ಶಿಕ್ಷಕರ ದಿನಾಚರಣೆ: ರಾಧಾಕೃಷ್ಣನ್ ಕೊಡುಗೆ ಏನು?
ಶಿಕ್ಷಣ ವಂಚಿತ ತಳ ಸಮುದಾಯದ ಮಕ್ಕಳಿಗೆ ಹಾಗೂ ಎಲ್ಲಾ ಜಾತಿಯ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಭಾರತದ ಇತಿಹಾಸದಲ್ಲಿಯೇ ಮೊಟ್ಟ ಮೊದಲು ಶ್ರಮಿಸಿದವರು ಜ್ಯೋತಿಬಾ ಮತ್ತು ಸಾವಿತ್ರಿ ಬಾಯಿ ಫುಲೆ ದಂಪತಿಗಳು.

ಪ್ರವೀಣ್. ಎಸ್. ಶೆಟ್ಟಿ,  ಮಂಗಳೂರು
ಗೀಗ ದೊಡ್ಡ ಸಂಖ್ಯೆಯಲ್ಲಿ ವಿದ್ಯಾವಂತ ಜನರು ಶಿಕ್ಷಕರ ದಿನಾಚರಣೆಯನ್ನು ಯಾವ ಕಾರಣಕ್ಕಾಗಿ ಡಾ.ರಾಧಾಕೃಷ್ಣನ್‌ರ ಜನ್ಮ ದಿನವಾದ ಸೆಪ್ಟೆಂಬರ್ 5 ಕ್ಕೆ ಆಚರಿಸಬೇಕೆಂದು ಕೇಳುತ್ತಿದ್ದಾರೆ. ರಾಧಾಕೃಷ್ಣನ್ ಯಾವ ಶಾಲೆಯಲ್ಲಿ ಶಿಕ್ಷಕರಾಗಿದ್ದರು? ಅವರು ಎಷ್ಟು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಕ್ಷರ ಕಲಿಸಿದ್ದಾರೆ? ಎಷ್ಟು ಹೈಸ್ಕೂಲು ಮಕ್ಕಳಿಗೆ ಜ್ಞಾನ ಕೊಟ್ಟಿದ್ದಾರೆ? ಕೊನೆಗೆ ಒಂದಾದರೂ ಶಾಲೆ ಕಟ್ಟಿಸಿದ್ದಾರೆಯೇ?  ಎಷ್ಟು ಹಳ್ಳಿಯ ಮಕ್ಕಳು ಶಾಲೆಗೆ ಬರುವಂತೆ ಮನ ಒಲಿಸಿದ್ದಾರೆ. ಎಷ್ಟು ಹಿಂದುಳಿದ ಸಮುದಾಯದ ಹೆಣ್ಣು ಮಕ್ಕಳಿಗೆ ಶಾಲೆ ಕಟ್ಟಿಸಿದ್ದಾರೆ?  ತನ್ನ ಮಾತೃಭಾಷೆ ತೆಲುಗು ಸಹಿತ ರಾಧಾಕೃಷ್ಣನ್ ಭಾರತೀಯ ಭಾಷೆಯಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ಏನಾದರೂ ಹೊಸ ಆವಿಷ್ಕಾರ ಅಥವಾ ಬದಲಾವಣೆ ತಂದಿರುವರೆ?  ಅವರು ಏನಿದ್ದರೂ ಹೊಟ್ಟೆಪಾಡಿಗಾಗಿ ಮದ್ರಾಸಿನಲ್ಲಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದರು ಅಷ್ಟೇ.  ಪ್ರಾಚಾರ್ಯರದ್ದು ಏನಿದ್ದರೂ ಕೇವಲ ಬೆಳೆದ ಕಾಲೇಜು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾತ್ರ. ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲು ಶಿಕ್ಷಕರಂತೆ ಕಾಲೇಜಿನ ಪ್ರಾಚಾರ್ಯರು ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಅವರ ಜೀವನದಲ್ಲಿ ವಿದ್ಯೆ ಬುದ್ದಿಯ ಅಡಿಪಾಯ ಹಾಕುವುದಿಲ್ಲ. ಹಳ್ಳಿಯ ಮಕ್ಕಳಿಗಂತೂ ಕಾಲೇಜಿನ ಪ್ರಾಚಾರ್ಯರು ಎಂದರೆ ಸಂಪೂರ್ಣ ಪರಕೀಯರು. ಹಾಗಾಗಿ ಕಾಲೇಜಿನ ಪ್ರಾಚಾರ್ಯರು ಮಾರ್ಗದರ್ಶಕರೇ ಹೊರತು ಶಿಕ್ಷಕರಲ್ಲ.

ರಾಧಾಕೃಷ್ಣನ್ 1888 ರಲ್ಲಿಯೇ ಹುಟ್ಟಿದ್ದರೂ ಅವರು ಎಂದೂ ಒಂದಿಷ್ಟೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲಿಲ್ಲ. ಅವರ ಸುತ್ತ ಮುತ್ತ ಭಾರಿ ಸ್ವಾತಂತ್ರ್ಯ ಹೋರಾಟ ನಡೆದು ಬ್ರಿಟಿಷರ ಗುಂಡಿಗೆ ಭಾರತೀಯರು ಬಲಿಯಾಗುತ್ತಿದ್ದರೂ ಅವರು ಸ್ವಾತಂತ್ರ್ಯ ಹೋರಾಟಗಾರರ ಪರವಾಗಿ ಒಂದು ಶಬ್ಧವನ್ನೂ ಆಡಲಿಲ್ಲ. ಅವರು ಕೆಲಸ ಮಾಡುತ್ತಿದ್ದ ಮದ್ರಾಸ್ ಮತ್ತು ಕಲ್ಕತ್ತಾದ ಕಾಲೇಜುಗಳಲ್ಲಿ ಅವರ ಜತೆಗಿನ ಪ್ರಾಚಾರ್ಯರು ಮತ್ತೂ ಸ್ವತಃ ಅವರ ಕಾಲೇಜು ವಿದ್ಯಾರ್ಥಿಗಳೂ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯ ಪಾಲ್ಗೊಂಡಿದ್ದರೂ  ರಾಧಾಕೃಷ್ಣನ್ ಮಾತ್ರ ಅದಕ್ಕೂ ತನಗೂ ಏನೂ ಸಂಬಂಧವಿಲ್ಲ ಎಂಬಂತೆ ಇದ್ದರು. ಹೀಗಿದ್ದರೂ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಬೇಕೆ?  ಕೇವಲ ಹಿಂದೂ ಧರ್ಮದ ಬಗ್ಗೆ ಹಾಗೂ ನಮ್ಮ ವೇದ ಪುರಾಣಗಳ ಬಗ್ಗೆ ಪಾಶ್ಚಾತ್ಯರಲ್ಲಿ ಮನೆ ಮಾಡಿದ್ದ ಪೂರ್ವಾಗ್ರಹಗಳನ್ನು ರಾಧಾಕೃಷ್ಣನ್ ತಮ್ಮ ಲೇಖನಗಳ ಮುಖಾಂತರ ದೂರ ಮಾಡಿದರು ಅಷ್ಟೇ. ಅದೂ ಅವರ ಹಿರಿಯರಿಂದ ಅವರಿಗೆ ಅನುವಂಶಿಕವಾಗಿ ಬಂದ ವೇದ ಪುರಾಣಗಳ ಜ್ಞಾನವನ್ನು ಬಳಸಿ ಹಿರಿಯರು ಕಲಿಸಿದ್ದನ್ನು ಇಂಗ್ಲೀಷ್ ಭಾಷೆಗೆ ತರ್ಜಮೆ ಮಾಡಿದ್ದು ಅಷ್ಟೇ. ವಿದ್ಯಾವಂತ ಬ್ರಾಹ್ಮಣರಾಗಿ ಹಾಗೂ ಇಂಗ್ಲೀಷ್ ಹಾಗೂ ಸಂಸ್ಕೃತ  ಭಾಷಾ ಪರಿಣಿತರಾಗಿ ಅದು ಅವರು ಮಾಡಬೇಕಿದ್ದ ಕರ್ತವ್ಯ ಅಷ್ಟೇ.  ಹಿಂದೂ ಧರ್ಮದ ಬಗೆಗಿನ ಆವರ ಲೇಖನಗಳಿಂದ ಹಿಂದೂ ಧರ್ಮಕ್ಕೆ ಪ್ರಯೋಜನ ಆಗಿರಬಹುದು, ಆದರೆ ಶಿಕ್ಷಣ ಕ್ಷೇತ್ರಕ್ಕೆ ಏನೂ ಪ್ರಯೋಜನ ಆಗಿಲ್ಲ. ಅವರದ್ದೇನಿದ್ದರೂ ಕೇವಲ ಇಂಗ್ಲೀಷ್ ಪುಸ್ತಕ ಪಾಂಡಿತ್ಯ ಅಷ್ಟೇ. 

ಇದಕ್ಕೆ ಹೊಲಿಸಿದರೆ ಜ್ಯೋತಿಬಾ ಫುಲೆ ದಂಪತಿಗಳು ಅವಿದ್ಯಾವಂತ ಕುಟುಂಬದಲ್ಲಿ ಹುಟ್ಟಿದವರು. ಸಾವಿತ್ರಿಬಾಯಿಯವರು ಮದುವೆಯ ನಂತರ ಕಷ್ಟಪಟ್ಟು ವಿದ್ಯೆ ಕಲಿತಿದ್ದು. ಅವರಿಗೆ ಯಾವ ಜ್ಞಾನವೂ ರೆಡಿಮೇಡ್ ಆಗಿ ಹಿರಿಯರಿಂದ ಬಳುವಳಿಯಾಗಿ ಬಂದಿರಲೇ ಇಲ್ಲ. ಇದಕ್ಕೆ ಹೋಲಿಸಿದರೆ ರಾಧಾಕೃಷ್ಣನ್ನರಿಗೆ ಸಿಕ್ಕಿದ್ದು ಎಲ್ಲಾವೂ ಹಿರಿಯರ ರೆಡಿಮೇಡ್ ಜ್ಞಾನ ಹಾಗೂ ಹೀನ ಜಾತಿವಾದಿ ಸಮಾಜದ ವಿರುದ್ಧ ಹೋರಾಡಿ ವಿದ್ಯೆ ಕಲಿಯ ಬೇಕಾದ ಪ್ರಮೇಯವೂ ಅವರಿಗೆ ಬಂದಿರಲಿಲ್ಲ.  ಮೇಲಾಗಿ ಅವರ ಮಗ ಗೋಪಾಲ ಸರ್ವಪಲ್ಲಿ ತನ್ನ ಒಂದು ಪುಸ್ತಕದಲ್ಲಿ ಬರೆದಿರುವಂತೆ ರಾಧಾಕೃಷ್ಣನ್ನರು ಸ್ವತಃ ತಮ್ಮ ಆರು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನೂ ಸರಿಯಾಗಿ ನಿರ್ವಹಿಸಲಿಲ್ಲ, ಹಾಗಾಗಿ ಅವರ ಹೆಂಡತಿ ಶಿವಕಾಮುರವರೇ ಮಕ್ಕಳನ್ನು ಬೆಳೆಸಿ ಶಿಕ್ಷಣ ಕೊಡಿಸುವ ಜವಾಬ್ದಾರಿ ನಿರ್ವಹಿಸಿದ್ದು. ಹೀಗಿರುವಾಗ ರಾಧಾಕೃಷ್ಣನ್‌ರು ಬೇರೆಯವರ ಮಕ್ಕಳ ಶಿಕ್ಷಣದ ಬಗ್ಗೆ ಶ್ರಮ ವಹಿಸಿರಲು ಸಾಧ್ಯವೇ?
       
ಇವರಿಗೆ ಹೊಲಿಸಿದರೆ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ದಂಪತಿಗಳು ಅನಕ್ಷರಸ್ಥ ಕುಟುಂಬದಲ್ಲಿ ಹುಟ್ಟಿದ್ದರೂ ತಾವು ಸ್ವತಃ ವಿದ್ಯೆ ಕಲಿತು ನಂತರ ಬೇರೆಯವರ ಬಡ ಮಕ್ಕಳಿಗಾಗಿ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕಾಣಿಕೆ ಅದ್ವಿತೀಯ. ಅದರಲ್ಲೂ ಪುರಾಣ ಕಾಲದಿಂದಲೂ ಶಿಕ್ಷಣ ವಂಚಿತ ತಳ ಸಮುದಾಯದ ಮಕ್ಕಳಿಗೆ ಹಾಗೂ ಎಲ್ಲಾ ಜಾತಿಯ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಭಾರತದ ಇತಿಹಾಸದಲ್ಲಿಯೇ ಮೊಟ್ಟ ಮೊದಲು ಶ್ರಮಿಸಿದವರು ಈ ಫುಲೆ ದಂಪತಿಗಳು. ಅದೂ ಮೇಲ್ಜಾತಿಯವರ ಅಪಾರ ಕಿರುಕುಳ, ಸಾಮಾಜಿಕ ಬಹಿಷ್ಕಾರ ಹಾಗೂ ದೈಹಿಕ ಹಲ್ಲೆ ಇವನ್ನೆಲ್ಲಾ ಎದುರಿಸಿಯೂ ಸಾವಿತ್ರಿ ಬಾಯಿ ಫುಲೆಯವರು ಛಲ ಬಿಡದೇ ತಮ್ಮ ಸ್ವಂತ ಹಣ ಹಾಕಿ ಶಿಕ್ಷಣ ಕ್ಷೇತ್ರದಲ್ಲಿ ಬಡವರಿಗಾಗಿ ಮತ್ತು ಹೆಣ್ಣು ಮಕ್ಕಳಿಗಾಗಿ ತಮ್ಮ ಜೀವನದ ಕೊನೆಯ ಉಸಿರಿನ ವರೆಗೂ ದುಡಿಯುತ್ತಲೇ ಇದ್ದರು.  

ಶಿಕ್ಷಣ ಕ್ಷೇತ್ರದಲ್ಲಿ ಸಾವಿತ್ರಿ ಬಾಯಿ ಫುಲೆಯವರು ಪಟ್ಟಿರುವಷ್ಟು ಶ್ರಮ ಭಾರತದ ಇತಿಹಾಸದಲ್ಲಿಯೇ ಬೇರಾರೂ ಪಟ್ಟಿಲ್ಲ. 1848 ರಿಂದ 1852 ರ ನಡುವೆ ಪುಲೆ ದಂಪತಿಗಳು ಮಹಾರಾಷ್ಟ್ರದಲ್ಲಿ ಹದಿನೆಂಟಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ಹೆಣ್ಣು ಮಕ್ಕಳಿಗಾಗಿ ಹಾಗೂ ತಳ ಸಮುದಾಯದವರ ಮಕ್ಕಳಿಗಾಗಿ ತೆರೆದು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು. ಆ ಕಾಲದಲ್ಲಿ ಮೇಲ್ಜಾತಿ ಬ್ರಾಹ್ಮಣ ಮತ್ತು ಮರಾಠಾ ಜಾತಿಯ ಹೆಣ್ಣು ಮಕ್ಕಳೂ ಶಾಲೆಗೆ ಹೋಗುತ್ತಿರಲಿಲ್ಲ. ಅಂತಹಾ ವ್ಯತಿರಿಕ್ತ ಸಂಧರ್ಭದಲ್ಲಿ ಸ್ವತಃ ಶಿಕ್ಷಕಿಯಾಗಿದ್ದ ಸಾವಿತ್ರಿ ಬಾಯಿ ಫುಲೆಯವರು ಎಲ್ಲ ಮೇಲ್ಜಾತಿ ಮತ್ತು ಕೆಳಜಾತಿಯವರ ಮನೆ ಮನೆಗೆ ಹೋಗಿ ಅವರ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸಿದರು. ಅವರು ಹಾಕಿದ ಅಡಿಪಾಯವೇ ನಂತರ ಪುಣೆಯಲ್ಲಿ ಹಾಗೂ ಭಾರತದ ಇತರೆಡೆ ಹೆಣ್ಣು ಮಕ್ಕಳಲ್ಲಿ ಮತ್ತು ತಳ ಸಮುದಾಯದವರಲ್ಲಿ ಭಾರಿ ಶಿಕ್ಷಣ ಜಾಗೃತಿ ಉಂಟು ಮಾಡಿತು.

ಇದನ್ನು ಕಂಡು ಮೆಚ್ಚಿದ ಬ್ರಿಟಿಷ್ ಸರಕಾರವೂ ಫುಲೆ ದಂಪತಿಗಳನ್ನು ಅಪಾರವಾಗಿ ಗೌರವಿಸಿತು. ಹಾಗಾಗಿ ಶಿಕ್ಷಣ ಕ್ಷೇತ್ರಕ್ಕಾಗಿ ಅಥವಾ ಶಿಕ್ಷಕರ ಸೌಲಭ್ಯಗಳಿಗಾಗಿ ಒಂಚೂರೂ ಕೆಲಸ ಮಾಡದ ರಾಧಾಕೃಷ್ಣನ್ನರ ಬದಲು ಸಾವಿತ್ರಿ ಬಾಯಿ ಫುಲೆಯವರ ಜನ್ಮ ದಿನವಾದ ಜನೆವರಿ 3ನೇ ತಾರೀಖಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದೇ ಸೂಕ್ತ. ಜ್ಯೋತಿಬಾ ಫುಲೆಯವರ ಜನ್ಮದಿನ ಏಪ್ರಿಲ್ 11 ಕ್ಕೆ ಬರುವುದರಿಂದ ಆಗ ಶಾಲೆಗಳಿಗೆ ಬೇಸಿಗೆ ರಜೆ ಅಥವಾ ಪರೀಕ್ಷಾ ದಿನಗಳಾದುದರಿಂದ ಏಪ್ರಿಲ್ ತಿಂಗಳು ಶಿಕ್ಷಕರ ದಿನಾಚರಣೆಗೆ ಸರಿಯಾಗಲಾರದು, ಹಾಗಾಗಿ ಜನೆವರಿಯೇ ಸೂಕ್ತ.  ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಭಾರಿ (ದುರಾ)ಅಭಿಮಾನ ಹೊಂದಿದ್ದ ರಾಧಾಕೃಷ್ಣನ್ನರ ಜನ್ಮದಿನವನ್ನು ಬೇಕಾದರೆ ಪ್ರಾಚಾರ್ಯರ ದಿನವೆಂದು ಬದಲಾಯಿಸಬಹುದು.

Related Tags: Teachers Day, S. Radhakrishnan, Mahatma Phule, Saviri Phule
 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ