ಶಿವಸೇನೆಯ ಹೊಸ ಬೇಡಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ: ಗೃಹ ಸಚಿವ ಅಮಿತ್ ಶಾ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಗೊಂದಲದ ಬಗ್ಗೆ ಗೃಹ ಸಚಿವ ಅಮಿತ್ ಶಾ ಮೌನ ಮುರಿದಿದ್ದಾರೆ. ಶಿವಸೇನೆ ಈಗ ಹೊಸ ಹೊಸ ಬೇಡಿಕೆಗಳನ್ನು ಮುಂದಿಟ್ಟಿದೆ. ಅದು ನಮಗೆ ಒಪ್ಪಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿರುವ ಅಮಿತ್ ಶಾ, ರಾಜ್ಯಪಾಲರು ಸರ್ಕಾರ ರಚನೆಗೆ ಎಲ್ಲರಿಗೂ ಸಾಕಷ್ಟು ಸಮಯ ನೀಡಿದ್ದರು. ಈಗಲೂ ಯಾರ ಬಳಿ ಸರ್ಕಾರ ರಚನೆಗೆ ಅಗತ್ಯವಿರುವ ಶಾಸಕರ ಬೆಂಬಲ ಇದೆಯೋ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಬಹುದು ಎಂದು ಅಮಿತ್ ಶಾ ಹೇಳಿದ್ದಾರೆ.

ಮಹಾರಾಷ್ಟ್ರದ ಚುನಾವಣೆ ಹಿನ್ನೆಲೆ ನಡೆದ ಸಾರ್ವಜನಿಕ ಸಮಾವೇಶಗಳಲ್ಲಿ ಮಾನತಾಡಿದ್ದ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ನಾಯಕರು, ಮೈತ್ರಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬಂದರೆ ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಮಂತ್ರಿಯಾಗುತ್ತಾರೆಂದು ಹೇಳಿದ್ದರು. ಈ ವಿಷಯವನ್ನು ಶಿವಸೇನೆಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. ಆಗ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಶಿವಸೇನೆ ಈಗ ಹೊಸ ಹೊಸ ಬೇಡಿಕೆಗಳನ್ನು ಮುಂದಿಟ್ಟಿದೆ. ಅದು ನಮಗೆ ಒಪ್ಪಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಬೇರೆ ಯಾವುದೇ ರಾಜ್ಯಗಳಲ್ಲಿ ಸರ್ಕಾರ ರಚನೆಗೆ ನೀಡಿದ್ದ ಅವಧಿಗಿಂತಲೂ ಮಹಾರಾಷ್ಟ್ರದಲ್ಲಿ ರಾಜ್ಯಪಾಲರು ಕಾಲಾವಕಾಶ ನೀಡಿದ್ದಾರೆ. ಈ ಹಿಂದಿನ ವಿಧಾನಸಭೆ ಅವಧಿ ಮುಕ್ತಾಯಗೊಂಡ ನಂತರವಷ್ಟೇ ರಾಜ್ಯಪಾಲರು ಡೆಡ್ ಲೈನ್ ನೀಡಿದ್ದರು. ಇದಕ್ಕೂ ಮುನ್ನ, ಸರ್ಕಾರ ರಚನೆಗೆ 18 ದಿನಗಳ ಸುಧೀರ್ಘ ಅವಧಿ ಇತ್ತು ಆದರೆ ಶಿವಸೇನೆಯಾಗಲೀ, ಕಾಂಗ್ರೆಸ್-ಎನ್ ಸಿಪಿಯಾಗಲೀ ಹಕ್ಕು ಮಂಡನೆ ಮಾಡಿಲ್ಲ. ಈಗಲೂ ಯಾರಿಗೆ ಬಹುಮತವಿದೆಯೋ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಬಹುದು ಎಂದು ಹೇಳಿದ್ದಾರೆ.

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ