ಕಳೆದುಕೊಂಡದ್ದು ವಿಜ್ಞಾನಲೋಕದ ಬ್ಯೂಟಿಫುಲ್ ಮೈಂಡ್

ಮಂಜುನಾಥ ಹೆಗಡೆ


ವಿಜ್ಞಾನ ಎಂಬುದು ಪ್ರಕೃತಿದತ್ತವಾದದ್ದು, ಮಾನವನದ್ದು ಪ್ರಕೃತಿ ನೀಡಿದ ವಿಜ್ಞಾನವನ್ನು ತಿಳಿದು ಅದನ್ನು ತನಗೆ ಬೇಕಾಗುವಂತೆ ಉಪಯೋಗಿಸಿಕೊಳ್ಳುವದಷ್ಟೇ ಕೆಲಸ. ಜಗತ್ತಿನ ಗರ್ಭದಲ್ಲಿ ಅಡಗಿರೊ ರಹಸ್ಯವನ್ನ, ವೈಶಿಷ್ಟ್ಯತೆಯನ್ನ ತಿಳಿದುಕೊಳ್ಳುವ ಮತ್ತು ಅದನ್ನು ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾನವ ಮಾಡುತ್ತಲೇ ಇದ್ದಾನೆ. ಬೆಂಕಿಯ ಇರುವಿಕೆಯನ್ನು ತಿಳಿದುಕೊಳ್ಳುವದರಿಂದ ಹಿಡಿದು ಅಂತರಿಕ್ಷದಲ್ಲಿ ಅರಮನೆ ಅಂದರೆ ಸ್ಪೇಸ್ ಸ್ಟೇಶನ್ ತನಕ ಗಮನಿಸಿದರೆ ನಮಗೆ ಅನ್ನಿಸುವುದು ಮಾನವ ಕಂಡುಹಿಡಿದ ಎಂದಲ್ಲ, ಮಾನವ ಗಮನಿಸಿ ಅಳವಡಿಸಿಕೊಂಡ ಎನ್ನುವುದೇ ಸರಿ ಅನ್ನಿಸುತ್ತೆ. ಮಾನವ ತನ್ನ ಬುದ್ಧಿಶಕ್ತಿಯಿಂದ ತಿಳಿದುಕೊಂಡು ಅದನ್ನು ತನಗೆ ಬೇಕಾದಂತೆ ಬಳಸಿಕೊಂಡದ್ದರಿಂದಲೇ ನಮ್ಮ ದಿನನಿತ್ಯದ ಜೀವನ ಅನುಕೂಲವಾಗಿದೆ ಹಾಗೂ ಇನ್ನೂ ಅನುಕೂಲವಾಗುತ್ತಿದೆ. ನಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೊ ವಿಜ್ಞಾನದ ಜೊತೆ ಜೋಡಣೆಗೊಂಡಿದೆ ನಮ್ಮ ಬದುಕು. ಈ ವಿಜ್ಞಾನದ ಮಿತಿ ಎಂದಿಗೂ ನಿಲ್ಲಲಾರದು, ಅದರ ಬೌಂಡರಿ ಬೆಳೆಯುತ್ತದೆಯೇ ಹೊರತು ತಟಸ್ಥವಾಗಿ ಸಹ ನಿಲ್ಲಲಾರದು. ಒಂದು ಹಂತದಲ್ಲಿ ಯೋಚನೆ ಮಾಡಿದರೆ ಮಾನವ ತನ್ನ ಪ್ರಯತ್ನದಿಂದ ಪ್ರಕೃತಿಗೇ ಸವಾಲೊಡ್ಡುವ ಹಂತಕ್ಕೆ ಬೆಳೆಯುತ್ತಿದ್ದಾನೆ, ಪರಿಪೂರ್ಣವಾಗಲ್ಲದಿದ್ದರೂ ಒಂದು ಹಂತದಲ್ಲಿ ಇದು ಸತ್ಯ. ಈ ವಿಜ್ಞಾನವನ್ನು ನಾವು ವಿವಿಧ ಪ್ರಾಕಾರಗಳನ್ನಾಗಿ ವಿಂಗಡಿಸಬಹುದು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹೀಗೆ ಹಲವಾರು. ಇವೆಲ್ಲವೂ ಮೇಲ್ನೋಟಕ್ಕೆ ಮಾತ್ರ ಬೇರೆ ಬೇರೆ, ಆದರೆ ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡಿದೆ. ಅದರಲ್ಲೊಂದು ಎಂದರೆ ಗಣೀತಶಾಸ್ತ್ರ.

ಎಣಿಕೆಯಿಂದ ಮೂಲಗೊಂಡು ಬೆಳೆದದ್ದು ಈ ಗಣೀತಶಾಸ್ತ್ರ, ಈಗ ಇದನ್ನು ವಿಜ್ಞಾನದ ಮಹಾರಾಣಿ ಎನ್ನುತ್ತೇವೆ. ಎಲ್ಲ ಕಡೆ ಸಹ ಗಣೀತಶಾಸ್ತ್ರದ ಅವಶ್ಯಕತೆ ಇದೆ. ದಿನನಿತ್ಯದ ಜೀವನದಿಂದ ಹಿಡಿದು ಹೊಸ ಹೊಸ ಆವಿಶ್ಕಾರಕ್ಕೂ ಈ ಗಣೀತಶಾಸ್ತ್ರ ಬೇಕೇ ಬೇಕು ಅದಕ್ಕಾಗಿಯೇ ಇದು ರಾಣಿಯಾಗಿದ್ದಲ್ಲವೇ..? ಇರಲಿ, ಈ ಗಣೀತಶಾಸ್ತ್ರಕ್ಕೆ ಕೊಡುಗೆ ನೀಡಿದವರು ಹಲವಾರು ಜನ ಇದ್ದಾರೆ. ಸಾವಿರಾರು ವರ್ಷಗಳಿಂದ ಕೊಡುಗೆ ನೀಡುತ್ತಲೇ ಇದ್ದಾರೆ. ಅವರಲ್ಲೊಬ್ಬರೆಂದರೆ ಜಾನ್ ನ್ಯಾಶ್. ತೀರ ಇತ್ತೀಚೆಗೆ, ಅಂದರೆ ಮೇ 23 ರಂದು ಒಂದು ಅಪಘಾತದಲ್ಲಿ ಮರಣ ಹೊಂದಿದರು. ಒಬ್ಬ ಗಣೀತಶಾಸ್ತ್ರಜ್ಞನಾಗಿ ಹಲವಾರು ಕೊಡುಗೆಗಳನ್ನು ನೀಡಿ, ಜಗತ್ತಿನ ಅತ್ಯುತ್ತಮ ಸಾಧನೆಗೆ ನೀಡುವ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಲೋಕದ ಒಂದು ರತ್ನ ಎಂದೇ ಹೇಳಬಹುದೇನೊ. ಎಂಭತ್ತಾರರ ಪ್ರಾಯದಲ್ಲಿದ್ದ ನ್ಯಾಶ್, ಮೊನ್ನೆ ಮನೆಯಿಂದ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಮೂಲಕ ತೆರಳುತ್ತಿದ್ದಾಗ ನಡೆದ ಅಪಘಾತದಲ್ಲಿ ಮೃತರಾದರು.

ನ್ಯಾಶ್ ಜನಿಸಿದ್ದು ಜೂನ್ 13, 1928 ರಂದು ಪಶ್ಚಿಮ ವರ್ಜೀನಿಯಾದ ಬ್ಲೂ ಫೀಲ್ಡ್ ಎಂಬಲ್ಲಿ. ತಂದೆ ಇಂಜಿನಿಯರ್ ಮತ್ತು ತಾಯಿ ಮದುವೆಗೆ ಮೊದಲು ಶಿಕ್ಷಕಿಯಾಗಿದ್ದವರು, ನ್ಯಾಶ್ ಗಣೀತದ ಪಾಂಡಿತ್ಯದ ಮೊದಲ ಸುಳಿವು ಸಿಕ್ಕಿದ್ದು ಆತ ನಾಲ್ಕನೇ ತರಗತಿಯಲ್ಲಿದ್ದಾಗ. ಶಾಲೆಯ ಶಿಕ್ಷಕ ನ್ಯಾಶ್ ತಾಯಿಯ ಹತ್ತಿರ ಆಕೆಯ ಮಗ ಗಣೀತದಲ್ಲಿ ತುಂಬ ಹಿಂದೆ ಎಂದು ಹೇಳಿದಾಗ ತಾಯಿ ತುಂಬ ನಕ್ಕಿದ್ದರಂತೆ, ನಂತರ ತಿಳಿದ ವಿಷಯವೆಂದರೆ ನ್ಯಾಶ್ ಗಣೀತದ ಸಮಸ್ಯೆಯನ್ನು ಪರಿಹರಿಸಲು ಅನುಸರಿಸುತ್ತಿದ್ದುದು ತನ್ನದೇ ಆದ ಮಾರ್ಗವನ್ನು. ಹೈಸ್ಕೂಲ್ ನಲ್ಲಿ ಇದ್ದಾಗ ಶಿಕ್ಷಕರು ಅನುಸರಿಸುತ್ತಿದ್ದ ರೀತಿಗಿಂತ ವಿಭಿನ್ನವಾಗಿ ಮತ್ತು ಅತೀ ಚಿಕ್ಕದಾಗಿ ಗಣೀತದ ಸಮಸ್ಯೆಯನ್ನು ಪರಿಹರಿಸುತ್ತಿದ್ದ. ಹೀಗೆ ಈತನ ಮೇಧಾವಿತನ ಹೊರಗೆ ಬಂದಿತ್ತು. ಮುಂದೆ ಗೇಮ್ ಥಿಯರಿ, ಡಿಫರೆನ್ಷಿಯಲ್ ಜಿಯೋಮೆಟ್ರಿ ವಿಷಯಗಳಲ್ಲಿ ಜಾನ್ ಅವರ ಸಿದ್ಧಾಂತಗಳು ಬಹುಜನಪ್ರಿಯವಾದವು. ಹಲವು ವರ್ಷಗಳವರೆಗೆ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಗಣಿತಶಾಸ್ತ್ರ ಸಂಶೋಧಕನಾಗಿ ಕೆಲಸ ನಿರ್ವಹಿಸಿದ ಇವರು ನಂತರ ಅಮೇರಿಕದ ಪ್ರಸಿದ್ಧ ಎಂ ಐ ಟಿ ವಿಶ್ವವಿದ್ಯಾಲಯದಲ್ಲಿ ಕೂಡ ಹಲವು ವರ್ಷಗಳ ಕಾಲ ಬೋಧನೆ ಮಾಡಿದರು.

ಗಣೀತಶಾಸ್ತ್ರದಲ್ಲಿ ಸಾಧನೆ ಮಾಡಿದವರಾದರೂ ನ್ಯಾಶ್ ಗೆ ನೊಬೆಲ್ ಪ್ರಶಸ್ತಿ ಸಿಕ್ಕಿದ್ದು ಅರ್ಥಶಾಸ್ತ್ರ ವಿಭಾಗದಲ್ಲಿ. 1994 ರಲ್ಲಿ 'ಗೇಮ್ ಥಿಯರಿ' ವಿಭಾಗದಲ್ಲಿ ಅವರು ನಡೆಸಿದ ಸಂಶೋಧನೆಗೆ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ಗಣೀತಶಾಸ್ತ್ರಜ್ಞನಾದರೂ ನ್ಯಾಶ್ ಮಂಡಿಸಿದ ಎಷ್ಟೋ ವಿಷಯಗಳು ಅರ್ಥಶಾಸ್ತ್ರದಲ್ಲಿ ಒಂದು ಹೊಸ ತಿರುವುಗಳನ್ನು ನೀಡಿದೆ. ಆದಕಾರಣ ಇಂದಿಗೂ ಸಹ ಅರ್ಥಶಾಸ್ತ್ರಜ್ಞರು ನ್ಯಾಶ್ ಸಿದ್ಧಾಂತವನ್ನು ಹಿಂಬಾಲಿಸುತ್ತಾರೆ. ಮೂಲ ಗಣೀತಶಾಸ್ತ್ರಜ್ಞನಾದರೂ ಅವರ ಸಂಶೋಧನೆಗಳು ಹೆಚ್ಚಾಗಿ ಉಪಯೋಗವಾದದ್ದು ಅರ್ಥಶಾಸ್ತ್ರದಲ್ಲಿ. ಗಣೀತವೇ ಹಾಗೆ, ನೇರವಾಗಿ ಉಪಯೋಗವಾಗುವದು ಕಡಿಮೆ, ಆದರೆ ಎಲ್ಲಕಡೆ ಒಂದು ಭದ್ರ ತಳಪಾಯವಾಗಿ ನಿಲ್ಲುತ್ತೆ. ಎಲ್ಲ ಥಿಯರಿಗಳು ಗಟ್ಟಿಯಾಗಿ ನಿಲ್ಲುವುದು ಗಣೀತದ ಆಧಾರದ ಮೇಲೆ. ತಳಪಾಯ ಹೆಚ್ಚು ಬಲವಾಗಿದ್ದರೆ ಥಿಯರಿ ಬಲವಾಗಿ ನಿಲ್ಲುತ್ತೆ ಇಲ್ಲದೇ ಹೋದಲ್ಲಿ ಥಿಯರಿಗಳು ಬಿದ್ದು ಹೋಗುತ್ತೆ. ಗಣೀತದ ವಿಶೇಷತೆ ಹಾಗೂ ಸೌಂದರ್ಯವೇ ಅದು. ಅದಕ್ಕೇ ಅಲ್ಲವೇ ಗಣೀತ ವಿಕ್ಞಾನದ ರಾಣಿ.

ಕೆಲವು ವರ್ಷಗಳ ಹಿಂದೆ ಅಂದರೆ 2001 ರಲ್ಲಿ ಚಲನಚಿತ್ರವೊಂದು ಬಿಡುಗಡೆಯಾಗಿತ್ತು, ಅದರ ಹೆಸರು " ಎ ಬ್ಯೂಟಿಫುಲ್ ಮೈಂಡ್ ". ನಾಲ್ಕು ಆಸ್ಕರ್ ಪ್ರಶಸ್ತಿ ಪಡೆದಿತ್ತು. ವಿಶೇಷವೆಂದರೆ ಇದು ನ್ಯಾಶ್ ಜೀವನವನ್ನು ಸ್ಪೂರ್ತಿ ಪಡೆದು ನಿರ್ಮಿಸಿದ ಚಿತ್ರ. ಈ ಚಿತ್ರದ ಹೆಸರು ಹೇಳಿದರೆ ನೆನಪಾಗೋದು ನ್ಯಾಶ್ ಹಾಗೂ ನ್ಯಾಶ್ ಅಂದಾಗ ನೆನಪಾಗೋದು ಇದೇ ಚಿತ್ರ. ಯಾಕೆಂದರೆ ಸಾಮಾನ್ಯರಿಗೆ ಅಂದರೆ ಗಣೀತಶಾಸ್ತ್ರಜ್ಞರನ್ನು ಹೊರತುಪಡಿಸಿ ಉಳಿದ ಜನರಿಗೆ ನ್ಯಾಶ್ ಪರಿಚವಾಗೋದು ಬ್ಯೂಟಿಫುಲ್ ಮೈಂಡ್ ಆಗಿ.  ನ್ಯಾಶ್ ಹೆಸರುವಾಸಿಯಾದದ್ದು ಕೇವಲ ತನ್ನ ಮೇಧಾವಿತನ ಮಾತ್ರದಿಂದ ಅಲ್ಲ, ತನ್ನಲ್ಲಿರುವ ವಿಲಕ್ಷಣ ಮನಸ್ಥಿತಿಯಿಂದ. ಹೌದು ಅವರು ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ರೋಗದಿಂದ ಬಳಲುತ್ತಿದ್ದರು. ಈ ಖಾಯಿಲೆಯ ವಿಶೇಷತೆ ಎಂದರೆ ಇದು ನೈಜತೆ ಮತ್ತು ಭ್ರಮೆಗಳ ನಡುವೆ ಒಂದು ರೀತಿಯ ಗೊಂದಲವನ್ನುಂಟುಮಾಡುವ ಖಾಯಿಲೆ. ಈ ಖಾಯಿಲೆಯಿಂದ ಬಳಲುತ್ತಿರುವವರಿಗೆ ಯಾವುದು ನಿಜ ಮತ್ತು ಯಾವುದು ನಿಜವಲ್ಲ ಎಂಬುದರ ನಡುವೆ ಒಂದು ಗೊಂದಲ ಅಂದರೆ ಕನ್ಫ್ಯೂಶನ್ ಏರ್ಪಡುತ್ತೆ. ಇಂಥದ್ದೊಂದು ಖಾಯಿಲೆಯಿಂದ ಬಳಲುತ್ತಿದ್ದವರು ನ್ಯಾಶ್.
ನ್ಯಾಶ್ ರ ಕಿರಿಯ ಸಹೋದರಿ ಒಂದು ಕಡೆ ಹೀಗೆಂದು ಬರೆಯುತ್ತಾರೆ "ಜಾನ್ನಿ ಯಾವಾಗಲೂ ನನ್ನ ಪೋಷಕರಿಗೆ ವಿಭಿನ್ನವಾಗಿದ್ದ. ಆತ ವಿಭಿನ್ನವೆಂಬುದು ಗೊತ್ತಿತ್ತು. ಹಾಗೂ ಅವರಿಗೆ ಆತ ಪ್ರತಿಭಾವಂತನೆಂಬುದು ಗೊತ್ತಿತ್ತು. ಆತ ಯಾವಾಗಲೂ ತನ್ನದೇ ರೀತಿಯಲ್ಲಿ ಕಾರ್ಯಗಳನ್ನು ಮಾಡಲಿಚ್ಛಿಸುತ್ತಿದ್ದ. ನನ್ನ ತಾಯಿಯು ನನಗೆ ಆತನಿಗೋಸ್ಕರ ಸಹಾಯ ಮಾಡಬೇಕೆಂದು, ನನ್ನ ಸ್ನೇಹಿತರೊಂದಿಗೆ ಆತನನ್ನು ಬೆರೆಯುವಂತೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು... ಆದರೆ ನನಗೆ ವಿಲಕ್ಷಣ ಸಹೋದರನೊಬ್ಬನಿದ್ದಾನೆ ಎಂದು ತೋರಿಸಿಕೊಳ್ಳುವುದರಲ್ಲಿ ನನಗೆ ಆಸಕ್ತಿಯಿರಲಿಲ್ಲ ". ಹೀಗೆ ಆತನ ಪ್ರತಿಭೆಯ ಪರಿಚಯವಾಗುತ್ತೆ ಹಾಗೂ ವಿಲಕ್ಷಣ ಮನಸ್ಥಿತಿಯೂ ಅರಿವೂ ಮೂಡುತ್ತೆ. ನ್ಯಾಶ್ ಕೆಂಪು ಟೈ ಧರಿಸಿದವರೆಲ್ಲರೂ ಕಮ್ಯೂನಿಸ್ಟ್ ಎಂದೂ ಅವರು ತನ್ನನ್ನು ವಿರೋಧಿಸುತ್ತರೆ ಎಂದು ಭಾವಿಸಿದ್ದರು ಮತ್ತು ಕೆಂಪು ಟೈ ಧರಿಸಿದ ಪುರುಷರನ್ನು ಹೊಂದಿರುವ ಸಂಸ್ಥೆಯೊಂದು ತನ್ನನ್ನು ಅಟ್ಟಿಸಿಕೊಂಡು ಬರುತ್ತಿದೆ ಎಂದು ಭಾವಿಸಿದ್ದರು. ಆ ಸಂಸ್ಥೆಯವರು ಸರಕಾರವೊಂದನ್ನು ರಚಿಸಲಿದ್ದಾರೆಂದು ನ್ಯಾಶ್ ವಾಷಿಂಗ್ಟನ್, D.C.ಯಲ್ಲಿರುವ ದೂತಾವಾಸ ಕಛೇರಿಗಳಿಗೆ ಪತ್ರ ಬರೆದಿದ್ದರು. ಇದು ಸ್ಕಿಜೋಫ್ರೇನಿಯಾದ ಒಂದು ಲಕ್ಷಣ.
ಹೀಗೆ ಹಲವು ಏರಿಳಿತವನ್ನು ಬದುಕಲ್ಲಿ ಕಂಡ ಒಂದು ಜೀವ ತನ್ನ 86 ನೇ ವರ್ಷದಲ್ಲಿ ಒಂದು ಅಪಘಾತದಲ್ಲಿ ಮರಣ ಹೊಂದಿದ್ದು ಒಂದು ದುರಂತವೇ ಸರಿ. ಈ ಘಟನೆಯಲ್ಲಿ ನ್ಯಾಶ್ ರ ಪತ್ನಿಯೂ ಮರಣವನ್ನಪ್ಪಿದ್ದಾರೆ. ನ್ಯಾಶ್ ರದ್ದು ಹೋರಾಟದ ಬದುಕು. ಹಲವಾರು ಅವಮಾನಗಳನ್ನು ಮೆಟ್ಟಿ ನಿಂತು ಸನ್ಮಾನಿತರಾದವರು. ಸಾಧನೆಗೆ ಮನಸ್ಸಿನ ಸ್ಥಿತಿಗತಿಗಳು ಲೆಕ್ಕಕ್ಕಿಲ್ಲವೆಂದು ತೋರಿಸಿದವರು. ತನ್ನದೇ ಆದ ಕೊಡುಗೆಗಳನ್ನು ನೀಡಿ ನೊಬೆಲ್ ಪ್ರಶಸ್ತಿಗೆ ಏಬಲ್ ಆದ ಈ ಜೀವ ಎಷ್ಟೋ ಜನರಿಗೆ ಮಾದರಿಯಾಗಿ ನಿಂತವರು. ಒಂದು ಬೆಲೆಕಟ್ಟಲಾರದ ಆಸ್ತಿಯಾಗಿ ನೆಲೆನಿಂತ ವಿಜ್ಞಾನಿ ತಮ್ಮ ಪ್ರಯಾಣ ಮುಗಿಸಿದ್ದಾರೆ. ಆದರೆ ತಮ್ಮ ಸಿದ್ಧಾಂತಗಳೊಂದಿಗೆ ತಮ್ಮ ಇರುವಿಕೆಯನ್ನು ತೋರಿಸುತ್ತಾರೆ. ಅವರ ಕೊಡುಗೆಗೆ ಹ್ಯಾಟ್ಸಾಫ್.. ಒಟ್ಟಿನಲ್ಲಿ ನಾವು ಕಳೆದುಕೊಂಡದ್ದು ವಿಜ್ಞಾನಲೋಕದ ಒಂದು ಬ್ಯೂಟಿಫುಲ್ ಮೈಂಡ್ ಹಾಗೂ ಡೈಮೆಂಡ್.

Related Tags: Tags: Beautiful mind, science, mathematics, john nash, nash, game theory, nobel prize, economics, accident,
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ