"ಶಾಸ್ತ್ರಿ ಸರ್ಕಲ್ ಚಲೋ" ನಮ್ಮ ಕಾರ್ಯಕ್ರಮವಲ್ಲ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಪಷ್ಟನೆ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ನಾಳೆ ಅಕ್ಟೋಬರ್ 20ರ ಭಾನುವಾರ ಕುಂದಾಪುರದಲ್ಲಿ ನಡೆಯಲಿದೆ ಎನ್ನಲಾಗಿರುವ "ಶಾಸ್ತ್ರಿ ಸರ್ಕಲ್ ಚಲೋ" ಎಂಬ ಹೆಸರಿನ ಕಾರ್ಯಕ್ರಮಕ್ಕೂ "ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ"ಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಸ್ಪಷ್ಟಪಡಿಸಿದ್ದಾರೆ.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸಂಯೋಜಿತವಾಗಿರುವ ಕುಂದಾಪುರ ತಾಲೂಕಿನ ಏಕೈಕ ಪತ್ರಕರ್ತರ ಸಂಘಟನೆಯಾಗಿದೆ. ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ನಮ್ಮ ಸಂಘಟನೆಯ ಹೆಸರನ್ನೇ ಹೋಲುವ ಇನ್ನೊಂದು ಸಂಘಟನೆಯನ್ನು ಕಟ್ಟಿಕೊಂಡಿದ್ದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. "ಶಾಸ್ತ್ರಿ ಸರ್ಕಲ್ ಚಲೋ" ಎಂಬ ಕಾರ್ಯಕ್ರಮದಲ್ಲೂ ನಮ್ಮ ಸಂಘಟನೆಯ ಹೆಸರಿನ ದುರ್ಬಳಕೆಯಾಗುತ್ತಿದ್ದು ಈ ಕಾರ್ಯಕ್ರಮ ನಮ್ಮ ಸಂಘದ ಕಾರ್ಯಕ್ರಮವಲ್ಲ ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸ್ಪಷ್ಟೀಕರಿಸಿದೆ.

ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೆ ಮಾನ್ಯತೆ ಪಡೆದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಜೊತೆಗೆ ಮಾಧ್ಯಮ ಸಂಬಂಧಿ ವಿಚಾರಗಳಿಗಾಗಿ ವ್ಯವಹರಿಸಬೇಕೆಂದೂ ಬೇರೆ ಯಾವುದೇ ಅನಧಿಕೃತ ಸಂಘಟನೆಗಳ ಜೊತೆ ನಡೆಸುವ ವ್ಯವಹಾರಕ್ಕೆ ನಮ್ಮ ಸಂಘಟನೆ ಯಾವುದೇ ರೀತಿಯಲ್ಲೂ ಉತ್ತರದಾಯಿಯಲ್ಲ ಎಂಬುದನ್ನು ಕುಂದಾಪುರ. ತಾ. ಕಾ. ನಿ. ಪತ್ರಕರ್ತರ ಸಂಘ ಸ್ಪಷ್ಟಪಡಿಸಿದೆ. ಈ ಕುರಿತು ಉಡುಪಿ  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ಹೇಳಿಕೆ ನೀಡಿದ್ದು ಆ ಹೇಳಿಕೆಯ ಸಂಪೂರ್ಣ ವಿವರ ಈ ಕೆಳಗಿನಂತಿದೆ:

ಉಡುಪಿ:   ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ),  ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘ (ರಿ) ಇದರ  ಅಧೀನ ಸಂಸ್ಥೆಯಾಗಿದ್ದು ರಾಜ್ಯ ಸರ್ಕಾರ ಮಾನ್ಯತೆ ಪಡೆದ ಏಕೈಕ ಪತ್ರಕರ್ತರ ಸಂಘಟನೆಯಾಗಿದೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಬ್ರಹ್ಮಗಿರಿಯ ನಾಯರ್ ಕೆರೆಯ ಬಳಿ ಕೇಂದ್ರ ಕಚೇರಿಯನ್ನ ಹೊಂದಿದ್ದು ಇದರ ಅಧೀನಕ್ಕೆ ಒಳಪಟ್ಟು ಕಾಪು, ಕುಂದಾಪುರ,ಬ್ರಹ್ಮಾವರ,ಕಾರ್ಕಳ, ಉಡುಪಿ, ಬೈಂದೂರುನಲ್ಲಿ ತಾಲೂಕು ಸಂಘಗಳು ಕಾರ್ಯಚರಿಸುತ್ತಿವೆ.  ಉಡುಪಿಯಾದ್ಯಂತ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ೧೯೭ ಸದಸ್ಯರನ್ನು ಹೊಂದಿದ್ದು ತಾಲೂಕು ಸಂಘಗಳು ಸಂಘಟನಾತ್ಮಕವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರಾಗಿ ಜನಾರ್ದನ ಮರವಂತೆ, ಕೋಶಾಧಿಕಾರಿಯಾಗಿ ಅರುಣ್ ಕುಮಾರ್ ಶಿರೂರು, ಕುಂದಾಪುರದಲ್ಲಿ ಶಶಿಧರ್ ಹೆಮ್ಮಾಡಿ ಅದ್ಯಕ್ಷರಾಗಿ, ಕಾರ್ಯದರ್ಶಿಯಾಗಿ ನಾಗರಾಜ್ ರಾಯಪ್ಪನ ಮಠ, ಬ್ರಹ್ಮಾವರ ತಾಲೂಕು ಸಂಘದ ಅದ್ಯಕ್ಷರಾಗಿ ಪ್ರಭಾಕರ ಆಚಾರ್ಯ, ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ ಗಾಣಿಗ, ಕಾರ್ಕಳದಲ್ಲಿ ಅದ್ಯಕ್ಷರಾಗಿ ಆರ್.ಬಿ ಜಗದೀಶ್ , ಕಾರ್ಯದರ್ಶಿಯಾಗಿ ಸಂಪತ್ ನಾಯಕ್, ಕಾಪುವಿನಲ್ಲಿ ಅದ್ಯಕ್ಷರಾಗಿ ಪ್ರಮೋದ್ ಸುವರ್ಣ ಹಾಗೂ ಕಾರ್ಯದರ್ಶಿಯಾಗಿ ವಾದಿರಾಜ್ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ. ಉಡುಪಿಯಲ್ಲಿ ಸಂಘ ಕೇಂದ್ರ ಕಚೇರಿ ಸಂಘ ಹೊಂದಿರುವ ಕಾರಣ ಉಡುಪಿಯಲ್ಲಿ ಪ್ರೆಸ್ ಕ್ಲಬ್ ನ ಸಂಚಾಲಕ ನಾಗರಾಜ್  ಹಾಗೂ ಸಹ ಸಂಚಾಲಕರಾಗಿ ಸುಭಾಶ್ಚಂದ್ರ ವಾಗ್ಳೆ ಪ್ರೆಸ್ ಕ್ಲಬ್ ನ ಜವಾಬ್ಧಾರಿಯನ್ನ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೆಸರನ್ನು  ಹೋಲುವ ಇನ್ನೊಂದು ಸಂಘ ಕುಂದಾಪುರದಲ್ಲಿ  ಹುಟ್ಟಿಕೊಂಡಿದೆ. ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಎಂಬ ಹೆಸರಿನಡಿಯಲ್ಲಿ ಆರಂಭವಾದ ಈ ಸಂಘದಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೂ ಮತ್ತು ಪದಾಧಿಕಾರಿಗಳಿಗೂ ಹಾಗೂ  ನೂತನವಾಗಿ ಆರಂಭವಾದ ಕುಂದಾಪುರ ತಾಲೂಕು ಪತ್ರಕರ್ತರ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಈ ಮೂಲಕ ಸ್ಪಷ್ಟೀಕರಿಸುತ್ತಿದ್ದೇನೆ. ಆದ್ದರಿಂದ ಅಂತಹ ಯಾವುದೇ ಸಂಘದಿಂದ ವ್ಯವಹರಿಸಿದರೆ ಅದಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಜವಬ್ಧಾರಿಯಾಗುವುದಿಲ್ಲ ಎಂದು ಈ ಮೂಲಕ ತಿಳಿಯಬಯಸುತ್ತೇನೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ