ದಲಿತರ ವೃತ್ತಿಯನ್ನು ತುಚ್ಛವಾಗಿ ಕಾಣುವ ಸಂಘಪರಿವಾರ
ಚರ್ಮ ಕಾರ್ಮಿಕರೆಲ್ಲಾ ದಲಿತರು ಅಥವಾ ಮುಸ್ಲಿಮರು. ಇವರು ಕೆಲಸ ಮಾಡದಿದ್ದರೆ ಸಾಮಾನ್ಯ ಜನರಿಗೆ ಮಾತ್ರವಲ್ಲ ಕಾರ್ಗಿಲ್ಲಿನ ಹಿಮದಲ್ಲಿ ಗಡಿ ಕಾಯುವ ಸೈನಿಕರಿಗೂ ಕಾಲಿಗೆ ಬೂಟು ಸಿಗದೇ ಅಲ್ಲಿ ಒಂದು ದಿನವೂ ನಿಲ್ಲಲು ಸಾಧ್ಯವಾಗದು.

ಪ್ರವೀಣ್. ಎಸ್. ಶೆಟ್ಟಿ,  ಮಂಗಳೂರು
                                                              
ಗುಜರಾತಿನಲ್ಲಿ ಮೃತ ಆಕಳ ಚರ್ಮ ಸುಲಿಯುವುದೂ ಎಂದಿನಿಂದ ನಿಷಿದ್ಧವಾಯಿತೋ ಆ ಭೂಸುರರಿಗೇ ಗೊತ್ತು.  ಆದರೆ ಹಿಂದೂ ಧರ್ಮದ ರಕ್ಷಕ ಎಂದು ಕರೆಸಿಕೊಳ್ಳುವವರೆಲ್ಲಾ ಹಿಂದೂ ಪುರಾಣ ಗ್ರಂಥಗಳನ್ನು ಓದಿಯೇ ಇಲ್ಲ ಎಂಬುದು ಮಾತ್ರ ಗ್ಯಾರಂಟಿ. ಹಿಂದೂ ವೇದಗಳಲ್ಲಿಯೇ ಚರ್ಮಕಾರ ಎಂಬ ವೃತಿಯ ಉಲ್ಲೇಖವಿದೆ. ಆಗಿನ ಕಾಲದಲ್ಲೂ ಜನರು ಕೇವಲ ಮರದ ಪಾದುಕೆ ಮಾತ್ರವಲ್ಲ ಚರ್ಮದ ಪಾದರಕ್ಷೆ ಸಹಾ ಧರಿಸುತ್ತಿದ್ದರು ಹಾಗೂ ಈ ಪಾದರಕ್ಷೆ ತಯಾರಿಸುವ ವೃತ್ತಿಯಲ್ಲಿದ್ದವರಿಗೆ ಪಾದುಕಾಚಾರಿ ಎಂದು ಕರೆಯುತ್ತಿದ್ದರು ಎಂದು ವೈದಿಕ ಗ್ರಂಥಗಳಲ್ಲಿಯೇ ಉಲ್ಲೇಖ ಇದೆ. ಶಿವನು ವ್ಯಾಘ್ರ ಚರ್ಮಾಂಭರಧಾರಿಯಾದರೆ ಗಣಪತಿಯು ಗಜ ಚರ್ಮಾಂಭರಧಾರಿ,  ಅಂದರೆ ಈ ದೇವರುಗಳು ಹುಲಿ ಹಾಗೂ ಆನೆಯ ಚರ್ಮ ಧರಿಸುತ್ತಿದ್ದರು. ಪಾರ್ವತಿಯೂ ಚರ್ಮಾಂಭರಧಾರಿ.

ಎಲ್ಲಾ ಋಷಿ ಮುನಿಗಳು ಗೋವಿನ ಚರ್ಮವನ್ನೇ ಚಾಪೆಯಂತೆ ಸುತ್ತಿಕೊಂಡು ಹೋದಲ್ಲೆಲ್ಲಾ ಒಯ್ಯುತ್ತಿದ್ದರು.  ಗೋವಿನ ಚರ್ಮದ ಮೇಲೆ ಕುಳಿತು ತಪಸ್ಸು ಮಾಡಿದರೆನೇ ಅವರಿಗೆ ಸಮಾಧಾನವಂತೆ. ನಾರದರ ತಂಬೂರಿ ಮತ್ತು ಸರಸ್ವತಿಯ ವೀಣೆಯ ತಂತಿಗಳೆಲ್ಲಾ ಗೋವಿನ ನರ ಮತ್ತು ಕರುಳಿನಿಂದ ಮಾಡಿದವುಗಳಾಗಿದ್ದವು. ಕಾರಣ ಪುರಾಣ ಕಾಲದಲ್ಲಿ ಲೋಹದಿಂದ ಮಾಡಿದ ತಂತಿಗಳು ಇರಲಿಲ್ಲ. ಋಷಿ ಮುನಿಗಳೆಲ್ಲಾ ತಮ್ಮ ಆಶ್ರಮವನ್ನು ಅರಣ್ಯದಲ್ಲಿ ಕಟ್ಟುತ್ಥಿದ್ದುದರಿಂದ ಆವರ ಆಶ್ರಮದ ಕಾಟೇಜ್ ಗಳ ಛಾವಣಿಗೆ ಚರ್ಮದ ಹೊದಿಕೆಯನ್ನೇ ಹಾಕುತ್ತಿದ್ದರು. ಚಳಿಗಾಲದಲ್ಲಿ ಈಗಿನ ಸ್ವೇಟರ್ ಗಳಂತೆ ಪುರಾಣ ಕಾಲದಲ್ಲಿ ಜನರು ತಮ್ಮನ್ನು ಚಳಿಯಿಂದ ರಕ್ಷಿಸಿಕೊಳ್ಳಲು ತುಪ್ಪಳವುಳ್ಳ ಪ್ರಾಣಿಗಳ ಚರ್ಮವನ್ನೇ ಹೊದ್ದು ಕೊಳ್ಳುತ್ತಿದ್ದರು. ಅದೇ ಚರ್ಮದ ಟೊಪ್ಪಿ ಧರಿಸುತ್ತಿದ್ದರು.

ಯೋಧರು ಬಾಣಗಳನ್ನು ಇಡಲು ಬತ್ತಳಿಕೆ ಹಾಗೂ ಖಡ್ಗಗಳನ್ನು ಇಡಲು ಒರೆಯನ್ನು ಚರ್ಮದಿಂದಲೇ ಮಾಡಿಸಿಕೊಳ್ಳುತ್ತಿದ್ದರು. ಯೋಧರ ಎದೆಯ ಮತ್ತು ತೋಳಿನ ರಕ್ಷಾ ಕವಚಗಳೂ ಚರ್ಮದ್ದಾಗಿರುತ್ತಿದ್ದವು. ರಾಜರು ಮತ್ತು ಯೋಧರು ಕುಳಿತುಕೊಳ್ಳುತ್ತಿದ್ದ ಕುದುರೆಯ ಸೀಟು ಲಗಾಮು ಎಲ್ಲಾ ಈಗಿನಂತೆಯೇ ಚರ್ಮದ್ದಾಗಿರುತ್ತಿದ್ದವು. ಆಗಿನ ಮಹಿಳೆಯರು ಮತ್ತು ಗಂಡಸರು ಮೈ ಮುಚ್ಚಿಕೊಳ್ಳಲು ಜಿಂಕೆ, ಸಿಂಹ, ಹುಲಿ, ಕರಡಿ ಇವುಗಳ ಸಂಸ್ಕರಿಸಿದ ತೊಗಲು ಧರಿಸುತ್ತಿದ್ದರು. ರಾಮನು ಗುಹಾನ ಹರಿಗೋಲಿನಲ್ಲಿ ಸರಯೂ ನದಿ ದಾಟುತ್ತಾನೆ. ಇಂತಹಾ ಹರಿಗೋಲನ್ನು (ಸಣ್ಣ ದೋಣಿ) ರಾಮನ ಕಾಲದಲ್ಲೂ ಚರ್ಮದಿಂದಲೇ ತಯಾರಿಸುತ್ತಿದ್ದರು. ವನವಾಸದಲ್ಲಿ ಸೀತೆ ಹೊಳೆಯಿಂದ ನೀರು ತರಲು ಜಿಂಕೆಯ ಚರ್ಮದಿಂದ ಮಾಡಿದ ಹೂಜಿಯನ್ನು ಬಳಸುತ್ತಿದ್ದಳು, (ಅರೇಬಿಯಾ ಮತ್ತು ಅಫಘಾನಿಸ್ತಾನದ ಮರುಳುಗಾಡಲ್ಲಿ ಪ್ರಯಾಣಿಸುವಾಗ ಅಲ್ಲಿಯ ಮೂಲ ನಿವಾಸಿಗಳು ಈಗಲೂ ಆಡಿನ ಚರ್ಮದಿಂದ ಮಾಡಿದ ಉದ್ದನೆಯ ಚೀಲದಲ್ಲಿಯೇ ನೀರು ಒಯ್ಯುತ್ತಾರೆ, ಐತಿಹಾಸಿಕ ಹಾಲಿವುಡ್ ಚಲಚಿತ್ರಗಳಲ್ಲಿ ಈಗಲೂ ಅದನ್ನು ತೋರಿಸುತ್ತಾರೆ). ಹೀಗೆ ವೇದ ಕಾಲದಲ್ಲಿ ನೂಲಿನ ಬಟ್ಟೆಗಿಂತ ಪ್ರಾಣಿಗಳ ಚರ್ಮದ ಬಳಕೆಯೇ ಹೆಚ್ಚಿತ್ತು. 

ಇಷ್ಟೊಂದು ವಿವಿಧ ರೀತಿಯಲ್ಲಿ ಬಳಕೆಯಾಗುವ ಚರ್ಮವನ್ನು ಆಗಿನ ಸಮಾಜದಲ್ಲಿ ಒದಗಿಸುತ್ತಿದ್ದವರು ಯಾರು ಗೊತ್ತೇ ? ಅವರೇ ಈಗಿನ ಸಮಗಾರ ಅಥವಾ ಚರ್ಮಗಾರ ಜಾತಿಯವರು (ಚರ್ಮಕಾರ ಎಂಬ ಶಬ್ಧವೇ ಅಪಭ್ರಂಶಗೊಂಡು ಸಮಗಾರ ಅಥವಾ ಚಮಾರ್ ಆಯಿತು). ಸಮಾಜಕ್ಕೆ ಇಷ್ಟೊಂದು ಅಗತ್ಯವಾದ ವೃತ್ತಿ ಮಾಡುತ್ತಿದ್ದವರನ್ನು ಅಸ್ಪೃಶ್ಯರು ಎಂದು ಆಗಿನ ಸಮಾಜ ಬಹುಶ ನೋಡುತ್ತಿರಲಿಲ್ಲ.

ಈ ಚರ್ಮಕಾರ ಕೆಲಸ ಅಷ್ಟು ಸುಲಭದ ಕೆಲಸವಲ್ಲ. ಮೊದಲು ಸತ್ತ ಪ್ರಾಣಿಯ ದೇಹದಿಂದ ಚರ್ಮ ಹಾಳಾಗದಂತೆ ಜೋಕೆಯಿಂದ ಸುಲಿಯಬೇಕು. ನಂತರ ಅದನ್ನು ಸಂಪೂರ್ಣವಾಗಿ ಉಪ್ಪು ಹಾಗೂ ರಸಾಯನಿಕಗಳನ್ನು ಬಳಸಿ ಮಾಂಸದ ತುಣುಕು ಮತ್ತು ಕೊಬ್ಬು ಚರ್ಮದ ಹಾಳೆಯಲ್ಲಿ ಉಳಿದಿದ್ದರೆ ಅದನ್ನು ಹೆರೆದು ತೆಗೆಯಬೇಕು, ಇಲ್ಲದಿದ್ದರೆ ಆ ಚರ್ಮ ಕೊಳೆತು ವಿಪರೀತ ವಾಸನೆ ಬರುತ್ತದೆ ಹಾಗೂ ಅದರ ಕ್ವಾಲಿಟಿ ಕಡಿಮೆಯಾಗುತ್ತದೆ. ಈಗ ಇವನ್ನೆಲ್ಲಾ ಟ್ಯಾನರಿಯಲ್ಲಿ ಯಂತ್ರದಿಂದ ಮಾಡುತ್ತಾರೆ, ಆದರೆ ಹಿಂದಿನ ಕಾಲದಲ್ಲಿ ಅದನ್ನೆಲ್ಲಾ ಚರ್ಮಕಾರರು ಕೈಯಿಂದಲೇ ಮಾಡುತ್ತಿದ್ದರು. ಇಂತಹಾ ಅನಾರೋಗ್ಯಕರ ವಾತಾವರಣದಲ್ಲಿ ಕೆಲಸ ಮಾಡುವಾಗ ಅವರಿಗೆ ರೋಗ ತಗಲುವ ಸಾಧ್ಯತೆಯೂ ಇತ್ತು.

ನಾನು ನಮ್ಮ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಉತ್ತರ ಪ್ರದೇಶದ ಕಾನ್ಪುರ್ ನಗರದಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದೇನೆ. ಇಡೀ ಭಾರತದಲ್ಲಿ ಅತೀ ಹೆಚ್ಚು ಚರ್ಮ ಸಂಸ್ಕರಿಸುವ ಟ್ಯಾನರಿಗಳು ಇರುವುದು ಕಾನ್ಪುರದಲ್ಲಿಯೇ. ನಮ್ಮ ಬ್ಯಾಂಕಿನಲ್ಲಿ ಸಾಲ ಸೌಲಭ್ಯವಿರುವ ಟ್ಯಾನರಿಗಳ ತಪಾಸಣೆಗೆ ನಾನು ಹೋಗಬೇಕಾಗುತ್ತಿತ್ತು. ಆಗ ಅಲ್ಲಿ ದನ ಎಮ್ಮೆ ಆಡು ಕುದುರೆ ಒಂಟೆ ಇವುಗಳ ಚರ್ಮವನ್ನು ಯಂತ್ರಗಳಲ್ಲಿ ಸಂಸ್ಕರಿಸುವುದನ್ನು ನೋಡಿದ್ದೇನೆ. ಜನರ ಜ್ಯಾಕೆಟ್ ಸ್ಕರ್ಟ್ ಬ್ಯಾಗ್ ತಯಾರಿಸಲು ವಿದೇಶಕ್ಕೆ ರಫ್ತಾಗುವ ಚರ್ಮ ಅತೀ ನುಣುಪಾಗಿ ಮೃದುವಾಗಿ ಇರಬೇಕಾಗುವುದರಿಂದ ಅದರ ಸಂಸ್ಕರಣೆ ಎಷ್ಟೊಂದು ನಾಜೂಕು ಮತ್ತು ಕಷ್ಟದಾಯಕ ಎಂಬುದನ್ನೂ ನಾನು ಗಮನಿಸಿದ್ದೇನೆ.

ಇಂತಹಾ ಕೆಲಸ ಸವರ್ಣೀಯರಿಂದ ಅಸಾಧ್ಯ. ಕಾನ್ಪುರ ಟ್ಯಾನರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರೆಲ್ಲಾ ದಲಿತರು ಅಥವಾ ಮುಸ್ಲಿಮರು. ಇವರು ಕೆಲಸ ಮಾಡದಿದ್ದರೆ ಸ್ವಾಮಾನ್ಯ ಜನರಿಗೆ ಮಾತ್ರವಲ್ಲ ಘೋರ ಕಾರ್ಗಿಲ್ಲಿನ ಹಿಮದಲ್ಲಿ ನಮ್ಮ ದೇಶದ ಗಡಿ ಕಾಯುವ ಸೈನಿಕರಿಗೂ ಕಾಲಿಗೆ ಬೂಟು ಸಿಗದೇ ಅಲ್ಲಿ ಒಂದು ದಿನವೂ ನಮ್ಮ ಸೈನಿಕರಿಗೆ ನಿಲ್ಲಲು ಸಾಧ್ಯವಾಗಲಾರದು. ದಲಿತರ ಇಂತಹಾ ಒಂದು ಘನ ವೃತ್ತಿಯನ್ನು ಸಂಘಪರಿವಾರದವರು ತುಚ್ಛವಾಗಿ ಕಂಡು ಈ ಚರ್ಮಗಾರ ವೃತ್ತಿಯಲ್ಲಿರುವ ದಲಿತರನ್ನು ಹೊಡೆಯುತ್ತಾರೆ, ಸ್ವಂತ ಬುದ್ದಿ ಮತ್ತು ಮಾನವತೆ ಇಲ್ಲದ ಈ ಸಂಘಿಗಳಿಗೂ ಜನರು “ತೊಗಲು ಪ್ರಿಯರೆಂದು” ಅಡ್ಡ ಹೆಸರು ಇಟ್ಟಿರುವುದಕ್ಕೆ ಯಾರೂ ಆಶ್ಚರ್ಯ ಪಡಬೇಕಿಲ್ಲ. ಕಾರಣ ಸಂಘಿಗಳಿಗೆ ಜನರು ತೊಗಲುಪ್ರಿಯ ಅನ್ನುವುದು ಕಚ್ಚೆಹರುಕ ಎಂಬ ಅರ್ಥದಲ್ಲಿ ಅಷ್ಟೇ.

ಕುರುಕ್ಷೇತ್ರ ಯುದ್ಧದಲ್ಲಿ 50 ಲಕ್ಷಕ್ಕೂ ಹೆಚ್ಚು ಮನುಷ್ಯರು ಸತ್ತರು. ಅಷ್ಟೇ ಅಲ್ಲ 18 ದಿನದ ಯುದ್ಧದಲ್ಲಿ ನಾಲ್ಕು ಲಕ್ಷ ಆನೆಗಳು ಮತ್ತು ಹದಿನಾರು ಲಕ್ಷ ಕುದುರೆಗಳೂ ಸತ್ತವಂತೆ. ಅಂದರೆ ದಿನವೊಂದಕ್ಕೆ 22 ಸಾವಿರ ಆನೆಗಳು ಮತ್ತು 90 ಸಾವಿರ ಕುದುರೆಗಳು ಸಾಯುತ್ತಿದ್ದವು. ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಸತ್ತ ಆನೆಗಳನ್ನು ಮತ್ತು ಕುದುರೆಗಳನ್ನು ಆ ದಿನಗಳಲ್ಲಿ ಯುದ್ಧ ಭೂಮಿಯಿಂದ ಹೊರ ಸಾಗಿಸಿ ದಫನ್ ಮಾಡಲು ಯಂತ್ರಗಳಿರಲಿಲ್ಲ. ಎಲ್ಲವನ್ನೂ ಮಾನವ ಶ್ರಮದಿಂದಲೇ ಅಂದೇ ರಾತ್ರಿ ಮಾಡಿ ಮುಗಿಸಬೇಕಿತ್ತು. ಸಾಯಂಕಾಲ ಯುದ್ಧ ಮುಗಿದ ಮೇಲೆ ಆನೆಯಂತಹಾ ಬೃಹತ್ ಪ್ರಾಣಿಗಳ ಮತ್ತು ಕುದುರೆಗಳ ಮೃತದೇಹಗಳನ್ನು ಅಂತ್ಯ ಸಂಸ್ಕಾರ ಮಾಡಲು ಎಂಟು ಲಕ್ಷ ಚರ್ಮಗಾರ ಜಾತಿಯ ಕಾರ್ಮಿಕರು ಕುರುಕ್ಷೇತ್ರದಲ್ಲಿ 18 ರಾತ್ರಿಗಳ ಕಾಲ ಶ್ರಮಿಸಿದ್ದರಂತೆ. ಪಾಂಡವರು ಮತ್ತು ಕೃಷ್ಣನನ್ನು ಹೊಗಳುವ ಭರದಲ್ಲಿ ಕೆಳ ವರ್ಗದ ಶ್ರಮಿಕ ಜನರನ್ನು ಪುರಾಣಕರ್ತರು ಮರೆತು ಬಿಟ್ಟಿರುವುದು ವೈದಿಕರು ತಮ್ಮೆಲ್ಲ ಗ್ರಂಥಗಳನ್ನು ಕೇವಲ ಮೇಲ್ಜಾತಿ ಕ್ಷತ್ರಿಯ ಮತ್ತು ಬ್ರಾಹ್ಮಣರನ್ನು ಮಾತ್ರ ವೈಭವೀಕರಿಸಲು ರಚಿಸಿದ್ದರು ಎಂಬುದು ಸ್ಪಷ್ಟ.
ಪ್ರವೀಣ್. ಎಸ್. ಶೆಟ್ಟಿ ,  ಮಂಗಳೂರು

Related Tags: Dead Cow Skinning, Gujarat, Sangh Pariwar, Atrocity, Kanpur Tannery, Praveen Shetty Mangalore, Readers Letter, Karavali Karnataka, Gow Rakshak
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ