ಕುಂದಾಪುರ: ಕೊಚುವೇಲಿ-ಶ್ರೀಗಂಗಾನಗರ ರೈಲಿಗೆ ಅಭೂತಪೂರ್ವ ಸ್ವಾಗತ: ಜೆ. ಪಿ. ಹೆಗ್ಡೆ ಶ್ರಮಕ್ಕೆ ಶ್ಲಾಘನೆ.

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಮತ್ತು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಸತತ ಪ್ರಯತ್ನದ ಫಲವಾಗಿ ಕುಂದಾಪುರದಲ್ಲಿ ಮೊತ್ತಮೊದಲ ಬಾರಿ ನಿಲುಗಡೆಗೊಂಡ ಕೊಚುವೇಲಿ-ಶ್ರೀಗಂಗಾನಗರ ಎಕ್ಸ್‌ಪ್ರೆಸ್ ರೈಲಿಗೆ ಕುಂದಾಪುರ ರೈಲು ನಿಲ್ದಾಣದಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯಿತು.

ಸಂಸದ ಜಯಪ್ರಕಾಶ ಹೆಗ್ಡೆ, ಸಮಿತಿಯ ಸಕ್ರಿಯ ಮುಂದಾಳು ಗೌತಮ್ ಶೆಟ್ಟಿ, ಅಧ್ಯಕ್ಷರಾದ ಕೆಂಚನೂರು ಸೋಮಶೇಖರ ಶೆಟ್ಟಿ, ಕಾರ್ಯದರ್ಶಿ ಜೊಯ್ ಕರ್ವಾಲ್ಲೊ, ವಿವೇಕ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ನಾಯ್ಕ್ ಮುಂತಾದವರ ಸಮ್ಮುಖದಲ್ಲಿ ರೈಲಿಗೆ ಸ್ವಾಗತ ಕೋರಿ, ಪುಷ್ಪವೆಸೆದು, ಸಿಹಿ ತಿಂಡಿ ಹಂಚಿ ಸ್ವಾಗತಿಸಿ ಸಂಭ್ರಮಿಸಲಾಯಿತು. ರೈಲು ನಿಲುಗಡೆಗೆ ಕಾರಣರಾದ ಜಯಪ್ರಕಾಶ ಹೆಗ್ಡೆ ಪರ ಘೋಷಣೆಗಳನ್ನು ಕೂಗಿ ಸಾರ್ವಜನಿಕರು ಖುಷಿಪಟ್ಟರು.

ಈ ಸಂದರ್ಭದಲ್ಲಿ ಮತನಾಡಿದ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಅಧಿಕಾರದಲ್ಲಿದ್ದಾಗ ಇದ್ದ ಸಂಪರ್ಕಗಳನ್ನು ಅಧಿಕಾರದಲ್ಲಿ ಇಲ್ಲದಾಗಲೂ ಬಳಸಿಕೊಂಡು ಜನಪರ ಕೆಲಸಗಳನ್ನು ಮಾಡಬಹುದಾಗಿದೆ. ರೈಲ್ವೇ ರಾಜ್ಯ ಮಂತ್ರಿ ಸುರೇಶ ಅಂಗಡಿಯವರ ಸಹಕಾರ ಮತ್ತು ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಸತತ ಶ್ರಮದಿಂದ ಕೊಚುವೇಲಿ-ಶ್ರೀಗಂಗಾನಗರ ಎಕ್ಸ್‌ಪ್ರೆಸ್ ರೈಲು ಕುಂದಾಪುರದಲ್ಲಿ ನಿಲುಗಡೆ ಕೊಡುವಂತಾಗಿದೆ ಎಂದು ಹೇಳಿದರು.

ಕುಂದಾಪುರ ರೈಲು ನಿಲ್ದಾಣದಲ್ಲಿ ಹಲವು ರೈಲುಗಳ ನಿಲುಗಡೆಗೆ ಪಟ್ಟುಬಿಡದೆ ಶ್ರಮಿಸಿದ ಗೌತಮ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಗೌತಮ್ ಶೆಟ್ಟಿ ಕುಂದಾಪುರ ರೈಲು ನಿಲ್ದಾಣವನ್ನು ಉನ್ನತ ದರ್ಜೆಗೇರಿಸುವುದು ಸೇರಿದಂತೆ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ಈ ನಿಲ್ದಾಣದಲ್ಲಿ ಆಗಬೇಕಿದೆ. ಕೊಂಕಣ ರೈಲ್ವೇ ಇಲಾಕೆ ಕುಂದಾಪುರ ನಿಲ್ದಾಣದ ಕುರಿತು ಸತತ ಅಸಡ್ಡೆ ತೋರುತ್ತಾ ಬಂದಿದೆ. ಆದರೆ ಜಯಪ್ರಕಾಶ ಹೆಗ್ಡೆಯವರಂತಹ ಸಮರ್ಥ ಜನನಾಯಕರ ಬೆಂಬಲದಿಂದ ಹಲವಾರು ರೈಲುಗಳು ಇಲ್ಲಿ ನಿಲುಗಡೆಗೊಳ್ಳುವಂತಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಕುಂದಾಪುರದ ವಿವಿಧ ಸಂಘಟನೆಗಳ ಮುಖಂಡರಾದ ಕಿಶೋರ ಕುಮಾರ್ ಕುಂದಾಪುರ, ರಾಜೇಶ ಕಾವೇರಿ, ಗಣೇಶ ಶೆಟ್ಟಿ ಮೊಳಹಳ್ಳಿ, ಗಣೇಶ ಪುತ್ರನ್, ಎಚ್. ನರಸಿಂಹ, ಅಚ್ಯುತ ಎಂ ನಾಯ್ಕ್, ವಿನಯ್ ಕಬ್ಯಾಡಿ, ಶಶಿಧರ ಹೆಮ್ಮಾಡಿ, ಪದ್ಮನಾಭ್ ಶೆಣೈ, ಪ್ರವೀಣ್ .ಟಿ, ರಾಘು ಶೇಟ್, ಕಿಶೋರ್ ಕುಮಾರ್, ಉದಯ್, ಕೆ ಆರ್ ನಾಯಕ್, ಉದಯ್  ಭಂಡಾರ್ಕರ್, ಕೈರಳಿ  ಸುಹೃದ್ ವೇದಿಯ ಶ್ರೀಶನ್ ಮುಂತಾದವರು ಉಪಸ್ಥಿತರಿದ್ದರು.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ