ಸೃಷ್ಟಿಯ ಮೂಲವನ್ನರಸುತ್ತ ಹೀಗೊಂದು ಪ್ರಯೋಗ...

ವಿನೋದ ಹೆಗಡೆ.


ದುರು ಬದುರು ನಿಂತಿರುವ ಟಗರುಗಳು ಅವುಗಳನ್ನು ಹಿಡಿದು ಬೆನ್ನು ಸವರುತ್ತಿರುವ ಯಜಮಾನ, ಯಾವಾಗ ತನ್ನನ್ನು ಯಜಮಾನ ಬಿಡುತ್ತಾನೋ ಮರುಕ್ಷಣದಲ್ಲಿ ಎದುರಲ್ಲಿ ನಿಂತಿರುವ ಟಗರನ್ನು ಹೊಸಕಿ ಹಾಕಿ ಬಿಡುತ್ತೇನೆನ್ನುವ ದೃಷ್ಟಿಯಲ್ಲಿ ದುರುಗುಟ್ಟಿ ನೋಡುತ್ತಿರುವ ಟಗರುಗಳು,ಇವುಗಳಲ್ಲಿ ಯಾರು ಗೆಲ್ಲುತ್ತಾರೆಂದು ಬಾಜಿ ಕಟ್ಟಿಸಿಕೊಳ್ಳುತ್ತಿರುವ ಮಧ್ಯಸ್ಥ. ಬಿರು ಬಿಸಿಲನ್ನೂ ಲೆಕ್ಕಿಸದೇ ಬಾಜಿ ಕಟ್ಟುತ್ತಿರುವ ಜನರು. ಇನ್ನು ಅವುಗಳನ್ನು ಬಿಡುತ್ತಿದ್ದ ಹಾಗೆ ಓಡಿಬಂದು ಡಿಕ್ಕಿ ಹೊಡೆದುಕೊಳ್ಳಲು ಪ್ರಾರಂಭಿಸಿದವು, ಯಾವುದಾದರೊಂದು ಟಗರು ನೆಲಕಚ್ಚುವ ತನಕ, ಡಿಕ್ಕಿ ಹೊಡೆದುಕೊಳ್ಳುತ್ತಲೇ ಇರುತ್ತವೆ.ಇದು "ಮೈಲಾರಿ" ಚಿತ್ರದ ಒಂದು ಝಲಕ್. ಇಂತಹುದೇ ಒಂದು ಡಿಕ್ಕಿ ಜಿನೇವಾದ CERN ಎಂಬ ಸಂಶೋದನಾಲಯದಲ್ಲಿ ಈ ವಾರ ಆರಂಭವಾಗಿದೆ.

ಎರಡನೇ ಮಹಾಯುದ್ಧದ ನಂತರ ಯುರೋಪಿನ ದೇಶಗಳು ಒಂದು ಕಡೆ ಜತೆ ಸೇರಿ ವಿಜ್ಞಾನವು ಜಗತ್ತಿನ ಜನತೆಯ ಅಭಿವೃದ್ಧಿಗೆ ಪೂರಕವಾಗಿರಬೇಕೇ ಹೊರತು ನಿರ್ನಾಮಕ್ಕಲ್ಲ ಎಂಬ ಘೋಷ ವಾಕ್ಯದಡಿ ಜಗತ್ತಿನ ಅತೀ ದೊಡ್ಡ ಸಂಶೋದನಾಲಯಕ್ಕೆ ಅಡಿಗಲ್ಲನ್ನಿಟ್ಟರು. ಇದು CERN ಎಂಬ ಹೆಸರಿನೊಂದಿಗೆ 'ಜಿನೇವಾ' ದಲ್ಲಿ 1963 ರಲ್ಲಿ ಸ್ಥಾಪನೆಗೊಂಡು ಹಲವಾರು ಸಂಶೋಧನೆಗಳನ್ನು ನಡೆಸಿಕೊಂಡು ಬಂದಿದೆ. ಇಲ್ಲಿ ನಡೆದ ಬಹುತೇಕ ಸಂಶೋಧನೆಗಳು ಈ ಸೃಷ್ಟಿಯ ಮೂಲದ ಅರಿವನ್ನು ತಿಳಿಯುವ ಕೆಲಸವನ್ನು ಮಾಡಿದೆ. ಜಗತ್ತು ಯಾವ ಮೂಲಕಣದಿದಂದ ಮಾಡಲ್ಪಟ್ಟಿದೆ ಎಂದು ತಿಳಿಯುವದಕ್ಕಾಗಿ  ಹಲವಾರು ಸಂಶೋಧನೆಗಳನ್ನು ಕೈಗೊಂಡು ಯಶಕಂಡಿದ್ದಾರೆ. ನಮಗೆ ತಿಳಿದಿರುವಂತೆ ಪ್ರತಿಯೊಂದು ವಸ್ತುವೂ ಅಣುವಿನಿಂದ ಮಾಡಲ್ಪಟ್ಟಿದೆ. ಈ ಅಣುವಿನ ಮೂಲ ಪರಮಾಣು. ಈ ಪರಮಾಣು ವಿನ ಸೃಷ್ಟಿ ಆಗಿರುವುದು, ಪ್ರೋಟೋನ್, ನ್ಯೂಟ್ರಾನ್ ಹಾಗೂ ಇಲೆಕ್ಟ್ರಾನ್ ನಿಂದ. ಅದರಲ್ಲಿ ಪ್ರೋಟೋನ್ ಅನ್ನು ಸೀಳಿದರೆ ಮತ್ತೆ ಮೂರು ಕಣ. ಆ ಮೂರು ಕಣವನ್ನು ಸೀಳಿದರೆ ಮತ್ತೊಂದಿಷ್ಟು ಕಣ. ಹಾಗಾದರೆ ಸೀಳಲಿಕ್ಕೆ ಆಗದೇ ಹೋದ ಮೂಲ ಕಣ ಯಾವುದೆಂದು ಹುಡುಕುತ್ತ ಹೋದಾಗ ಸಿಕ್ಕಿದ್ದು ದೇವಕಣ. ಇದು CERN ನ ಒಂದು ಕೊಡುಗೆ.

ಈ ಕಣಗಳನ್ನು ಸೀಳುವುದು ಅಷ್ಟು ಸುಲಭದ ಕೆಲಸವಲ್ಲ. ಕಣ್ಣಿಗೆ ಕಾಣದ ಇವುಗಳನ್ನು ಕೈ ನಿಂದಾಗಲಿ ಅಥವಾ ಯಾವುದಾದರೂ ಯಂತ್ರದಿಂದಾಗಲೀ ಸೀಳುವುದು ಹಾಗಿರಲಿ ಮುಟ್ಟಲೂ ಸಾಧ್ಯವಿಲ್ಲ. ಇದಕ್ಕಾಗಿ ವಿಜ್ಞಾನಿಗಳು ಕಂಡುಕೊಂಡ ಉಪಾಯವೆಂದರೆ ಈ ಪ್ರೋಟಾನ್ ಗಳನ್ನು ಡಿಕ್ಕಿ ಹೊಡೆಸುವುದು. ಡಿಕ್ಕಿಯ ರಭಸಕ್ಕೆ ಅವು ಚೂರು ಚೂರಾಗುತ್ತವೆ. ಈ ಚೂರಿನಲ್ಲಿ ಹೊಸ ಕಣವೇನಾದರೂ ಹೊರಬಂದಿದೆಯೇ ಎಂದು ಗಮನಿಸಬೇಕು. ಡಿಕ್ಕಿಯ ರಭಸ ಜೋರಾಗಿರಲೆಂದು ಸುಮಾರು 27km ವೃತ್ತಾಕಾರದ ಟ್ರ್ಯಾಕ್ ಅನ್ನು ಸ್ವಿಡ್ಜರ್ ಲ್ಯಾಂಡ್ ಮತ್ತು ಫ್ರಾನ್ಸ್ ದೇಶದ ಗಡಿಭಾಗದಲ್ಲಿ 10ಮೀ ಆಳದಲ್ಲಿ ಸುರಂಗ ಕೊರೆದು ನಿರ್ಮಿಸಲಾಗಿದೆ. ಪ್ರೋಟಾನ್ ಅನ್ನು ಡಿಕ್ಕಿ ಹೊಡೆಸುವುದಕ್ಕಿಂತ ಮೊದಲು ಸುಮಾರು 10 ಗಂಟೆಗಳ ಕಾಲ ಈ ಟ್ರ್ಯಾಕ್ ನಲ್ಲಿ ಓಡಿಸುತ್ತಾರೆ, ಆಗ ಅವು ಕ್ರಮಿಸುವ ದೂರ 60 ಬಿಲಿಯನ್ ಕಿ.ಮೀ. ಹಾಗೂ ವೇಗ ಬೆಳಕಿನ ವೇಗದ 99% ನಷ್ಟು ಸಮನಾಗಿರುತ್ತದೆ.
ಪ್ರೋಟಾನ್ ವೇಗ ಬೆಳಕಿನ ವೇಗದ 99% ನಷ್ಟು ಸಮನಾಗಿರುವದರಿಂದ 1 ಸೆಕೆಂಡಿಗೆ 800 ಕಣಗಳು ಡಿಕ್ಕಿ ಡೆದುಕೊಳ್ಳುತ್ತವೆ. ಇದನ್ನು ಸೆರೆಹಿಡಿಯಲು ಜಗತ್ತಿನ ಅತೀ ದೊದ್ದ ಕ್ಯಾಮೆರಾವನ್ನು  ನಿರ್ಮಿಸಿ ಬಳಸಿಕೊಳ್ಳಲಾಗಿದೆ. ಇದು ಸೆಕೆಂಡಿಗೆ 14 ಮಿಲಿಯನ್ ಫೋಟೊ ತೆಗೆಯುವಷ್ಟು ಸೂಕ್ಷ್ಮವಾಗಿದೆ ಹಾಗೂ ಸೆಕೆಂಡಿಗೆ 200 ಗಿಗಾ ಬೈಟ್ ನಷ್ಟು ಮಾಹಿತಿ ಸಂಗ್ರಹಿಸುತ್ತದೆ. ಈ ಮಾಹಿತಿಗಳನ್ನು ಸಂಶೋದನೆಯಲ್ಲಿ ತೊಡಗಿರುವ 7000 ವಿಜ್ಞಾನಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಕ್ಕಿಯಲ್ಲಿ ಕಲ್ಲು ಹುಡುಕಿದ ಹಾಗೆ ಹೊಸಕಣವೇನಾದರೂ ಗೋಚರಿಸಿದೆಯಾ ಎಂದು ಈ ಮಾಹಿತಿಗಳ ಸಹಾಯದಿಂದ ಅಧ್ಯಯನ ಮಾಡಲಾಗುತ್ತದೆ.  ಅದಕ್ಕೆ ಈ ವಾರ ಮೊದಲ ಹೆಜ್ಜೆ ಇಡಲಾಗುತ್ತಿದೆ. ಟ್ರ್ಯಾಕ್ ನ ಒಳಗೆ ಪ್ರೋಟಾನ್ ಅನ್ನು ತುಂಬಿಸುವ ಕೆಲಸವನ್ನು ಇಂದಿನಿಂದ ಪ್ರಾರಂಭಿಸಲಾಗುತ್ತಿದೆ.

ಈ ಸಂಶೋಧನಾಲಯವು ಜಗತ್ತಿಗೆ ಹಲವಾರು ಕೊಡುಗೆಗಳನ್ನು ನೀಡಿದೆ, ಪ್ರಥಮ ವೆಬ್ ಸೈಟ್ ಅನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ. ಕ್ಯಾನ್ಸರ್ ಚಿಕಿತ್ಸೆ ಗೆ ಪ್ರೋಟಾನ್ ಥೆರಪಿ ಯಂತ್ರದ ಕೊಡುಗೆಯೂ ಇದರದ್ದೇ. ಈ ವರ್ಷ ಭಾರತವೂ 9 ಮಿಲಿಯನ್ ಹಣ ನೀಡಿ ಈ ಸಂಶೋದನಾಲಯದ ಸದಸ್ಯತ್ವ ಪಡೆದುಕೊಂಡಿದೆ, ಇದರಿಂದಾಗಿ ಈಗ ನಡೆಯುತ್ತಿರುವ ಸಂಶೋಧನಾ ಮಾಹಿತಿಗಳು ಭಾರತದ ವಿಜ್ಞಾನಿಗಳಿಗೂ ದಕ್ಕುವಂತಾಗಿದೆ. ಈ ಸಂಶೋಧನೆಯ ಮೂಲ ಉದ್ದೇಶ ಸೃಷ್ಟಿಯ ಹುಟ್ಟನ್ನು ಅರಿಯುವುದು ಮತ್ತು ತಿಳಿಸುವುದು. ಇಲ್ಲಿಯವರೆಗೆ ಕಗ್ಗಂಟಾಗಿ ಉಳಿದಿರುವ ಬಿಗ್ ಬ್ಯಾಂಗ್, ಡಾರ್ಕ್ ಮ್ಯಾಟರ್, ಡಾರ್ಕ್ ಎನರ್ಜಿ ಮೊದಲಾದ ಪ್ರಶ್ನೆಗಳಿಗೆ ಈ ಸಂಶೋದನೆಯಿಂದ ಉತ್ತರ ಸಿಗುತ್ತದೆಯೇ?? ಇದಕ್ಕೆ ಕಾಲವೇ ಉತ್ತರಿಸಬೇಕು. ಅದೇನೇ ಇರಲಿ ಇವರಿಗೊಂದು all the best.

Related Tags: CERN Geneva
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ