ಪ್ರಕೃತಿ ಬರೆದ ಚಲುವಿನ ಚಿತ್ತಾರ

ಅತ್ತ ಮಳೆದಿನಗಳು ಕಾಲ ಗರ್ಭದಲ್ಲಿ ಲೀನವಾಗುತ್ತಿದ್ದರೆ, ಇತ್ತ ನಮ್ಮಲ್ಲಿನ ಚಾರಣದ ಹುಚ್ಚು ಹವ್ಯಾಸ ಗರಿಗೆದರುತ್ತದೆ. ವರ್ಷಕ್ಕೊಂದು ಬಾರಿ ಬೆಟ್ಟ-ಗುಡ್ಡ, ಕಾಡು-ಮೇಡು ಅಲೆದು ದೇಹ ದಂಡಿಸಿ ಬರಲೇ ಬೇಕು. ಜನವಸತಿಯಿಂದ ದೂರ ಉಳಿದಿರುವ ಪ್ರಕೃತಿ ಸೌಂದರ್ಯ ಆಸ್ವಾಧಿಸಿ ಮೈ ಮರೆಯಲೇ ಬೇಕು. ಇಲ್ಲದಿದ್ದರೆ ಕೆಲಸ ಕಾರ್ಯದಲ್ಲಿ ಉತ್ಸಾಹವೇ ಇಲ್ಲದೆ, ಏನೋ ಕಳೆದು ಕೊಂಡಂತಹ ವಿಚಿತ್ರ ಅನುಭವ ಕಾಡುತ್ತದೆ.

ಬುರುಡೆ ಜೋಗ, ಅರಿಸಿನ ಗುಂಡಿ, ಭಂಡಾಜೆ, ಬೆಳ್ಳಿಗುಂಡಿ, ಹಿಡ್ಲುಮನೆ, ಕೂಡ್ಲುತೀರ್ಥ, ದೇವಕಾರು ಹೀಗೆ ಒಂದತ್ತನ್ನೇರಡು ಜಲಪಾತಗಳನ್ನು ನೋಡಿ ಬಂದಿದಾಯಿತು. ಈ ಬಾರಿ ಜಲಪಾತ ಸಾಕು ಬೇರೆ ಇನ್ನೆಲ್ಲಿಗಾದಾದರೂ ಹೋಗೋಣ ಎಂಬ ಮನಸಾಯಿತು. ಭಂಡಾಜೆ ಹತ್ತಿಳಿದಿದ್ದ ಸಮಯದಲ್ಲಿ ಇಲ್ಲೇ ಸಮೀಪ ಪುರಾತನ ಕೋಟೆಯೊಂದಿದೆ ಎಂದು ಸ್ಥಳಿಯರು ಹೇಳಿದ್ದು ನೆನಪಾಯಿತು. ಮೂಡಿಗೆರೆ ತಾಲೂಕು ಸುಂಕಸಾಲದಿಂದ ಈ ಕೋಟೆಗೆ ಹೋಗಬಹುದೆಂಬ ಮಾಹಿತಿ ಕಲೆಹಾಕಿ 12 ಮಂದಿ ತಂಡ ಚಾರಣಕ್ಕೆ ಅಣಿಯಾದೆವು.

ತಿಪಟೂರಿನಿಂದ ಮಧ್ಯರಾತ್ರಿಯಲ್ಲಿ ಸುಂಕಸಾಲಕ್ಕೆ ಬಸ್ಸಿಲ್ಲ ಎನ್ನುವುದನ್ನು ಕಂಡಕ್ಟರ್ ಒಬ್ಬರಿಂದ ತಿಳಿದು ನೇರವಾಗಿ ಧರ್ಮಸ್ಥಳಕ್ಕೆ ಬಂದಿಳಿದೆವು. ಮುಂಜಾನೆ ಅಲ್ಲಿಂದ ಕ್ಲೂಜéರ್ ಮಾಡಿಕೊಂಡು ದುರ್ಗದ ಕೋಟೆಗೆ ಹೊರಟೆವು. ಆಶ್ಚರ್ಯಕರ ಸಂಗತಿಯೆಂದರೆ ನಮ್ಮೊಂದಿಗೆ ಬಾಡಿಗೆ ಮಾತಾಡಿ ಬಂದ ಕ್ಲೂಜéರ್ ಚಾಲಕನಿಗೆ ಕೋಟೆಯ ದಾರಿಯೇ ಗೊತ್ತಿರಲಿಲ್ಲ. ಕೊಟ್ಟಿಗೆಹಾರದಲ್ಲಿ ನಮಗೆಲ್ಲ ಊಟ ಮಾಡಲು ಹೇಳಿ ಕೋಟೆಯ ದಾರಿ ತಿಳಿಯಲು ಹೊರಟ. ಆತ ಬರುವುದರೊಳಗೆ ಬಿಸಿ ಬಿಸಿ  ಬಿಸಿ ಮಿರ್ಚಿ ತರಹ ಒಬ್ಬೊಬ್ಬರು ಐದಾರು ಭೂತಾಯ ಮೀನಿನ ಪ್ರೈ ಜೊತೆಗೆ ಅಕ್ಕಿರೊಟ್ಟಿಯ ಊಟ ಮಾಡಿ ಮುಗಿಸಿದ್ದೆವು.

ಕೊಟ್ಟಿಗೆಹಾರದಿಂದ ಹೊರಟು ಸುಂಕಸಾಲ ಮಾರ್ಗವಾಗಿ ದುರ್ಗದಹಳ್ಳಿ ಬರುತ್ತಿದಂತೆ ಕ್ಲೂಜéರ್ ಚಾಲಕ ಮಳೆ ಬಂದು ಕೆಸರುರಸ್ತೆಯಾಗಿದೆ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ನಮ್ಮ ಕಡೆ ತಿರುಗಿ ನೋಡಿದ.  ಅಲ್ಲಿಗೆ ನಾವು ನಡಿಗೆ ಆರಂಭಿಸುವ ಸ್ಥಳ ನಿಗದಿಯಾಗಿ ಆಯ್ತು ಬಿಡ್ರಿ ನೀವೇನ್ ಮಾಡಕಾಗ್ತದೆ ನಡಿ ಬೇಕು ಅಂತನೇ ಬಂದಿದೀವಿ ಒಂದೆರಡ್ಮೂರು ಕಿ.ಮೀ ಹೆಚ್ಚಾಗ ಬಹುದು ನಡಿತೀವಿ ಎಂದು ಯುದ್ದೋತ್ಸಾಹದಲ್ಲಿ ಹೇಳಿ ಆತನ ಲೆಕ್ಕ ಚುಪ್ತ ಮಾಡಿ ಕಳಿಸಿ ಕೊಟ್ಟೆವು. 

ಮುಂದೆ ಗುರಿ ಇರ್ಬೇಕು ಹಿಂದೆ ಗುರು ಇರ್ಬೇಕು ಅಂತರೆ. ನಮಗೆ ಕೋಟೆಗೆ ಹೋಗುವ ಗುರಿಯಿದೆ. ಆದರೆ ಗುರು ಇಲ್ಲ! ಮುಂದೇನ್ಮಾಡೋದು ಎನ್ನುವಷ್ಟರಲ್ಲಿ ಸುಂದರ್ ಎಂಬ ವಾಮನ ಎದುರಾದ. ಎಲ್ಲರೂ ಆತನ ಬಳಿಗೆ ಓಡೋಡಿ ಹೋಗಿ ಕೋಟೆಗೋಗ್ಬೇಕು ಕರಕ್ಕೊಂಡೋಕ್ತೀರ ಎಂದು ಗಂಟು ಬಿದ್ದೆವು. ಓ....... ಬಲ್ಲಾಳರಾಯನ ದುರ್ಗಕ್ಕೆ ಹೋಗಬೇಕೆ? ಈಗಾಗಲ್ಲ ಬಿಡಿ. ಆಗ್ಲೆ ಸಂಜೆಯಾಗಿದೆ ಮೂರು ಗುಡ್ಡ ಸುತ್ತಿ ಹತ್ತನ್ನೇರಡು ಕಿ.ಮೀ. ನಡಿಬೇಕು. ಅದೂ ದುರ್ಗಮ ಕಾಡಿನಲ್ಲಿ. ಆಗೋದೇ ಇಲ್ಲ ಬಿಡಿ ಎಂದರು.

 ಅಲ್ಲದೆ ಇನ್ನೊಂದ್ಮೂರು ಕಿ.ಮೀ ನಡೆದರೆ ಕಾಲಭೈರವೇಶ್ವರ ದೇವಸ್ಥಾನ ಸಿಗುತ್ತದೆ, ಅಲ್ಲಿ ರಾತ್ರಿ ಉಳಿದು ಮುಂಜಾನೆಯೇ ನಡಿಗೆ ಆರಂಭಿಸಿದರೆ ರಾತ್ರಿಯೊಳಗೆ ವಾಪಸ್ಸು ಬರಬಹುದು ಎಂಬ ಸಲಹೆ ನೀಡಿದರು. ಅದರಂತೆ ಗುಡ್ಡದಲ್ಲಿ ನೆಲೆಸಿರುವ ಕಾಲಭೈರವೇಶ್ವರನ ಮೇಲೆ ಭಾರ ಹಾಕಿ ನಮ್ಮ ಮೊದಲ ಚಾರಣ ಆರಂಭಿಸಿದೆವು. ಸಂಜೆ 5 ರ ಸುಮಾರಿಗೆ ದೇವಸ್ಥಾನ ತಲುಪಿ ಅಲ್ಲಿನ ಅರ್ಚಕ ರಾಮಚಂದ್ರಶಾಸ್ತ್ರಿ ಅವರಲ್ಲಿ ನಮ್ಮ ಇಂಗಿತ ವ್ಯಕ್ತಪಡಿಸಿ ಉಳಿದುಕೊಳ್ಳುವ ಅನುಮತಿ ಪಡೆದೆವು. ಜೊತೆಗೆ ಊಟತಿಂಡಿಯ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡೆವು.

 ಈ ಕಾಡಿನಲ್ಲಿರುವುದು ನಮ್ಮದೊಂದೇ ಮನೆ, ಚಿಟಿಕೆ ಉಪ್ಪು ಬೇಕೆಂದರೂ ನಾಲ್ಕು ಕಿ.ಮೀ.ನಡೆಯಬೇಕು. ನಮ್ಮಿಬ್ಬರು ದಂಪತಿಗಳಿಗೆ ಆಗುವಷ್ಟು ಮಾತ್ರ ಪಡಿತರ ಇಟ್ಟುಕೊಂಡಿದ್ದೇವೆ. ನಿಮಗೆಲ್ಲಿಂದ ಮಾಡೋದು? ಅದೂ 12 ಮಂದಿಗೆ ಆಗೋದೆ ಇಲ್ಲ ಎಂದು ಕಡ್ಡಿ ತುಂಡಾದಂಗೆ ಅರ್ಚಕರು ಹೇಳಿಬಿಟ್ಟರು. ಆಗ ನಮ್ಮಲ್ಲಿದ ಯುದ್ದೋತ್ಸಾಹ ಏಕ್ದಮ್ ಟುಸ್ ಎಂದು ಬೆಪ್ಪಾಗಿ ಒಬ್ಬರಿಗೊಬ್ಬರು ಮುಖ ಮುಖ ನೋಡಿ ಕೊಳ್ಳತೊಡಗಿದೆವು.
       
ಅಷ್ಟರಲ್ಲಿ ನಮ್ಮಗಳ ಮಾತುಗಳನ್ನು ಮನೆಯೊಳಗಿದ್ದೇ ಆಲಿಸುತ್ತಿದ್ದ ಅರ್ಚಕರ ಪತ್ನಿ ಸೀತಾ ಅವರು ಹೊರಗೆ ಬಂದು ಪಾಪ ಹೋಗಲಿ ಬಿಡಿ ಅಷ್ಟು ದೂರದಿಂದ ಬಂದಿದ್ದಾರೆ, ಈ ಕಾಡಿನಲ್ಲಿ ಅವರು ತಾನೇ ಏನ್ ಮಾಡ್ಕೋತಾರೆ? ಮಾಡ್ಕೋಡೋಣ ಬಿಡಿ ಎಂದು ಪತಿರಾಯರಿಗೆ ಹೇಳಿ, ಈಗ ಅನ್ನ ತಿಳಿಸಾರು, ಬೆಳಿಗ್ಗೆ ಹುಳಿಯನ್ನ ಮಾಡಿಕೊಟ್ಟರೆ ಪರವಾಗಿಲ್ವೆ ಎಂದು ನಮ್ಮನ್ನು ಕೇಳಿದರು. ಸಾಕ್ಷಾತ್ ವರನಾಡು ಅನ್ನಪೂರ್ಣೇಶ್ವರಿ ದೇವಿಯೇ ಇವರ ರೂಪದಲ್ಲಿ ಬಂದಿರಬಹುದು ಎಂದು ಕೈ ಮುಗಿದು ಆಯ್ತಮ್ಮ ನೀವೇನು ಮಾಡ್ಕೋಟ್ರೂ ಪರವಾಗಿಲ್ಲ ಎಂದೇಳಿದೆವು.

ಅಡಿಗೆ ಆಗುವುದನ್ನೇ ಕಾಯುತ್ತ ಕಾಡುಹರಟುತ್ತ ಕುಳಿತಿದ್ದ ನಮಗೆ ರಾತ್ರಿ 8 ರ ಸುಮಾರಿನಲ್ಲಿ ಅರ್ಚಕರ ಮನೆಯಿಂದ ಊಟದ ಕರೆ ಬಂತು. ಮೂರ್ನಾಲ್ಕು ಕಿ.ಮೀ. ನಡೆದು ದಣಿದಿದ್ದಕ್ಕೂ ಸಾಂಬರ್ ರುಚಿಗೂ ಒಬ್ಬರಿಗಿಂತ ಒಬ್ಬರು ಬ್ಯಾಟಿಂಗೋ ಬ್ಯಾಟಿಂಗು. ನಂತರ ದೇವಸ್ಥಾನದಲ್ಲಿ ಬಂದು ತಲೆ ನೆಲಕ್ಕಿಟ್ಟಿದ್ಧೇ ತಡ ಕೈಕಾಲು ಕತ್ತರಿಸಿದರೂ ಯಾರಿಗೂ ಅರಿವಿಲ್ಲ. ಆಂತಹ ನಿದ್ರೆಯಲ್ಲಿದ್ದವರಿಗೆ ಮಧ್ಯರಾತ್ರಿಯ ಭಯಂಕರ ಚಳಿ ಒಂದೇ ಸಮನೆ ಕಿರಿಕಿರಿ ತಂದೊಡ್ಡಿತು. ಹೇಗೋ ಅರನಿದ್ರೆಯಲ್ಲಿ ಬೆಳಕ್ಕರಿಸಿ ದುರ್ಗಮ ಹಾದಿಯ ಚಾರಣಕ್ಕೆ ಸಿದ್ಧಗೊಂಡೆವು.

ಅರ್ಚಕರ ಮನೆಯಲ್ಲಿ ಚಿತ್ರನ್ನ ಸವಿದು ಅರ್ಚಕರ ಪತ್ನಿ ಸೀತಾ ಅವರಿಂದ ಹ್ಯಾಪಿ ಜನರ್ಿಯ ಶುಭ ಕಾಮನೆ ಪಡೆದು ಪರ್ವತ ಚಾರಣ ಆರಂಭಿಸಿದೆವು. ನಿರಾಯಾಸವಾಗಿ ಜಾಲಿಯಾಗಿ ಹರಟುತ್ತ ಒಂದರ್ಧ ಕಿ.ಮೀ. ನಡೆದಿರಬಹುದು ಅಷ್ಟರಲ್ಲಿ ದುರ್ಗಮ ಹಾದಿ ಎದುರಾಯಿತು. ಹೆಜ್ಜೆ ಹೆಜ್ಜೆಗೂ ಉಂಬಳಗಳ ಕಾಟವಿರುವ 70 ಡಿಗ್ರಿಯ ಕಿರಿದಾದ ಆನೆ ಹೆಜ್ಜೆಗಳೇ ಮೆಟ್ಟಿಲಾಗಿರುವ ದಾರಿಯಲ್ಲಿ ಏರುವುದು ನಿಜಕ್ಕೂ ಸವಾಲೆ ಸರಿ. ದಾರಿಗಡ್ಡವಾಗಿ ಬಿದ್ದಿರುವ ಮರಗಳನ್ನು ದಾಟಿ, ಮಲಗಿದ್ದ ಪೊದರುಪೊದೆಗಳನ್ನು ಸರಿಸಿ, ಪಾಚಿ ತುಳಿದು ಜಾರಿ ಬಿದ್ದೆದ್ದು ತಿಣುಕುತ್ತ ಮೊದಲ ಗುಡ್ಡ ಹತ್ತಿದೆವು.
        
ಹನಿಗಳ ಸಿಂಚನ, ಹಕ್ಕಿಪಕ್ಷಿಗಳ ಕಲರವದ ಮಧ್ಯೆ ಹಾದು ಹೋಗುವುದೇ ಒಂದು ವಿಶೇಷ ಅನುಭವ ಬಿಡಿ. ಕಾಡಿನ ದುರ್ಗಮ ಹಾದಿ ಸವೆಸಿದ ಆಯಾಸ ಪ್ರಕೃತಿಯ ಸೊಬಗು, ವೈಚಿತ್ರ ನೋಡುತ್ತಿದಂತೆ ಮಂಗಮಾಯ. ಮತ್ತೆ ನಡೆಯುವ ಉತ್ಸಾಹ, ಮೈಯಲ್ಲಿ ಚಿಮ್ಮುತ್ತಿದ್ದ ಚೈತನ್ಯದ ಚಿಲುಮೆ, ಕೋಟೆಯಲ್ಲಿ ಏನೇನಿರ ಬಹುದೆಂಬ ಕೌತುಕ ನಮಲ್ಲಿ ಮನೆ ಮಾಡಿತ್ತು. ಪಟಪಟನೆ ಕೋಟೆಯ ಸಮೀಪಕ್ಕೆ ಹೆಜ್ಜೆಯಿಟ್ಟೆವು.

ಸುತ್ತಲೂ ಹಚ್ಚಹಸುರಿನ ಪರ್ವತ ಶ್ರೇಣಿ, ಮೈ ಸವರಿಕೊಂಡು ಹೋಗುವ ಮೋಡಗಳು, ತಂಗಾಳಿ ಸೃಷ್ಠಿಸಿರುವ ಆಹ್ಲಾದಕರ ವಾತಾವರಣ ವಾಹ್! ಎಂಥ ಚೆಲುವು ಈ ಕೋಟೆ ಗುಡ್ಡ. ಅಕ್ಷರಗಳಲ್ಲಿ ವಣರ್ಿಸಲು ಸಾಧ್ಯವಿಲ್ಲದ ಅನುಭವಕ್ಕೆ ಮಾತ್ರ ಎಟಕುವ ಪ್ರಕೃತಿ ಬರೆದಿರುವ ಚೆಲುವಿನ ಚಿತ್ತಾರ ಅದು. ಮಾತಿಲ್ಲದೆ, ಕಥೆಯಿಲ್ಲದೆ ಏಕಾಂತದಲ್ಲಿ ಕುಳಿತು ಬರೋಬ್ಬರಿ ಐದು ಗಂಟೆ  ಪ್ರಕೃತಿ ಸೊಬಗನ್ನು ಕಣ್ತುಂಬಿಕೊಂಡೆವು. ಮನಸಾರೆ ಆನಂದಿಸಿದೆವು.  

  ಹವಾ ನಿಯಂತ್ರಿತ ಅನುಭವದಲ್ಲಿ ಸಮಯದ ಪರಿವೆ ಇಲ್ಲದೆ ಕೋಟೆಯೊಳಗಿನ ರಾಜನ ಮನೆ, ಬೀಸೋಕಲ್ಲು, ಸುರಂಗ, ರಾಣಿ ದ್ವಾರ, ವೀವ್ ಪಾಯಿಂಟ್ ನೋಡುತ್ತ ಸುತ್ತಾಡಿದೆವು. ಹೊಟ್ಟೆ ಚುರುಗುಟ್ಟಿದಾಗ ಸಮಯ, ಊರು, ಕೊನೆಯ ಬಸ್ಸು ನೆನಪಾಯಿತು,  ಒಲ್ಲದ ಮನಸ್ಸಿನಿಂದ ಹಿಂದಿರುಗಿದೆವಾದರೂ ದೇಹ ಮಾತ್ರ ನಮ್ಮ ನಮ್ಮ ಊರಿನಲ್ಲಿದೆ ಮನಸ್ಸು ಬಲ್ಲಾಳರಾಯನ ದುರ್ಗದ ಗುಡ್ಡದಲ್ಲಿದೆ. ಆ ಪಾಟಿ ಕಾಡುತ್ತಿದೆ ನಮಗೆ ಕೋಟೆ ಗುಡ್ಡದ ಸೌಂದರ್ಯ.

ಕೃಪೆ: http://huliyrkiran.blogspot.in/

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ