ಯಕ್ಷದಿಗ್ಗಜ ಕಂದಾವರ ರಘುರಾಮ ಶೆಟ್ಟಿ
ಮೌಲ್ಯಾಧಾರಿತ ಪ್ರಸಂಗಕರ್ತ...ಕಂದಾವರ ರಘುರಾಮ ಶೆಟ್ಟಿಗೆ ಎಂಬತ್ತು...

ಕರಾವಳಿಕರ್ನಾಟಕ ವರದಿ
ಕುಂದಾಪುರ:
ಯಕ್ಷಗಾನ ರಸಿಕರಿಗೆಲ್ಲಾ ಚಿರಪರಿಚಿತ ಹೆಸರು ಕಂದಾವರ ರಘುರಾಮ ಶೆಟ್ಟಿ. ಶಿಕ್ಷಕ, ಯಕ್ಷಗಾನ ಪ್ರಸಂಗಕರ್ತ, ಅರ್ಥಧಾರಿ, ಹವ್ಯಾಸಿ ನಾಟಕ ಮತ್ತು ಯಕ್ಷಗಾನ ಕಲಾವಿದ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಈಗ ಎಂಬತ್ತು. ಅವರು ಉತ್ಸಾಹಕ್ಕೆ ಮಾತ್ರ ಇನ್ನೂ ಇಪ್ಪತ್ತು.
ಕಂದಾವರ ರಘುರಾಮ ಶೆಟ್ಟಿ ಕುಂದಾಪುರ ತಾಲ್ಲೂಕ್, ಬಳ್ಕೂರು ಗ್ರಾಮ ಕಂದಾವರದಲ್ಲಿ 1936ರಲ್ಲಿ ಜನಿಸಿದರು. ತಂದೆ ದಿ. ಸದಿಯಣ್ಣ ಶೆಟ್ಟಿ. ತಾಯಿ ಕಂದಾವರ ಪುಟ್ಟಮ್ಮ. ಪ್ರಸಕ್ತ ಕಂದಾವರ ಅವರು ನೂಜಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.


ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, 35 ವರ್ಷ ಸೇವೆ ಸಲ್ಲಿಸಿ ಮಾದರಿ ಶಿಕ್ಷಕ ಪ್ರಶಸ್ತಿ ಜೊತೆ ನಿವೃತ್ತರಾದರು. ಎಳೆ ವಯಸ್ಸಿನಲ್ಲಿಯೆ ಸಾಹಿತ್ಯ, ಸಂಗೀತ, ಯಕ್ಷಗಾನಗಳ ಬಗೆಗೆ, ವಿಶೇಷ ಆಸಕ್ತಿ ವಹಿಸಿ, ಕಂದಾವರ ರಘುರಾಮ ಶೆಟ್ಟಿ ವಿದ್ಯಾರ್ಥಿ ದಿಶೆಯಲ್ಲೇ ಮಕ್ಕಳ ಯಕ್ಷಗಾನಕ್ಕೆ ಭಾಗವತಿಗೆ ಮಾಡಿ ಬಾಲ ಭಾಗವತ ಎಂಬ ಖ್ಯಾತಿಗೆ ಪಾತ್ರರಾದರು. ದಿ. ಎಂ. ಎಂ. ಹೆಗ್ಡೆ ಕೂಟದಲ್ಲಿ ಹವ್ಯಾಸಿ ವೇಷಧಾರಿಯಾಗಿ ಪಾತ್ರ ನಿರ್ವಹಣೆ ಮಾಡುತ್ತಿದ್ದರು. ಸ್ವತಃ ಉತ್ತಮ ಅರ್ಥಧಾರಿಯಾದ ಕಂದಾವರ ರಘುರಾಮ ಶೆಟ್ಟಿ, ಬೇರೆ ಅರ್ಥಧಾರಿಗಳ ಜೊತೆ ತಾಳಮದ್ದಲೆಯಲ್ಲಿ ಭಾಗಹಿಸುತ್ತಿದ್ದರು.

ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕಂದಾವರ ಅವರು 1978ರಿಂದ ಪ್ರಸಂಗ-ಕೃಷಿ ಆರಂಭಿಸಿದರು. ಇದುವರೆಗೆ 29 ಪ್ರಸಂಗಗಳ ರಚಿಸಿದ್ದಾರೆ. ಇವನ್ನೆಲ್ಲಾ ಒಟ್ಟುಗೂಡಿಸಿ ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆಯಾಗಿ ಸಮರ್ಪಿಸಿದ್ದಾರೆ. ಅವುಗಳಲ್ಲಿ ಹಲವು ಉಭಯ ತಿಟ್ಟುಗಳ ವೃತ್ತಿ ಮೇಳಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಗೊಂಡಿವೆ. ಶ್ರೀದೇವಿ ಬನಶಂಕರಿ, ಚೆಲುವೆ ಚಿತ್ರಾವತಿ, ರತಿ ರೇಖಾ, ಶೂದ್ರ ತಪಸ್ವಿನಿ ಕಲಾಭಿಮಾನಿಗಳ ಅಪಾರ ಮೆಚ್ಚುಗೆಗಳಿಸಿವೆ. ಈ ಪ್ರಸಂಗಗಳು ಇಂದಿಗೂ ಮರು ಪ್ರದರ್ಶನ ಗೊಳ್ಳುತ್ತಿದ್ದು, ಅವರ ಪ್ರಸಂಗ ಸಾಹಿತ್ಯ ಕೃಷಿಗೆ ಸಾಕ್ಷಿ.

ಬಡಗು ತಿಟ್ಟಿನ ಎಲ್ಲಾ ಮೇಳಗಳೂ ತೆಂಕುತಿಟ್ಟಿನ ಧರ್ಮಸ್ಥಳ, ಕಟೀಲು ಮೇಳದವರು ಕಂದಾವರ ವಿರಚಿತ ಪ್ರಸಂಗ ಪ್ರದರ್ಶಿಸುತ್ತಿದ್ದಾರೆ. ಇವರ ಆಯ್ದ ಪ್ರಸಂಗಗಳ ಸಂಕಲನ ದಶಮಿ ಹೆಸರಲ್ಲಿ ಪ್ರಕಾಶನ ಕಂಡಿದೆ.
ಹವ್ಯಾಸಿ ನಾಟಕ ಕಲಾವಿದರಾದ ಇವರು ಕಂಪೆನಿ ನಾಟಕಗಳಲ್ಲೂ ಅತಿಥಿ ನಟರಾಗಿ ಅಭಿನಯಿಸಿ ಕಲಾ ರಸಿಕರ ಮನಗೆದ್ದಿದ್ದಾರೆ. ಕರ್ನಾಟಕ ಸರಕಾರದ ನಾಟಕ ಅಕಾಡೆಮಿ ಪ್ರಕಟಿಸಿದ ಇಂದಿನ ರಂಗ ಕಲಾವಿದರು ಎಂಬ ಪುಸ್ತಕದಲ್ಲಿ ಇವರ ಪರಿಚಯ ಬಂದಿರುವುದು ಈ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಕೊಡುಗೆಗೆ ನಿದರ್ಶನ. 

ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಲ್ಕು ವರ್ಷ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಪುರಾಣ ವಾಚನದಲ್ಲಿ ಗಮಕಿಗಳಾಗಿ, ಪ್ರವಚನಕಾರರಾಗಿ ಭಾಗವಹಿಸಿದ್ದಾರೆ.ವಿದ್ಯಾರ್ಥಿ ವೃಂದಕ್ಕಾಗಿ  7 ಕಿರು ನಾಟಕಗಳ ರಚಸಿ, ನಿರ್ದೇಶಿಸಿದ್ದಾರೆ. 
 

ಸಿಕ್ಕ ಪ್ರಶಸ್ತಿ , ಪುರಸ್ಕಾರಗಳು:

ಮಂಗಳೂರಿನ ಬಂಟರ ಯಾನೆ ನಾಡವರ ಮಾತೃಸಂಘದಿ0ದ ಬಂಗಾರದ ಪದಕ.
ಕರ್ನಾಟಕ ಯಕ್ಷಗಾನ ಸಮಿತಿ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ,ಡಾ. ವೀರೇಂದ್ರ ಹೆಗ್ಗಡೆ, ಎಡನೀರು ರಾಮಚಂದ್ರಮಠ, ದಾವಣಗೆರೆ ವಿರಕ್ತಮಠದ ಸ್ವಾಮೀಜಿಯವರಿ0ದ ಸನ್ಮಾನ ಪ್ರತಿಷ್ಠಿತ ಸೀತಾನದಿ ಪ್ರಶಸ್ತಿ, ಯಕ್ಷಸಾಹಿತ್ಯ ಶ್ರೀ ಪ್ರಶಸ್ತಿ,  ಪ್ರತಿಷ್ಠಿತ ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಪ್ರಶಸ್ತಿ.

ನ.15 ರಂದು ದಿನವಿಡೀ ಕಾರ್ಯಕ್ರಮ:
ಕಂದಾವರ ರಘುರಾಮ ಶೆಟ್ಟಿ 80 ಅಭಿನಂದನೆ ಕಾರ್ಯಕ್ರಮ ನ.15 ರಂದು ಅವರ ಅಭಿಮಾನಿಗಳು ಬಸ್ರೂರು ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 10 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ ಅಭಿನಂದನೆ, ಮತ್ತು ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

Related Tags: Kundapur, Yakshagana, Kandavara Raghurama Shetty, Drama, ಧರ್ಮಸ್ಥಳ ಮೇಳ, ಕಟೀಲು ಮೇಳ
 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ