“ಓಪನ್ ಸೈನ್ಸ್” ಎಂಬ ಸಮಾನತೆಯ ಕೂಗು

ಮಂಜುನಾಥ ಹೆಗಡೆ

ಪ್ರತಿ ಲೇಖನಗಳಿಗೂ ಹಣ ತೆರುವಂತಾದರೆ ಸಂಶೋಧನೆ ಕೇವಲ ದುಡ್ಡಿದ್ದವರಿಗೆ ಮಾತ್ರ ಸೀಮಿತ ಎಂಬ ಪರಿಸ್ಥಿತಿ ನಿರ್ಮಾಣ ಆಗುವುದಿಲ್ಲವೇ? ಅದಕ್ಕಾಗಿಯೇ ಹುಟ್ಟಿದೆ  "ಓಪನ್ ಸೈನ್ಸ್" ಬೇಕು ಎಂಬ ಕೂಗು.


"ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್" ಎಂದು ಭಾರತದ ಮಾಜೀ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಅಂದರೆ ಒಂದು ದೇಶ ಅಭಿವೃದ್ಧಿಯೆಡೆಗೆ ಸಾಗಬೇಕು ಎಂದಾದರೆ ಮುಖ್ಯವಾಗಿ ಆ ದೇಶದ ರಕ್ಷಣಾ ವಿಭಾಗ, ರೈತರು ಮತ್ತು ಆ ದೇಶದ ವಿಜ್ಞಾನ ಮುಂದುವರಿದಿರಲೇ ಬೇಕು ಎಂದರ್ಥ. ದೇಶದ ಉನ್ನತಿಯ ಮೂಲ ಅಡಿಪಾಯಗಳಲ್ಲಿ ವಿಜ್ಞಾನವೂ ಒಂದು. 2016 ರ ಆದಿಯಲ್ಲಿ ಇದ್ದೇವೆ, ಒಮ್ಮೆ ಹಿಂದೆ ತಿರುಗಿ ನೋಡಿದರೆ ಬದಲಾವಣೆಯ ಅರಿವು ನಮಗೆ ಆಗಬಹುದೇನೋ. ವಿಜ್ಞಾನದಲ್ಲಿ, ಸಂಶೋಧನೆಯಲ್ಲಿ ಮಹತ್ತರ ಸಾಧನೆಯನ್ನು ಮನುಷ್ಯ ಸಂಕುಲ ಮಾಡಿದೆ ಮತ್ತು ಮಾಡುತ್ತಿದೆ ಕೂಡ. ಮಾನವನ ಹುಡುಕಾಟಕ್ಕೆ ಮಿತಿಯಿಲ್ಲ ಎಂಬಂತೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇದ್ದೇವೆ. ವಿಜ್ಞಾನದ ಜೊತೆ ನಂಟೂ ಸಹ ಹಾಗೆಯೇ ಬೆಳ್ಳಂಬೆಳಿಗ್ಗೆ ನಮ್ಮನ್ನು ನಿದ್ದೆಯಿಂದೆಬ್ಬಿಸುವ ಅಲಾರಾಂ ನಿಂದ ಪ್ರಾರಂಭವಾದರೆ ರಾತ್ರಿ ಮಲಗುವ ತನಕ ನಮ್ಮ ಕೆಲಸಗಳೆಲ್ಲ ವಿಜ್ಞಾನಕ್ಕೆ ಹೊಂದಿಕೊಂಡೇ ಸಾಗುತ್ತವೆ. ಇದು ಇಂದು ನೆನ್ನೆಯ ಕಥೆಯಲ್ಲ ಶತ ಶತಮಾನಗಳಿಂದಲೂ ನಾವು ವಿಜ್ಞಾನದ ಜೊತೆ ನಂಟು ಬೆಳೆಸಿಕೊಂಡವರೇ. ಅದೇ ರೀತಿ ವಿಜ್ಞಾನ ಬೆಸೆದುಕೊಂಡಿದ್ದು ಸಂಶೋಧನೆಯ ಜೊತೆ. ವಿಜ್ಞಾನದ ಬೆಳವಣಿಗೆಯ ಮೂಲ ಸಂಶೋಧನೆ. ಸಂಶೋಧನೆ ಇಲ್ಲದೆ ವಿಜ್ಞಾನದ ಬೆಳವಣಿಗೆ ಅಸಾಧ್ಯ ಎಂದೇ ಹೇಳಬಹುದು.

ಆದರೆ ಸಂಶೋಧನೆ ಆಧಾರ ಆಗಿರುವುದು ಯಾವುದರ ಮೇಲೆ? ಅಸಲಿಗೆ ಸಂಶೋಧನೆಗೆ ಆಧಾರ ಎಂಬುದು ಬೇಕಾ? ಇಂಥ ಪ್ರಶ್ನೆಗಳು ಹುಟ್ಟದೆ ಇರಲಾರದು. ಸಂಶೋಧನೆ ಎಂಬುದು ಕೆಲವೊಮ್ಮೆ ಹೊಸ ಆವಿಷ್ಕಾರ ಆಗಿರಬಹುದು. ಅಥವಾ ಹಿಂದಿನ ಸಂಶೋಧನೆಗಳ ಸುಧಾರಣೆ ಆಗಿರಬಹುದು. ಆವಿಷ್ಕಾರವಾಗಿದ್ದರೆ ಅದು ಮಾನವನ ಕುತೂಹಲ ಮತ್ತು ಸೃಜನಶೀಲ ವಿಚಾರಗಳಾಗಿರುತ್ತದೆ, ಇದು ಯಾವುದರ ಮೇಲೂ ಆಧಾರಿಸುವುದಿಲ್ಲ, ಆಧರಿಸಿದರೂ ಅದು ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಅದೇ ರೀತಿ ಸಂಶೋಧನೆ ಸುಧಾರಣೆ ಆಗಿದ್ದರೆ ಅದು ಸಂಪೂರ್ಣವಾಗಿ ಆಧರಿಸಿರುವುದು ಹಿಂದಿನ ಸಂಶೋಧನೆಗಳ ಮೇಲೆ. ಇಂದಿನ ದಿನಗಳಲ್ಲಿ ಆವಿಷ್ಕಾರಕ್ಕಿಂತ ಹೆಚ್ಚಿನದಾಗಿ ಸಂಶೋಧನೆ ಎಂಬುದು ಹಿಂದಿನ ಸಂಶೋಧನೆಯನ್ನು ಸುಧಾರಣೆ ಮಾಡುವತ್ತ ಸಾಗುತ್ತಿದೆ. ಇನ್ನೋವೇಶನ್ ಎಂಬುದು ಸಂಶೋಧನೆಯ ಮೂಲ ಗುರಿಯಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿ ನಡೆಯುತ್ತಿರುವ ಸಾವಿರಾರು ಸಂಶೋಧನೆಗಳ ಮೂಲ ಮಂತ್ರ ಇನ್ನೋವೇಶನ್ ಹೊರತು ಇನ್ವೆನ್ಷನ್  ಅಲ್ಲ.. ಆದರೆ ಅಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಲವಾರು. ಅದಕ್ಕಾಗಿಯೇ "ಓಪನ್ ಸೈನ್ಸ್" ಬೇಕು ಎಂಬ ಕೂಗು ಎಂದಿಗೂ ಇದೆ. ಹಾಗಿದ್ದರೆ ಏನಿದು ಓಪನ್ ಸೈನ್ಸ್?

ಸಂಶೋಧನೆ ಸುಧಾರಣೆ ಆಗಿದ್ದರೆ ಅದು ಸಂಪೂರ್ಣವಾಗಿ ಆಧರಿಸಿರುವುದು ಹಿಂದಿನ ಸಂಶೋಧನೆಗಳ ಮೇಲೆ ಎಂಬ ಮಾತು ಹೇಳಿದೆ, ಸುಧಾರಣೆ ಎಂದರೆ ಏನು,? ಒಂದು ಅಸ್ತಿತ್ವದಲ್ಲಿ ಇರುವುದಕ್ಕೆ ಮತ್ತೂ ಸ್ವಲ್ಪ ಹೊಸ ವೈಶಿಷ್ಟ್ಯವನ್ನು ಸೇರಿಸಿ ಮತ್ತೊಂದು ರೂಪ ನೀಡುವುದು. ಒಂದು ರೀತಿಯಲ್ಲಿ ಹೆಂಚಿನ ಮನೆಯಿಂದ RCC ಮನೆಗಳ ನಿರ್ಮಾಣವಿದ್ದಂತೆ. ಆದರೆ ಈ ರೀತಿಯ ಸಂಶೋಧನೆಗಳಿಗೆ ಅಡಿಯಿದಬೇಕಾದರೆ ಅದರ ಹಿಂದೆ ಆಗಿರುವ ಸಂಶೋಧನೆಯ ಅರಿವು ಇರಬೇಕಾದದ್ದು ಬಹಳ ಮುಖ್ಯ. ಇದರ ಅರಿವು ಮೂಡುವುದು ಅದರ ಮೇಲೆ ಪ್ರಕಟಣೆಯಾದ ಸಂಶೋಧನಾ ಲೇಖನಗಳಿಂದ ಮತ್ತು ಪ್ರಬಂಧಗಳಿಂದ. ಸಂಶೋಧನೆ ಪ್ರಾರಂಭಿಸುವ ಮೊದಲು ಅವುಗಳನ್ನು ಮೊದಲು ಓದಿ ಆ ನಂತರ ಮುಂದೆ ಸುಧಾರಣೆ ಮಾಡುವತ್ತ ಹೆಜ್ಜೆ ಇಡುತ್ತಾರೆ. ಓಪನ್ ಸೈನ್ಸ್ ಬೇಕು ಎಂಬ ಕೂಗು ಕೇಳುವುದು ಇದೆ ಹಂತದಲ್ಲಿ. ಅದಕ್ಕೆ ಕಾರಣ ಸಂಶೋಧನಾ ಲೇಖನಗಳ ಕೊರತೆಯಲ್ಲ ಬದಲಾಗಿ ಲೇಖನಗಳು ಇದ್ದರೂ ಅದರ ಲಭ್ಯತೆ ತುಂಬ ಕಷ್ಟವಾಗಿರುವುದು. ಸಂಶೋಧನಾ ಲೇಖನಗಳು ಎಲ್ಲರಿಗೂ ಲಭ್ಯವಾಗಲಾರದು, ಅದರ ಲಭ್ಯತೆ ಬೇಕೆಂದರೆ ಹಣ ತೆತ್ತು ಪಡೆದುಕೊಳ್ಳಬೇಕು. ಇದು ಸಂಶೋಧನೆಗಳಿಗೆ ತೊಡಕಾಗಿದೆ.

ಸಂಶೋಧನಾ ಲೇಖನಗಳು ಸಿಗಬೇಕಾದರೆ ಅವು ವೈಜ್ಞಾನಿಕ ಪತ್ರಿಕೆ ಅಥವಾ ಜರ್ನಲ್ ಗಳಲ್ಲಿ ಪ್ರಕಟವಾಗಿರಬೇಕು. ಇಂತಹ ಜರ್ನಲ್ ಗಳು ನೂರಾರಿವೆ. ಎಲ್ಲವೂ ಉತ್ತಮ ಜರ್ನಲ್ ಗಳೇ. ಆದರೆ ಎಲ್ಲ ಜರ್ನಲ್ ಗಳನ್ನು ಉಚಿತವಾಗಿ ಓದುವಂತಿಲ್ಲ. ಜರ್ನಲ್ ಗಳ ಗುಣಮಟ್ಟ ಹೆಚ್ಚಿದ್ದರೆ ಅದಕ್ಕೆ ಮೊದಲ ಆದ್ಯತೆ ನೀಡಲಾಗುವುದು, ಆದರೆ ಅದಕ್ಕೆ ಹಣ ನೀಡಲೇ ಬೇಕು. ಸಮಸ್ಯೆ ಇರುವುದು ಇಲ್ಲಿಯೇ. ಸಂಶೋಧಕರು ಎಲ್ಲರು ಹಣವಂತರಾ.? ಖಂಡಿತವಾಗಿಯೂ ಇಲ್ಲ. ಜೊತೆಗೆ ಸಂಶೋಧನಾ ಲೇಖನ ಎಂದರೆ ಅದು ಎಷ್ಟೋ ದಿನಗಳ ಶ್ರಮ. ಆದ ಕಾರಣ ಅದಕ್ಕೆ ಹಣವೂ ಸಹ ಹೆಚ್ಚು. ಸಾಮಾನ್ಯವಾಗಿ ಉತ್ತಮ ಜರ್ನಲ್ ನಲ್ಲಿ ಪ್ರಕಟಣೆಯಾದ ಒಂದು ಸಂಶೋಧನಾ ಲೇಖನವನ್ನು ಪಡೆಯಲು 35 ರಿಂದ 40 ಡಾಲರ್ ತೆರಬೇಕು ಅಂದರೆ 2300 ರೂ ನಿಂದ 2600 ರೂಪಾಯಿ ತೆರಬೇಕು. ಒಂದು ಸಂಶೋಧನೆ ಪೂರ್ಣಗೊಳ್ಳಬೆಕಾದರೆ ಕೇವಲ ಒಂದು ಸಂಶೋಧನಾ ಲೇಖನ ಸಾಲದು. ಹೀಗೆ ಪ್ರತಿ ಲೇಖನಗಳಿಗೂ ಹಣ ತೆರುವ ಪರಿಸ್ಥಿತಿ ಉಂಟಾದರೆ ಸಂಶೋಧನೆ ಮುಗಿಯುವ ಹೊತ್ತಿಗೆ ಸಂಶೋಧಕನ ಪರಿಸ್ಥಿತಿ ಏನಾಗಿರಬಹುದು ಯೋಚಿಸಿ ನೋಡಿ.. ಸಂಶೋಧನೆ ಕೇವಲ ಹಣವಂತರಿಗೆ ಮಾತ್ರ ಸೀಮಿತ ಎಂಬ ಪರಿಸ್ಥಿತಿ ನಿರ್ಮಾಣ ಆಗುವುದಿಲ್ಲವೇ? ಅದೇ ಕಾರಣಕ್ಕಾಗಿ ಹುಟ್ಟಿದೆ  "ಓಪನ್ ಸೈನ್ಸ್" ಬೇಕು ಎಂಬ ಕೂಗು.

ಓಪನ್ ಸೈನ್ಸ್ ನ ಮೂಲ ಉದ್ದೇಶ ಎಲ್ಲರಿಗು ಸಮಾನವಾಗಿ ಮತ್ತು ಉಚಿತವಾಗಿ ಸಂಶೋಧನೆಗೆ ಬೇಕಾದ ಅಂಕಿ ಅಂಶಗಳು ದೊರಕುವಂತೆ ಮಾಡುವುದು, ಉಚಿತ ಸಂಶೋಧನೆಯ ಮೂಲ ದೊರಕಬೇಕು, ಉಚಿತವಾಗಿ ಲೇಖನ ವಿಮರ್ಶೆ ಮಾಡಬೇಕು, ಉಚಿತವಾಗಿ ಸಂಶೋಧನಾ ಲೇಖನ ಮತ್ತು ಸಂಪನ್ಮೂಲಗಳು ದೊರಕುವಂತೆ ಆಗಬೇಕು. ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ ಎಂಬ ಅರಿವಿದೆ. ಆದರೆ ಅದಕ್ಕೆ ಮಾರ್ಗವೂ ಇದೆ ಅಲ್ಲವೇ? ಉದಾಹರಣೆಗೆ ಸಂಶೋಧಕ ಯಾವ ಸಂಸ್ಥೆಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾನೋ ಆ ಸಂಸ್ಥೆ ಆತನ ಸಂಶೋಧನೆಯ ವೆಚ್ಚ ಭರಿಸುವಂತೆ ಮಾಡಬಹುದು. ಈ ಸೌಲಭ್ಯ ಎಲ್ಲ ಸಂಸ್ಥೆಗಳಿಗಿಲ್ಲ, ಕೆಲವು ಸಂಸ್ಥೆಗಳು ಅಂದರೆ ಸರ್ಕಾರದ ಅಧೀನದಲ್ಲಿ ಇರುವ ಐಐಟಿ, ಏನ್ಐಟಿ ಮುಂತಾದ ಸಂಸ್ಥೆಗಳು ನೀಡುತ್ತಿವೆ. ಆದರೆ ಅದರ ಹೊರತಾಗಿಯೂ ಖಾಸಗಿ ಸಂಸ್ಥೆಗಳು, ಕಾಲೇಜುಗಳು, ಸಂಶೋಧನಾ ಘಟಕಗಳು ಇವೆ, ಅವುಗಳಲ್ಲಿ ಕೆಲವು ಮಾತ್ರ ಸಂಶೋಧನಾ ವೆಚ್ಚ ಭರಿಸುತ್ತಿವೆ ಅದರಲ್ಲೂ ಮುಖ್ಯವಾಗಿ ಪಿ.ಹೆಚ್.ಡಿ ಯಲ್ಲಿ ತೊಡಗಿರುವವರು ಈ ಸಮಸ್ಯೆಯನ್ನು ತುಂಬಾ ಎದುರಿಸುತ್ತಿದ್ದಾರೆ.

ಉತ್ತಮ ಲೇಖನಗಳು ದೊರೆತರೆ ಮಾಹಿತಿಯ ಪ್ರಮಾಣ ಉತ್ತಮವಾಗಿರುತ್ತದೆ ಮತ್ತು ಹೆಚ್ಚಾಗಿರುತ್ತದೆ ಅವು ಮುಂದೆ ಉತ್ತಮ ಸಂಶೋಧನೆಗೆ ನಾಂದಿ ಹಾಡುತ್ತದೆ, ಆದರೆ ಉತ್ತಮ ಲೇಖನಗಳ ಕೊರತೆ ಕಂಡುಬಂದಾಗ ಸಂಶೋಧನೆಯ ಗುಣಮಟ್ಟವೂ ಇಳಿಯುತ್ತದೆ ಅಲ್ಲವೇ? ಉತ್ತಮ ಸಂಶೋಧನೆ ಆದಾಗ ವಿಜ್ಞಾನದ ಗುಣಮಟ್ಟವೂ ಹೆಚ್ಚುತ್ತದೆ. ಕೊರತೆಗಳು ಪ್ರಾರಂಭದಲ್ಲೇ ಆದರೆ ಅಂತಿಮ ಫಲಿತಾಂಶವೂ ಕೊರತೆಗಳನ್ನು ತುಂಬಿಕೊಂಡು ಇರುತ್ತದೆ. ಅದೇ ಕಾರಣಕ್ಕಾಗಿ ಓಪನ್ ಸೈನ್ಸ್ ಬೇಕು ಎಂದು ಜಗತ್ತಿನಾದ್ಯಂತ ಅಭಿಪ್ರಾಯಗಳು ವ್ಯಕ್ತವಾಗುತಿದೆ.. ಇದನ್ನು ಕೇವಲ ಸಂಶೋಧಕರು ವ್ಯಕ್ತಪಡಿಸಿದರೆ ಸಾಲದು, ಸಾಮಾನ್ಯ ಜನರು ಯೋಚಿಸಲೇ ಬೇಕು.ಸಂಶೋಧನೆ ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲ ಅಲ್ಲವೇ? ಅದರ ಉಪಯೋಗವನ್ನು ಎಲ್ಲರೂ ಪಡೆಯುತ್ತಾರೆ ಹೀಗಿರುವಾಗ ಅಲ್ಲಿ ಸಮಸ್ಯೆ ಇದೆ ಎಂದಾದರೆ ಅದನ್ನು ಸರಿಪಡಿಸಲು ಜನಸಾಮಾನ್ಯ ಮುಂದಾಗಲೇಬೇಕು. ಈ ಕೂಗಿಗೆ ನಿಮ್ಮದೂ ದನಿ ಜೋತೆಗೂಡಲಿ…

 

Related Tags: Open Science, Research, Kannada Article, Science, Manjunath Hegde
 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ