ಕಾಬಾ ನಿಂದನೆ, ಸೌದಿ ರಾಜಕುಮಾರನ ವಿರುದ್ಧ ಅವಹೇಳನಕಾರಿ ಪೋಸ್ಟ್. ಕಷ್ಟದಲ್ಲಿ ಕೋಟೇಶ್ವರದ ಯುವಕ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳವಾದ ಮೆಕ್ಕಾದ ಕಾಬಾ ಕುರಿತು ಅಸಂಬದ್ದವಾಗಿ ಪೋಸ್ಟ್ ಮಾಡಿ ಬಳಿಕ ಸೌದಿ ರಾಜಕುಮಾರನ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕುಂದಾಪುರ ಸಮೀಪದ ಕೊಟೇಶ್ವರದ ಯುವಕನನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ.  ಬಂಧಿತ ಯುವಕ ಹರೀಶ್ ಬಂಗೇರ ಎಂಬವನಾಗಿದ್ದು ಈತ ಸೌದಿಯ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ.

ಹರೀಶ್ ಬಂಗೇರ ಮಾಡಿದ ನಿಂದನಾತ್ಮಕ ಮತ್ತು ವಿವಾದಾತ್ಮಕ ಪೋಸ್ಟ್‌ಗಳು ಸೌದಿಯಾದ್ಯಂತ ಭಾರಿ ವೈರಲ್ ಆಗಿದ್ದು ಆತನನ್ನು ಕಂಪೆನಿ ಕೆಲಸದಿಂದ ತಕ್ಷಣವೇ ವಜಾಗೊಳಿಸಿರುವುದಾಗಿ ಪ್ರಕಟಣೆ ನೀಡಿದೆ. ಆತನ ಬಂಧನಕ್ಕೂ ಕಂಪೆನಿಯು ಸಹಕರಿಸಿದೆ.

ಹರೀಶ್ ಬಂಗೇರ ಮಾಡಿರುವ ಪೋಸ್ಟ್‌ಗಳು ಸಾವಿರಾರು ಬಾರಿ ಶೇರ್ ಆಗಿದ್ದವು. ಆತನ ಪೋಸ್ಟ್‌‌ಗೆ ಬಾರಿ ಟೀಕೆಗಳು ವ್ಯಕ್ತವಾಗಿ ಸೌದಿಯ ಅಧಿಕಾರಿಗಳ ತನಕ ಈ ಪೋಸ್ಟ್‌ಗಳು ತಲುಪಿವೆ. ಸ್ವತಃ ಸೌದಿಯ ರಾಜಕುಮಾರನ ಮೊಹಮ್ಮದ್ ಬಿನ್ ಸಲ್ಮಾನ್ ಈ ಕುರಿತು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

ಹರೀಶ್ ಬಂಗೇರ ಮಾಡಿರುವ ಪೋಸ್ಟ್‌ಗಳ ಕುರಿತು ಎರಡು ರೀತಿಯ ಸುದ್ದಿಗಳು ಹರಡಿದ್ದು ಈ ಕುರಿತು ಇನ್ನಷ್ಟೆ ಸ್ಪಷ್ಟನೆ ಸಿಗಬೇಕಿದೆ. ಹರೀಶ್ ಬಂಗೇರ ಕಾಬಾ ಮತ್ತು ಸೌದಿ ರಾಜಕುಮಾರನ ಕುರಿತು ಮಾಡಿದ್ದ ಪೋಸ್ಟ್‌ಗಳು ಭಾರಿ ವೈರಲ್ ಆಗಿ ವಿವಾದವೆದ್ದ ಬಳಿಕ ಹರೀಶ್ ಬಂಗೇರ ಆ ಪೋಸ್ಟ್‌ಗಳನ್ನು ಅಳಿಸಿದ್ದರಂತೆ. ಅವರು ಆ ಪೋಸ್ಟ್‌ಗಳ ಕುರಿತು ಮುಸ್ಲಿಮರ ಕ್ಷಮೆ ಕೇಳಿದ ವಿಡಿಯೊ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಆದರೆ ಆ ಬಳಿಕ ಹರೀಶ್ ಬಂಗೇರ ಅವರ ಹೆಸರಿನಲ್ಲೆ ಇನ್ನೊಂದು ನಕಲಿ ಖಾತೆ ರಚಿಸಿ ಅವರು ಈ ಹಿಂದೆ ಮಾಡಿದ್ದ ಅದೇ ಪೋಸ್ಟ್‌ಗಳನ್ನು ಮತ್ತೆ ಆ ಖಾತೆಯಲ್ಲಿ ಪೋಸ್ಟ್ ಮಾಡಿ ಈ ವಿವಾದ ಇನ್ನೂ ಜೀವಂತವಾಗಿರುವಂತೆ ಮಾಡಲಾಗಿದೆ ಎಂಬ ಕುರಿತೂ ಸುದ್ದಿ ಹರಡಿದೆ. ಈಗ ಚಾಲ್ತಿಯಲ್ಲಿರುವ ಹರೀಶ್ ಅವರ ಖಾತೆ ಅಸಲಿಯೊ ನಕಲಿಯೊ ಎಂಬ ಕುರಿತು ಸೌದಿ ಸರ್ಕಾರ ತನಿಖೆ ನಡೆಸಿದರೆ ವಾಸ್ತವ ತಿಳಿಯಲಿದೆ. ಆದರೆ ಈ ಎರಡೂ ಪೋಸ್ಟ್‌ಗಳನ್ನು ಹರೀಶ್ ಬಂಗೇರ ತಮ್ಮ ಸ್ವಂತ ಫೇಸ್‌ಬುಕ್ ಖಾತೆಯಿಂದ ಮಾಡಿರುವುದು ನಿಜವಾಗಿರುವುದರಿಂದ ಆ ಪೋಸ್ಟ್‌ಗಳ ಆಧಾರದಲ್ಲಿಯೇ ಸೌದಿ ಸರ್ಕಾರ ಹರೀಶ್ ಬಂಗೇರ ಅವರ ವಿರುದ್ಧ ಕಠಿಣ ಕ್ರಮ ಕೈಫ಼ೊಳ್ಳುವ ಸಾಧ್ಯತೆ ಇದೆ.

ಈ ನಡುವೆ ಫೇಸ್‌ಬುಕ್‌ನಲ್ಲಿ ಹರೀಶ್ ಬಂಗೇರ ತಾನು ಮಾಡಿದ ಪ್ರಮಾದಕ್ಕೆ ಕ್ಷಮೆಯನ್ನೂ ಕೋರಿರುವ ಕಾರಣ ಅವರನ್ನು ಕ್ಷಮಿಸಬೇಕು ಹಾಗೂ ಅವರಿಗೆ ಕಠಿಣ ಶಿಕ್ಷೆಯಾಗುವುದನ್ನು ತಡೆದು ಭಾರತಕ್ಕೆ ಕರೆತರಲು ಸಹಾಯ ಮಾಡೋಣ ಎಂದು ಹಲವಾರು ಮುಸ್ಲಿಂ ಯುವಕರು ಹರೀಶ್ ಬಂಗೇರ ಅವರ ಕುರಿತು ಅನುಕಂಪ ತೋರಿಸಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಸದ್ಯಕ್ಕಂತೂ ಹರೀಶ್ ಬಂಗೇರ ಅವರ ಭವಿಷ್ಯ ಭಾರೀ ಆತಂಕದಲ್ಲಿರುವುದಂತೂ ನಿಜ.

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ