ಉಡುಪಿ ಸರ್ಕಾರಿ ಆಸ್ಪತ್ರೆ ಏಕೆ ಹಸ್ತಾಂತರವಾಗಬಾರದು?
ಎನ್‌ಜಿಓಗಳು ಅಥವಾ ಉದ್ದಿಮೆದಾರರಿಗೆ ಆಸ್ಪತ್ರೆಗಳನ್ನು ದತ್ತು ನೀಡುವುದೆಂದರೆ ಅದು ಖಾಸಗೀಕರಣದ ಕಡೆಗೆ ''ವಿಶ್ವಬ್ಯಾಂಕ್ ಮಾದರಿ''ಯಲ್ಲಿ ಒಂದೊಂದೇ ಹೆಜ್ಜೆಗಳನ್ನಿಡುವುದೆಂದೇ ಅರ್ಥ.

ಡಾ. ಎಚ್. ವಿ. ವಾಸು

ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದೊಳಗೆ ಇರುವ 'ಒಳ್ಳೆಯವರ' ಕಥೆಯೂ ಇಷ್ಟು ಕೆಟ್ಟದಾಗಿರುವುದು ಸಾಧ್ಯ. ಆರ್ಥಿಕ ನೀತಿಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಅಷ್ಟೊಂದು ದೊಡ್ಡ ವ್ಯತ್ಯಾಸವಿಲ್ಲ ಎಂದು ಕೆಲವರು ಹೇಳುತ್ತಾರೆ. ಅದು ವಾಸ್ತವವಲ್ಲ. ಎರಡು ಪಕ್ಷಗಳೂ ಕಾರ್ಪೋರೇಟ್ ಹಿತಾಸಕ್ತಿಯನ್ನೇ ಪ್ರತಿನಿಧಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಅದನ್ನು ಬಿಜೆಪಿಯು ಅಗ್ರೆಸಿವ್ ಆಗಿ ಪ್ರತಿಪಾದಿಸುತ್ತದೆ ಮತ್ತು ಅಗ್ರೆಸಿವ್ ಆಗಿ ಜಾರಿಗೆ ತರುತ್ತದೆ. ಕಾಂಗ್ರೆಸ್‌ನೊಳಗೆ ಇದನ್ನು ಹೇಗೆ ಮಾಡಬೇಕು ಎಂಬುದರ ಕುರಿತು ಭಿನ್ನವಾದ ಅಭಿಪ್ರಾಯಗಳಿವೆ. ಈ ಹಿಂದಿನ ಯುಪಿಎ ಸರ್ಕಾರದ ಒಳಗೆ ಎರಡು ಸ್ಪಷ್ಟ ಭಿನ್ನ ಬಣಗಳಿದ್ದವು. ಒಂದು ಕಡೆ ಪಿ.ಚಿದಂಬರಂ, ಕಪಿಲ್ ಸಿಬಲ್, ದೇವ್ರಾ, ಕಮಲನಾಥ್ ಥರದವರಿದ್ದರೆ, ಇನ್ನೊಂದು ಕಡೆಗೆ ಎ.ಕೆ.ಆಂಟನಿ, ಜೈರಾಂ ರಮೇಶ್, ಜೈಪಾಲ ರೆಡ್ಡಿ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರಿದ್ದರು. ಮನಮೋಹನಸಿಂಗ್ ಮತ್ತು ಸೋನಿಯಾಗಾಂಧಿ ಎರಡರ ಮಧ್ಯೆ ಇದ್ದಂತೆ ತೋರಿಸಿಕೊಳ್ಳುತ್ತಿದ್ದರು. ಆದರೆ, ಪ್ರಧಾನಿ ಮೊದಲನೆಯ ಬಣದ ಕಡೆಗೂ, ಸೋನಿಯಾಗಾಂಧಿ ಎರಡನೆಯ ಬಣದ ಕಡೆಗೂ ಹೆಚ್ಚು ವಾಲುತ್ತಿದ್ದರು. ಮೊದಲ ಬಣ ಇನ್ನಷ್ಟು ಕಾರ್ಪೋರೇಟ್‌ಗಳ ಪರ ನೀತಿಗಳನ್ನು ಜಾರಿಗೆ ತರಬೇಕೆಂದು ಪ್ರತಿಪಾದಿಸುತ್ತಿದ್ದರೆ, ಎರಡನೆಯ ಬಣ ಅದಕ್ಕೆ ಒಂದಷ್ಟು ಮಾನವೀಯ ಮುಖವಾಡ ಇರಬೇಕೆಂದು ಹೇಳುತ್ತಿತ್ತು.

ಒಟ್ಟಾರೆ ಇವೆರಡು ಬಣಗಳ ಗುದ್ದಾಟದ ನಡುವೆ ವಿಶ್ವಬ್ಯಾಂಕ್ ಪ್ರೇರಿತ 'ಮಾನವೀಯ ಮುಖವಾಡ ಹಾಗೂ ಜನರ ಸಹಭಾಗಿತ್ವ'ದ ಹೆಸರಿನ ನೀತಿಗಳು ಜಾರಿಯಾಗುತ್ತಿದ್ದವು. ಇನ್ನು ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್ ಥರದ ರಾಜಕಾರಣಿಗಳ ವಿಚಾರಕ್ಕೆ ಬರುವುದಾದರೆ ಇವರು ಇನ್ನೂ ಸ್ವಲ್ಪ ಭಿನ್ನ. ಇವರುಗಳು ಸುದೀರ್ಘ ಕಾಲ ತಳಮಟ್ಟದ ಜನರ ಒಡನಾಟವನ್ನು ಹೊಂದಿದ್ದು, ಆಡಳಿತ ಯಂತ್ರಾಂಗ ಮತ್ತು ಸಾಮಾಜಿಕ ವ್ಯವಸ್ಥೆಗಳು ಹೇಗೆ ಜನರ ವಿರುದ್ಧ ಕೆಲಸ ಮಾಡುತ್ತದೆ ಎಂಬುದರ ಕುರಿತು ಸ್ವಲ್ಪವಾದರೂ ಒಳನೋಟ ಹೊಂದಿರುವವರು. ಆದರೆ, ಇಂಥವರ ನೇತೃತ್ವದಲ್ಲೂ ಹಸಿ ಹಸಿಯಾಗಿ ಜನವಿರೋಧಿ ನೀತಿಗಳು ಜಾರಿಗೆ ಬರುತ್ತವೆ ಮತ್ತು ಬರುತ್ತಿವೆ ಎಂಬುದನ್ನು ತೋರಿಸುವ ಹಲವಾರು ನಿದರ್ಶನಗಳಿವೆ. ಇದು ಕೇವಲ ಸ್ಥಾಪಿತ ವ್ಯವಸ್ಥೆಯ ಶಕ್ತಿಯನ್ನು ಮಾತ್ರವಲ್ಲದೇ, ಇಂತಹ ಪಕ್ಷಗಳೊಳಗಿನ ಇಂತಹ ಸದಾಶಯದ ವ್ಯಕ್ತಿಗಳ ದೃಷ್ಟಿಕೋನದ ದೌರ್ಬಲ್ಯವನ್ನೂ ತೋರುತ್ತದೆ.

ಉಡುಪಿ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಉದ್ಯಮಿಯೊಬ್ಬರಿಗೆ ಹಸ್ತಾಂತರಿಸುವ ರಾಜ್ಯ ಸರ್ಕಾರದ ಆಲೋಚನೆಯು ಇದಕ್ಕೊಂದು ನಿದರ್ಶನ. ಉಡುಪಿ ಜಿಲ್ಲಾಸ್ಪತ್ರೆಯನ್ನು ಅಬುಧಾಬಿ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿಯವರ ಸಂಸ್ಥೆಗೆ ಹಸ್ತಾಂತರಿಸಲಾಗುವುದೆಂದೂ, ಈ ಆಸ್ಪತ್ರೆಯನ್ನು ಅವರು ಸಂಪೂರ್ಣ ಉಚಿತವಾಗಿಯೇ ನಡೆಸುತ್ತಾರೆಂದೂ ಹೇಳಲಾಗುತ್ತಿದೆ. ಇದಲ್ಲದೇ, ಇನ್ನೂ ಪೂರಾ ಹೊರಬಿದ್ದಿರದ ಮಾಹಿತಿಯ ಪ್ರಕಾರ, ಈ 'ಸರ್ಕಾರಿ ಖಾಸಗಿ ಸಹಭಾಗಿತ್ವದ ಉಚಿತ ಆಸ್ಪತ್ರೆ'ಯ ಪಕ್ಕದಲ್ಲೇ ಆತನ ತಂದೆ-ತಾಯಿ ಹೆಸರಿನಲ್ಲಿ ಇನ್ನೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬರುತ್ತದಂತೆ. ಅದು ಕಮರ್ಷಿಯಲ್ ಆಸ್ಪತ್ರೆ ಆಗಿರುತ್ತದೆ! ಇನ್ನೂ ಪೂರ್ಣ ವಿವರಗಳು ಸಿಕ್ಕಿಲ್ಲವಾದರೂ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆಯೋ, ರಿಯಾಯಿತಿ ದರದ ಚಿಕಿತ್ಸೆಯೋ ದೊರೆಯುವ ಏರ್ಪಾಡೂ ನಡೆಯುತ್ತದಂತೆ. ಈ ಉಳಿದ ವಿವರಗಳ ಸತ್ಯಾಸತ್ಯತೆ ಇನ್ನೂ ಸಾರ್ವಜನಿಕವಾಗಬೇಕಿದೆ. ಆದರೆ, ಒಂದಂತೂ ಸತ್ಯ. ಯಾವುದೇ ರೀತಿಯಲ್ಲಿ ನಡೆಯಬಹುದಾದ ಇಂತಹ ಹಸ್ತಾಂತರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದೃಷ್ಟಿಯಿಂದ ಒಂದು ಗಂಭೀರ ಹಿನ್ನಡೆಯಲ್ಲದೇ ಇನ್ನೇನೂ ಅಲ್ಲ ಮತ್ತು ಇದರ ಹೊಣೆಯನ್ನು ಆರೋಗ್ಯ ಸಚಿವ ರಮೇಶ್ ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಲೇಬೇಕಾಗುತ್ತದೆ. ಈ ಹೊಣೆಯನ್ನು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಮೇಲೆ ಮಾತ್ರ ಹಾಕಿಬಿಡುವುದು ಸಮಂಜಸವಲ್ಲ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಅವರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಿ ಟೀಕಿಸುತ್ತಿರುವುದರಿಂದ ಈ ಮಾತನ್ನು ಹೇಳಬೇಕಾಗಿದೆ.

ಉಳಿದ ತಾತ್ವಿಕ ವಾದಗಳನ್ನು ನಂತರ ಚರ್ಚಿಸೋಣ. ಪೂರಾ ಪೂರಾ 'ಪ್ರಾಕ್ಟಿಕಲ್' ಅಥವಾ 'ಪ್ರಾಗ್ಮ್ಯಾಟಿಕ್' ಸಂಗತಿಗಳನ್ನು ಮಾತ್ರ ನೋಡೋಣ. ಖಾಸಗಿಯವರಿಗೆ ಆಸ್ಪತ್ರೆಗಳನ್ನು ಹಸ್ತಾಂತರಿಸುವುದು ಹೊಸದೇನಲ್ಲ. ಈ ಹಿಂದೆಯೂ ಅವನ್ನು ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾತ್ರವಲ್ಲದೇ, ಜಿಲ್ಲಾ ಮಟ್ಟದಲ್ಲಿದ್ದ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೂ ಸೂಪರ್ ಸ್ಪೆಷಲ್ ಖಾಸಗಿಯವರಿಗೆ ವಹಿಸಲಾಗಿತ್ತು. ಆ ಅನುಭವ ಏನು ಹೇಳುತ್ತದೆ? ಇದರ ಕುರಿತು ಸರ್ಕಾರದ್ದೇ ಅಧ್ಯಯನಗಳಿವೆ. ಸೇವೆಯೇ ತಮ್ಮ ಪರಮೋಚ್ಛ ಗುರಿ, ತಾವು ಅವತಾರವೆತ್ತಿರುವುದೇ ಜನರ ಸೇವೆಗೆಂದು ಎಂದು ಬಿಂಬಿಸಿಕೊಳ್ಳುವ ಮಹಾನುಭಾವರ ನೇತೃತ್ವದ ಎನ್‌ಜಿಓಗಳಿಗೆ ರಾಜ್ಯದ ವಿವಿಧ ವಿಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 'ಆರೋಗ್ಯ ಬಂದು' ಯೋಜನೆಯಡಿ ವಹಿಸಿಕೊಡಲಾಗಿತ್ತು. ಅಂತಿಮವಾಗಿ ನಡೆದ ಸಮೀಕ್ಷೆಯಲ್ಲಿ, ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರ್ಕಾರದ ನೇರ ಸುಪರ್ದಿನಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಿಂತ ಹೆಚ್ಚಿನ ಅಂಶಗಳಲ್ಲಿ ಯಾವ ರೀತಿಯಲ್ಲೂ ಉತ್ತಮವಾಗೇನೂ ಇರಲಿಲ್ಲ. ಕೆಲವು ಅಂಶಗಳಲ್ಲಿ ಇನ್ನೂ ಕಳಪೆಯಾಗಿದ್ದವು. ಸದರಿ ಎನ್‌‍ಜಿಓ ಯಾರೇ ಬಂದರೂ ತೋರಿಸಿ ಮೆಚ್ಚುಗೆ ಗಳಿಸಲು ಒಂದು 'ಮಾದರಿ ಆಸ್ಪತ್ರೆ'ಯನ್ನು ಮಾತ್ರ ಚೆನ್ನಾಗಿ ನಡೆಸುತ್ತಾ, ಉಳಿದವನ್ನು ಕಳಪೆಯಾಗಿಯೇ ನಡೆಸುತ್ತಿತ್ತು. ಇವೆಲ್ಲಕ್ಕೂ ಸರ್ಕಾರದ ಹಣ ಮತ್ತು ಮೂಲಭೂತ ಸೌಕರ್ಯಗಳು ಬಳಕೆಯಾಗುತ್ತಿತ್ತು. ಇದೇ ಸಂಸ್ಥೆಯು ನಡೆಸುತ್ತಿದ್ದ ಒಂದು ಆರೋಗ್ಯ ಕೇಂದ್ರದ ಸ್ಥಿತಿ ಇಡೀ ರಾಜ್ಯದ ಗಮನ ಸೆಳೆಯುವ ಸಂದರ್ಭ ಬಂದಿದ್ದರೂ, ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಯಿತು. ಅದು ಬೆಂಗಳೂರಿನ ಭಿಕ್ಷುಕರ ಪುನರ್ವಸತಿ ಕೇಂದ್ರದ ಆಸ್ಪತ್ರೆ. ಹೌದು ಕೆಲವು ವರ್ಷಗಳ ಕೆಳಗೆ ಪ್ರತಿನಿತ್ಯ ಸಾಲು ಸಾಲು ಹೆಣಗಳು ಬಿದ್ದ ಅದೇ ಕೇಂದ್ರದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ನಡೆಸುತ್ತಿದ್ದದ್ದು, ಕರುಣೆಯನ್ನೇ ಹೆಸರಿನಲ್ಲೂ ಹೊಂದಿದ್ದ ಇದೇ ಖಾಸಗಿ 'ಸೇವಾ ಸಂಸ್ಥೆ'!

ಇಂತಹ ಸರ್ಕಾರಿ ಆಸ್ಪತ್ರೆಗಳ ಹೊಣೆಗಾರಿಕೆ ವಾಂತಿ, ಬೇಧಿ, ಜ್ವರ ಬಂದವರಿಗೆ ಮಾತ್ರೆ ಕೊಡುವುದು ಮಾತ್ರವಲ್ಲ. (ಅದನ್ನೂ ಇವರು ಸರಿಯಾಗಿ ಮಾಡಲಿಲ್ಲ ಎಂಬುದು ಬೇರೆ ಪ್ರಶ್ನೆ. ವಾಂತಿ-ಬೇಧಿಯಿಂದಲೇ ಪುನರ್ವಸತಿ ಕೇಂದ್ರದಲ್ಲಿ ಸಾಲು ಸಾಲು ಹೆಣಗಳುರುಳಿದ್ದದ್ದು.) ತನ್ನ ವ್ಯಾಪ್ತಿಯ ಒಟ್ಟಾರೆ ಪ್ರದೇಶದಲ್ಲಿ ನೈರ್ಮಲ್ಯ ಹೇಗಿದೆ, ವಿವಿಧ ಸರ್ಕಾರಿ ಆರೋಗ್ಯ ಯೋಜನೆಗಳು ಹೇಗೆ ಜಾರಿಯಾಗುತ್ತಿವೆ, ಏನಾದರೂ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆಯಿದೆಯಾ, ಸಾಮುದಾಯಿಕ ಆರೋಗ್ಯದ ದೃಷ್ಟಿಯಿಂದ ಏನೇನು ಮಾಡಬಹುದು? ಇವೆಲ್ಲದರ ಜವಾಬ್ದಾರಿ ಅವರದ್ದಾಗಿರುತ್ತದೆ. ಈ ಅಂಕಣಕಾರನ ಇತ್ತೀಚಿನ ನೇರ ಅನುಭವದ್ದೇ ಉದಾಹರಣೆ ಹೇಳುವುದಾದರೆ - ಮಂಡ್ಯದ ಒಂದು ಶ್ರಮಿಕನಗರದಲ್ಲಿ (ಸ್ಲಂ) ಈಚೆಗೆ 20ಕ್ಕೂ ಹೆಚ್ಚು ಜನರಿಗೆ ಜ್ವರ ಬಂದಿತು ಹಾಗೂ ಅವರಲ್ಲಿ ಕೆಲವರಿಗೆ ಡೆಂಗ್ಯೂ ಜ್ವರ ಬಂದಿತ್ತು. ಕಳಪೆಯಾಗಿ ಕೆಲಸ ಮಾಡುತ್ತವೆ ಎಂದು ನಾವು ಆರೋಪಿಸುವ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಇಡೀ ಜಿಲ್ಲಾ ಯಂತ್ರಾಂಗವೇ ಆ ಪ್ರದೇಶಕ್ಕೆ ಭೇಟಿ ಕೊಟ್ಟರು. ಮನೆ ಮನೆಗಳ ಒಳಹೊಕ್ಕರು. ಸೊಳ್ಳೆ ಉತ್ಪತ್ತಿಯಾಗುವ ಜಾಗಗಳನ್ನು ಪರಿಶೀಲಿಸಿದರು, ಸಾರ್ವಜನಿಕ ಸಭೆ ನಡೆಸಿ ಜಾಗೃತಿ ಮೂಡಿಸಿದರು. ಇವೆಲ್ಲವನ್ನೂ ಮಾಡದಿದ್ದರೆ, ಮಂಡ್ಯದ ಶ್ರಮಿಕನಗರಗಳ ಒಕ್ಕೂಟದ ಸಿದ್ದರಾಜು ಅವರಿಂದ ಹಿಡಿದು ಟಿವಿ ಚಾನೆಲ್‌ಗಳ ಆಂಕರ್‍‍ಗಳವರೆಗೆ ಎಲ್ಲರೂ ಇವರ ಜನ್ಮ ಜಾಲಾಡುತ್ತಿದ್ದರು. ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಮಾತ್ರ, ಅಲ್ಲಿನ ಸರಣಿ ಸಾವುಗಳಿಗೆ ಈ ಸಂಸ್ಥೆಯನ್ನು ಯಾರೂ ಹೊಣೆಗಾರರನ್ನಾಗಿಸಲಿಲ್ಲ. ಕನಿಷ್ಠ ಅವರ ಹೆಸರನ್ನೂ ಯಾವ ಮಾಧ್ಯಮವೂ ಹೇಳಲಿಲ್ಲ.

ಇರಲಿ, ಇದು ಕೇವಲ ಒಂದು ಕೇಂದ್ರದ ಕಥೆಯಲ್ಲ. ಬಹುತೇಕ ಖಾಸಗಿ ಸಾರ್ವಜನಿಕ ಸ್ಕೀಮ್‌ಗಳ ಕಥೆ ಇದೇ ಆಗಿದೆ. ಇವೆಲ್ಲವನ್ನು ಕಂಡೇ ಇದೇ ಸರ್ಕಾರವು 'ಆರೋಗ್ಯ ಬಂಧು' ಯೋಜನೆಯನ್ನು ಹಿಂತೆಗೆದುಕೊಂಡಿತು. ಕಳಪೆಯಾಗಿ ಪಿಎಚ್ಸಿಗಳನ್ನು ನಡೆಸುತ್ತಿದ್ದ ಖಾಸಗಿ ಸೇವಾ ಕೇಂದ್ರಗಳು ಹೈಕೋರ್ಟ್‌ಗೆ ಹೋದರು. ಹೈಕೋರ್ಟ್ ಅದಕ್ಕೆ ತಡೆಯನ್ನು ನೀಡಲಿಲ್ಲ. ಈಗ ಇದೇ ಸರ್ಕಾರವು ಮತ್ತಿನ್ನೊಂದು ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸಲು ಹೊರಟಿರುವುದು ಏತಕ್ಕಾಗಿ? ಒಂದು ವೇಳೆ ಪಿಎಚ್ಸಿಗಳ ಕಥೆ ಬೇರೆ, ನಾವು ವಹಿಸುತ್ತಿರುವುದು ಜಿಲ್ಲಾ ಮಟ್ಟದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಎಂದು ಅವರು ಹೇಳಬಹುದು. ರಾಯಚೂರಿನ ಒಪೆಕ್ ಆಸ್ಪತ್ರೆಯನ್ನು ದೇಶದ ಅತೀ ದೊಡ್ಡ ಕಾರ್ಪೋರೇಟ್ ವೈದ್ಯಕೀಯ ಸಂಸ್ಥೆಗಳಲ್ಲೊಂದಾದ ಅಪೊಲೋದವರಿಗೇ ವಹಿಸಿಕೊಡಲಾಗಿತ್ತು. ಅವರು ಅದನ್ನು ಯಾವುದೇ ಜಿಲ್ಲಾಸ್ಪತ್ರೆಗಿಂತ ಕಳಪೆಯಾಗಿ ನಿರ್ವಹಿಸಿದರು ಮಾತ್ರವಲ್ಲಾ, ಇರುವ ವ್ಯವಸ್ಥೆಯನ್ನೂ ಕೆಡಿಸಿದರು. ಇಡೀ ರಾಯಚೂರು ಜಿಲ್ಲೆಯ ಜನರಷ್ಟೇ ಅಲ್ಲದೇ, ಸರ್ಕಾರಿ ಕಡತಗಳೂ ಇದನ್ನು ಸ್ಪಷ್ಟಪಡಿಸುತ್ತವೆ. ಖಾಸಗಿಯವರ ಸಾಮರ್ಥ್ಯ ಈ ರೀತಿ ಪದೇ ಪದೇ ಸಾಬೀತಾದ ನಂತರವೂ ಖಾಸಗಿಯವರಿಗೆ ಸರ್ಕಾರಿ ಆಸ್ಪತ್ರೆಯನ್ನು ವಹಿಸುವ ಉಮೇದು ನಮ್ಮ ಆಳುವವರಲ್ಲಿ ಏಕಿದೆ?

ಗಮನಿಸಿ, ಇವ್ಯಾವುವೂ ತಾತ್ವಿಕ ಸಂಗತಿಗಳಲ್ಲ. Purely empirical. ಇಲ್ಲೇ ಇನ್ನೊಂದು empirical ಸಂಗತಿಯನ್ನು ಹೇಳಬೇಕು. ಬೆಂಗಳೂರಿನಲ್ಲಿ ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಆಸ್ಪತ್ರೆಯಿದೆ. ಅವರದ್ದೇ ಖಾಸಗಿ ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡಿರುವ ಈ ಆಸ್ಪತ್ರೆಗೆ ದಾರಿ ತೋರಿಸುವ ನಾಮಫಲಕಗಳನ್ನು 25 ವರ್ಷಗಳ ಕೆಳಗೆ, ಬೆಂಗಳೂರಿನ ಸುತ್ತ 100 ಕಿ.ಮೀ. ದೂರದವರೆಗೆ ದಶದಿಕ್ಕುಗಳಲ್ಲೂ ಹಾಕಲಾಗಿತ್ತು. ತಮ್ಮ ಆಸ್ಪತ್ರೆಗೆ ರೋಗಿಗಳು ಬಂದಷ್ಟೂ ಮೆಡಿಕಲ್ ಕಾಲೇಜಿಗೆ ಲಾಭ ಎಂಬುದು ಒಂದು ಲೆಕ್ಕಾಚಾರವಾಗಿದ್ದರೆ, ಇನ್ನೊಂದು ಲೆಕ್ಕಾಚಾರ ಆಸ್ಪತ್ರೆಗೆ ನೇರ ಆರ್ಥಿಕ ಲಾಭದ ಉದ್ದೇಶವೂ ಇದ್ದಿರಬಹುದು. ಆಸ್ಪತ್ರೆಯ ಚಿಕಿತ್ಸಾ ವೆಚ್ಚವು ಅಂದಿನ ನರ್ಸಿಂಗ್ ಹೋಂಗಳಿಗಿಂತ ಕಡಿಮೆ ಇರುತ್ತಿತ್ತು. ಈಗ 10 ವರ್ಷಗಳಿಗೂ ಹಿಂದೆ, ಈ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಪಕ್ಕ 'ಎಂ.ಎಸ್.ರಾಮಯ್ಯ ಮೆಮೋರಿಯಲ್ ಆಸ್ಪತ್ರೆ'ಯೆಂಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಅವರೇ ಆರಂಭಿಸಿದರು. ಮೊದಲನೆಯದ್ದೂ ಸೂಪರ್ ಸ್ಪೆಷಾಲಿಟಿಯೇ ಆಗಿತ್ತು! ಆದರೆ, ಎರಡನೆಯ ಆಸ್ಪತ್ರೆ ಆರಂಭವಾದ ನಂತರ, ಮೊದಲನೆಯ ಆಸ್ಪತ್ರೆಯ ಮಾಮೂಲಿ ಸ್ಪೆಷಾಲಿಟಿಗಳನ್ನೂ ನಾಮಕಾವಸ್ತೆಗೊಳಿಸಲಾಯಿತು! ಅಂತಹ ಎಲ್ಲಾ ರೋಗಿಗಳನ್ನೂ ಇಲ್ಲಿಂದ ಪಕ್ಕದ ಆಸ್ಪತ್ರೆಗೆ ಕಳಿಸಲಾರಂಭಿಸಿದರು. ಈ ಮೆಮೋರಿಯಲ್ ಆಸ್ಪತ್ರೆ ಬೆಂಗಳೂರಿನ ಅತ್ಯಂತ ದುಬಾರಿ ಆಸ್ಪತ್ರೆಗಳಲ್ಲೊಂದಾಗಿದೆ!!

ಈ ಬದಲಾವಣೆಯು ಜಾಗತೀಕರಣೋತ್ತರ ಕಾಲದ 'ಧರ್ಮಾರ್ಥ ಸೇವೆ'ಯ ಇನ್ನೊಂದು ನಿದರ್ಶನವಾಗಿದೆ. ಈ ದೇಶದಲ್ಲಿ ಹಿಂದಿನಿಂದಲೂ ಧರ್ಮಾರ್ಥ ಆಸ್ಪತ್ರೆಗಳೂ ಇದ್ದವು, ಧರ್ಮಾರ್ಥ ಶಾಲೆಗಳೂ ಇದ್ದವು. ಹಿಂದಿಗೂ, ಇಂದಿಗೂ ದೊಡ್ಡ ವ್ಯತ್ಯಾಸವಿದೆ. ಅಥವಾ ಅಂಥವರ ಸಂಖ್ಯೆ ಬೆರಳೆಣಿಕೆಗೆ ಇಳಿದಿದೆ. ಈ ಹಿಂದೆ ಇದೇ ಅಂಕಣದಲ್ಲಿ ದೊಡ್ಡಬಳ್ಳಾಪುರದ ಡಾ.ವೆಂಕಟರೆಡ್ಡಿ, ಶ್ರೀರಂಗಪಟ್ಟಣದ ಡಾ.ಸಿ.ಬಂದೀಗೌಡರ ಬಗ್ಗೆ ಬರೆಯಲಾಗಿತ್ತು. ಅವರಿಬ್ಬರೂ ಹೆಚ್ಚು ಕಡಿಮೆ ಒಂದೇ ತಿಂಗಳಲ್ಲಿ ತೀರಿಕೊಂಡಿದ್ದರು. ಇಂದಿಗೂ ಈ ಇಬ್ಬರು ವೈದ್ಯರುಗಳ ಮಕ್ಕಳು ಅವೇ ಆಸ್ಪತ್ರೆಗಳನ್ನು ಹಾಗೆಯೇ ಮುಂದುವರೆಸಿಕೊಂಡೂ ಹೋಗುತ್ತಿದ್ದಾರೆ. ಬಹುಶಃ ಇಂಥವರು ಇನ್ನೂ ಹಲವರು ಈಗಲೂ ಇರಬಹುದು. ಅಂಥ ಬೆರಳೆಣಿಕೆಯ ಜನರಲ್ಲಿ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಡಾ.ಎಚ್.ಎಸ್.ಅನುಪಮಾ, ಡಾ.ಅನಿಲ್ ಕುಮಾರ್ ಥರದವರೂ ಇದ್ದಾರೆ. ಆದರೆ, ಈ ಮಹನೀಯರುಗಳ ಸಾಮಾಜಿಕ ಬದ್ಧತೆ, ಬದುಕಿನ ದೃಷ್ಟಿಕೋನವೇ ಬೇರೆ. ಇದೀಗ ದತ್ತು ಪಡೆಯಲು ಬರುತ್ತಿರುವ ಸಂಸ್ಥೆಗಳ ಕಥೆಯೇ ಬೇರೆ. ಒಂದಕ್ಕೊಂದು ಅರ್ಥಾತ್ ಸಂಬಂಧವಿಲ್ಲ. ಇಂತಹ ಕೆಲವು ವೈದ್ಯರ ಉದಾಹರಣೆಗಳನ್ನಿಟ್ಟುಕೊಂಡು, ಎನ್‌ಜಿಓಗಳು ಅಥವಾ ಉದ್ದಿಮೆದಾರರಿಗೆ ಆಸ್ಪತ್ರೆಗಳನ್ನು ದತ್ತು ನೀಡುವುದೆಂದರೆ ಅದು ಖಾಸಗೀಕರಣದ ಕಡೆಗೆ 'ವಿಶ್ವಬ್ಯಾಂಕ್ ಮಾದರಿ'ಯಲ್ಲಿ ಒಂದೊಂದೇ ಹೆಜ್ಜೆಗಳನ್ನಿಡುವುದೆಂದೇ ಅರ್ಥ.

ಖಾಸಗಿ ಉದ್ದಿಮೆದಾರರ ಧರ್ಮಾರ್ಥ ಸೇವೆಯ ಮರ್ಜಿಯಲ್ಲಿ ಜನಸಾಮಾನ್ಯರನ್ನಿಡುವುದು, ದೊಡ್ಡ ಗೌಡರ Benevolenceನ ಮರ್ಜಿಯಲ್ಲಿ ಹಳ್ಳಿಯ ವಿವಿಧ ವರ್ಗಗಳನ್ನಿಡುವುದಕ್ಕಿಂತ ಹೇಗೆ ಭಿನ್ನ? ಸ್ವಲ್ಪ ಭಿನ್ನವೇ. ದೊಡ್ಡ ಗೌಡರಿಗೆ ಆರ್ಥಿಕ ಲಾಭಕ್ಕಿಂತ ಸಾಮಾಜಿಕ ಪ್ರತಿಷ್ಠೆ ಉಳಿಸಿಕೊಳ್ಳುವುದು ಹೆಚ್ಚು ಮುಖ್ಯವಾಗಿರುತ್ತದೆ. ಕಾರ್ಪೋರೇಟ್ ಸಂಸ್ಥೆಗಳಿಗೆ ಆರ್ಥಿಕ ಲಾಭವೇ ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ. ಅದಕ್ಕಾಗಿ ಅವರು Corporate Social Responsibility ಎಂಬಿತ್ಯಾದಿ ವಿಶೇಷಣಗಳಡಿ ನಡೆಸುವ ಧರ್ಮಾರ್ಥ ಕಾರ್ಯಗಳು ಪರೋಕ್ಷವಾಗಿ ಮಾತ್ರವಲ್ಲದೇ ಪ್ರತ್ಯಕ್ಷವಾಗಿಯೇ ಜನರ ಹಿತಾಸಕ್ತಿಗೆ ಮಾರಕ. ಅದಕ್ಕೆ ಕರ್ನಾಟಕದ ಸರ್ಕಾರಿ ಆರೋಗ್ಯ ಇಲಾಖೆಯ ನೇರ ಅನುಭವಗಳೇ ಸಾಕ್ಷಿಯಾಗಿವೆ. ಹೀಗಿದ್ದೂ ಉಡುಪಿ ಆಸ್ಪತ್ರೆಯನ್ನು ಹಸ್ತಾಂತರಿಸುವ ಕೆಲಸಕ್ಕೆ ಸರ್ಕಾರವು ಮುಂದಾಗುತ್ತದಾದರೆ, ಅದರ ವಿರುದ್ಧ ಹೋರಾಡುವುದು ಈ ಹೊತ್ತಿನ ತುರ್ತಿನ ಸಂಗತಿಗಳಲ್ಲೊಂದಾಗಿರುತ್ತದೆ.

Related Tags: Government Hospital Udupi, Privatization Process, B. R Shetty, Abudabi Industrialist, Haji Abdulla, Ramesh Kumar, Pramod Madhvaraj, Siddaramiah, DR. H.V. Vasu, Kannada Article
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ