ಮರೆಯಾದ ಯಕ್ಷ ಜ್ಞಾನ ನಿಧಿ: ಹಂದಾಡಿ ಸುಬ್ಬಣ್ಣ ಭಟ್
ಪ್ರಭಾವಿ ಯಕ್ಷಗಾನ ಕಲಾವಿದರ ಒಡನಾಟದಿಂದ ಯಕ್ಷಗಾನದ ಸಾರ ಸತ್ವವನ್ನು ಹೀರಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ ಬಡಗಿನ ನಡುತಿಟ್ಟಿನ ಆಸ್ತಿಯಾಗಿದ್ದ ಹಂದಾಡಿ ಸುಬ್ಬಣ್ಣ ಭಟ್ಟರಿಗೆ ಇದು ನುಡಿನಮನ.

ಜಿ. ಸುರೇಶ್, ಪೇತ್ರಿ
ಸುಮಾರು 3 ದಶಕಗಳ ಹಿಂದಿನ ನೆನಪು,
ಶುಭ್ರವಾದ ಶ್ವೇತ ವರ್ಣದ ಪಂಚೆ, ಅಂಗಿ ಹಾಗೂ ಹೆಗಲಿಗೊಂದು ಶಾಲು ಅಂತೆಯೇ ಬಾಯಿಯಲ್ಲಿ ವೀಳ್ಯದೆಲೆಯನ್ನು ಮೆಲ್ಲುತ್ತಾ ಸಣಕಲು ಶರೀರದ ವ್ಯಕ್ತಿ, ಬ್ರಹ್ಮಾವರ ರಥಬೀದಿಯತ್ತ ಭೇಟಿ ನೀಡುವ ಮಿತಭಾಷಿಯೊಬ್ಬರನ್ನು ಪಟ್ಟನೆ ನೋಡಿದರೆ ಸೀದಾಸಾದ ವ್ಯಕ್ತಿಯಾಗಿ ಕಂಡರೂ ಅವರ ಅಂತರಾಳವನ್ನು ತೆರೆದಾಗ ಅವರೊಬ್ಬರು ವಿಶೇಷ ವ್ಯಕ್ತಿಯಾಗಿ ಕಾಣಸಿಗುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಶಕ್ತಿಯಾಗಿದ್ದರು. ಹವ್ಯಾಸಿ ಯಕ್ಷಗಾನ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡು ಹಿಮ್ಮೇಳ ಮುಮ್ಮೇಳಗಳ ಹವ್ಯಾಸಿ ಕಲಾವಿದರಾಗಿದಲ್ಲದೇ ಬಡಗಿನ ನಡುತಿಟ್ಟಿನ ಆಸ್ತಿಯಾಗಿದ್ದರು.

ರಂಗಪರದೆಯ ಹಿಂದೆ ಚೌಕಿಯಲ್ಲಿಯು ತನ್ನ ಕೈಂಕರ್ಯವನ್ನು ತೊಡಗಿಸಿಕೊಂಡು ವೇಷಭೂಷಣವನ್ನು ತಯಾರಿಸಿ ಯಕ್ಷಗಾನಕ್ಕೆ ಬೇಕಾದ ಸಲಹೆ ಸಲಕರಣೆಗಳನ್ನೂ ನೀಡುದರೊಂದಿಗೆ ಹಲವರಿಗೆ ಉದ್ಯೋಗವನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಯಕ್ಷಗಾನ ಗುರು ವೀರಭದ್ರನಾಯಕರ ಜೀವನ ಚರಿತ್ರೆ ಹಾಗೂ ಅವರ ಯಕ್ಷಬದುಕಿನಲ್ಲಾದ ನೋವು ನಲಿವಿನ ಬಗ್ಗೆ "ಆಟದ ಒಡನಾಟ" ಎಂಬ ಪುಸ್ತಕದಲ್ಲಿ ಸಹ ವಿವರವಾಗಿ ಹಂಚಿಕೊಂಡಿದ್ದಾರಲ್ಲದೆ ಇನ್ನಿತರರ ಯಕ್ಷಗಾನಕ್ಕೆ ಸಂಬಂಧಪಟ್ಟ ಪುಸ್ತಕದಲ್ಲಿ ಯಕ್ಷಗಾನ ಬೆಳದುಬಂದ ದಾರಿ, ಅದು ಬೆಳಗಿದ ರೀತಿಯನ್ನು ಮುಂದಿನ ಜನಾಂಗಕ್ಕೆ ಮನದಟ್ಟಾಗುವಂತೆ ಪುಸ್ತಕರೂಪಲ್ಲಿ ಹೊರತಂದು ಯಕ್ಷ ಜ್ಞಾನನಿಧಿ ಎಂದು ಕರೆಸಿಕೊಂಡಿದ್ದರು. ಅಲ್ಲದೇ ಬಲ್ಲವರಿಂದ ಯಕ್ಷಗಾನ ಭೀಷ್ಮ ಎಂಬ ಯೋಗ್ಯತೆಯ ಪಟ್ಟ ದರಿಸಿದ್ದರು. ಅದೆಷ್ಟೋ ಪ್ರಭಾವಿ ಯಕ್ಷಗಾನ ಕಲಾವಿದರ ಒಡನಾಟದಿಂದ ಯಕ್ಷಗಾನದ ಸಾರ ಸತ್ವವನ್ನು ಹೀರಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದರು.

ಬೆಂಗಳೂರು, ಮುಂಬಯಿ, ದೆಹಲಿ ಅಲ್ಲದೆ ಅಮೇರಿಕಾ, ಜರ್ಮನಿ, ಕೆನಡಾ, ಫ್ರ್ಯಾಂಕ್ ಫರ್ಟ್, ಹಾಂಕಾಂಗ್, ಸ್ವಿಝರ್ಲ್ಯಾಂಡ್, ಹಾಂಕಾಂಗ್ ಮುಂತಾದ ವಿದೇಶಗಳಲ್ಲಿಯೂ ಪ್ರದರ್ಶನ, ಪ್ರಬಂಧವನ್ನು ಮಂಡಿಸಿದವರು. ಅವರ ಜೀವನ ಉದ್ದಕ್ಕೂ ಯಕ್ಷಗಾನದ ಕಂಪನ್ನು ಪಸರಿಸಿರುವ ಪರಿಸರದಲ್ಲಿ ಬೆಳೆದುಬಂದವರು. ಹುಟ್ಟೂರು ಕಲ್ಯಾಣಪುರದ ಕನ್ನಾರುಕುದ್ರು ತಂದೆ ಮನೆ ಬ್ರಹ್ಮಾವರ, ಹೆಂಡತಿ ಮನೆ ಕೋಟ ಪರಿಸರವಾಗಿತ್ತು. ಹೀಗೆ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಬೆಸೆದ ಕೊಂಡಿಯಾಗಿರುತ್ತಿತ್ತು. ಮೂರು
ಜನ ಗಂಡು ಮಕ್ಕಳನ್ನು ಹೊಂದಿರುವ ಭಟ್ಟರಿಗೆ ತನ್ನ ಮೂರು ಮಕ್ಕಳು ಕಲಿಕೆಯಲ್ಲಿ ರ್ಯಾಂಕ್ ವಿಜೇತರು ಎಂಬವುದು ಅವರ ಶಿಕ್ಷಕ ಬದುಕು ಹಾಗೂ ವೈವಾಹಿಕ ಬದುಕು ಇವರೆಡರನ್ನು ಸಾರ್ಥಕಗೊಳಿಸಿದೆ.

1932 ರ ಜೂನ್ 24 ರಂದು ಬ್ರಹ್ಮಾವರ-ಹಂದಾಡಿಯ ಕೃಷ್ಣ ಯಾನೆ ಪುಟ್ಟಪ್ಪ ಭಟ್ ಹಾಗೂ ಕೃಷ್ಣವೇಣಿ ದಂಪತಿಗಳ ಮಗನಾಗಿ ಕನ್ನಾರುಕುದ್ರು (ಮೂಡುಕುದ್ರು)ವಿನಲ್ಲಿ ಜನಿಸಿದ ಸುಬ್ಬಣ್ಣ ಭಟ್ರು, ಕಲ್ಯಾಣಪುರದ ಮೂಡುಕುದ್ರು, ಬ್ರಹ್ಮಾವರ ಬೋರ್ಡ್ ಹೈಸ್ಕೂಲು, ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜು, ಉಡುಪಿ ಎಂ.ಜಿ.ಎಂ ಕಾಲೇಜು, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ನಂತರ ಬಾರ್ಕೂರಿನಲ್ಲಿ ಪ್ರೌಢಶಾಲೆಯ ಅಧ್ಯಾಪಕರಾಗಿ ತದನಂತರ ಬ್ರಹ್ಮಾವರ ಎಸ್.ಎಂ.ಎಸ್ ಪದವಿಪೂರ್ವ ಕಾಲೇಜಿನಲ್ಲಿ 
35 ವರ್ಷ ಅಧ್ಯಾಪಕ ವೃತ್ತಿಯನ್ನುಮಾಡಿ ಉತ್ತಮ ಶಿಕ್ಷಕರೆನಿಸಿಕೊಂಡವರು.

ಯಕ್ಷಗಾನ ಹಾಗೂ ನಾಟಕ ಪ್ರದರ್ಶನಕ್ಕೆ ಹುಟ್ಟಿಕೊಂಡಂತಹ "ಸಾಲಿಕೇರಿ ದುರ್ಗಾಪರಮೇಶ್ವರಿ ಸಂಘ"ದಲ್ಲಿ ಹದಿಹರೆಯದಲ್ಲೆ ವೇಷಧಾರಿಯಾಗಿ ನಂತರ ಹಿರಿಯ ಯಕ್ಷಗಾನ ಕಲಾವಿದರ ಒಡನಾಟದಿಂದ ಹಿಮ್ಮೇಳ ಮಮ್ಮೇಳವನ್ನು ಕಲಿತು ಯಕ್ಷಗಾನದ ಅಪರಿಮಿತ ಆಸಕ್ತಿ, ಶ್ರದ್ಧೆಯಿಂದ ಮಿತ್ರರ ಒಡನಾಟದಲ್ಲಿ 'ದುರ್ಗಾಪರಮೇಶ್ವರಿ ಸಂಘ' ಹಾಗೂ 'ಚಂಡಿಕಾದುರ್ಗಾಪರಮೇಶ್ವರಿ' ಸಂಘ ಹುಟ್ಟು ಹಾಕಿ ಕ್ರಮೇಣ ಭಾಷಾ ಗೊಂದಲದಿಂದ ಆ ಎರಡು ಸಂಘವನ್ನು ಒಟ್ಟು ಗೂಡಿಸಿ, ಬೈಕಾಡಿ ವೆಂಕಟ ಕೃಷ್ಣ ರಾಯರಿಂದ 1956 ರಲ್ಲಿ ಬ್ರಹ್ಮಾವರದಲ್ಲಿ ಸ್ಥಾಪಿಸಿದ "ಅಜಪುರ ಕರ್ನಾಟಕ ಸಂಘ"ವನ್ನು ಮುನ್ನೆಡೆಸಿಕೊಂಡು ಬಂದು ಪ್ರತಿ ವರ್ಷ ಯಕ್ಷಗಾನ, ಸಂಗೀತೋತ್ಸವ ,ನಾಡಹಬ್ಬವನ್ನಾಚರಿಸಿ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಜೀವನದ ಕೊನೆಯವರೆಗೂಅದರ ಶ್ರೇಯೋಬ್ಯುದಯಯಕ್ಕಾಗಿ ದುಡಿದು ಕಲಾಷೋಷಕರೆನಿಸಿಕೊಂಡವರು. ಸ್ಥಳೀಯ ಹಾರಾಡಿ ಹಾಗೂ ಮಟಪಾಡಿ ಶೈಲಿಯ ಬಗ್ಗೆ ಅಪಾರವಾದ ಅರಿವುವನ್ನು ಹೊಂದಿದ ಇವರಿಗೆ ಕರ್ನಾಟಕ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನಕಲಾರಂಗದ ಬೆಳ್ಳಿ ಹಬ್ಬದ ಪ್ರಶಸ್ತಿ, ಅಜಪುರ ಕರ್ನಾಟಕ ಸಂಘದ ಪ್ರಶಸ್ತಿ, ಮಟಪಾಡಿನಂದಿಕೇಶ್ವರ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವದ' ಸುವರ್ಣ ಸಂಭ್ರಮ ಪ್ರಶಸ್ತಿ' ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ ಪ್ರಶಸ್ತಿಗಳಿಂದ ಅವರೊಬ್ಬರು ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.

ಪ್ರಚಾರಕ್ಕೆ ಕಟ್ಟು ಬೀಳದೆ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸಿಕೊಂಡ ಹಂದಾಡಿಯವರ ಹಿರಿತನ ಹಾಗೂ ಮೇರು ವ್ಯಕ್ತಿತ್ವವನ್ನು ಬರೆಯ ಹೊರಟಾಗ ನನಗೊಮ್ಮೆ ಮುಜುಗರ ಆಯಿತು. ಆದರೆ ಶ್ರೇಷ್ಠ ವ್ಯಕ್ತಿಯಾಗಿ ಸುಬ್ಬಣ್ಣ ಭಟ್ಟರು ಏರಿದ ಎತ್ತರವನ್ನು ಅಳೆಯ ಹೊರಟಾಗ ಅದೊಂದು ಸಣ್ಣತನ ಕಾಡಲಾರದು ಎಂಬ ತೃಪ್ತಿಯ ಭಾವನೆ ಇತ್ತು. ವ್ಯಕ್ತಿಯ ವ್ಯಕ್ತಿತ್ವವನ್ನು ಕೆಲವರು ಪುಸ್ತಕದಲ್ಲಿ ಅಚ್ಚಾಗಿಸಿಟ್ಟರೆ ಇನ್ನು ಕೆಲವರು ಮಸ್ತಕದಲ್ಲಿ ನೆನಪಿಸುತ್ತಾರೆ.ಇನ್ನೂ ಕೆಲವರು ಮಾತಿನ ಮೂಲಕ ವ್ಯಕ್ತಿತ್ವವನ್ನು ಹೊರಗೆಡೆಯುತ್ತಾರೆ. ಒಟ್ಟಿನಲ್ಲಿ ವಿಶೇಷ ವ್ಯಕ್ತಿತ್ವ ಹೊಂದಿದ ಹಂದಾಡಿ ಸುಬ್ಬಣ್ಣ ಭಟ್ಟರ ವ್ಯಕ್ತಿತ್ವ ಹಾಗೂ ಕಲೆ ಅಲ್ಲದೆ ಕಲಿಕೆಗಾಗಿ ಕೊಟ್ಟ ಗೌರವ ಮುಂದಿನ ಜನಾಂಗಕ್ಕೆ ಮಾದರಿಯಾಗಲಿ.

Related Tags: Yakshagana, Handadi Subbanna Bhat
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ