ನಡುತಿಟ್ಟಿನ ಹಳೆಯ ಕೊಂಡಿ: ಪೇತ್ರಿ ಮಾಧವ ನಾಯ್ಕ್
ತನ್ನ ಇಳಿವಯಸಿನಲ್ಲೂ ಹೆಜ್ಜೆಗಾರಿಕೆಯನ್ನು ಕಲಿಸಿಕೊಡುತ್ತಿರುವ ಮಾಧವ ನಾಯ್ಕರು ರಂಗಸ್ಥಳವನ್ನು ಆಳಿದ ಹಳೆಯ ತಲೆಮಾರಿನ ಬಡಗುತಿಟ್ಟಿನ ಅದರಲ್ಲೂ ನಡುತಿಟ್ಟಿನ ಸಾಂಪ್ರದಾಯಿಕ ಶೈಲಿಯ ಹಳೆಯ ಕೊಂಡಿಯಾಗಿದ್ದಾರೆ.

ಜಿ. ಸುರೇಶ್, ಪೇತ್ರಿ

ಕ್ಷಗಾನ ಕಲೆಯನ್ನೆ ಉಸಿರನ್ನಾಗಿರಿಸಿದ ವೃತ್ತಿ ಕಲಾವಿದನೊಬ್ಬನು ವೃತ್ತಿರಂಗಕ್ಕೆ ವಿದಾಯ ಹೇಳಿದರೂ ಅದರಿಂದ ಹೊರಬರಲು ಕಷ್ಟವಾದಿತು.ಇದಕ್ಕೊಂದು ಉದಾಹರಣೆ ಹಳೆಯ ತಲೆಮಾರಿನ ಶ್ರೇಷ್ಠ ಕಲಾವಿದನಾಗಿ ಮೆರೆದ ಪೇತ್ರಿ ಮಾಧು ನಾಯ್ಕ್ ಎಂದೆ ಪರಿಚಿತರಾದ ಪೇತ್ರಿ ಮಾಧವ ನಾಯ್ಕರು ವರ್ಷ 75 ಆದರೂ ಅವರ ಯಕ್ಷಗಾನದ ಕಸುವು ಇನ್ನೂ ಆರಿಲ್ಲ. ತನ್ನ ಇಳಿವಯಸಿನಲ್ಲೂ ಶಿಷ್ಯ ವೃಂದದವವರಿಗೆ ಹೆಜ್ಜೆಗಾರಿಕೆಯನ್ನು ಕಲಿಸಿಕೊಡುತ್ತಿರುವ ಮಾಧವ ನಾಯ್ಕರು ಸುಮಾರು 70-80-90ರ ದಶಕದಲ್ಲಿ ರಂಗಸ್ಥಳವನ್ನು ಆಳಿದ ಹಳೆಯ ತಲೆಮಾರಿನ ಬಡಗುತಿಟ್ಟಿನ ಅದರಲ್ಲೂ ನಡುತಿಟ್ಟಿನ ಸಾಂಪ್ರದಾಯಿಕ ಶೈಲಿಯ ಹಳೆಯ ಕೊಂಡಿಯಾಗಿದ್ದಾರೆ.

1940 ರ ಸೆಪ್ಟೆಂಬರ್ 11 ರಂದು ಉಡುಪಿ ತಾಲೂಕಿನ ಚೇರ್ಕಾಡಿ ಗ್ರಾಮದ ಪೇತ್ರಿ ಸಮೀಪ ಚಿಕ್ಕ ಹಳ್ಳಿಯಾದ ಹಳುವಳ್ಳಿಯಲ್ಲಿ ತಂದೆ ವಾಮನ ನಾಯ್ಕ ಹಾಗೂ ತಾಯಿ ಮೈರು ಬಾಯಿ ದಂಪತಿಗಳಿಗೆ ಮಗನಾಗಿ ಜನಿಸಿದರು. ವ್ಯವಸಾಯ ವೃತ್ತಿಯನ್ನೆ ಕಸುಬಾಗಿಸಿಕೊಂಡಿರುವ ಕುಟುಂಬದಿಂದ ಬಂದ ನಾಯ್ಕರಿಗೆ ಯಕ್ಷರಂಗ ಒಲಿದಿದ್ದು ಅವರ ಸೋದರಮಾವನಿಂದ.

ಆಗಿನ ಪ್ರಸಿದ್ಧ ಮದ್ದಲೆಗಾರರಾಗಿದ್ದ ಮಾವ ದಿ| ತಿಮ್ಮಪ್ಪನಾಯ್ಕರಿಂದ ಹೆಜ್ಜೆ ಗಾರಿಕೆ ಕಲಿತು ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದ ಮಾಧವ ನಾಯ್ಕರು ನಂತರ ತೆಂಗಿನಜೆಡ್ಡು ರಾಮಚಂದ್ರ ಸಾಮಂತರಿಂದ ತನ್ನ ಕಲೆಯನ್ನು ಮತ್ತಷ್ಟು ಪಕ್ವಗೊಳಿಸಿ ಹೆರಂಜಾಲು ವೆಂಕಟರಮಣ ಗಾಣಿಗರಿಂದ ಮತ್ತಷ್ಟು ಕಲೆಯನ್ನು ಪ್ರಬುದ್ಧಗೊಳಿಸಿದರು.

ವೀರಭದ್ರನಾಯಕರಿಂದ ಸಲಹೆ ಸೂಚನೆ ಅಲ್ಲದೆ ಗೋರ್ಪಳ್ಳಿ ವಿಠ್ಠಲ ಪಾಟೀಲ, ನೆಲ್ಲೂರು ಮರಿಯಪ್ಪ ಆಚಾರ್, ನಾರ್ಣಪ್ಪ ಉಪ್ಪೂರ, ದುರ್ಗಪ್ಪ ಗುಡಿಗಾರ, ಅಂಪಾರು ವೈದ್ಯರು, ಕಾಳಿಂಗ ನಾವುಡ, ಮತ್ಯಾಡಿ ನರಸಿಂಹ ಶೆಟ್ಟಿ, ನೀಲಾವರ ರಾಮಕೃಷ್ಣಯ್ಯ, ಮರವಂತೆ ದಾಸದ್ವಯರು, ಜಾನುವಾರುಕಟ್ಟೆ, ಗೋಪಾಲಕೃಷ್ಣ ರಾಯರು, ಹುಂಚದಕಟ್ಟೆ ಶ್ರೀನಿವಾಸ ಆಚಾರ್, ಗುಂಡ್ಮಿ ರಾಮಚಂದ್ರ ನಾವುಡ, ಕಡತೋಕ ಮಂಜುನಾಥ ಬಾಗವತರು, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಳವಳ್ಳಿ ವೆಂಕಟೇಶ ರಾವ್, ವೀರಭದ್ರನಾಯಕ್, ಹಾರಾಡಿ ಕುಷ್ಟ ಗಾಣಿಗ, ಹಾರಾಡಿ ರಾಮಗಾಣಿಗ, ಹಾರಾಡಿ ಮಹಾಬಲ, ಉಡುಪಿ ಬಸವ, ನಗರ ಜಗನ್ನಾಥ ಶೆಟ್ಟಿ, ಮರ್ಗೋಳಿ ಗೋವಿಂದ ಸೇರಿಗಾರ,ಶಿರಿಯಾರ ಮಂಜುನಾಯಕ, ಕೆರೆಮನೆ ಹೆಗಡೆಯವರು, ಮೊಳಹಳ್ಳಿ ಹೆರಿಯ ನಾಯ್ಕ, ಕುಮ್ಟಾ ಗೋವಿಂದ ನಾಯಕ, ಆರಾಟೆ ಮಂಜುನಾಥ, ಹಳ್ಹಾಡಿ ಮಂಜಯ್ಯ ಶೆಟ್ಟಿ ಮುಂತಾದ ಹೆಸರಾಂತ ಗತಕಾಲದ ಹಿಮ್ಮೇಳ- ಮುಮ್ಮೇಳ ಕಲಾವಿದರ ಒಡನಾಟದಲ್ಲಿ ಯಕ್ಷಲೋಕದ ಪ್ರಬುದ್ಧ ಕಲಾವಿದನಾಗಿ ಮೆರೆದಿದ್ದರು.

ಪ್ರಧಾನ ಪುರುಷ ವೇಷವಲ್ಲದೇ ರಾವಣ, ಘಟೋತ್ಗಜ, ಮೈರಾವಣ, ಹಿಡಿಂಬೆ, ಶೂರ್ಪನಖೆ, ಹಿಡಿಂಬಾಸುರ, ಕಾಲಜಂಘ, ತಾರಕಾಸುರ ಮುಂತಾದ ಚುಟ್ಟಿ ಇಟ್ಟ ಬಣ್ಣದ ವೇಷಕ್ಕೆ ಹೆಸರುವಾಸಿಯಾಗಿದ್ದರು.  ಕೋರೆಮುಂಡಾಸು, ಎರಡು ಕೋರೆಮುಂಡಾಸಿನ ಕಿರಾತನ ಪಾತ್ರಗಳಲ್ಲಿ ಸಿದ್ಧ ಹಸ್ತರೆನಿಸಿದ ಇವರು ಅರ್ಜುನ, ಕರ್ಣ,ಶಲ್ಯ ಹಾಗೂ ಹೊಸ ಪ್ರಸಂಗದ ಖಳನಾಯಕನ
ಪಾತ್ರಗಳಲ್ಲಿ ಮಿಂಚಿದವರು.

ತನ್ನ ವೃತ್ತಿಬದುಕಿನ ಸುಮಾರು ಮುವತ್ತು ವರ್ಷಗಳ ಕಲಾಸೇವೆಯಲ್ಲಿ ಬಡಗಿನ ಅಮೃತೇಶ್ವರಿ, ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ, ಮುಲ್ಕಿ ಮೇಳದಲ್ಲಿ ತಿರುಗಾಟ ನೆಡೆಸಿದಲ್ಲದೆ ಅಮೇರಿಕಾ, ಜರ್ಮನ್, ಜಪಾನ್, ಇಟೇಲಿ, ಲಂಡನ್, ಮಾಸ್ಕೊ, ಹಂಗೇರಿ, ಪೇರು, ಬ್ರೆಜಿಲ್, ರಷ್ಯಾ, ಅಬುದುಬಾಯಿ, ಕರ್ಗಿ ಸ್ಥಾನ, ಕೆನಡಾ, ಸ್ಕಾಟ್ಲ್ಯಾಂಡ್, ಬಲ್ಗೇರಿಯ, ಯುಗೋಸ್ಲಾವಿಯ ಮುಂತಾದ ಹೊರರಾಷ್ಟ್ರಗಳಿಗೂ ಯಕ್ಷಗಾನದ ಕಂಪನ್ನು ಪಸರಿಸಿದವರು. ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲೂ ಮಿಂಚಿದ ಮಾಧವ ನಾಯ್ಕರಿಗೆ 2014ರ ಯಕ್ಷದೇಗುಲ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ನೀಲಾವರ ಲಕ್ಷ್ಮೀನಾರಾಯಣಯ್ಯ ಪ್ರಶಸ್ತಿ, ಕಾರಂತ ಬಾಲವನ
ಪ್ರಶಸ್ತಿ ,ಬಿ.ವಿ ಆಚಾರ್ಯ ಪ್ರಶಸ್ತಿ, ಕು ಶೀ ಹರಿದಾಸ ಭಟ್ಟ ಪ್ರಶಸ್ತಿ, ಹೀಗೆ ಹಲವಾರು ಸನ್ಮಾನ ಪ್ರಶಸ್ತಿಗಳು ಮಾಧವ ನಾಯ್ಕರಿಗೆ  ಸಂಧಾಯವಾಗಿವೆ.

Related Tags: Pethri Madhava Naik, Yakshagana, Yakshagana, Tenkuthittu and Badaguthittu
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ