ಬಿಲಿಂಡರ್: ರವಿ ಬಸ್ರೂರ್‌ಗೆ ಬಿಗ್ ಸೆಲ್ಯೂಟ್

-ಶಶಿಧರ ಹೆಮ್ಮಾಡಿ

ಯಾವ್ದೇ ಹಕ್ಕಾಪತಿ, ಹಡ್ಬಿ ಬುದ್ದಿ, ಗಿರ್ಮಿಟ್, ಹೊಡಿ ಜಾಪ್ ಇಲ್ದೆ ಗ್ವಾಂಕಿವರಿಗೆ ಕುಂದಾಪ್ರ ಕನ್ನಡ ಅಭಿಮಾನ್ ತುಂಬ್ಸ್‌ಕಂಡ್ ಕೆಲಸ ಮಾಡ್ತಾ ಇಪ್ಪುವ ರವಿ ಬಸ್ರೂರ್ ತಂಡಕ್ಕೆ ನನ್ನದೊಂದು ಬಿಗ್ ಸೆಲ್ಯೂಟ್ಕುಂದಾಪುರ ಕನ್ನಡದಲ್ಲಿ ಎರಡು ಅದ್ದೂರಿಯಾದ ಪೂರ್ಣಪ್ರಮಾಣದ ಸಿನೆಮಾಗಳು ಬಂದಿವೆ. ಈ ಎರಡೂ ಚಿತ್ರಗಳನ್ನು ಕುಂದಾಪ್ರ ಕನ್ನಡಕ್ಕೆ ಸಮರ್ಪಿಸಿದವರು ರವಿ ಬಸ್ರೂರ್. ಬೆಂಗಳೂರಿನ ಚಿತ್ರರಂಗದಲ್ಲಿ ಕೈ ತುಂಬಾ ಕೆಲಸವಿದ್ದರೂ ಚಟಕ್ಕೆ ಬಿದ್ದಂತೆ ಕುಂದಾಪ್ರ ಕನ್ನಡ ಸಿನೆಮಾಗಳನ್ನು ರವಿ ಬಸ್ರೂರ್ ನೀಡುತ್ತಿದ್ದಾರೆ.  ಗರ್‌ಗರ್ ಮಂಡ್ಲ ಮತ್ತು ಬಿಲಿಂಡರ್ ಎರಡೂ ಸಹ ಕುಂದಾಪ್ರ ಕನ್ನಡ ಭಾಷೆಯಂತಹ ಸಣ್ಣ ಪ್ರಾದೇಶಿಕ ಭಾಷೆಯ ಚಲನಚಿತ್ರವಾಗಿದ್ದರೂ ಇವು ಕನ್ನಡದ ಮುಖ್ಯ ಧಾರೆಯ ಕಮರ್ಷಿಯಲ್ ಸಿನೆಮಾಗಳಿಗೆ ಯಾವುದರಲ್ಲೂ ಕಡಿಮೆ ಇಲ್ಲ ಎಂಬಂತೆ ಪಕ್ಕಾ ಪ್ರೊಫೆಷನಲ್ ಆಗಿ ನಿರ್ಮಾಣಗೊಂಡ ಸಿನೆಮಾಗಳು. ಕುಂದಾಪ್ರ ಕನ್ನಡ ಚಿತ್ರವನ್ನ ಏನ್ ಮಹಾ ಆಡಿಯನ್ಸ್ ನೋಡತ್ತೆ ಎನ್ನುವ ಯಾವುದೇ ಪೂರ್ವಾಗ್ರಹವಿಲ್ಲದೆ, ಯಾವುದೇ ಕಣ್ಕಟ್ ಇಲ್ಲದೆ, ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳದ ಈ ಸಿನೆಮಾಗಳನ್ನು ರವಿ ಬಸ್ರೂರ್ ತಂಡ ಮಾಡಿದೆ. ಸಿನೆಮಾದ ಪೋಸ್ಟರ್‌ಗಳಿಂದ ಹಿಡಿದು ಹಾಡು, ಸಂಭಾಷಣೆ, ಹೊಡೆದಾಟ, ಸಿನೆಮೆಟೊಗ್ರಫಿ, ಉಳಿದ ತಾಂತ್ರಿಕ ವಿಚಾರಗಳು ಯಾವುದರಲ್ಲೂ ರವಿ ಬಸ್ರೂರ್ ರಾಜಿ ಮಾಡಿಕೊಂಡಿಲ್ಲ. ಕುಂದಾಪ್ರ ಕನ್ನಡ ಅರ್ಥವಾಗುವುದಾದರೆ ಇಡೀ ರಾಜ್ಯವನ್ನು ತಲುಪಬಹುದಾದ ಚಿತ್ರಗಳಿವು.

ಸಿನೆಮಾದ ಕಥೆಯೊ, ಹಾಡುಗಳೋ, ನಟನೆಯೊ ಅಥವಾ ಡೈಲಾಗ್‌ಗಳೊ ಇಷ್ಟವಾಗುವ, ಇಷ್ಟವಾಗದಿರುವ ವ್ಯಕ್ತಿಗತ ಟೇಸ್ಟ್‌ಗಳ ಬಗ್ಗೆ ನಾನಿಲ್ಲಿ ಹೇಳುತ್ತಿಲ್ಲ. ಪಕ್ಕಾ ಕಮರ್ಷಿಯಲ್ ಚಿತ್ರಕ್ಕೆ ಇರಬೇಕಾದದ್ದೆಲ್ಲವೂ ಪರ್‌ಫೆಕ್ಟ್ ಆಗಿ ಇಲ್ಲಿದೆ. ಪುನೀತ್ ರಾಜ್‌ಕುಮಾರ್ ಬಾಯಿಂದ ಕುಂದಾಪ್ರ ಕನ್ನಡ ಹಾಡನ್ನು ಹಾಡಿಸಿದ್ದಾರೆಂದರೆ ಅದಕ್ಕಿಂತ ನಾನು ರವಿ ಬಸ್ರೂರ್ ಅವರ ಸಿನೆಮಾ ಪ್ಯಾಶನ್ ಬಗ್ಗೆ ಬೇರೇನೂ ಹೇಳಬೇಕಾಗಿಲ್ಲ. ರವಿ ಬಸ್ರೂರ್ ಅವರ ಗರ್‌ಗರ್ ಮಂಡ್ಲ ಮತ್ತು ಬಿಲಿಂಡರ್ ಚಿತ್ರಗಳಲ್ಲಿ 'ಇಲ್ಲ' ಎನ್ನುವುದು ಏನಾದರೂ ಇದ್ದರೆ ಅದು ಆರ್ಥಿಕ ಲಾಭ ಮಾತ್ರ. ಕನ್ನಡದ ಮುಖ್ಯಧಾರೆಯ ಸಿನೆಮಾಗಳನ್ನು ಮಾಡುವಾಗ ಅದು ಪ್ರೇಕ್ಷಕನ ಮನ ಗೆದ್ದರೆ ಲಾಭ ಮಾಡುತ್ತೆ ಎಂಬ ನಿರೀಕ್ಷೆ ಖಂಡಿತ ಇರುತ್ತೆ. ಆದರೆ ಕುಂದಾಪ್ರ ಕನ್ನಡದಲ್ಲಿ ಇಷ್ಟು ಲ್ಯಾವಿಶ್ ಆಗಿ ಖರ್ಚು ಮಾಡಿ ಚಲನಚಿತ್ರ ನಿರ್ಮಿಸುವಾಗ ಇದರಲ್ಲಿ ದುಡ್ಡಿನ ಲಾಭವಂತೂ ಇಲ್ಲ ಎಂಬುದು ಯಾರಿಗಾದರೂ ಗೊತ್ತಿರುವಂಥದ್ದು. ಕುಂದಾಪ್ರ ಕನ್ನಡದ ಕುರಿತಾದ ಅಗಾಧ ಅಭಿಮಾನ ಮತ್ತು ಸಿನೆಮಾದ ಮೂಲಕ ಕುಂದಾಪ್ರ ಬಗ್ಗೆ ರವಿ ಬಸ್ರೂರ್ ತಂಡಕ್ಕೆ ನಾನು ಅಭಿನಂದನೆ ಹೇಳಲೇಬೇಕು.

ಸಿನಿಮಾದಲ್ಲಿ ಇಷ್ಟೆಲ್ಲ ಪರ್‌ಫೆಕ್ಷನ್ ರೂಢಿಸಿಕೊಂಡಿರುವ ರವಿ ಬಸ್ರೂರ್ ತಮ್ಮ ಸಿನೆಮಾಗಳ ಪ್ರಚಾರದ ವಿಷಯದಲ್ಲಿ ಕೆಲವೊಂದು ಕಡೆ ಎಡವಿದ್ದಾರೆ ಎಂದು ಹೇಳಲೇಬೇಕು. ಕುಂದಾಪ್ರ ಕನ್ನಡ ಮಾತಾಡುವ ಸಣ್ಣ ವ್ಯಾಪ್ತಿಯ ಪ್ರದೇಶದಲ್ಲಿ ಸಿನೆಮಾ ತೋರಿಸುವ ಮೊದಲು ಇಲ್ಲಿನ ಕುಂದಗನ್ನಡದ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳು, ವ್ಯಕ್ತಿಗಳನ್ನು ಸಂಪರ್ಕಿಸುವುದು, ಗಣನೆಗೆ ತೆಗೆದುಕೊಳ್ಳುವುದು, ಸಿನೆಮಾದ ಯಶಸ್ಸಿಗೆ ಅವರ ನೆರವನ್ನು ಯಾಚಿಸುವುದು ಮುಂತಾದವುಗಳನ್ನು ರವಿ ಬಸ್ರೂರ್ ತಂಡ ಆರಾಮ್‌ಸೇ ಮಾಡಬಹುದಿತ್ತು (ಮಾಡಲೇಬೆಕಂತ ನನ್ನ ಮಾತಿನ ಅರ್ಥ ಅಲ್ಲ). ಕನಿಷ್ಟ ಪಕ್ಷ ಪತ್ರಕರ್ತರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು. ಕುಂದಾಪುರದಂತಹ ಸಣ್ಣ ಊರಿನಲ್ಲಿರುವ ಪತ್ರಕರ್ತರ ಸಂಘವನ್ನು ಸಂಪರ್ಕಿಸುವುದು, ಸಿನೆಮಾದ ಪ್ರಮೋಶನ್‌ಗೆ ಸಹಕಾರ ಕೋರುವುದು, ಪ್ರೆಸ್ ಕಾನ್ಫರೆನ್ಸ್ ಮಾಡುವುದು ಹೀಗೆ ಏನನ್ನೂ ರವಿ ಬಸ್ರೂರ್ ಮಾಡಿದ್ದಿಲ್ಲ. ಆದರೂ ಹಲವಾರು ಪತ್ರಕರ್ತರು, ಮಾಧ್ಯಮಗಳು ಬಿಲಿಂಡರ್ ಚಿತ್ರಕ್ಕೆ ಸಾಕಷ್ಟು ಪ್ರಚಾರ ನೀಡಿವೆ. ಸ್ಥಳೀಯವಾಗಿ ಕೆಲವು ಯುವಕರನ್ನು ಬಿಟ್ಟರೆ ಬೇರೆ ಯಾರನ್ನೂ ರವಿ ಬಸ್ರೂರ್ ವಿಶ್ವಾಸಕ್ಕೆ ತೆಗೆದುಕೊಂಡ ಹಾಗೆ ನನಗಂತೂ ಕಾಣಿಸಿಲ್ಲ. ಹಾಗೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡುವ ರವಿ ಅವರ ಸ್ವಾತಂತ್ರ್ಯವನ್ನು ಗೌರವಿಸುತ್ತಲೇ ನಾನು ಈ ಮಾತನ್ನು ವಿನಯದಿಂದಲೇ ಹೇಳುತ್ತಿದ್ದೇನೆ ವಿನಃ ಇದೇನು ಮಾಡತಕ್ಕದ್ದು, ಆಗತಕ್ಕದ್ದು ಎಂಬ ದನಿಯಲ್ಲಿ ಹೇಳುತ್ತಿಲ್ಲ. ಸಿನೆಮಾದ ಯಶಸ್ಸಿಗೆ ಸಹಕಾರದ ದೃಷ್ಟಿಯಿಂದ ಮಾತ್ರ ಇದನ್ನು ಹೇಳುತ್ತಿದ್ದೇನೆ.

ಮೇಲಿನ ಮಾತುಗಳನ್ನು ಹೇಳಲು ಎರಡು ಹಿನ್ನೆಲೆಗಳಿವೆ. ಒಂದನೆಯದು ಇಂದು ಬಿಲಿಂಡರ್ ಚಿತ್ರ ತಂಡ ಕುಂದಾಪುರದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿ. ಎರಡನೆಯದು ಬಿಲಿಂಡರ್ ಚಿತ್ರದ ಕುರಿತು ವಾಟ್ಸ್ಯಾಪ್‌ನಲ್ಲಿ ಹರಿದಾಡುತ್ತಿದೆ ಎನ್ನಲಾದ ಒಂದು ದುರುದ್ದೇಶಪೂರಿತ ಸಂದೇಶ.

ಇಂದು ಬಿಲಿಂಡರ್ ಚಿತ್ರ ತಂಡ ಕುಂದಾಪುರದಲ್ಲೊಂದು ಪತ್ರಿಕಾಗೋಷ್ಟಿ ನಡೆಸಿತು. ರವಿ ಬಸ್ರೂರ್ ನೇತೃತ್ವದಲ್ಲೇ ಇದು ನಡೆಯಿತು. ಪತ್ರಿಕಾಗೋಷ್ಟಿಗಳೆಂದರೆ ಇತ್ತೀಚೆಗೆ ಚರ್ಚಾಗೋಷ್ಟಿಗಳು, ಜಗಳ ಗೋಷ್ಟಿಗಳಾಗುತ್ತಿವೆ. ಕೇಳಿದ ಪ್ರಶ್ನೆಗೆ ನಮಗೆ ಬೇಕಾದ ಉತ್ತರ ಸಿಗದಿದ್ದರೆ ವಾದ ವಿವಾದ ಎಲ್ಲವೂ ಪತ್ರಿಕಾಗೋಷ್ಟಿಗಳಲ್ಲಿ ನಡೆಯುತ್ತದೆ. ಕುಂದಾಪುರದಲ್ಲೂ ಇಂತಹ ಪತ್ರಿಕಾಗೋಷ್ಟಿಗಳು ಇತ್ತೀಚೆಗೆ ನಡೆಯುತ್ತಿವೆ. ಇಂದಿನ ಪತ್ರಿಕಾಗೋಷ್ಟಿಗೆ ನಾನು ಹಾಜರಾಗದೆ ಇದ್ದರೂ ಕೇಳಿ ತಿಳಿದುಕೊಂಡ ಪ್ರಕಾರ ರವಿ ಬಸ್ರೂರ್ ಅವರು ತಮ್ಮ ಸಿನೆಮಾದಷ್ಟು ಪರ್‌ಫೆಕ್ಟ್ ಆಗಿ ನಡೆಸಿಕೊಟ್ಟಿಲ್ಲ. ಬಹುಶಃ ಅವರು ಅಂತಹ ಒಳ್ಳೆಯ ಮಾತುಗಾರರಲ್ಲದಿರಬಹುದು. ಸ್ಮಾರ್ಟ್ ಉತ್ತರಗಳನ್ನು ಕೊಡುವ ಜಾಣ್ಮೆ ಅವರಲ್ಲಿ ಇಲ್ಲದಿರಬಹುದು. ಆದರೆ ಇಂದಿನ ಪತ್ರಿಕಾಗೋಷ್ಟಿ ಅವರಿಗೆ ಇನ್ನೊಂದು ಕೆಟ್ಟ ಅನುಭವವೇ ಆಗಲು ಕಣ್ಣಿಗೆ ಕೈ ಹಾಕಿದಂತೆ ಪ್ರಶ್ನೆ ಮಾಡುವ, ಜಗಳಕ್ಕೆ ಇಳಿಯುವ ಕೆಲ ಪತ್ರಕರ್ತರ ಪ್ರಶ್ನಾ ವೈಖರಿಯೂ ಕಾರಣವಾಗಿದ್ದು ವಿಷಾದದ ಸಂಗತಿ. ಉದಾಹರಣೆಗೆ ಕುಂದಾಪ್ರ ಕನ್ನಡ ಸಿನೆಮಾದಲ್ಲಿ ಕುಂದಾಪ್ರ ಕನ್ನಡದ ಹುಡುಗಿ ನಾಯಕಿಯಾಗಿರಬಹುದಿತ್ತು ಎಂಬ ಆಸೆ, ಆಶಯ, ನಿರೀಕ್ಷೆ ತಪ್ಪಲ್ಲ. ಆದರೆ ಕುಂದಾಪ್ರ ಕನ್ನಡದ ಹುಡುಗಿ ಹುಡುಕಿ ವಿಫಲ ಯತ್ನದ ಬಳಿಕವೇ ಮಂಗಳೂರಿನ ಹುಡುಗಿಯನ್ನ ಆಯ್ಕೆ ಮಾಡಿದೆವು ಎಂದು ನಿರ್ದೇಶಕರು ಹೇಳಿದ ಮೇಲೂ ಅದೇ ದೊಡ್ಡ ಪ್ರಮಾದ ಎಂಬಂತೆ ಮತ್ತೆ ಮತೆ ನಿರ್ದೇಶಕರನ್ನು ಕೆಣಕುವುದು ಮಾತ್ರ ತಪ್ಪೇ. ಇದೇ ವಾದ ಸರಣಿಯನ್ನು ಮುಂದುವರಿಸಿದರೆ ಪುನೀತ್ ರಾಜ್‌ಕುಮಾರ್ ಅವರಿಂದ ಕುಂದಾಪ್ರ ಕನ್ನಡ ಹಾಡು ಯಾಕೆ ಹಾಡಿಸಿದಿರಿ, ಗೋಳಿಹೊಳೆ ಗೋಪಾಲನ ಹತ್ರ ಹಾಡಿಸಬಹುದಿತ್ತಲ್ಲಾ? ಸಂಭಾಷಣೆಯನ್ನ ಅವರು ಯಾಕೆ ಬರೆದರು, ಕಾವ್ರಾಡಿ ಶೀನಪ್ಪ ಶೆಟ್ಟರ ಹತ್ರ ಬರೆಸಬಹುದಿತ್ತಲ್ಲ? ಮನು ಹಂದಾಡಿಗೆ ಒಂದು ಜೋಕರ್ ಪಾತ್ರ ಕೊಡಬಹುದಿತ್ತಲ್ಲ? ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಬಹುದು. ಇನ್ನು ಸಿನೆಮಾ ನಿರ್ದೇಶಕನೋರ್ವ ಸ್ಥಳೀಯ ಪತ್ರಕರ್ತರ ಪರಿಚಯ ಮಾಡಿಕೊಳ್ಳಬೇಕಾದದ್ದು ಸೌಜನ್ಯ ನಿಜ. ಆದರೆ 'ಪತ್ರಕರ್ತರ ಪರಿಚಯವೇ ಇಲ್ವೇನ್ರಿ ನಿಮಗೆ' ಅಂತ ರವಿ ಬಸ್ರೂರ್‌ಗೆ ಧಮಕಿ ಹಾಕಿದ ರೀತಿಯಲ್ಲಿ ಕೇಳುವುದು ಮಾತ್ರ ನಿಜಕ್ಕೂ ಸರಿಯಲ್ಲ. ಹೀಗೆ ಕೆಲವು ಪತ್ರಕರ್ತರ  ಪ್ರಶ್ನಾವಳಿಗೆ ರವಿ ಬಸ್ರೂರ್ ಅಪ್‌ಸೆಟ್ ಆಗಿರಬಹುದು.  ಸಿನೆಮಾದ ಬಗ್ಗೆ, ಅದರ ಹಿನ್ನೆಲೆ, ಕಥೆ, ಯಶಸ್ಸು, ಬಳಸಿದ ತಂತ್ರಜ್ಞಾನ, ನಟಿಸಿದ ಕಲಾವಿದರು, ಮುಂದಿನ ಯೋಜನೆ ಹೀಗೆ ಕೇಳಲು ಹಲವು ಪ್ರಶ್ನೆಗಳಿವೆ. ರವಿ ಬಸ್ರೂರ್ ಅವರು ಅಪಾರ ಶ್ರಮ, ಸಮಯ, ಹಣ ವಿನಿಯೋಗಿಸಿ ನಿರ್ಮಿಸಿರುವ ಕುಂದಾಪ್ರ ಕನ್ನಡ ಚಿತ್ರಕ್ಕೆ ನಮ್ಮೆಲ್ಲ ಪ್ರಶ್ನೆಗಳು, ಟೀಕೆಗಳ ಹೊರತಾಗಿಯೂ ಒಂದು ಚಿಕ್ಕ 'ಆಲ್ ದಿ ಬೆಸ್ಟ್' ಹೇಳುವ ಸೌಜನ್ಯ ಪತ್ರಕರ್ತರಿಗೂ ಇರಬೇಕು. 

ಇನ್ನು ವಾಟ್ಸ್ಯಾಪ್‌ನಲ್ಲಿ ಕೆಲವು ದುರುದ್ದೇಶಪೂರಿತ ಸಂದೇಶಗಳು ಬಿಲಿಂಡರ್ ಕುರಿತು ಹರಿದಾಡುತ್ತಿವೆಯಂತೆ. ಅದರಲ್ಲಿ ರವಿ ಬಸ್ರೂರ್ ತಂಡದ ಕುರಿತು ಅಲ್ಲಸಲ್ಲದ ಆರೋಪಗಳನ್ನು ಟೀಕೆಗಳನ್ನು ಮಾಡಲಾಗಿದೆಯಂತೆ. ಇದು ವಿಕೃತ ಮನಸ್ಸಿನ ಕೆಲಸವಿರಬೇಕೆ ಹೊರತು ಸ್ವಸ್ಥ ಮನಸ್ಸುಗಳು ಈ ಕೆಲಸ ಮಾಡುವುದಿಲ್ಲ. ರವಿ ಬಸ್ರೂರ್ ಅವರ ಸಿನೆಮಾ ಚೆನ್ನಾಗಿದೆಯೊ ಇಲ್ಲವೊ ಅದು ಅವರವರ ಅಭಿರುಚಿಗೆ ಬಿಟ್ಟಿದ್ದು, ಆದರೆ ರವಿ ಬಸ್ರೂರ್ ಅಲ್ಲದೆ ಹೋದರೆ ಕುಂದಾಪ್ರ ಕನ್ನಡದಲ್ಲಿ ಇಂತಹ ಪಕ್ಕಾ ಪ್ರೊಫೆಶನಲ್ ಸಿನೆಮಾಗಳು ಬರುತ್ತಲೇ ಇರಲಿಲ್ಲ.

ಕುಣಿತಕ್ಕೊ-ಕುಡಿತಕ್ಕೊ, ಗಮ್ಮತ್ತಿಗೊ-ಗಡ್ಜಿಗೊ, ಪ್ರೀತಿಗೊ-ಹಿಲಾಲಿಗೊ 'ಅನಿತಾ ಅನಿತಾ ನನ್ ಅವಸ್ತಿ ನಿಂಗ್ ಗುತ್ತಿತಾ', 'ಏಗಳಿಂದ ನನ್ ಕಾಂತಿದ್ದ' 'ಚಿಲ್ರಿ ಶೋಕಿ ಗಂಡ್ ನಾನಲ್ಲ' ಎಂಬಂತಹ ಕುಂದಾಪ್ರ ಕನ್ನಡ ಹಾಡುಗಳು ಇಂದು ಜಗತ್ತಿನಾದ್ಯಂತದ ಇರುವ ಕುಂದಾಪ್ರ ಕನ್ನಡದ ಮಂದಿ ಗುಣುಗುಣಿಸುತ್ತಿದ್ದರೆ ಅದಕ್ಕೆ ಕಾರಣ ರವಿ ಬಸ್ರೂರ್. ಪುನೀತ್ ಬಾಯಲ್ಲಿ ಹೊಸಂಗ್ಡಿ, ಸಿದ್ದಾಪುರ, ಹೆಮ್ಮಾಡಿ, ಉಪ್ಪುಂದ ಅಂತ ಕೇಳುವುದು, ಆತ ಹೇಳಿದ 'ಹೊಡಿ ಜಾಪ್ ಬಿಸಾಡಿ ಕುಂದಾಪ್ರ ಭಾಷೆ ಮಾತಾಡಿ' ಎಂದು ಹೇಳಿರುವುದು ಯುವಜನರ ಟೀಶರ್ಟ್‌ಗಳಲ್ಲಿ ರಾರಾಜಿಸುತ್ತಿದ್ದರೆ ಅದಕ್ಕೆ ಕಾರಣ ರವಿ ಬಸ್ರೂರ್. ಕುಂದಾಪ್ರ ಕನ್ನಡ ಇಂದು ರಾಜ್ಯದಾದ್ಯಂತ ಸುದ್ದಿಯಾಗುತ್ತಿದ್ದರೆ, ಕುಂದಾಪ್ರ ಕನ್ನಡದ ಕುರಿತು ಕುಂದಾಪ್ರದ ಜನರನ್ನೂ ಒಳಗೊಂಡು ಕರ್ನಾಟಕದ ಇತರೆಡೆಯ ಜನರಿಗೂ ಪ್ರೀತಿ, ಅಭಿಮಾನ ಮೂಡಲು ರವಿ ಬಸ್ರೂರ್ ಅವರ ಕೊಡುಗೆ ದೊಡ್ಡದು. ರವಿ ಬಸ್ರೂರ್ ಅವರ ಚಿತ್ರ ನಿಮಗೆ ಇಷ್ಟವಾಗಬಹುದು, ಇಷ್ಟವಾಗದೆ ಇರಬಹುದು. ಆದರೆ ಅವರ ಪ್ರಯತ್ನ ಮೆಚ್ಚುಗೆಯಾಗದೆ ಇರುವುದಾದರೂ ಹೇಗೆ?

ರವಿ ಬಸ್ರೂರ್ ಅವರನ್ನು ಈ ತನಕ ಕಾಣಲೂ ಇಲ್ಲ, ಮಾತಾಡಿಸಿಯೂ ಇಲ್ಲ. ಅವರ ಪರಿಚಯವೂ ಇಲ್ಲ. ಫೇಸ್‌ಬುಕ್‌ನಲ್ಲೂ ನನಗೆ ಅವರಾಗಲಿ ಮತ್ತು ಅವರ ತಂಡದಲ್ಲಿರುವ ಹಲವರಾಗಲಿ ಗೆಳೆಯರಲ್ಲ. ಕರಾವಳಿ ಕರ್ನಾಟಕ ಬಳಗದ ಭಾಸ್ಕರ್ ಬಂಗೇರ ಅವರಿಂದ ರವಿ ಬಸ್ರೂರ್ ಬಗ್ಗೆ ನಾನು ಕೇಳಿ ತಿಳಿದುಕೊಂಡಿರುವುದೇ ಹೆಚ್ಚು. ಉಗ್ರಂ ಚಿತ್ರಕ್ಕೆ ರವಿ ಬಸ್ರೂರ್ ನೀಡಿದ ಸಂಗೀತ ಸಿನೆಮಾದ ಅದ್ಭುತ ಯಶಸ್ಸಿಗೆ ಕಾರಣವಾದ ಮುಖ್ಯ ಅಂಶಗಳಲ್ಲಿ ಒಂದು ಎಂದು ಚಿತ್ರಪಂಡಿತರು ಹೇಳಿದ್ದನ್ನು ಕೇಳಿದ್ದೇನೆ. ಮುಂದೆ ತಮ್ಮ ಪ್ರತಿಭೆಯ ಮೂಲಕ ಬಾಲಿವುಡ್‌ಗೂ ಕಾಲಿಡಲು ರವಿ ಬಸೂರ್, ಸಚಿನ್  ಬಸ್ರೂರ್ ಮುಂತಾದವರು ಸಜ್ಜಾಗುತ್ತಿದ್ದಾರೆ ಎಂದು ಕೇಳಿದ್ದೇನೆ. ಯಾವ್ದೇ ಹಕ್ಕಾಪತಿ, ಹಡ್ಬಿ ಬುದ್ದಿ, ಗಿರ್ಮಿಟ್, ಹೊಡಿ ಜಾಪ್ ಇಲ್ದೆ ಗ್ವಾಂಕಿ ವರಿಗೆ ಕುಂದಾಪ್ರ ಕನ್ನಡ ಅಭಿಮಾನ್ ತುಂಬ್ಸ್‌ಕಂಡ್ ಕುಂದಾಪ್ರ ಕನ್ನಡದ ಕೆಲಸ ಪ್ರೀತಿ, ಕಾಳಜಿ, ಅಕ್ಕರೆಯಿಂದ ಮಾಡ್ತಾ ಇಪ್ಪುವ ರವಿ ಬಸ್ರೂರ್ ಮತ್ತು ಅವರ ಎಲ್ಲ ಗೆಳೆಯರಿಗೆ, ಬಿಲಿಂಡರ್ ತಂಡಕ್ಕೆ ನನ್ನದೊಂದು ಬಿಗ್ ಸೆಲ್ಯೂಟ್
-ಶಶಿಧರ ಹೆಮ್ಮಾಡಿ

ಇದನ್ನೂ ಓದಿ: ಶಿಶುಮಗಿನಿಂದ ಹಳಿಕೊಯ್ಡಿನ್ವರಿಗೂ ಎಲ್ಲರೂ ಆರಾಮ್ಸೆ ಕಾಣ್ಲಕ್ http://bit.ly/1U8dmaO

Related Tags: Bilindar Kundapra Kannada Movie, Ravi Basrur, Sachin Basrur, Gargar Mandla, Kundapra Kannada, Karavali Karnataka, Movie News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ