ಮತ್ತೆ ಬಂದಿದೆ ಕುಂದಾಪುರದಲ್ಲಿ ಕಾರ್ಟೂನ್ ಹಬ್ಬ. ನಾಡನ್ನೇ ಸೆಳೆಯುತ್ತಿದೆ ಅಬ್ಬಬ್ಬ!
ಮಾಹಾತ್ಮಾ ಗಾಂಧೀಜಿ ಅವರ 150ನೆಯ ಜನ್ಮ ವರ್ಷಾಚರಣೆಯ ಅಂಗವಾಗಿ ''ಈಶ್ವರ ಅಲ್ಲಾ ತೇರೊ ನಾಮ್'' ಎಂಬ ಥೀಮ್‌ನಡಿಯಲ್ಲಿ ಈ ಬಾರಿಯ ಕಾರ್ಟೂನ್ ಹಬ್ಬ ನಡೆಯಲಿದೆ

ಕರಾವಳಿ ಕರ್ನಾಟಕ ವರದಿ

ಕುಂದಾಪುರ
: 2014ರಲ್ಲಿ ಆರಂಭಗೊಂಡು ವರ್ಷದಿಂದ ವರ್ಷಕ್ಕೆ ಹೆಚ್ಚುಹೆಚ್ಚು ಜನಪ್ರಿಯಗೊಳ್ಳುತ್ತಾ ಇದೀಗ ಭಾರತದ ಉದ್ದಗಲಕ್ಕೂ ಸುದ್ದಿಯಾಗುತ್ತಿರುವ ಕುಂದಾಪುರದ ಕಾರ್ಟೂನ್ ಹಬ್ಬ ಈ ಬಾರಿ ನವೆಂಬರ್ 23 ರಿಂದ 26 ರ ವರೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್‌ನ ಕಲಾಮಂದಿರದಲ್ಲಿ ನಡೆಯಲಿದೆ.


ಕಳೆದ ಕೆಲ ವರ್ಷಗಳಿಂದ ಕುಂದಾಪುರದಲ್ಲೇ ನೆಲೆಸಿ ಇಲ್ಲಿಂದಲೇ ದೇಶದ ಹಲವಾರು ಪತ್ರಿಕೆ ಮತ್ತು ಮಾಧ್ಯಮಗಳಿಗೆ ಕಾರ್ಟೂನ್ ಬರೆಯುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಈ ಕಾರ್ಟೂನು ಹಬ್ಬದ ರೂವಾರಿಯಾಗಿದ್ದು ಇದೀಗ 6ನೆಯ ಕಾರ್ಟೂನು ಹಬ್ಬ ಸಂಘಟಿಸಲು ಸಜ್ಜಾಗಿದ್ದಾರೆ. ಕಾರ್ಟೂನ್ ಕಲೆಗೆ ಸಂಬಂಧಿಸಿ ಭಾರತದಲ್ಲಿ ನಡೆಯುವ ವಿಶಿಷ್ಟ ಇವೆಂಟ್‌ಗಳಲ್ಲಿ ಒಂದು ಎಂದು ಕುಂದಾಪುರದ ಕಾರ್ಟೂನು ಹಬ್ಬ ಪ್ರಸಿದ್ಧಿಯಾಗಿದೆ.ಮಾಹಾತ್ಮಾ ಗಾಂಧೀಜಿ ಅವರ 150ನೆಯ ಜನ್ಮ ವರ್ಷಾಚರಣೆಯ ಅಂಗವಾಗಿ 'ಈಶ್ವರ ಅಲ್ಲಾ ತೇರೊ ನಾಮ್' ಎಂಬ ಥೀಮ್‌ನಡಿಯಲ್ಲಿ ಈ ಬಾರಿಯ ಕಾರ್ಟೂನ್ ಹಬ್ಬ ನಡೆಯಲಿದೆ. ಗಾಂಧೀಜಿಯರ ಶಾಂತಿ, ಅಹಿಂಸೆ, ಸಾಮರಸ್ಯದ ತತ್ವಗಳು ಈ ಬಾರಿಯ ಕಾರ್ಟೂನು ಹಬ್ಬದ ಪ್ರಮುಖ ಆಶಯವಾಗಿದೆ.  ಈಗಾಗಲೇ ಈ ಕುರಿತು ಹಮ್ಮಿಕೊಳ್ಳಲಾಗಿರುವ 'ನಾನೂ ಗಾಂಧಿ' ವಿಡಿಯೊ ಅಭಿಯಾನಕ್ಕೆ ಮಹಾತ್ಮಾಗಾಂಧಿಯರ ಮರಿಮೊಮ್ಮಗ ತುಷಾರ್ ಗಾಂಧಿ ಸೇರಿದಂತೆ ದೇಶದ ಹಲವಾರು ಗಣ್ಯರು ಮತ್ತು ಜನಸಾಮಾನ್ಯರು ಸ್ಪಂದಿಸಿದ್ದು ವಿವಿಧ ಭಾಷೆಗಳಲ್ಲಿ 'ಮೈ ಭಿ ಗಾಂಧಿ' ವಿಡಿಯೊ ಸಂದೇಶಗಳು ವೈರಲ್ ಆಗಿವೆ (Youtube ಲಿಂಕ್: https://www.youtube.com/watch?v=mquPOXfNCJc).

ಈ ಬಾರಿಯ 6ನೆಯ ಕಾರ್ಟೂನ್ ಹಬ್ಬವನ್ನು ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕರಾಗಿ ಮಿಂಚುತ್ತಿರುವ ಕುಂದಾಪುರದ ಕೆರಾಡಿಯ ರಿಷಭ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸ್ವಾಮಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಮತ್ತು ಮಣಿಪಾಲದ ಗಾಂಧಿ ಅಧ್ಯಯನ ಕೇಂದ್ರದ ವರದೇಶ ಹಿರೇಗಂಗೆ ವಿಶೇಷ ಅತಿಥಿಯಾಗಿ ಆಗಮಿಸಲಿದ್ದು ಹಿರಿಯ ವ್ಯಂಗ್ಯಚಿತ್ರಕಾರರಾದ ವಿ. ಜಿ. ನರೇಂದ್ರ, ಹಿಂದೂ ಪತ್ರಿಕೆಯ ಹಿರಿಯ ವ್ಯಂಗ್ಯಚಿತ್ರಕಾರ ಸುರೇಂದ್ರ ಮತ್ತು ಪವರ್ ಲಿಪ್ಟರ್ ವಿಶ್ವನಾಥ ಗಾಣಿಗ ಅವರಿಗೆ ಅಂದು ಸನ್ಮಾನಿಸಲಾಗುತ್ತದೆ. ದಿನಾಂಕ 23 ನವೆಂಬರ್ ಶನಿವಾರ ಬೆಳಿಗ್ಗೆ 10 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.

ಅಂದು ಮಧ್ಯಾಹ್ನ ಮಾಯಾ ಕಾಮತ್ ಸ್ಮರಣಾರ್ಥ ಕಾರ್ಟೂನ್ ಸ್ಪರ್ಧೆ ನಡೆಯಲಿದ್ದು ಡಾ. ಪಿ.ವಿ ಭಂಡಾರಿ, ಡಾ. ಜಯಪ್ರಕಾಶ ಶೆಟ್ಟಿ, ನಾರಾಯಣ ಐತಾಳ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕ್ರಿಕೆಟ್ ತರಬೇತುದಾರ ವಿಜಯ್ ಆಳ್ವ ಅವರನ್ನು ಸನ್ಮಾನಿಸಲಾಗುತ್ತದೆ.

ಭಾನುವಾರ ನವೆಂಬರ್ 24 ಭಾನುವಾರ ಬೆಳಿಗ್ಗೆ ಕಾರ್ಟೂನ್ ಹಬ್ಬದ ಪ್ರತಿ ವರ್ಷದ ವಿಶೇಷ ಕಾರ್ಯಕ್ರಮ ಮಾಸ್ಟರ್ ಸ್ಟ್ರೋಕ್ಸ್ ನಡೆಯಲಿದ್ದು  ಹಿಂದೂ ಪತ್ರಿಕೆಯ ಹಿರಿಯ ವ್ಯಂಗ್ಯಚಿತ್ರಕಾರ ಸುರೇಂದ್ರ ಉದ್ಘಾಟಿಸಲಿದ್ದಾರೆ. ಪ್ರಸಿದ್ಧ ಕಲಾವಿದ ಚಂದ್ರನಾಥ ಆಚಾರ್ಯ ಮತ್ತು ಹಿರಿಯ ವ್ಯಂಗ್ಯಚಿತ್ರಕಾರರಾದ ವಿ. ಜಿ. ನರೇಂದ್ರ ಮಾಸ್ಟರ್ ವ್ಯಂಗ್ಯಚಿತ್ರಕಾರರಾಗಿ ಉಪಸ್ಥಿತರಿರುತ್ತಾರೆ. ಅಂದಿನ ಕಾರ್ಯಕ್ರಮದಲ್ಲಿ ಸ್ಟ್ರೀಟ್ ಆರ್ಟ್ ಖ್ಯಾತಿಯ ಬಾದಲ್ ನಂಜುಂಡಸ್ವಾಮಿ ಮತ್ತು ವ್ಯಂಗ್ಯಚಿತ್ರಕಾರರಾದ ದತ್ತಾತ್ರಿ ಎಂ.ಎನ್ ಹಾಗೂ ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗವಿದೆ.

ಅಂದು ಸಂಜೆ 4 ಗಂಟೆಗೆ ಚಿತ್ರನಿಧಿ ಹಾಗೂ ವಿವಿಧ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ನಡೆಯಲಿದೆ. ಕುಂದಾಪುರದ ಭಾರತೀಯ ವೈದ್ಯಕೀಯ ಸಂಘ-ಐಎಂಎ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ನಿರ್ದೇಶಕರಾದ ಪ್ರೊ. ಮ್ಯಾಥ್ಯೂ ಸಿ. ನೈನಾನ್ ಉದ್ಘಾಟಿಸಲಿದ್ದಾರೆ. ಮಣೀಪಾಲದ ಕೆಎಂಸಿಯ ಡಾ. ರವೀಂದ್ರ ಮುನೋಳಿ, ಡಾ. ಶ್ರಿದೇವಿ ಕಟ್ಟೆ, ಡಾ. ಪ್ರಮೀಳಾ ನಾಯಕ್ ಮುಖ್ಯ ಅತಿಥಿಗಳಾಗಿದ್ದು ಪತ್ರಕರ್ತ ಜಾನ್ ಡಿಸೋಜಾ ಅವರನ್ನು ಸನ್ಮಾನಿಸಲಾಗುತ್ತದೆ.

ನವೆಂಬರ್ 25 ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಾರ್ಟೂನಾಸಕ್ತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಎಡಿಟೂನ್ಸ್- ಪ್ರಾಯೋಗಿಕ ಕಾರ್ಟೂನು ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪತ್ರಕರ್ತ ಮತ್ತು ಔಟ್‌ಲುಕ್ ಪತ್ರಿಕೆಯ ಮಾಜಿ ಸಂಪಾದಕ ಕೃಷ್ಣ ಪ್ರಸಾದ್, ಹಿರಿಯ ವ್ಯಂಗ್ಯಚಿತ್ರಕಾರ ಬಿ. ಜಿ. ಗುಜ್ಜಾರಪ್ಪ, ಹಿರಿಯ ಪತ್ರಕರ್ತ ಎಸ್. ಆರ್. ರಾಮಕೃಷ್ಣ, ಸುರೇಂದ್ರ ಮತ್ತು ಸತೀಶ ಆಚಾರ್ಯ ಪಾಲ್ಗೊಳ್ಳಲಿದ್ದು ನಿಟ್ಟೆ ಇನ್ಸ್‌ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‌ನ ಮುಖ್ಯಸ್ಥ ರವಿರಾಜ್ ಕಿಣಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. 

ನವೆಂಬರ್ 26 ಮಂಗಳವಾರ ಸಂಜೆ ಕುಂದಾಪುರ ಕನ್ನಡದ ಹಾಸ್ಯ ದಿಗ್ಗಜರಾದ ಮನು ಹಂದಾಡಿ, ಚೇತನ್ ನೈಲಾಡಿ, ಸಂದೇಶ ಶೆಟ್ಟಿ ಮುಂತಾದವರ ಉಪಸ್ಥಿತಿಯಲ್ಲಿ ನಿಂತ್ಕ ಕಾಮಿಡಿ ಕೂತ್ಕ ನಗಾಡಿ ಎಂಬ ಕುಂದಾಪ್ರ ಕನ್ನಡ ಕಾಮಿಡಿ ಸ್ಪರ್ಧೆ ನಡೆಯಲಿದೆ.

ಕಾರ್ಟೂನು ಹಬ್ಬದ ನಾಲ್ಕು ದಿನಗಳ ಅವಧಿಯಲ್ಲಿ ದೇಶಾದ್ಯಂತದ ಹಲವು ಪ್ರಸಿದ್ಧ ಕಾರ್ಟೂನಿಸ್ಟ್‌ಗಳು ಹಾಗೂ ಕುಂದಾಪುರ ಮೂಲದ ಹಲವು ಪ್ರಸಿದ್ಧ ಕಾರ್ಟೂನಿಸ್ಟ್‌ಗಳ ವ್ಯಂಗ್ಯಚಿತ್ರಗಳು ಪ್ರದರ್ಶನ ಕಾಣಲಿವೆ. ಈ ಪೈಕಿ ಹಲವರು ಕಾರ್ಟೂನು ಹಬ್ಬದಲ್ಲಿ ಖುದ್ದು ಉಪಸ್ಥಿತರಿದ್ದು ಕಾರ್ಟೂನ್ ಪ್ರಿಯರ ಜೊತೆ ಮಾತುಕತೆ, ಹರಟೆ ನಡೆಸಲಿದ್ದಾರೆ. ವಿದ್ಯಾರ್ಥಿಗಳಿಗೆ ಕಾರ್ಟೂನ್ ಬಿಡಿಸುವ ಸ್ಪರ್ಧೆ, ಸಾರ್ವಜನಿಕರಿಗಾಗಿ ಸ್ಥಳದಲ್ಲೆ ಕಾರ್ಟೂನ್ ಬರೆದು ಕೊಡುವ ವ್ಯಂಗ್ಯಚಿತ್ರಕಾರರು, ಸಂಗ್ರಹವಾದ ಹಣದಿಂದ ಬಡವಿದ್ಯಾರ್ಥಿಗಳಿಗೆ ನೆರವಿನ ಯೋಜನೆ ಹೀಗೆ ಕಾರ್ಟೂನು ಹಬ್ಬದಲ್ಲಿ ಕಲೆ, ಹಾಸ್ಯ, ಸಮಾಜ ಸೇವೆ ಎಲ್ಲದಕ್ಕೂ ಮಹತ್ವ ನೀಡಲಾಗಿದೆ. ಕಾರ್ಟೂನ್ ಪ್ರಿಯರಿಗೆ ಇದೊಂದು ಪರಿಪೂರ್ಣ ಹಬ್ಬವಾಗಲಿದ್ದು ನಾಲ್ಕು ದಿನಗಳ ಹಬ್ಬಕ್ಕೆ ಜನಸಾಗರವೇ ಹರಿದುಬರುವ ನಿರೀಕ್ಷೆ ಇದೆ. ಬದುಕಿನ ಹಲವು ಭಾವಗಳು ಬಣ್ಣಗಳಾಗಿ, ರೇಖೆಗಳಾಗಿ ಕ್ಯಾನ್ವಾಸ್‍ನಲ್ಲಿ ಮೂಡಿಬರುವ ಈ ಹಬ್ಬಕ್ಕೆ 'ಕರಾವಳಿ ಕರ್ನಾಟಕ' ಶುಭಕೋರುತ್ತಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ