ಭೂಮಿಯಾಚೆಗಿನ ಭೂಮಿಯನ್ನರಸುತ್ತ...

ಮಂಜುನಾಥ ಹೆಗಡೆ

ವಿಜ್ಞಾನದ ಮೂಲವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮಗೆ ಒಂದು ವಿಷಯ ಮನದಟ್ಟಾಗುತ್ತದೆ, ಅದೇನೆಂದರೆ ವಿಜ್ಞಾನದ ಮೂಲ ಅಂದರೆ ವಿಜ್ಞಾನ ಎಂಬುದು ಹುಟ್ಟಿದ್ದು ಕುತೂಹಲದಿಂದ. ಪ್ರಕೃತಿಯಲ್ಲಿದ್ದ ವೈಶಿಷ್ಟ್ಯತೆ ಮತ್ತು ಮಾನವ ಸಹಜ ಕುತೂಹಲ ವಿಜ್ಞಾನಕ್ಕೆ ದಾರಿ ಮಾಡಿಕೊಟ್ಟಿತು. ಎರಡು ಕಲ್ಲನ್ನು ಉಜ್ಜಿ ನೋಡಿದಾಗ ಏನಾಗುತ್ತದೆ ಎಂಬ ಕುತೂಹಲವೇ ಬೇಂಕಿಯ ಬಗ್ಗೆ ಮಾನವನಿಗೆ ಅರಿವನ್ನುಂಟುಮಾಡಿದ್ದಲ್ಲವೇ..? ಹಾಗೆ ಇಂಥ ಸಾವಿರಾರು ಕುತೂಹಲಗಳ ಸಂಗಮ ಈ ವಿಜ್ಞಾನ. ಇದು ಪ್ರಕೃತಿಯ ಬಗ್ಗೆ ತಿಳಿಯುವ ಕುತೂಹಲ. ಪ್ರಕೃತಿಯ ಅಂದರೆ ಭೂಮಿಯ ಹೊರಗಡೆ ಅಂತರಿಕ್ಷದ ಬಗ್ಗೆ ತಿಳಿಯುವ ಕುತೂಹಲ ಖಗೋಳ ವಿಜ್ಞಾನ. ಈ ಕುತೂಹಲಗಳು ತರ್ಕಕ್ಕೆ ನಾಂದಿ ಹಾಡಿತು. ಆ ತರ್ಕಗಳು ಮುಂದೆ ಸಿದ್ಧಾಂತಗಳಾದವು ಇಂಥ ನೂರಾರು ಸಿದ್ಧಾಂತಗಳು ಸೇರಿ ವಿಜ್ಞಾನವಾಯ್ತು. ಆದರೆ ಕುತೂಹಲ ಇನ್ನೂ ಮುಗಿದಿಲ್ಲ, ಯಾಕೆಂದರೆ ಪ್ರಕೃತಿ ಅಷ್ಟು ವೈಶಿಷ್ಟ್ಯಗಳನ್ನು ತುಂಬಿಕೊಂಡಿದೆ. ಅದಕ್ಕಾಗಿಯೇ ಅಲ್ಲವೇ ಭೂಮಿಯಲ್ಲಿನ ಎಷ್ಟೋ ಪ್ರದೇಶಗಳು, ಅಲ್ಲಿನ ವಾತಾವರಣ ಎಲ್ಲವೂ ಇನ್ನೂ ರಹಸ್ಯಮಯವಾಗಿಯೇ ಇದೆ. ಬ್ರಹ್ಮಾಂಡದಲ್ಲಿ ಭೂಮಿಯೇ ಒಂದು ಮರಳಿನ ಕಣದಂತಿರುವಾಗ, ಭೂಮಿಯಲ್ಲಿ ಒಂದು ಕಣದಂತಿರುವ ಮಾನವ ಬ್ರಹ್ಮಾಂಡದೆದುರು ಯಾವ ಲೆಕ್ಕ..?? ಎಂಬ ಪ್ರಶ್ನೆ ಎಂತಹ ಅರ್ಥಪೂರ್ಣವಾದದ್ದು ಅನ್ನಿಸುತ್ತೆ. ಭೂಮಿಯನ್ನೇ ಸರಿಯಾಗಿ ತಿಳಿಯಲಾಗದ ಮಾನವ ಬ್ರಹ್ಮಾಂಡದ ಬಗ್ಗೆ ಇನ್ನೆಷ್ಟು ತಿಳಿದಾನು..?? ಆದರೂ ಪ್ರಯತ್ನ ನಿಲ್ಲಿಸಿಲ್ಲ. ಅಂತರಿಕ್ಷದಲ್ಲಿನ ಹಲವಾರು ವೈಶಿಷ್ಟ್ಯವನ್ನು ತಿಳಿದಿದ್ದೇವೆ. ಅಂತಹ ಒಂದು ವೈಶಿಷ್ಟ್ಯವೇ ಮೊನ್ನೆ ಮೊನ್ನೆ ಪತ್ತೆಯಾದ ಒಂದು ಹೊಸ ಗೃಹ. ಅದಕ್ಕೆ "ಕೆಪ್ಲರ್ 452-ಬಿ" ಎಂದು ನಾಮಕರಣವೂ ಮಾಡಲಾಗಿದೆ. ಇದರ ವೈಶಿಷ್ಟ್ಯವೇನೆಂಬುದು ಗೊತ್ತಾ..? ಇದು ಭೂಮಿಯ ತದ್ರೂಪಿ. ಅಂದರೆ ಭೂಮಿಯ ಗುಣಗಳನ್ನೇ ಹೋಲುವ ಆಕಾಶಕಾಯ.

ಭೂಮಿಯನ್ನೇ ಹೋಲುವ ಆಕಾಶಕಾಯವನ್ನು ಕೆಪ್ಲರ್ ದೂರದರ್ಶಕ ಪತ್ತೆಹಚ್ಚಿದೆ ಎಂದು ನಾಸಾ ಗುರುವಾರ ತಿಳಿಸಿದೆ. ಗಾತ್ರದಲ್ಲಿ ಭೂಮಿಗಿಂತ 60% ದೊಡ್ಡದಾಗಿದ್ದು, ಭೂಮಿಗಿಂತ 1.5 ಬಿಲಿಯನ್ ವರ್ಷಗಳಷ್ಟು ಹಿರಿಯ, ಅಂದರೆ ಭೂಮಿ ಹುಟ್ಟಿ 4.5 ಬಿಲಿಯನ್ (ಶತಕೋಟಿ) ವರ್ಷಗಳಾಗಿದ್ದರೆ ಈ ಕೆಪ್ಲರ್ 452-ಬಿ 6 ಬಿಲಿಯನ್ (ಶತಕೋಟಿ) ವರ್ಷಗಳಷ್ಟು ಹಳೆಯದು ಎಂಬ ಮಾಹಿತಿ ನಾಸಾ ನೀಡಿದೆ. ಭೂಮಿಯಲ್ಲಿರುವಂತೆಯೇ ಜೀವರಾಶಿಗಳಿಗೆ ಅನುಕೂಲವಾಗುವಂತಹ ವಾತಾವರಣವನ್ನು ಈ ಗೃಹ ಹೊಂದಿದ್ದು ಇದರ ದೃವ್ಯರಾಶಿ ಭೂಮಿಗಿಂತ 5 ಪಟ್ಟು ಹೆಚ್ಚು ಅಥವಾ ಕಡಿಮೆ ಇರಬಹುದು ಎಂಬ ಅಭಿಪ್ರಾಯವನ್ನು ನಾಸಾ ಹೊರಹಾಕಿದೆ ಮತ್ತು ಇದರ ಬಗ್ಗೆ ಅಧ್ಯಯನವನ್ನೂ ಮುಂದುವರೆಸಲಿದೆ. ಹೀಗಾಗಿ ಈ ಅಧ್ಯಯನ ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದೊ ಕಾದು ನೋಡಬೇಕು.. ಯಾಕೆಂದರೆ ಕೆಪ್ಲರ್ ದೂರದರ್ಶಕ ಕಂಡುಹಿಡಿದ ಈ 452-ಬಿ ಗ್ರಹ ಮೇಲ್ನೋಟಕ್ಕೆ ಮಾತ್ರ ಭೂಮಿಯನ್ನು ಹೋಲುತ್ತಿದೆ.. ಅದು ಎಷ್ಟರ ಮಟ್ಟಿಗೆ ಭೂಮಿಯ ಗುಣಗಳನ್ನು ಹೊಂದಿದೆಯೊ ಯಾರಿಗೆ ಗೊತ್ತು.. ಇದೆಲ್ಲವೂ ಅಧ್ಯಯನದ ಮೂಲಕವೇ ತಿಳಿದು ಬರುವಂತದ್ದು..

ಕೆಪ್ಲರ್ 452-ಬಿ ಇರುವುದು ಸೌರಮಂಡಲದಲ್ಲಿ ಅಲ್ಲ ಸೌರಮಂಡಲದ ಆಚೆ ಇರುವ ಸಿಗ್ನಸ್ ನಕ್ಷತ್ರ ಪುಂಜದಲ್ಲಿ.. ಸರಿ ಸುಮಾರು 1400 ಜ್ಯೋತಿರ್ವರ್ಷದೂರದಲ್ಲಿ ಈ ಗ್ರಹವಿದೆ. ಅಂದರೆ ಕೆಪ್ಲರ್ ದೂರದರ್ಷಕಕ್ಕೆ ಬಂದು ಸೇರಿರುವ ಬೆಳಕು 1400 ವರ್ಷಗಳಷ್ಟು ಹಳೆಯದು.. ಹೀಗಿರುವಾಗ ಅದರ ಬಗ್ಗೆ ಅಧ್ಯಯನ ಮಾಡುವುದು ಅಷ್ಟು ಸುಲಭವೂ ಅಲ್ಲ.. ಆದರೆ ಮೇಲ್ನೋಟಕ್ಕೆ ಭೂಮಿಯನ್ನೇ ಹೋಲುವ ಹಲವು ಗುಣಗಳನ್ನು ಹೊಂದಿದೆ.. ಕೆಪ್ಲರ್ 452-ಬಿ ಭೂಮಿಯಂತೆಯೇ ತನ್ನ ಸೂರ್ಯನಿಂದ ಅತ್ಯಂತ ದೂರದಲ್ಲೂ ಇಲ್ಲ ಹತ್ತಿರದಲ್ಲೂ ಇಲ್ಲ, ನಕ್ಷತ್ರದ ಸುತ್ತ ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಸಮಯ 385 ದಿನಗಳು, ಅಂದರೆ ಭೂಮಿಗಿಂತ ಕೇವಲ 20 ದಿನಗಳು ಹೆಚ್ಚು,. ಹಾಗಾಗಿ ಈ ಗುಣಗಳು ಕೆಪ್ಲರ್ 452-ಬಿ ನಲ್ಲಿ ಜೀವರಾಶಿಗಳ ಇರುವಿಕೆಯ ಅನುಮಾನವನ್ನು ಹುಟ್ಟುಹಾಕಿದೆ. ಅಲ್ಲಿ ಜೀವಿಗಳಿವೆಯಾ..?? ಇದ್ದರೂ ಹೇಗಿವೆ..?? ಆ ಜೀವಿಗಳೂ ವಿಜ್ಞಾನದಲ್ಲಿ ಮುಂದುವರಿದಿವೆಯಾ..?? ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುವುದು ಸಹಜವೇ.. ಇವೆಲ್ಲವೂ ಅಧ್ಯಯನದಿಂದಲೇ ತಿಳಿದು ಬರಬೇಕು..

ಈ ಅಧ್ಯಯನ ಮಾಡುವ ಬಗೆಯಾದರೂ ಹೇಗೆ ಎಂಬುದೂ ಸಹ ಒಂದು ಪ್ರಶ್ನೆಯೇ.. ಯಾಕೆಂದರೆ ಆ ಗ್ರಹವನ್ನು ತಲುಪಬೇಕೆಂದರೆ ಬೆಳಕಿನ ವೇಗದಲ್ಲಿ ಪ್ರಯಾಣ ಮಾಡಿದರೂ 1400 ವರ್ಷಗಳು ಬೇಕು.. ಅಲ್ಲಿಗೆ ಎಷ್ಟೋ ತಲೆಮಾರುಗಳು ದಾಟಿಬಿಡುತ್ತವೆ, ಇದು ಒಂದು ರೀತಿಯಲ್ಲಿ ಕನಸಿನ ಮಾತು. ಹಾಗಾಗಿ ಇದಕ್ಕಾಗಿ ಬೇರೆಯ ಮಾರ್ಗವನ್ನೇ ಅನುಸರಿಸಬೇಕು. ಯಾವ ಮಾರ್ಗವನ್ನು ನಾಸಾ ಅನುಸರಿಸುತ್ತದೆಯೋ ಕಾದು ನೋಡಬೇಕು. ಮೊದಲು ಅಲ್ಲಿನ ವಾತಾವರಣದ ಅಧ್ಯಯನವಾಗಬೇಕು, ಅಲ್ಲಿ ಮೊಡಗಳಿವೆಯಾ..?? ನೀರಿನ ಅಸ್ತಿತ್ವವಿದೆಯಾ..?? ಹಸಿರಿನ ತಂಪಿದೆಯಾ..?? ಆಮ್ಲಜನಕದ ಸುಳಿವಿದೆಯಾ..?? ಹೀಗೆ ಈ ಎಲ್ಲ ಅಧ್ಯಯನಗಳ ನಂತರ ಜೀವಸೃಷ್ಟಿಯ ಅಸ್ಥಿತ್ವದ ಬಗ್ಗೆ ತಿಳಿಯಲು ಸಾಧ್ಯ. ಇದು ನಾಳೆ ನಾಡಿದ್ದರಲ್ಲಿ ಆಗುವ ಮಾತಲ್ಲ. ಇದಕ್ಕೆ ಸಮಯ ಬೇಕು.

ಕೆಪ್ಲರ್ 452-ಬಿ ಈಗ ಒಂದು ಹೊಸ ಕುತೂಹಲಕ್ಕೆ ಕಾರಣವಾಗಿದೆ. ಆ ಕುತೂಹಲ ಭೂಮಿಯಂತೆಯೇ ಇರುವ ಮತ್ತೊಂದು ಗ್ರಹ ಹೇಗಿರಬಹುದು ಎಂಬ ಕುತೂಹಲ. ಭೂಮಿಯಾಚೆಗಿನ ಜೀವಿಗಳು ಹೇಗಿರಬಹುದು ಎಂವ ಕುತೂಹಲ. ಇಂತಹ ಹಲವು ಕುತೂಹಲಗಳನ್ನು ಹುಡುಕಿಕೊಂಡೇ ಹಲವು ಗ್ರಹಗಳ ಅಧ್ಯಯನವನ್ನು ಮಾಡಿದ್ದಾರೆ. ಅದಕ್ಕಾಗಿಯೇ ಕೆಪ್ಲರ್ ದೂರದರ್ಶಕದಂತಹ ಹಲವು ದೂರದರ್ಶಕಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡಲಾಗಿದೆ. ಇವುಗಳ ಸಹಾಯದಿಂದ ಹಲವಾರು ಹೊಸ ನಕ್ಷತ್ರಪುಂಜಗಳನ್ನು, ಗ್ರಹಗಳನ್ನು, ಧೂಮಕೇತುಗಳನ್ನು ಕಂಡುಹಿಡಿಯಲಾಗಿದೆ. ಆದರೆ ಅಂತರಿಕ್ಷದಲ್ಲಿ ಇಂತಹದ್ದು ಎಷ್ಟು ಸಾವಿರವಿದೆಯೋ ಯಾರಿಗೆ ಗೊತ್ತು. ಮನುಷ್ಯನ ಗಮನಕ್ಕೆ ಬಂದಿರುವ ಕೆಲವೇ ಕೆಲವು ಗ್ರಹಗಳಲ್ಲಿ ಕೆಪ್ಲರ್ 452-ಬಿ ಸಹ ಒಂದು. ಇನ್ನು ಮುಂದಿನ ದಿನಗಳಲ್ಲಿ ಇಂತಹ ಹಲವಾರು ಗ್ರಹಗಳ ಪತ್ತೆಯಾಗಬಹುದು. ಅಲ್ಲಿ ಜೀವಿಗಳಿರಬಹುದು, ಅನ್ಯಗ್ರಹ ಜೀವಿಗಳಿದ್ದರೆ ಅವುಗಳ ಜೊತೆ ಸಂಪರ್ಕ ದೊರೆಯಬಹುದು.. ಹೀಗೆ ಮಾನವನ ಬುದ್ಧಿವಂತಿಕೆಯ ಮಿತಿ ಇನ್ನೂ ಮುಗಿದಿಲ್ಲ.. ಹಾಗೆಯೇ ಜಗತ್ತು ಹುದುಗಿಸಿಕೊಂಡಿರುವ ಆಶ್ಚರ್ಯಗಳಿಗೂ ಸಹ ಹಾಗೆಯೇ.. ಅದಕ್ಕೂ ಮಿತಿಯಿಲ್ಲ..

Related Tags: Keplar 452b, NASA, earth, keplar, science, astro physics,
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ