ಇಂಟರ್ನೆಟ್ ರಕ್ಷಿಸಿ.. ಇದು ನಿಮ್ಮ ಜವಾಬ್ದಾರಿ..

-ಮಂಜುನಾಥ ಹೆಗಡೆ

ಭಾರತೀಯ ದೂರಸಂಪರ್ಕನಿಯಂತ್ರಣಪ್ರಾಧಿಕಾರ (ಟ್ರಾಯ್) ಈಗ ಹೊಸತೊಂದು ಮಸೂದೆ ಹೊರಡಿಸುತ್ತಿದ್ದು ಅದರ ಹೆಸರು "ರೆಗ್ಯುಲೇಟರಿ ಫ್ರೇಮ್ ವರ್ಕ್ ಫಾರ್ ಓವರ್ ದಿ ಟಾಪ್ ಸರ್ವೀಸಸ್" (Regulatory Framework for Over-the-top (OTT) services). ಇದರಲ್ಲಿರುವ ಎಷ್ಟೋ ಅಂಶಗಳು ಹಲವಾರು ಆತಂಕಕ್ಕೆ, ಚರ್ಚೆಗೆ ದೂಡಿದ್ದು ಇಂಟರ್ನೆಟ್ ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ. ನೆಟ್ ನ್ಯೂಟ್ರಾಲಿಟಿ ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಬಾರದೇ ದೂರ ಸಂಪರ್ಕ ಕಂಪೆನಿಗಳ ಲಾಬಿಯಿಂದಾಗಿ ನಮ್ಮೆಲ್ಲರಿಗೆ ಹೊರೆಯಾಗಿದೆ. ಈಮಸೂದೆಮಂಡನೆಯಾಗುವದಿನಾಂಕ 27 ಎಪ್ರಿಲ್ 2015 ಇದನ್ನು ತಡೆಯುವದು ನಮ್ಮೆಲ್ಲರ ಜವಾಬ್ದಾರಿ.. ಈ ವಿರೋಧ ಅಚ್ಛೇ ದಿನ್ ಗಾಗಿ…


ಒಂದಾನೊಂದು ಕಾಲದಲ್ಲಿ ಜಗತ್ತಿನ ಗಾತ್ರ ತುಂಬ ದೊಡ್ಡದಿತ್ತು, ಒಂದು ಎಷ್ಟೋ ಪ್ರದೇಶಗಳು ಅಪರಿಚಿತವಾದವುಗಳು, ಜನವಸತಿ ಇದ್ದರೂ ಸಹ ಜಗತ್ತಿಗೆ ಅದರ ಪರಿಚಯವೇ ಇರದ ಪ್ರದೇಶಗಳು ಎಷ್ಟೋ ಇದ್ದವು, ಹಾಗಾಗಿಯೆ ವೆಸ್ಟ್ ಇಂಡೀಸ್ ನಂಥ ದೇಶವನ್ನು ಕೊಲಂಬಸ್ ಕಂಡುಹಿಡಿದ ಎಂದು ಹೇಳುತ್ತೇವೆ, ಅದು ತಪ್ಪು ಎಂದಲ್ಲ ಆದರೆ ಅದರ ಅಸ್ತಿತ್ವದ ಪರಿಚಯ ಜಗತ್ತಿಗೆ ಇರಲೇ ಇಲ್ಲ. ಆದರೆ ವಿಜ್ಞಾನ ಬೆಳೆದಂತೆ ಜಗತ್ತು ಚಿಕ್ಕದಾಗುತ್ತ ಬಂತು, ಇಂದು ಜಗತ್ತು ತುಂಬ ಚಿಕ್ಕದಾಗಿದೆ. ಯಾವುದೇ ಮೂಲೆಯನ್ನಾದರೂ ಕೇವಲ ಐದು ನಿಮಿಷದೊಳಗಾಗಿ ಸಂಪರ್ಕಿಸಬಹುದು. ಯಾವುದೇ ಮಾಹಿತಿಯನ್ನಾದರೂ ಪಡೆಯಬಹುದು. ಇದು ತಂತ್ರಜ್ಞಾನದ ತಾಕತ್ತು. ಇದಕ್ಕಾಗಿ ನಾವು ಮಾಹಿತಿ ತಂತ್ರಜ್ಞಾನ ಮತ್ತು ದೂರ ಸಂಪರ್ಕ ಮಾಧ್ಯಮಗಳಿಗೆ (telecommunication) ಸಲಾಮ್ ಹೇಳಲೇಬೇಕು. ಇನ್ನು ಇಂಟರ್ನೆಟ್, ಇಂದು ಇಂಟರ್ನೆಟ್ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಹಿಡಿತವನ್ನು ಸಾಧಿಸಿದೆ. ಯಾವ ಕ್ಷೇತ್ರದಲ್ಲಾದರೂ ಇಂಟರ್ನೆಟ್ ನ ಉಪಯೋಗ ಬೇಕು, ಅದರ ಉಪಯೋಗದ ವಿಧಾನ ಬೇರೆ ಇದ್ದರೂ ಉಪಯೋಗ ಇದ್ದೇ ಇದೆ.ಅಂತಹ ಇಂಟರ್ನೆಟ್ ಇಂದು ಅಪಾಯದಲ್ಲಿದೆ..!!

ಹೌದು, ಇಂಟರ್ನೆಟ್ ಅಪಾಯದಲ್ಲಿದೆ. ದುರ್ವಿಧಿ ಎಂದರೆ ಭಾರತಕ್ಕೆ ಇನ್ನು ಕೆಲವೇ ದಿನಗಳಲ್ಲಿ ಅದು ತಗುಲುತ್ತಿದೆ. ನಿಜ, ನೆಟ್ ನ್ಯೂಟ್ರಾಲಿಟಿ (net neutrality) ಭಾರತಕ್ಕೆ ಪರಿಚಯಿಸಬೇಕೆಂಬ ಪ್ರಯತ್ನಗಳಾಗುತ್ತಿದೆ. ಭಾರತೀಯ ದೂರಸಂಪರ್ಕನಿಯಂತ್ರಣಪ್ರಾಧಿಕಾರ (ಟ್ರಾಯ್) ಈಗ ಹೊಸತೊಂದು ಮಸೂದೆ ಹೊರಡಿಸುತ್ತಿದ್ದು ಅದರ ಹೆಸರು "ರೆಗ್ಯುಲೇಟರಿ ಫ್ರೇಮ್ ವರ್ಕ್ ಫಾರ್ ಓವರ್ ದಿ ಟಾಪ್ ಸರ್ವೀಸಸ್" (Regulatory Framework for Over-the-top (OTT) services). ಇದರಲ್ಲಿರುವ ಎಷ್ಟೋ ಅಂಶಗಳು ಹಲವಾರು ಆತಂಕಕ್ಕೆ, ಚರ್ಚೆಗೆ ದೂಡಿದ್ದು ಇಂಟರ್ನೆಟ್ ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ. ಈ ಮಸೂದೆಯಡಿಯಲ್ಲಿ ಬರುವಂತಹುದು ಅಪ್ಲಿಕೇಶನ್ ಗಳು ಅಂದರೆ ಮುಖ್ಯವಾಗಿ ಮೊಬೈಲ್ ಆಪ್ ಗಳು ಮತ್ತು ವಿವಿಧ ಆನ್ ಲೈನ್ ಸೇವೆಗಳು. ಈ ಮಸೂದೆಯಲ್ಲಿ ಮುಖ್ಯವಾದ ಅಂಶಗಳೆಂದರೆ ನೆಟ್ ನ್ಯೂಟ್ರಾಲಿಟಿ ಮತ್ತು ಅದನ್ನು ಅಳವಡಿಸುತ್ತಿರುವ ರೀತಿಯ ಕುರಿತಾಗಿದ್ದು ಜನಸಾಮಾನ್ಯರಿಗೆ ಅನುಕೂಲಕರವಾಗಿರುವದಕ್ಕಿಂತ ಅನಾನುಕೂಲತೆಗೆ ಪೂರಕವಾಗಿದೆಯೆಂಬುದು ವಿಶಾದಕರ.

ಏನಿದು ನೆಟ್ ನ್ಯೂಟ್ರಾಲಿಟಿ..?
ನೆಟ್ ನ್ಯೂಟ್ರಾಲಿಟಿ ಯಲ್ಲಿ ಎಲ್ಲ ವೆಬ್ ಸೈಟ್, ಹಾಗೂ ಅದಕ್ಕೆ ಸಂಬಂಧಿಸಿದ ಸೇವೆಗಳಿಗೆ ಇಂಟರ್ನೆಟ್ ಸಮಾನವಾಗಿ ಹಂಚಿಕೆಯಾಗುವಂತಹುದು. ಉದಾಹರಣೆಗೆ ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ವೆಬ್ ಸೈಟ್ ಗಳನ್ನು ತೆಗೆದುಕೊಂಡಾಗ ಈ ಎರಡೂ ವೆಬ್ ಸೈಟ್ ಗಳು ತೆರೆದುಕೊಳ್ಳುವ ವೇಗ ಮತ್ತು ಅಲ್ಲಿ ಪೂರೈಕೆಯಾಗುವ ಸೇವೆಗಳ ವೇಗ ಬೇರೆ ಬೇರೆ ರೀತಿಯಲ್ಲಿರುತ್ತದೆ. ಆದರೆ ನೆಟ್ ನ್ಯೂಟ್ರಾಲಿಟಿಯಲ್ಲಿ ಈ ರೀತಿ ಇರಲಾರದು ಈ ಎರಡೂ ವೆಬ್ ಸೈಟ್ ಗಳು ಒಂದೇ ರೀತಿಯ ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ. ಕಾರಣ ಪೂರೈಯಾಗುವ ಇಂಟರ್ನೆಟ್ ಸಮಾನವಾಗಿರುತ್ತದೆ, ಮತ್ತು ಬ್ಯಾಂಡ್ ವಿಡ್ತ್ ಸಹ ಸಮಾನವಾಗಿರುತ್ತದೆ. ಉಪಯೋಗಿಸುತ್ತಿರುವ ವ್ಯಕ್ತಿ ಯಾವುದೇ ಕಂಪೆನಿಯ ಮೂಲಕ ಇಂಟರ್ನೆಟ್ ಉಪಯೋಗಿಸುತ್ತಿರಲಿ, ರಿಲಾಯನ್ಸ್, ಏರ್ ಟೆಲ್, ಐಡಿಯಾ ಯಾವುದೇ ಇದ್ದರೂ ಪರವಾಗಿಲ್ಲ ಆದರೆ ವೇಗ ಮಾತ್ರ ಸಮಾನವಾಗಿರುತ್ತದೆ. ಇದು ನೆಟ್ ನ್ಯೂಟ್ರಾಲಿಟಿಯಲ್ಲಿ ಪ್ರಮುಖವಾದದ್ದು.ಇದು ನಿಜವಾಗಿಯೂ ಉತ್ತಮವಾದದ್ದು. ಆದರೆ ಇದರಿಂದಾಗಿ ಉಂಟಾದ ಪರಿಣಾಮಗಳೇ ಈಗಿನ ಚರ್ಚೆಗೆ ಕಾರಣವಾಗಿದೆ..
ನೆಟ್ ನ್ಯೂಟ್ರಾಲಿಟಿ ಸರಿಯಾಗಿ ಕಾರ್ಯಗತಗೊಳ್ಳಲು ಪ್ರಮುಖವಾಗಿ ಬೇಕಾಗಿರುವುದು ಸಂಪರ್ಕ ಮಾಧ್ಯಮಗಳಲ್ಲಿ ಮಾಹಿತಿಯ ಸಂಚಾರ. ಈ ಮಾಹಿತಿಗಳು ಒಂದು ಕಡೆಯಿಂದ ಮತ್ತೊಂದು ಕಡೆ ತಲುಪಬೇಕೆಂದರೆ ಸಂಚಾರ ವ್ಯವಸ್ಥೆ ಸುಂದರವಾಗಿ, ಸರಿಯಾಗಿ ಅಡೆ ತಡೆ, ಆಗದಂತೆ ಇರಬೇಕು. ಈ ರೀತಿ ಅಡೆ ತಡೆ ಇಲ್ಲದೇ ಇದ್ದಾಗ ಸಂಚಾರ ಸುಲಭಗೊಳ್ಳುತ್ತದೆ ಮತ್ತು ವೇಗ ಹೆಚ್ಚಾಗುತ್ತದೆ. ಹಾಗೂ ನೆಟ್ ನ್ಯೂಟ್ರಾಲಿಟಿಯನ್ನು ಅಳವಡಿಸಬಹುದು. ಆಗ ನೀವು ಯಾವುದೇ ನೆಟ್ ವರ್ಕ್ ನಿಂದ ಇಂಟರ್ನೆಟ್ ಅನ್ನು ಉಪಯೋಗ ಮಾಡಿದರೂ ವೇಗದಲ್ಲಿ ವ್ಯತ್ಯಾಸವಿರಲಾರದು. ಮತ್ತು ಈಗ ಇರುವ ವೇಗಕ್ಕಿಂತ ಹೆಚ್ಚಾಗಿರುತ್ತದೆ.ಹಾಗಿದ್ದರೆ ಇದರಿಂದಾಗಿರುವ ತೊಂದರೆ ಆದರೂ ಏನು..??

ನೆಟ್ ನ್ಯೂಟ್ರಾಲಿಟಿ ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸಲು ಹಣದ ಅವಶ್ಯಕತೆ ಇದೆ, ಹಾಗೂ ಇದರಲ್ಲಿ ಖರ್ಚು ಸಹ ಹೆಚ್ಚು, ಆದ ಕಾರಣ ದೂರ ಸಂಪರ್ಕ ಕಂಪೆನಿಗಳ (ರಿಲಾಯನ್ಸ್, ಏರ್ ಟೆಲ್, ಐಡಿಯಾ ಮುಂತಾದವು..)  ಲಾಭದ ಪ್ರಮಾಣ ತಗ್ಗುತ್ತದೆ ಮತ್ತು ಈ ಕಂಪೆನಿಗಳು ಯಾವುದೇ ರೀತಿಯಲ್ಲೂ ಈಗ ನೀಡುತ್ತಿರುವ ಇಂಟರ್ನೆಟ್ ಹಣವನ್ನು ಏರಿಸುವಂತಿಲ್ಲ, ಯಾಕೆಂದರೆ ಗ್ರಾಹಕರನ್ನು ಕಳೆದುಕೊಳ್ಳುವ ಆತಂಕವಿದೆ. ಹೀಗಾಗಿ ಹೊಸತೊಂದು ಲಾಬಿಗೆ ಮುಂದಾಗಿ ಟ್ರಾಯ್ ಮೂಲಕ ಹೊಸ ಮಸೂದೆಯಲ್ಲಿ ಹಲವು ಅಂಶಗಳನ್ನು ಸೇರಿಸಿದೆ. ಅದೇ ರೆಗ್ಯುಲೇಟರಿ ಫ್ರೇಮ್ ವರ್ಕ್ ಫಾರ್ ಓವರ್ ದಿ ಟಾಪ್ ಸರ್ವೀಸಸ್. ಇದರಲ್ಲಿ ಮುಖ್ಯವಾಗಿ ಮೊಬೈಲ್ ಆಪ್ ಗಳು ಮತ್ತು ಸೇವೆಗಳನ್ನು ನೀಡುತ್ತಿರುವ ವೆಬ್ ಸೈಟ್ ಗಳು ಸೇರಿಕೊಳ್ಳುತ್ತವೆ ಮತ್ತು ಈ ವೆಬ್ ಸೈಟ್ ಗಳ ಒಡೆತನದ ಕಂಪೆನಿಗಳು ಮತ್ತು ಆಪ್ ಗಳನ್ನು ಹೊಂದಿರುವ ಕಂಪೆನಿಗಳು ಈ ದೂರಸಂಪರ್ಕ ಕಂಪೆನಿಗಳಿಗೆ ತಮ್ಮ ವೆಬ್ ಸೈಟ್  ಗ್ರಾಹಕರಿಗೆ ತೆರೆದುಕೊಳ್ಳುವ ಸಲುವಾಗಿ ಹಣ ನೀಡಬೇಕು..!! ಅಥವಾ ಗ್ರಾಹಕರೇ ಅಂದರೆ ನೀವೇ ಹಣ ನೀಡಬೇಕು.. !!

ಹೌದು, ಇಂಥದ್ದೊಂದು ಲಾಬಿಯಲ್ಲಿ ದೂರ ಸಂಪರ್ಕ ಕಂಪೆನಿಗಳು ಇದೆ. ಹಾಗೂ ಮಸೂದೆಯಲ್ಲಿ ಈ ಅಂಶಗಳನ್ನು ಸೇರಿಸಿಯೂ ಆಗಿದೆ. ಅದರ ಪ್ರಕಾರ ಸೇವೆಗಳನ್ನು ಒದಗಿಸುವ ವೆಬ್ ಸೈಟ್ ಗಳು (ಇ-ಕಾಮರ್ಸ್ ವೆಬ್ ಸೈಟ್ ಗಳು, ಸೋಶಿಯಲ್ ಮೀಡಿಯಾ ವೆಬ್ ಸೈಟ್ ಗಳು ಮುಂತಾದವು.. ) ಮತ್ತು ಮೊಬೈಲ್ ಆಪ್ ಗಳು (ವಾಟ್ಸ್ ಆಪ್, ವೈಬರ್, ಹೈಕ್ ಮುಂತಾದವುಗಳು..) ನಿಮ್ಮ ಮೊಬೈಲ್ ಗೆ ಬರಬೇಕೆಂದರೆ ಅದಕ್ಕೆ ಹಣ ನೀಡಬೇಕು. ಉದಾಹರಣೆಗೆ ಫೇಸ್ ಬುಕ್ ಅನ್ನು ನಿಮ್ಮ ಮೊಬೈಲ್ ನಲ್ಲಿರುವ ಏರ್ ಟೆಲ್ ನವರು ಪೂರೈಸುತ್ತಿರುವ ಇಂಟರ್ನೆಟ್ ನಿಂದ ಉಪಯೋಗಿಸಲು ಫೇಸ್ ಬುಕ್ ಏರ್ ಟೆಲ್ ಕಂಪೆನಿಗೆ ಪ್ರತಿ ತಿಂಗಳು ಹಣ ನೀಡಬೇಕು ಅಥವಾ ಈ ಹಣವನ್ನು ಗ್ರಾಹಕರಿಂದಲೇ ಪಡೆಯುವಂತೆ ಹೇಳಿದರೆ ನೀವೇ ಫೇಸ್ ಬುಕ್ ಗಾಗಿ ಹಣವನ್ನು ಪ್ರತಿ ತಿಂಗಳು ನೀಡಬೇಕು. ಹಾಗೆಂದು ಇಂಟರ್ನೆಟ್ ದರದಲ್ಲಿ ಯಾವುದೇ ಬದಲಾವಣೆ ಇರಲಾರದು. ಇದು ಈಗ ಇರುವ ಮಸೂದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದು ಸಾಮಾನ್ಯ ಜನರಿಗೆ ತುಂಬ ಕಷ್ಟವಾದದ್ದು. ಯಾಕೆಂದರೆ ಪ್ರತಿಯೊಂದು ಸೇವೆಗಳಿಗೂ ಬೇರೆ ಬೇರೆ ಯಾಗಿ ಹಣ ನೀಡಬೇಕು. ಸಾವಿರಾರು ಸೇವೆಗಳನ್ನು ಉಪಯೋಗಿಸುತ್ತಿರುವ ಗ್ರಾಹಕ ಎಲ್ಲಾ ಸೇವೆಗಳಿಗಾಗಿ ಹಣ ನೀಡುವ ಸ್ಥಿತಿ ಬಂದರೆ ಏನಾಗಬಹುದು ಊಹಿಸಿಕೊಳ್ಳಿ…

ಈ ರೀತಿಯ ಕ್ರಮದಿಂದ ದೊಡ್ಡ ದೊಡ್ಡ ಕಂಪೆನಿಗಳಿಗೆ ಯಾವುದೇ ಹಾನಿಯಾಗಲಾರದು. ಆದರೆ ಸಣ್ಣ ಪುಟ್ಟ ಕಂಪೆನಿಗಳ ಪರಿಸ್ಥಿತಿ..?? ಅಥವಾ ಸೇವೆಗಳನ್ನೊದಗಿಸಲು ಈಗಷ್ಟೇ ಅಂಬೆಗಾಲಿಡುತ್ತರಿವ ಹೊಸ ಕಂಪೆನಿಗಳು ಏನು ಮಾಡಬೇಕು..?? ಕಂಪೆನಿಗಳಿಗೆ ಹಣ ನೀಡುವ ಶಕ್ತಿ ಇರಲಾರದು ಮತ್ತು ಗ್ರಾಹಕ ಹಣ ನೀಡಿ ಸೇವೆ ಪಡೆಯಲಾರ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇವುಗಳಿವೆ. ಈ ಕಾರಣದಿಂದಾಗಿ ಇದನ್ನು ವಿರೋಧಿಸುತ್ತಿರುವ ಗುಂಪುಗಳಲ್ಲಿ ಈ ಕಂಪೆನಿಗಳು ಸಹ ಸೇರಿವೆ. ಈ ಮಸೂದೆಯಿಂದ ಹೊಸತನಕ್ಕೆ ಅವಕಾಶವೇ ಇಲ್ಲದಂತಾಗಿಬಿಡುತ್ತದೆ. ಹಾಗಾಗಿ ಈ ದೃಷ್ಟಿಯಿಂದ ನೋಡಿದರೆ ಈ ಮಸೂದೆ ಜಾರಿಯಾಗಂತೆ ನೋಡಿಕೊಳ್ಳುವುದು ಬಹುಮುಖ್ಯವಾದ್ದು.

ಇನ್ನು ನಮ್ಮ ನಿಮ್ಮೆಲ್ಲರ ದೃಷ್ಟಿಯಿಂದ ನೋಡಿದಾಗ, ಇಂದು ನಾವು ಎಷ್ಟೋ ಸೇವೆಗಳಿಗೆ ಇಂಟರ್ನೆಟ್ ಅವಲಂಬಿಸಿದ್ದೇವೆ, ಮೊಬೈಲ್ ರೀಚಾರ್ಜ್, ಟಿಕೆಟ್ ಬುಕ್ಕಿಂಗ್, ಬ್ಯಾಂಕ್ ಕೆಲಸ ಹೀಗೆ ಹತ್ತು ಹಲವು. ಇದರ ಜೊತೆ ಇ-ಮೇಲ್, ಸೋಶಿಯಲ್ ಮೀಡಿಯಾ, ಮುಂತಾದವುಗಳು. ಹೀಗೆ ಇಂಟರ್ನೆಟ್ ನಮ್ಮ ಜೀವನದಲ್ಲಿ ಹಲವು ಕಾರ್ಯವನ್ನು ಸುಲಭಗೊಳಿಸಿದೆ ಆ ಕಾರಣದಿಂದಾಗಿ ನಮಗೆ ಇಂಟರ್ನೆಟ್ ಕೆಲವೊಮ್ಮೆ ಅನಿವಾರ್ಯ. ಫೋನ್ ಮಾಡಲು ಕರೆನ್ಸಿ ಇರದವನೂ 1gb ಇಂಟರ್ನೆಟ್ ಹೊಂದಿರುತ್ತಾನೆ.  ಆದರೆ ಈಗ ಅದೇ ಇಂಟರ್ನೆಟ್ ಬೇಕಾದರೆ ಹಣ ನೀಡುವುದರ ಜೊತೆಗೆ ಅದನ್ನು ಸರಿಯಾಗಿ ಉಪಯೋಗವಾಗಲು ಮತ್ತೆ ಹಣ ನೀಡಬೇಕೆಂದರೆ ಇದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.ಟ್ರಾಯ್ ನ ಈ ಮಸೂದೆಯನ್ನು ವಿರೋಧಿಸುವುದು ಅನಿವಾರ್ಯ. ದೂರಸಂಪರ್ಕ ಕಂಪೆನಿಗಳ ಲಾಭದಲ್ಲಿ ಏರಿಳಿತಗಳಾಗಬಹುದು ಆದರೆ ಅದಕ್ಕೆ ಇದು ಸರಿಯಾದ ದಾರಿ ಅಲ್ಲ ಮತ್ತು ಟ್ರಾಯ್ ಒದಗಿಸಿದ ವಾರ್ಷಿಕ ಆದಾಯ ಪತ್ರದ ಪ್ರಕಾರ ವರ್ಷದಿಂದ ವರ್ಷಕ್ಕೆ ಹೊಸದಾಗಿ ಇಂಟರ್ನೆಟ್ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಕಾರಣ ದೂರ ಸಂಪರ್ಕ ಕಂಪೆನಿಗಳು ನಷ್ಟಕ್ಕೆ ಬೀಳಲಾರದು.
ಇ-ಮೇಲ್ ಮಾಡಿ.. ಇದು ನಿಮ್ಮ ಜವಾಬ್ದಾರಿ…

ಈ ಮಸೂದೆಯನ್ನು ವಿರೋಧಿಸಿ ನೀವು ಮೇಲ್ ಮಾಡಬಹುದು. ಅದಕ್ಕಾಗಿ  http://www.savetheinternet.in/  ವೆಬ್ ಸೈಟ್ ಗೆ ಭೇಟಿಕೊಡಿ, ಹಾಗೂ Respond to TRAI ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ, ನಂತರ ಅಲ್ಲಿರುವ ಎಲ್ಲ ವಿವರಗಳನ್ನು ಕಾಪಿ ಮಾಡಿ, ತಕ್ಷಣ ನಿಮಗೆ ಜಿ-ಮೇಲ್, ಯಾಹೂ ಮತ್ತು ಉಳಿದವು ಎಂಬ ಮೂರು ಆಯ್ಕೆಗಳು ಸಿಗುತ್ತವೆ. ಅದರಲ್ಲಿ ನಿಮ್ಮ ಇ-ಮೇಲ್ ಖಾತೆ ಯಾವುದಲ್ಲಿದೆಯೊ ಅದನ್ನು ಆಯ್ಕೆ ಮಾಡಿ, ನಿಮ್ಮ ಇ-ಮೇಲ್ ನ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ನೀಡಿ ಇ-ಮೇಲ್ ಖಾತೆ ತೆರೆಯದಾಗ ಅಲ್ಲಿ ಟ್ರಾಯ್ ನ ಇ-ಮೇಲ್ ಖಾತೆಗೆ ಕಳುಹಿಸಲು ಅನುಕೂಲವಾಗುವಂತೆ ಒಂದು ಇ-ಮೇಲ್ ತಯಾರಾಗಿರುತ್ತದೆ ಅಲ್ಲಿ ನೀವು ಕಾಪಿ ಮಾಡಿದ್ದನ್ನು ಪೇಸ್ಟ್ ಮಾಡಿಬದಲಾವಣೆ ಏನಾದರೂ ಇದ್ದಲ್ಲಿ ಬದಲಾಯಿಸಿ. ಮತ್ತು ಇ-ಮೇಲ್ ಕಳುಹಿಸಿ. ಇದು ಪ್ರತಿಯೊಬ್ಬನ ಕರ್ತವ್ಯವೆಂಬಂತೆ ಮಾಡಿ, ನೆನಪಿರಲಿ ಇದನ್ನು ಕಳುಹಿಲು ಕೊನೆಯ ದಿನಾಂಕ 24 ಎಪ್ರಿಲ್ 2015.

ಕೊನೇಯ ಮಾತು
ನೆಟ್ ನ್ಯೂಟ್ರಾಲಿಟಿ ಜಾರಿಯಾಗಬೇಕು. ಇದಕ್ಕೆ ವಿರೋಧ ಖಂಡಿತ ಇಲ್ಲ,ನೆಟ್ ನ್ಯೂಟ್ರಾಲಿಟಿ ಸರಿಯಾದ ಮಾರ್ಗದಲ್ಲಿ ಕಾರ್ಯರೂಪಕ್ಕೆ ಬರಲಿ.  ಆದರೆ ಈ ಮಸೂದೆಯಿಂದ ಸಾಮಾನ್ಯ ಜನರಿಗೆ ಒಳಿತಾಗಲಾರದಲ್ಲವೇ..? ಕೇಂದ್ರ ಸರ್ಕಾರ ತುರ್ತಾಗಿ ನಿರ್ಧಾರಕ್ಕೆ ಬರಲೇಬೇಕು.  ಪ್ರಧಾನ ಮಂತ್ರಿ ನರೇಂದ್ರ ಮೋದಿಯರು ಈ ಮಸೂದೆ ಜಾರಿಗೆ ಬರಲು ಅವಕಾಶ ನೀಡಿದರೆ ಅವರ ಡಿಜಿಟಲ್ ಇಂಡಿಯಾ ಕನಸು ಕನಸಾಗೇ ಉಳಿದೀತು.ಪ್ರತಿಯೊಬ್ಬ ರೈತ ಸ್ಮಾರ್ಟ್ ಫೋನ್ ತೆಗೆದುಕೊಳ್ಳಬಲ್ಲ ಆದರೆ ಅದರಿಂದ ಕೃಷಿ ಮಾಡುವಾಗ ಒಂದಷ್ಟು ಹಾಡನ್ನು ಕೇಳಬಹುದೇ ಹೊರತು ಯಾವುದೇ ಪ್ರಯೋಜನವಾಗಲಾರದು, ಯಾವುದೇ ಮಾಹಿತಿ ಆತ ಸ್ಮಾರ್ಟ್ ಫೋನ್ ನಿಂದ ಪಡೆಯಲಾರ. ಸ್ಮಾರ್ಟ್ ಸಿಟಿ ಬಾಯಲ್ಲಿನ ಭಜನೆಯಾಗೇ ಉಳಿಯುವ ಸಾಧ್ಯತೆಗಳಿದೆ. ಆದ್ದರಿಂದ ನರೇಂದ್ರ ಮೋದಿಯವರು ಜಾರಿಗೆ ಬರುವಂತೆ ನೋಡಿಕೊಳ್ಳಲೇಬೇಕು ಇಲ್ಲದೇ ಇದ್ದರೆ ವಿರೋಧಿಸುವದು ಜನಸಾಮಾನ್ಯನ ಜವಾಬ್ದಾರಿ… ಅಚ್ಚೇ ದಿನ್ ಗಾಗಿ..
ಇ-ಮೇಲ್ ಮಾಡಲು ಮರೆಯದಿರಿ..  ನೆನಪಿರಲಿ ಇದನ್ನು ಕಳುಹಿಲು ಕೊನೆಯ ದಿನಾಂಕ 24 ಎಪ್ರಿಲ್ 2015. ಈ ಮಸೂದೆ ಮಂಡನೆಯಾಗುವ ದಿನಾಂಕ 27 ಎಪ್ರಿಲ್ 2015

 

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ