ಹಾಲಾಡಿಗೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್
ಕುಂದಾಪುರ ಬಿಜೆಪಿಯಲ್ಲಿ ಸ್ಪೋಟಗೊಂಡ ಅಸಮಾಧಾನ. ಪಕ್ಷೇತರ ಶಾಸಕ ಹಾಲಾಡಿ ಬೆಂಬಲಿಗರಿಗೆ ಬಿಜೆಪಿಯಿಂದ ಟಿಕೆಟ್. ತಮ್ಮ ಪಕ್ಷದ ನೈಜ ಕಾರ್ಯಕರ್ತರ ಕಡೆಗಣನೆ ವಿರೋಧಿಸಿ ಕಾರ್ಯಕರ್ತರ ರಾಜಿನಾಮೆ.

ಶ್ರೀಕಾಂತ ಹೆಮ್ಮಾಡಿ
ಕುಂದಾಪುರ: ಎರಡು ದಶಕಗಳಿಂದ ಪಕ್ಷದ ಬಲವರ್ಧನೆಗಾಗಿ ದುಡಿಯುತ್ತಿದ್ದ ಪ್ರಾಮಾಣಿಕ ಕಾರ್ಯಕರ್ತರನ್ನು ಜಿಪಂ, ತಾಪಂ ಚುನಾವಣೆಯಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಪಕ್ಷದ ಪ್ರಮುಖ ಮುಖಂಡರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕುಂದಾಪುರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆ, ತಾಪಂ ಸದಸ್ಯರಾದ ಭರತ್ ಕುಮಾರ್ ಶೆಟ್ಟಿ, ಕೋಟ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಠಲ ಪೂಜಾರಿ, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚಂದ್ರ ಮೋಹನ್ ರಾಜಿನಾಮೆ ನೀಡಿದ್ದಾರೆ. ಬಿಜೆಪಿಯ ಟಿಕೆಟ್ ಹಂಚಿಕೆ ವಿಷಯದಲ್ಲಿ ದಲಿತ ಮೋರ್ಚಾದಲ್ಲಿಯೂ ಅಸಮಧಾನ ಉಂಟಾಗಿದ್ದು, ಕಳೆದ 25 ವರ್ಷಗಳಿಂದ ಪಕ್ಷದ ಪರವಾಗಿ ಅನೇಕ ಕೆಲಸಗಳನ್ನು ಮಾಡಿದ್ದೇವೆ. ಆದರೆ ಈ ಬಾರಿಯ ತಾಪಂ, ಜಿಪಂ ಚುನಾವಣೆಯಲ್ಲಿ ದಲಿತರನ್ನು ಕಡೆಗಣಿಸಲಾಗಿದೆ ಎಂದು ದಲಿತ ಮೋರ್ಚಾದ ಗೋಪಾಲ ಕಳಿಂಜೆ ಹೇಳಿದ್ದಾರೆ. ನಮ್ಮಲ್ಲಿಯೂ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಹಲವರಿದ್ದಾರೆ. ಆದರೆ ಯಾರೂ ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ. ನಮಗಾದ ಅನ್ಯಾಯವನ್ನು ಸರಿಪಡಿಸದಿದ್ದಲ್ಲಿ ಸಾಮೂಹಿಕವಾಗಿ ರಾಜಿನಾಮೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇನ್ನೂ ಬಿಜೆಪಿಯ ಹಲವು ನಾಯಕರು ರಾಜೀನಾಮೆ ನೀಡುವ ತರಾತುರಿಯಲ್ಲಿದ್ದಾರೆಂದು ತಿಳಿದು ಬಂದಿದೆ.


ಎರಡು ದಶಕಗಳಿಂದ ಪಕ್ಷದ ಬೆಳವಣಿಗೆಯಲ್ಲಿ ಶ್ರಮಿಸುತ್ತಿದ್ದ ಕಾರ್ಯಕರ್ತರನ್ನು ಈ ಭಾರಿಯ ಚುನಾವಣೆಯಲ್ಲಿ ಸಂಪೂರ್ಣ ಕಡೆಗಣಿಸಲಾಗಿದೆ. ನಾನೇನು ಟಿಕೆಟ್ ಆಕಾಂಕ್ಷಿಯಲ್ಲ. ಈವರೆಗೆ ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದೇನೆಂಬ ವಿಶ್ವಾಸ ನನ್ನಲ್ಲಿದೆ. ಪಕ್ಷದ ನೈಜ ಕಾರ್ಯಕರ್ತರಿಗೆ ಟಿಕೆಟ್ ನಿರಾಕರಿಸಿದ್ದು ಮನಸ್ಸಿಗೆ ನೋವುಂಟು ಮಾಡಿದೆ. ಆದ್ದರಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ಪಕ್ಷ ವಿರೋಧಿ ಕೆಲಸ ಎಂದಿಗೂ ಮಾಡುವುದಿಲ್ಲವೆಂದು ಕುಂದಾಪುರದ ಬಿಜೆಪಿ ಯುವಮೋರ್ಚಾಧ್ಯಕ್ಷ ಶಂಕರ ಅಂಕದಕಟ್ಟೆ ‘ಕರಾವಳಿ ಕರ್ನಾಟಕ’ಕ್ಕೆ ತಿಳಿಸಿದ್ದಾರೆ. ಚುನಾವಣೆಯಲ್ಲಿ ಕೆಲಸ ಮಾಡದೇ ಇರುವುದು ಪಕ್ಷವಿರೋಧಿ ಚಟುವಟಿಕೆಯಲ್ಲವೇ ಎಂಬ ನೈತಿಕ ಪ್ರಶ್ನೆ ಕೇಳುವ ಹಕ್ಕನ್ನು ಬಿಜೆಪಿ ಎಂದೋ ಕೈಚೆಲ್ಲಿಯಾಗಿದೆ ಎಂಬುದು ಆ ಪಕ್ಷ ಹಾಲಾಡಿಯವರು ಬಿಜೆಪಿ ಧಿಕ್ಕರಿಸಿ ಬಂದ ಬಳಿಕ ನಡೆದುಕೊಳ್ಳುವ ರೀತಿಯಿಂದಲೇ ತಿಳಿದುಕೊಳ್ಳಬಹುದಾಗಿದೆ.


ಹಾಲಾಡಿ ವರ್ಸಸ್ ಬಿಜೆಪಿ
ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದ ಬೇಸರದಿದಂದ ಹಾಲಾಡಿ ಶ್ರೀನಿವಾಸ ಶೆಟ್ಟರು ಪಕ್ಷೇತರರಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತಗಳ ಅಂತರದಿಂದ ಗೆದ್ದಿದ್ದರು. ಹಾಲಾಡಿ ಶೆಟ್ಟರ ಭದ್ರಬುನಾದಿಯಂತಿರುವ ಕ್ಷೇತ್ರದಲ್ಲಿ ಅವರ ವಿರುದ್ದವೇ ಸ್ಪರ್ಧಿಸುವುದು ಅಸಾಧ್ಯದ ಮಾತು ಎಂದು ಹೆದರಿ ಬಿಜೆಪಿಯವರು ಹಾಲಾಡಿ ಬೆಂಬಲಿಗರಿಗೆ ಮಣೆ ಹಾಕಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಗುಸುಗುಸು ಕೇಳಿ ಬರುತ್ತಿದೆ.

ಹಾಲಾಡಿ ಬಣ ಹಾಗೂ ಬಿಜೆಪಿಯ ನಡುವೆ ಮೊದಲ ಸುತ್ತಿನ ಮಾತುಕತೆಯಲ್ಲಿ ಜಿಲ್ಲಾ ಪಂಚಾಯತ್ ಐದು ಕ್ಷೇತ್ರಗಳಲ್ಲಿ ನಮಗೆ ಅವಕಾಶ ಕೊಡಿ ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ನಾವು ಹಸ್ತಾಕ್ಷೇಪ ಮಾಡುವುದಿಲ್ಲವೆಂಬ ಮಾತು ಕೇಳಿಬಂದಿದ್ದವು. ಆದರೆ ಬಿಜೆಪಿ ಪಕ್ಷಕ್ಕೆ ಕೋಟ ಹಾಗೂ ಮಂದಾರ್ತಿ ಜಿಲ್ಲಾ ಪಂಚಾಯತ್ ಕ್ಷೇತ್ರ ಪ್ರಮುಖವಾಗಿದ್ದ ಕಾರಣ ಹಾಲಾಡಿ ಬಣದವರ ಮಾತಿಗೆ ಸಮ್ಮತಿ ಸೂಚಿಸಿಲ್ಲ. ಕೊನೆಗೂ ಈ ಚರ್ಚೆಯನ್ನು ಸ್ಥಳೀಯ ಮುಖಂಡರುಗಳು ರಾಜ್ಯ ನಾಯಕರ ಬಳಿ ತೆಗೆದುಕೊಂಡು ಹೋಗಿದ್ದರು. ರಾಜ್ಯ ನಾಯಕರು ಹೈಕಮಾಂಡ್ ಗೆ ಎಷ್ಟೇ ಮನವರಿಕೆ ಮಾಡಿದರೂ ಪ್ರಯೋಜನವಾಗಲಿಲ್ಲ. ದಿನೇದಿನೇ ಈ ಚರ್ಚೆ ಹೆಚ್ಚಾಗತೊಡಗಿದ್ದು, ಬಿಜೆಪಿ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕೋಟವನ್ನು ಬಿಟ್ಟು ಮಂದಾರ್ತಿ ಕ್ಷೇತ್ರವಾದರು ನಮಗೆ ನೀಡಿ ಎಂಬ ಮಾತು ಸ್ಥಳೀಯ ಮುಖಂಡರಲ್ಲಿ ಬರತೊಡಗಿತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಹಾಲಾಡಿ ಬಣವು ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧಿಸಲು ಮುಂದಾಗಿದ್ದಾರೆ.


ಬಿಜೆಪಿ ಹಾಲಾಡಿಗೆ ಮಂಡಿಯೂರಿದ್ದು, ಇದೇ ಮೊದಲಲ್ಲ
ರಾಷ್ಟ್ರೀಯ ಪಕ್ಷವೆಂದು ತುತ್ತೂರಿ ಬಾರಿಸುವ ಬಿಜೆಪಿಯ ದೈನೇಸಿ ಸ್ಥಿತಿ ಈ ಹಿಂದೆಯೂ ಕಂಡುಬಂದಿತ್ತು. ಈಗಿನ ಪುರಸಭಾ ಸದಸ್ಯರಲ್ಲಿ ಬಿಜೆಪಿಯಿಂದ ಆಯ್ಕೆಯಾದವರಲ್ಲೂ ಹಾಲಾಡಿ ಶ್ರೀನಿವಾಸ ಶೆಟ್ಟರ ಬಣದವರು ಇದ್ದಾರೆ. ಕಳೆದ ವಿದಾನಸಭಾ ಚುನಾವಣೆ ಸಂದರ್ಭ ಖುಲ್ಲಂಖುಲ್ಲ ಪಕ್ಷೇತರರಾಗಿ ಚುನಾವಣೆ ಎದುರಿಸಿದ್ದ ಹಾಲಾಡಿಯವರ ಪರ ಕೆಲಸ ಮಾಡಿದ್ದರೂ ಬಿಜೆಪಿ ಮುಖಂಡರಿಗೆ ಅಂಥವರನ್ನು ಉಚ್ಛಾಟಿಸುವ ಯೋಗ್ಯತೆ ಇರಲಿಲ್ಲ. ಇಂದು ಜಿ.ಪಂ, ತಾ.ಪಂ ಚುನಾವಣೆ ಸಂದರ್ಭ ಬಿಜೆಪಿಯವರು ಹಾಲಾಡಿಯವರ ಎದುರು ಮಂಡಿಯೂರಿದ್ದು, ಪಕ್ಷದ ನೈಜ ಕಾರ್ಯಕರ್ತರಲ್ಲಿ ಅಸಮಾಧಾನ ಸ್ಫೋಟಗೊಳ್ಳುವಂತೆ ಮಾಡಿ ರಾಜಿನಾಮೆ ಸಲ್ಲಿಸುವ ಹಂತಕ್ಕೆ ಮುಟ್ಟಿದ್ದರೆ ಅದು ಬಿಜೆಪಿ ಪಕ್ಷದ ಸ್ವಯಂಕೃತಾಪರಾಧದ ಫಲಶ್ರುತಿ ಎಂಬ ಮಾತುಗಳು ಕೇಳಿಬರುತ್ತಿರುವುದು ಗಮನಾರ್ಹ.

ಈ ನಡುವೆ ಪಕ್ಷೇತರ ಶಾಸಕನಾಗಿದ್ದರೂ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ತನ್ನ ಅನುಕೂಲಕ್ಕೆ ತಕ್ಕಂತೆ ಸ್ಥಳೀಯ ಚುನಾವಣೆಗಳ ಸಂದರ್ಭ ಬೆಂಬಲಿಗರಿಗೆ ಬಿಜೆಪಿ ಮೂಲಕ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು, ಎಂ.ಎಲ್.ಎ ಚುನಾವಣೆ ಸಂದರ್ಭ ಮಾತ್ರ ತನ್ನ ಬೆಂಬಲಿಗರು ಪಕ್ಷವನ್ನು ಧಿಕ್ಕರಿಸಿ ತನ್ನ ಪರ ಚುನಾವಣೆಗೆ ಕೆಲಸ ಮಾಡುವಂಥ ವಾತಾವರಣ ನಿರ್ಮಿಸಿರುವುದು ಸಮಯಸಾಧಕ ರಾಜಕಾರಣವೇ ಇರಬಹುದಾದರೂ. ಡಾರ್ವಿನ್ ಸಿದ್ಧಾಂತದಂತೆ ಓರ್ವ ಪಕ್ಷೇತರ ಶಾಸಕ ತನ್ನ ‘ಅಸ್ಥಿತ್ವಕ್ಕಾಗಿ ಹೋರಾಟ’ವನ್ನು ಪಕ್ಷವೊಂದು ರಾಷ್ಟ್ರಮಟ್ಟದಲ್ಲಿ ತನ್ನ ಪ್ರಧಾನಿಯನ್ನು ಹೊಂದಿರುವಾಗಲೂ, ಅದನ್ನು ತನ್ನಿಷ್ಟದಂತೆ ಮಣಿಸಿ ತನ್ನ ರಾಜಕಾರಣ ಜಾರಿಯಲ್ಲಿಟ್ಟಿರುವುದು ಗಮನಾರ್ಹ.

Related Tags: Kundapur Bjp, Halady Shrinivas Shetty, Shankar Ankadakatte Resignation, Kundapur Bjp Yuva Morcha President Resignation, Zilla Panchayat, Talluk Panchayat Election, Kannda News, Karavali News, Kundapur News, Karavalikarnataka news
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ