಂಗ ಶ್ರದ್ದೆ, ಶಿಸ್ತು , ಅನುಭವಿಸಿದ ಕಷ್ಟಗಳು ಈ ಕೃತಿಯಲ್ಲಿವೆ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ.

ಕರಾವಳಿ ಕರ್ನಾಟಕ ವರದಿ
ಉಡುಪಿ:
ನಾರಾಯಣಪ್ಪ ಉಪ್ಪೂರರು ಭಾಗವತರು ಹೇಗೆ ಇರಬೇಕು, ಹೇಗಿದ್ದರೆ ಸೂಕ್ತ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ  ಭಾಗವತಿಕೆಗೆ ನೂರಕ್ಕೆ ನೂರು ಗೌರವ ತಂದುಕೊಂಡವರು. ಯಕ್ಷಗಾನ ರಂಗಸ್ಥಳದಲ್ಲಿ ಭಾಗವತರಿಗೆ ಇರುವ ಹಿಡಿತವನ್ನು ತೋರಿಸಿಕೊಟ್ಟವರು, ನಮ್ಮ ಗುರುಗಳು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನೆಬ್ಬೂರು ನಾರಾಯಣ ಭಾಗವತರು ಹೇಳಿದರು.

ಅವರು  ಐರೋಡಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಆಯೋಜಿಸಲಾದ  ಪತ್ರಕರ್ತ ನಾಗರಾಜ ಮತ್ತಿಗಾರ ಅವರ ಭಾಗವತ ನಾರ್ಣಪ್ಪ ಉಪ್ಪೂರರ ಡೈರಿಯಿಂದ ‘ಪ್ರಾಚಾರ್ಯ ಪಥ’ ಕೃತಿ ಲೋಕಾರ್ಪಣೆ ಮಾಡಿದರು.  ಉಪ್ಪೂರರಂತ ನೂರು ಜನ ಯಕ್ಷಗಾನ ಕ್ಷೇತ್ರದಲ್ಲಿ ಹುಟ್ಟಬೇಕಿತ್ತು. ಹಾಗಾಗಿದ್ದರೆ ಯಕ್ಷ ಕಲೆ ಸಾವಿರಾರು ವರ್ಷಗಳ ಕಾಲ ಬೆಳಗುತ್ತಿತ್ತು. ಅವರ ಶಿಷ್ಯರೆಂದು ಹೇಳಿಕೊಳ್ಳುವುದೆ ನಮಗೆ ಗೌರವ ತರುವ ಮತ್ತು ಹೆಮ್ಮೆ ನೀಡುವ ಸಂಗತಿ ಎಂದು ಈ ಸಂದರ್ಭ ನುಡಿದರು.

ಪದ್ಮಶ್ರೀ ಪ್ರಶಸ್ತಿ ಪರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕೃತಿಯ ಲೇಖಕ, ಪತ್ರಕರ್ತ ನಾಗರಾಜ ಮತ್ತಿಗಾರ ಅವರು ಪ್ರಾಸ್ತಾವಿಸಿ, ಉಪ್ಪೂರ ಡೈರಿಯಿಂದ ಈ ಕೃತಿ ರಚಿಸಲು ನಮಗೆ ಸಿಕ್ಕ ಅವಕಾಶ, ನಮಗೆ ಒಲಿದ ಯೋಗ ಮತ್ತು ಭಾಗ್ಯ ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ನಿವೃತ್ತ ಪ್ರಾಂಶುಪಾಲ ಎಂ.ಎಲ್.ಸಾಮಗ, ಯಕ್ಷಗಾನ ಕಲಾಕೇಂದ್ರದ ಗೌರವಾಧ್ಯಕ್ಷ ಆನಂದ ಸಿ.ಕುಂದರ್, ಮತ್ತಿಗಾರ ಯಮುನಾ ಪ್ರಕಾಶನದ ಸುಬ್ರಾಯ ಹೆಗಡೆ, ನಿವೃತ್ತ ಉಪನ್ಯಾಸಕ ಶ್ರೀಧರ ಉಪ್ಪೂರ ಉಪಸ್ಥಿತರಿದ್ದರು.

ಇದೇ ಸಂದರ್ಭ ಕೃತಿಯನ್ನು ಹೊರತಂದ ಯಮುನಾ ಪ್ರಕಾಶನದ ಸುಬ್ರಾಯ ಹೆಗಡೆ ಅವರನ್ನು ಉಪ್ಪೂರರ ಶಿಷ್ಯ ವರ್ಗದವರು ಸನ್ಮಾನಿಸಿ ಗೌರವಿಸಿದರು.

ಯಕ್ಷಗಾನ ಕಲಾಕೇಂದ್ರ ಎ.ಎಸ್.ಎನ್. ಹೆಬ್ಬಾರ್ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಉದ್ಯಾವರ ಮಾಧವ ಆಚಾರ್ಯ ಕೃತಿಯನ್ನು ಪರಿಚಯಿಸಿದರು.

ಉಪ್ಪೂರರ ಶಿಷ್ಯ, ಬಡಗುತಿಟ್ಟಿನ ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರಿಂದ ಭೀಷ್ಮ ಪರ್ವ ಯಕ್ಷಗಾನ ಪ್ರದರ್ಶನ ನಡೆಯಿತು.

ಕಾರ್ಯಕ್ರಮಕ್ಕೆ ಖ್ಯಾತ ಚಂಡೆ ವಾದಕ ಶಿವಾನಂದ ಕೋಟ ಸಹಕರಿಸಿದ್ದರು. ಪ್ರಾಚಾರ್ಯರ ಶಿಷ್ಯರಾದ ಸದಾನಂದ ಐತಾಳ, ಕೆ.ಜಿ. ರಾಮರಾವ್, ಕೆ.ಪಿ.ಹೆಗಡೆ, ಸುರೇಶ ಶೆಟ್ಟಿ, ಗಣಪತಿಕವ್ವಾಳೆ, ಹಣಗಾರ ಶ್ರೀಧರ, ಚಂದ್ರಾಚಾರ್ ಹಾಳಾಡಿ ಮುಂತಾದವರ ಉಪಸ್ಥಿತಿ ಗಮನ ಸೆಳೆಯಿತು.

"ಪ್ರಾಚಾರ್ಯ ಪಥ" ಓದಿದರೆ ಕಣ್ಣಂಚು ಹನಿಗೂಡುವುದು: ಧಾರೇಶ್ವರ
ಗುರುಗಳ ಮಗನಾದ ದಿನೇಶ ಉಪ್ಪುರ್ ,ಶ್ರೀಧರ ಉಪ್ಪುರ್ ಹಾಗು ಕುಟುಂಬದವರ,ಆರ್.ಜಿ ಭಟ್ ವರ್ಗಾಸರ ಹಾಗು ಇನ್ನು ಅನೇಕರ ಸಹಕಾರದೊಂದಿಗೆ, ಯಮುನಾ ಪ್ರಕಾಶನದ, ಮಿತ್ರ ನಾಗರಾಜ ಮತ್ತಿಗಾರರ ಸಂಪಾದಕೀಯದ ಫಲವೇ "ಪ್ರಾಚಾರ್ಯ ಪಥ" ಓದಿದವರಿಗೆ ಗುರುಗಳ ಪೂರ್ಣ ವ್ಯಕ್ತಿತ್ವದ ಬಗ್ಗೆ ಖಂಡಿತಾ ತಿಳಿಯುತ್ತದೆ,ಅವರ ರಂಗ ಶ್ರದ್ದೆ,ಶಿಸ್ತು ,ಅವರು ಅನುಭವಿಸಿದ ಕಷ್ಟಗಳು ಹೀಗೆ ಹಲವಾರು ಮಜಲುಗಳು ಈ ಪುಸ್ತಕದಲ್ಲಿ ಅವರ ಮಾತಿನಲ್ಲಿಯೇ ಅಕ್ಷರವಾಗಿದೆ.  ಓದಿದರೆ ಕಣ್ಣ೦ಚು ಹನಿಗೂಡುವುದು. ಬಹು ಸಮಯದ ನಿರೀಕ್ಷಿತ ದಿನ ಇಂದು ಸಾಕಾರಗೊಂಡಿತು ಎಂದು ಉಪ್ಪೂರರ ಶಿಷ್ಯ, ಬಡಗುತಿಟ್ಟಿನ ಖ್ಯಾತ ಭಾಗವತರಾದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ತಮ್ಮ ‘ಫೇಸ್ಬುಕ್’ ಬರಹದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹ.

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ನಾಗರಾಜ ಮತ್ತಿಗಾರ, ಪತ್ರಕರ್ತ ನಾಗರಾಜ ಮತ್ತಿಗಾರ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಭಾಗವತ ನಾರ್ಣಪ್ಪ ಉಪ್ಪೂರ, ‘ಪ್ರಾಚಾರ್ಯ ಪಥ’, ಚಿಟ್ಟಾಣಿ ರಾಮಚಂದ್ರ ಹೆಗಡೆ, ನೆಬ್ಬೂರು ನಾರಾಯಣ ಭಾಗವತ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ