ಯಾವುದು ದೇಶದ್ರೋಹ, ಯಾವುದು ದೇಶಪ್ರೇಮ?
ದೇಶದ್ರೋಹ, ದೇಶಪ್ರೇಮ ಎಂಬ ಎರಡು ಕೆಟಗರಿಗಳ ಪೈಕಿ ಸಂಘಿಗಳು ಯಾವುದಕ್ಕೆ ಸೇರುತ್ತಾರೆಂದು ಜನರೆ ನಿರ್ಧರಿಸಬೇಕು.

ಸುರೇಶ ಭಟ್ ಬಾಕ್ರಬೈಲ್
ಮಾ
ನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇತ್ತೀಚೆಗೆ ಕಾಶ್ಮೀರದ ಒಡೆದುಹೋದ ಕುಟುಂಬಗಳು ಎಂಬ ವಿಷಯದ ಮೇಲೆ ಬೆಂಗಳೂರಿನ ಕಾಲೇಜೊಂದರಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಆಝಾದಿಯ ಪರ ಮತ್ತು ಸೇನೆಯ ವಿರುದ್ಧ ಘೋಷಣೆಗಳು ಕೇಳಿಬಂದವೆಂದು ಹೇಳಿರುವ ಸಂಘ ಪರಿವಾರ ಆಮ್ನೆಸ್ಟಿ ಸಂಸ್ಥೆಯ ಮೇಲೆ ದೇಶದ್ರೋಹದ ಆರೋಪ ಹೊರಿಸಿದೆ. ಕ್ಷಣಮಾತ್ರದಲ್ಲಿ ಐಪಿಸಿ 124-ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ ಪೊಲೀಸರು ಇವರ ಒತ್ತಡಕ್ಕೆ ಮಣಿದಿರುವ ಹಾಗಿದೆ. ಆದರೆ ಇಷ್ಟರಿಂದಲೆ ತೃಪ್ತಿಯಾಗದ ಸಂಘಿಗಳು ರಾಜ್ಯದಾದ್ಯಂತ ಸರಣಿಯೋಪಾದಿಯಲ್ಲಿ ಪ್ರತಿಭಟನೆ, ಜಾಥಾ, ಧರಣಿ ಇತ್ಯಾದಿಗಳನ್ನು ನಡೆಸುತ್ತಾ ಗಂಟಲು ಹರಿಯುವ ಹಾಗೆ ಕಿರುಚಾಡುತ್ತಿದ್ದಾರೆ. ಹಾಗಾದರೆ ಭಾರತದ ಸರ್ವೋಚ್ಚ ನ್ಯಾಯಾಲಯ ಸೇರಿದಂತೆ ಹಲವಾರು ನ್ಯಾಯಾಲಯಗಳು ಈಗಾಗಲೇ ಭಾಷಣ, ಘೋಷಣೆಗಳು ಹಿಂಸೆ, ದೊಂಬಿಗೆ ಪ್ರಚೋದನೆ ನೀಡಿದಾಗಲಷ್ಟೆ ಐಪಿಸಿ 124-ಎ ಅಡಿಯಲ್ಲಿ ದೇಶದ್ರೋಹದ ದೂರು ದಾಖಲಿಸಬಹುದು ಎಂದು ಮತ್ತೆ ಮತ್ತೆ ಹೇಳಿರುವುದಕ್ಕೆ ಯಾವ ಬೆಲೆಯೂ ಇಲ್ಲವೇ ಎಂದು ಕೇಳಬೇಕಾಗುತ್ತದೆ.

ಇದಕ್ಕೆ ಮುನ್ನ ಇದೇ ಸಂಘಿಗಳು  ಫೆಬ್ರವರಿಯಲ್ಲಿ ಜೆಎನ್ಯುನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಝಾದಿ ಮತ್ತು ಅಫ್ಜಲ್ ಗುರು ಪರ ಘೋಷಣೆ ಕೂಗಿದವರು ದೇಶದ್ರೋಹಿಗಳೆಂದು ಹೇಳುತ್ತಾ ದೇಶಾದ್ಯಂತ ದಾಂಧಲೆ ನಡೆಸಿದ್ದರು. ಮತ್ತೂ ಸ್ವಲ್ಪ ಹಿಂದೆ ಹೋದರೆ 1986ರ ಡಿಸೆಂಬರ್‌ನಲ್ಲೊಮ್ಮೆ ಜನತಾ ಪಕ್ಷದ ಸಂಸದ ಸಯ್ಯದ್ ಶಹಾಬುದ್ದೀನ್, ಗಣತಂತ್ರ ದಿನವನ್ನು ಬಹಿಷ್ಕರಿಸುವಂತೆ ಕರೆನೀಡಿದಾಗ ಆತ ಕ್ಷಮೆ ಯಾಚಿಸಬೇಕೆಂದು ಇದೇ ರೀತಿ ಆಕಾಶಪಾತಾಳ ಒಂದು ಮಾಡಿದ್ದರು. ನಮ್ಮದೇ ರಾಜ್ಯದಲ್ಲಿ ತೀರ್ಥಹಳ್ಳಿಯ ಅಕ್ಷತಾ, ಮಂಡ್ಯದ ಡಿ.ಕೆ.ರವಿ, ಡಿವೈಎಸ್ಪಿ ಅನುಪಮಾ ಶೆಣೈ ಮುಂತಾದ ಸಣ್ಣಪುಟ್ಟ ಪ್ರಕರಣಗಳನ್ನು ಎತ್ತಿಕೊಂಡು ಸುಳ್ಳುಗಳ ಸರಮಾಲೆ ಸೃಷ್ಟಿಸಿ ಅನಗತ್ಯ ಗಲಾಟೆ ಎಬ್ಬಿಸಿದ್ದಾರೆ. ಇದನ್ನೆಲ್ಲ ನೋಡುವಾಗ ಇವರ ಜಾಯಮಾನವೆ ಹೀಗಿರುವಂತೆ ಕಾಣುತ್ತದೆ. ಅಲ್ಲಿ ಶುದ್ಧ ರಾಜಕಾರಣದ ಗಂಧಗಾಳಿಯೂ ಇರುವಂತೆ ತೋರುತ್ತಿಲ್ಲ. ಇವರ ಅಪಪ್ರಚಾರದ ಭರಾಟೆ ಎಷ್ಟಿದೆಯೆಂದರೆ ಅಮಾಯಕ ಜನರು ಇವರ ಮಾತುಗಳನ್ನು ವೇದವಾಕ್ಯವೆಂದು ಸ್ವೀಕರಿಸುತ್ತಿದ್ದಾರೆಂದು ಅನಿಸುತ್ತದೆ. ಹೀಗಾಗಿ ಕೆಲವು ವಾಸ್ತವಾಂಶಗಳನ್ನು ಜನರ ಮುಂದಿಡಬೇಕಾಗಿದೆ.

ಇದೇ ಚೆಡ್ಡಿಗಳ ಒಂದು ಸಂಘಟನೆಯಾದ ಅಖಿಲ ಭಾರತ ಹಿಂದೂ ಮಹಾಸಭಾದ ನಾಯಕರು ಮೊನ್ನೆ ಆಗಸ್ಟ್ 14ನ್ನು ಕಪ್ಪು ದಿನವಾಗಿ ಆಚರಿಸಿದ್ದಾರೆ. ಮೀರತ್ನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಅವರು ಕರಿಪತಾಕೆ ಪ್ರದರ್ಶಿಸಿದರಲ್ಲದೆ ಸಂವಿಧಾನದ ಜಾತ್ಯತೀತ ಮೌಲ್ಯಗಳ ವಿರುದ್ಧ ಘೋಷಣೆ ಕೂಗಿದರು. ಸದರಿ ಸಂಘಟನೆ ಕಳೆದ 69 ವರ್ಷಗಳಿಂದ ಇದನ್ನು ಸತತವಾಗಿ ಮಾಡುತ್ತಾ ಬರುತ್ತಿದೆಯಲ್ಲದೆ ಜನವರಿ 26ರ ಗಣತಂತ್ರ ದಿನವನ್ನೂ ಕಪ್ಪು ದಿನವಾಗಿ ಕಳೆದ 66 ವರ್ಷಗಳಿಂದ ಆಚರಿಸುತ್ತಾ ಬಂದಿದೆ. ಇದೇ ತಂಡ ಜನವರಿ 30ರಂದು ಡೋಲು ಬಾರಿಸುತ್ತ, ಕುಣಿಯುತ್ತ ಗಾಂಧಿ ಹತ್ಯೆಯನ್ನೂ ಸಂಭ್ರಮದಿಂದ ಆಚರಿಸುತ್ತದೆ. 2014ರ ಡಿಸೆಂಬರ್‌ನಲ್ಲಿ ಇವರು ಗಾಂಧಿ ಹಂತಕ ಗೋಡ್ಸೆಯ ಮೂರ್ತಿ ಸ್ಥಾಪಿಸಿ ಆತನ ಹೆಸರಿನಲ್ಲಿ ಸ್ಮಾರಕವೊಂದನ್ನು ನಿರ್ಮಿಸಲೂ ಮುಂದಾಗಿದ್ದರು. ಸಂಘಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಇನಿತಾದರೂ ಭಾಗವಹಿಸದೆ ವಸಾಹತುಶಾಹಿ ಬ್ರಿಟಿಷ್ ಸರಕಾರವನ್ನೆ ಬೆಂಬಲಿಸಿದ ಸತ್ಯವೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ಆಯೋಗಗಳ ಮೇಲೆ ಆಯೋಗಗಳು ದೃಢಪಡಿಸಿರುವಂತೆ ದೇಶದಲ್ಲಿ ನಡೆದಿರುವ ನೂರಾರು ಕೋಮುಗಲಭೆಗಳನ್ನು ಹುಟ್ಟುಹಾಕಿದವರೂ ಸಂಘಿಗಳೆ.

ಈ ಹಿನ್ನೆಲೆಯಲ್ಲಿ ದೇಶದ್ರೋಹ, ದೇಶಪ್ರೇಮ ಎಂಬ ಎರಡು ಕೆಟಗರಿಗಳ ಪೈಕಿ ಸಂಘಿಗಳು ಯಾವುದಕ್ಕೆ ಸೇರುತ್ತಾರೆಂದು ಜನರೆ ನಿರ್ಧರಿಸಬೇಕು. ಸಂವಿಧಾನಬದ್ಧ ಗಣತಂತ್ರವಾದ ನಮ್ಮ ದೇಶದಲ್ಲಿ ಯಾವುದು ದೇಶದ್ರೋಹದ ಕೃತ್ಯ, ಯಾವುದು ಅಲ್ಲವೆಂದು ನಿರ್ಧರಿಸುವ, ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರವನ್ನು ಇಂತಹ ಬಹುಸಂಖ್ಯಾತ ಸಮುದಾಯದವರ ಲಂಗುಲಗಾಮಿಲ್ಲದ ಖಾಸಗಿ ಸಂಘಟನೆಗಳಿಗೆ ಕೊಟ್ಟವರಾರು ಎಂಬುದನ್ನೂ ಜನ ಪ್ರಶ್ನಿಸಬೇಕಾದ ಸಮಯ ಬಂದಿದೆ. ಈ ಸಂದರ್ಭದಲ್ಲಿ ಜವಹರ್‌ಲಾಲ್ ನೆಹರೂ ಅಂದು ನೀಡಿದ್ದ ಎಚ್ಚರಿಕೆಯ ಮಾತುಗಳನ್ನು ನೆನಪಿಸಿಕೊಳ್ಳಬೇಕಾಗಿದೆ. ಅಲ್ಪಸಂಖ್ಯಾತರ ಕೋಮುವಾದಕ್ಕಿಂತಲೂ ಬಹುಸಂಖ್ಯಾತರ ಕೋಮುವಾದವೇ ಅತಿ ಹೆಚ್ಚು ಅಪಾಯಕಾರಿ......... ಬಹುಸಂಖ್ಯಾತ ಸಮುದಾಯವೊಂದರ ಕೋಮುವಾದವು ರಾಷ್ಟ್ರೀಯವಾದವೆಂದು ಪರಿಗಣಿಸಲ್ಪಡುವ ಪ್ರವೃತ್ತಿ ಇರುತ್ತದೆ ಎಂದಿದ್ದರು ನೆಹರೂ.

ಆಮ್ನೆಸ್ಟಿ ಮೇಲೆ ದೇಶದ್ರೋಹದ ಆರೋಪ ಹೊರಿಸುವ ಮಂದಿಯೆ ಗಾಂಧಿ ಹಂತಕರನ್ನು ವೈಭವೀಕರಿಸುವವರು, ಸಂವಿಧಾನವನ್ನು ತಿರಸ್ಕರಿಸುವವರು, ಮನುಸ್ಮೃತಿಯನ್ನು ಜಾರಿಗೊಳಿಸಲು ಹವಣಿಸುವವರು, ದಲಿತರನ್ನು ಅಲ್ಪಸಂಖ್ಯಾತರನ್ನು ಸ್ತ್ರೀಯರನ್ನು ದಮನಿಸುವವರು ಮತ್ತು ಹಿಂದೂ ರಾಷ್ಟ್ರ ಸ್ಥಾಪಿಸಲು ಸಂಚು ಹೂಡುವವರು ಎಂಬುದನ್ನು ಜನರು ಈಗಲಾದರೂ ಅರ್ಥ ಮಾಡಿಕೊಂಡು ಇಂತಹ ಕುಟಿಲತನವನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾಗಿದೆ.

Related Tags: Sedition, Amnesty International, Reader''s Letter, Sangh Pariwar, Sedition
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ