ಹಾಲಾಡಿ ಬೆಂಬಲಿಗರು ಕೇಳಿದ್ದಕ್ಕೆ ಟಿಕೆಟ್: ಕೋಟ
ಹಾಲಾಡಿ ಬಣದವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿದ್ದರಿಂದ ಪಕ್ಷದ ನೈಜ ಕಾರ್ಯಕರ್ತರು ರಾಜಿನಾಮೆ ಕೊಟ್ಟ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಮಜಾಯಿಸಿ ನೀಡಿದ ವಿದಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ.

ಶ್ರೀಕಾಂತ ಹೆಮ್ಮಾಡಿ
ಕುಂದಾಪುರ: ಈ ಭಾಗದಲ್ಲಿ ಹಾಲಾಡಿ ಬಣದವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿದ್ದರಿಂದ ಪಕ್ಷದ ನೈಜ ಕಾರ್ಯಕರ್ತರು ರಾಜಿನಾಮೆ ಕೊಟ್ಟ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ವಿದಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರ ಭಾಗದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರು ಮೊದಲು ಭಾಜಪದಲ್ಲಿದ್ದವರು. ಇದೀಗ ಅವರ ಬೆಂಬಲಿಗರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿದ್ದಕ್ಕೆ ಕೊಟ್ಟಿದ್ದೇವೆ. ನಮ್ಮೊಳಗೆ ಯಾವುದೇ ಅಸಮಾಧಾನವಿಲ್ಲ ಎಂದರು. ಮುಂದಿನ ದಿನಗಳಲ್ಲಿ ರಾಜಿನಾಮೆ ಕೊಟ್ಟವರ ಮನವೊಲಿಸುತ್ತೇವೆ ಎಂದು ಬಿಜೆಪಿ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನವನ್ನು ಗೌಣ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದ್ದು, ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದಾರೆ. ಭಾರತೀಯ ಜನತಾ ಪಕ್ಷದ ಕುಂದಾಪುರ ಕಛೇರಿಯಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಕಳೆದ ಬಾರಿ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ಅನೇಕ ಜನಪರ ಕಾರ್ಯಗಳು ಹಾಗೂ ಬಾರಿ ರಾಜ್ಯ ಸರ್ಕಾರದ ದುರಾಡಳಿತ ಗಮನಿಸಿ ಸುಶಾಸನ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ವಿದಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮತದಾರರಿಗೆ ವಿನಂತಿಸಿದ್ದಾರೆ.

ಕಪ್ಪು ಚುಕ್ಕಿ ಇಲ್ಲದ ಬಿಜೆಪಿ ಆಡಳಿತ
ಬಡವರಿಗೆ ಮನೆ ಕಟ್ಟಿಸಲು, ಪಡಿತರವನ್ನು ಅರ್ಹರಿಗೆ ತಲುಪಿಸಲು, ಕುಡಿಯುವ ನೀರಿನ ಪೂರೈಕೆ, ಗ್ರಾಮೀಣ ರಸ್ತೆ, ಬಡವರ ಆರೋಗ್ಯ ಇವೆಲ್ಲವೂ ಕೂಡ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜನರಿಗೆ ತಲುಪುವಂತಹದ್ದು ಒಟ್ಟು ಕಲ್ಪನೆಗಳು. ಉಡುಪಿ ಜಿಲ್ಲಾ ಪಂಚಾಯತ್ ಹಾಗು ತಾಲೂಕು ಪಂಚಾಯತ್ ಗಳಲ್ಲಿ ಐದು ವರ್ಷಗಳಲ್ಲಿ ಯಾವುದೇ ಕಪ್ಪುಚುಕ್ಕಿ ಇಲ್ಲದೆ ಭಾಜಪ ಅಧಿಕಾರ ನಡೆಸಿದೆ. ಯಾವುದೇ ರಾಜಕೀಯ ನಡೆಸದೆ ಜನಪರ ಕಾರ್ಯಗಳನ್ನು ಮಾಡುವುದರ ಮೂಲಕ ಉತ್ತಮ ಜಿಲ್ಲಾ ಪಂಚಾಯತ್ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. 163 ಕೋಟಿಗೂ ಮಿಕ್ಕಿ ಉಡುಪಿ ಜಿಲ್ಲಾ ಪಂಚಾಯತ್ ಮೂಲಭೂತ ಸೌಕರ್ಯಗಳಿಗಾಗಿ ಅನುದಾನವನ್ನು ಬಿಡುಗಡೆ ಮಾಡಿದೆ. ಇಷ್ಟೊಂದು ಅಗಾಧ ಪ್ರಮಾಣದ ವೆಚ್ಚವನ್ನು ಪೂರ್ಣಪ್ರಮಾಣದಲ್ಲಿ ಮಾಡಲಿಕ್ಕೆ ಬಿಜೆಪಿಗೆ ಸಾಧ್ಯವಾಗಿದೆ ಎಂದರು.

ಕೇಂದ್ರದಿಂದ ಪಂಚಾಯತ್ಗಳಿಗೆ ನೇರ ಹಣ
ಕೇಂದ್ರದಲ್ಲಿ ನರೇಂದ್ರ ಮೋದಿಯವರು ತಂದಿರುವ ಅನೇಕ ಜನಪರ ಕೆಲಸಗಳು ಕೂಡ ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವಂತಾಗಲಿ. ಕೇಂದ್ರ ಸರ್ಕಾರ 14ನೆ ಹಣಕಾಸಿನ ಯೋಜನೆಯಡಿ ಗ್ರಾಮ ಪಂಚಾಯತ್ ಗಳಿಗೆ ನೇರವಾಗಿ ಹಣವನ್ನು ಬಿಡುಗಡೆ ಮಾಡಿರುವಂತಹ ಲಕ್ಷಾಂತರ ರೂಪಾಯಿ ಹಣ ರಾಜ್ಯ ಸರ್ಕಾರ ಕೇಂದ್ರಸರ್ಕಾರದ ವರದಾನಕ್ಕೆ ಕಡಿವಾಣ ಹಾಕಿ ರಾಜ್ಯ ಸರ್ಕಾರ ವಿದ್ಯುತ್ ಬೆಲೆ ಕಟ್ಟಿ ಎನ್ನುವ ಆದೇಶ ಪಂಚಾಯತ್ ಅಭಿವೃದ್ದಿಗೆ ದುಡಿಯುತ್ತಿರುವ ಎಲ್ಲರಿಗೂ ಆತಂಕವನ್ನುಂಟುಮಾಡಿದೆ ಎಂದು ರಾಜ್ಯ ಸರಕಾರವನ್ನು ದೂರಿದರು.

ಕೇಂದ್ರದ ಅನುದಾನ, ರಾಜ್ಯ ಸರಕಾರದ ಹೆಸರು
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಇನ್ನೂರು ಮುನ್ನೂರು ಮನೆಗಳನ್ನು ಬಡವರಿಗೆ ಮಂಜೂರು ಮಾಡುವ ಕೆಲಸಗಳನ್ನು ಮಾಡಿದ್ದೇವೆ. ಆದರೆ ಇವತ್ತು ರಾಜ್ಯ ಸರ್ಕಾರ ಕೇವಲ ಇಪ್ಪತ್ತು ಮೂವತ್ತು ಮನೆಗಳನ್ನು ಮಂಜೂರು ಮಾಡುತ್ತಿವೆ. ಕೊಟ್ಟಿರುವ ಮನೆಗಳಿಗೆ ಹಣವನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ ಎಂದರು.

ಕೇಂದ್ರ ಸರ್ಕಾರ ಸ್ವಚ್ಛ ಭಾರತಕ್ಕಾಗಿ ಕೊಟ್ಟಿರುವ ಅನುದಾನವನ್ನು ಉಪಯೋಗಿಸಿಕೊಂಡು ರಾಜ್ಯ ಸರ್ಕಾರ ಶೌಚಾಲಯ ಗ್ರಾಮೀಣ ಅಭಿವೃದ್ದಿ ಎಂದು ಹೇಳುತ್ತಿದೆ ಎಂದು ವ್ಯಂಗ್ಯವಾಡಿದರು.

ಕುಮ್ಕಿ ಅಧಿಸೂಚನೆ ಹೊರಡಿಸಿ
ಕುಮ್ಕಿ ಹಕ್ಕಿನ ಬಗ್ಗೆ ಭಾರತೀಯ ಜನತಾ ಪಾರ್ಟಿಗೆ ಆಸಕ್ತಿಯಿಲ್ಲವೆಂಬ ಕಾಂಗ್ರೆಸ್ ಆರೋಪವನ್ನು ಅಲ್ಲಗಳೆದ ಶ್ರೀನಿವಾಸ ಪೂಜಾರಿಯವರು ಐದು ಎಕರೆಗಿಂತ ಕಡಿಮೆ ಇದ್ದ ಕುಮ್ಕಿ ಹಕ್ಕುದಾರರಿಗೆ ನೊಂದಾವಣೆ ಉಚಿತ ಮಾಡುವುದಕ್ಕೆ ಬಿಜೆಪಿ ಸರ್ಕಾರ ಇದ್ದಾಗ ಚರ್ಚಿಸಿದ್ದೇವೆ. ಅದಕ್ಕೆ ಬೇಕಾದ ಸಮಿತಿಯನ್ನು ರಚಿಸಿದ್ದೆವು. ನಾವೇ ತೆಗೆದುಕೊಂಡ ನಿರ್ಣಯದಂತೆ ಕುಮ್ಕಿ ಹಕ್ಕನ್ನು ರೈತರಿಗೆ ಕೊಡಬೇಕು ಎಂದು ಕರಡು ಪ್ರತಿಯನ್ನು ಹೊರಡಿಸಿದ್ದೆವು. ಅಧಿಕೃತ ಆದೇಶ ಬರುವ ಮೊದಲು ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು. ಕುಮ್ಕಿ ಜಾಗ ರೈತರಿಗೆ ಕೊಡಬೇಕಿದ್ದರೆ ಅಧಿಸೂಚನೆ ಹೊರಡಿಸಿ ನೇರವಾಗಿ ಕೊಡಿ. ನಾವು ಕೂಡ ಆಗ್ರಹ ಮಾಡುತ್ತೇವೆಂದು ಎಂದು ಸಚಿವ ಸೊರಕೆ ಹಾಗೂ ರಮಾನಾಥ ರೈಯವರಿಗೆ ಪೂಜಾರಿ ಸವಾಲೆಸೆದರು.

94ಸಿ ಅಡಿಯಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿಯನ್ನು ಕೊಟ್ಟ ಬಡಕುಟುಂಬಗಳಿಗೆ ಕುಂದಾಪುರ ತಹಶೀಲ್ದಾರರ ಮೂಲಕ ಐವತ್ತು ಸಾವಿರ ಹಣವನ್ನು ಕೇಳಿಸುತ್ತಿದ್ದಾರೆಂದು ಅವರು ಇದೇ ಸಂದರ್ಭದಲ್ಲಿ ಸಚಿವರುಗಳನ್ನು ಆರೋಪಿಸಿದರು.

ಅಫ್ಝಲ್ ಗುರು ಬೆಂಬಲಿಗರಿಗೆ ರಾಹುಲ್ ಸಾಥ್
ಸಂಸತ್ ಭವನದ ಮೇಲೆ ಬಾಂಬ್ ಸ್ಪೋಟ ಮಾಡಿದ ಭಯೋತ್ಪಾದಕ ಅಪ್ಝಲ್ ಗುರು ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಕಾಂಗ್ರೆಸ್  ಬಿಂಬಿತ ಪ್ರಧಾನಮಂತ್ರಿ ರಾಹುಲ್ ಗಾಂಧಿಯವರು ಭೇಟಿ ಕೊಡುತ್ತಾರೆ ಅಂತಾದರೆ ಕಾಂಗ್ರೆಸ್ ನಡವಳಿಕೆ ಏನೆಂಬುವುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಪೂಜಾರಿ ಕೇಂದ್ರ ಕಾಂಗ್ರೆಸ್ ನಾಯಕತ್ವದ ಬಗ್ಗೆ ಹರಿಹಾಯ್ದರು.

ಕರಾವಳಿಯಲ್ಲಿ ಹದಗೆಟ್ಟ ಸಾಮರಸ್ಯ, ಕಾನೂನು ವ್ಯವಸ್ಥೆ
ಮೂಡಬಿದಿರೆಯ ಪ್ರಶಾಂತ ಪೂಜಾರಿಯ ಕೊಲೆಯನ್ನು ಪ್ರಸ್ತಾಪಿಸಿದ ಅವರು ಪ್ರಶಾಂತ್ ಕೊಲೆ ಆರೋಪಿಗಳು ರಾಜ್ಯಸರ್ಕಾರಕ್ಕೆ ಮುಗ್ಧರಾಗಿ ತೋರುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಹಲವಾರು ಕೋಮು ಗಲಭೆಗಳಲ್ಲಿ ನೊಂದವರಿಗೆ ಕೊಡಬೇಕಾದ ಪರಿಹಾರ ಹಣ ಇನ್ನೂ ಕೂಡ ಒದಗಿಸಲು ಸರ್ಕಾರ ನಿರ್ಲಕ್ಷ ಧೋರಣೆ ತೋರುತ್ತಿದೆ. ಕೋಮುಗಲಭೆಗಳು ನಡೆದಾಗ ಹಿಂದೂಗಳಿರಲಿ ಮುಸ್ಲಿಮರಿರಲಿ, ಕ್ರೈಸ್ತರಿರಲಿ ನೊಂದವರಿಗೆ ಪರಿಹಾರ ಕೊಡಬೇಕಾದ ಸರ್ಕಾರ ರೀತಿ ನಡೆದುಕೊಳ್ಳುವುದು ಸಮಂಜಸವಲ್ಲ. ಇಡೀ ದೇಶದಲ್ಲಿ ಅಸುರಕ್ಷಿತ ರಾಜ್ಯ ಕರ್ನಾಟಕ. ಅದರಲ್ಲೂ ಕರಾವಳಿ ಜಿಲ್ಲೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟುಹೋಗಿದೆ ಎಂದರು.

ವಾಚ್  ಬಗ್ಗೆ ಜನಾರ್ದನ ಪೂಜಾರಿ ಮಾತೇ ಸಾಕು
ಕರ್ನಾಟಕದ ಮಂತ್ರಿಮಂಡಲದ ಬಗ್ಗೆ ಪ್ರಸ್ತಾವಿಸಿದ ಅವರು ವಾಚ್ ಹಾಗೂ ಗ್ಲಾಸ್ ಬಗ್ಗೆ ನಾನೇನು ಹೇಳುವುದಿಲ್ಲ. ಜನಾರ್ದನ ಪೂಜಾರಿಯವರೇ ಹೇಳಿರುವಾಗ ಇಡೀ ರಾಜ್ಯದ ಜನನರು ಅರ್ಥಮಾಡಿಕೊಳ್ಳಬೇಕಿದೆ. ಆರೋಗ್ಯ ಮಂತ್ರಿಗಳು ಆಸ್ಪತ್ರೆಯ ಕಡೆ ಗಮನ ಕೊಡುವುದಿಲ್ಲ. ಮೀನುಗಾರಿಕಾ ಮಂತ್ರಿಗಳು ಮೀನುಗಾರರ ಸಮಸ್ಯೆ ಕೇಳುವುದಿಲ್ಲ. ಬಂದರು ಮಂತ್ರಿಗಳು ಮಂತ್ರಿಯಾದ ಮೇಲೆ ಅವರು ಸಮುದ್ರವನ್ನು ನೋಡಿದ್ದಾರೆಂದು ಸಿದ್ದರಾಮಯ್ಯನವರ ಮಂತ್ರಿಮಂಡಲವನ್ನು ಲೇವಡಿ ಮಾಡಿದರು. ಇಂತಹ ತೊಂದರೆಗಳ ನಡುವೆ ಮತ್ತೊಮ್ಮೆ ಉಡುಪಿ ಜಿಲ್ಲೆಯಲ್ಲಿ ಭಾಜಪ ಅಧಿಕಾರ ವಹಿಸಿಕೊಳ್ಳುವಲ್ಲಿ ಎರಡು ಮಾತಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್  ಹಾಗೂ ಶರತ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ:
ಬಿಜೆಪಿಯಲ್ಲಿ ಸ್ಫೋಟಗೊಂಡ ಅಸಮಾಧಾನ: ಹಾಲಾಡಿಗೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್
http://bit.ly/1QSpclG

Related Tags: MLC Shrinivas Poojary, Halady Shrinivas Shetty, Rajesh BJP, Sharatchandra Shetty BJP, ZP Elections, BJP Press Meet Kundapur, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ