ಕೋಟಿ ಕನಸುಗಳು ಭಗ್ನ! ದುರಾದೃಷ್ಟದ ಮೈದಾನದಲ್ಲೆ ಭಾರತವನ್ನು ಮಣಿಸಿ ಫೈನಲ್‌ ಪ್ರವೇಶಿಸಿದ ನ್ಯೂ ಝೀಲಂಡ್.

ಕರಾವಳಿ ಕರ್ನಾಟಕ ವರದಿ

ಲಂಡನ್:
ನ್ಯೂ ಝೀಲಂಡ್ ಪಾಲಿಗೆ ದುರಾದೃಷ್ಟದ ಮೈದಾನವೆಂದೇ ಕುಖ್ಯಾತಿ ಪಡೆದಿ ಮ್ಯಾಂಚೆಸ್ಟರ್ ನಗರದ ಓಲ್ಡ್ ಟ್ರಾಫೋರ್ಡ್ ಮೈದಾನ  ಈ ಬಾರಿಯ ವಿಶ್ವ ಕಪ್ ಸೆಮಿ-ಫೈನಲ್‌ನಲ್ಲಿ ನ್ಯೂ ಝೀಲಂಡ್‌ಗೆ ಅದೃಷ್ಟದ ಮೈದಾನವಾಗಿ ಪರಿಣಮಿಸಿದೆ. ಭಾರತದ ವಿರುದ್ಧ ನಡೆದ ಸೆಮಿ-ಫೈನಲ್ ಪಂದ್ಯದಲ್ಲಿ ಅಲ್ಪ ಮೊತ್ತದ ಹೊರತಾಗಿಯೂ ತನ್ನ ಅದ್ಭುತ ಸಾಂಘಿಕ ಹೋರಾಟದಿಂದ ನ್ಯೂ ಝೀಲಂಡ್ ತಂಡ ಭರ್ಜರಿ ಜಯ ಸಾಧಿಸಿದೆ.

ನ್ಯೂ ಝೀಲಂಡ್ ನೀಡಿದ 240 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಆರಂಭದಲ್ಲೇ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಜೊತೆಯಾದ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯಾ ಜೋಡಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಕೊಂಚ ನಿರಾಳ ತಂದರಾದರೂ, ದೊಡ್ಡ ಹೊಡೆತಕ್ಕೆ ಕೈ ಹಾಕಿ ಇಬ್ಬರೂ 32 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಭಾರತ ತಂಡ ಅಕ್ಷರಶಃ ನಲುಗಿ ಹೋಗಿತ್ತು. ಕೇವಲ 92 ರನ್ ಗಳಿಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜಾ ಜೋಡಿ ತಂಡದ ಇನ್ನಿಂಗ್ಸ್ ಗೆ ಜೀವ ತುಂಬಿದರು.

ಶತಕದ ಜೊತೆಯಾಟವಾಡಿದ ಈ ಜೋಡಿ ಸೋಲಿನತ್ತ ಮುಖ ಮಾಡಿದ್ದ ತಂಡವನ್ನು ಗೆಲುವಿನತ್ತ ತಿರುಗುವಂತೆ ಮಾಡಿದರು. ಅಂತಿಮ ಓವರ್ ಗಳು ಸಮೀಪಿಸುತ್ತಿದ್ದಂತೆಯೇ ರನ್ ವೇಗಕ್ಕೆ ಮುಂದಾದ ಜಡೇಜಾ ಬೌಲ್ಟ್ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಲಿಯಮ್ಸನ್ ಗೆ ಕ್ಯಾಚ್ ನೀಡಿ ಹೊರ ನಡೆದರು. ಬಳಿಕ ಧೋನಿ ಕೂಡ ಇನ್ನಿಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಮಾರ್ಟಿನ್ ಗಪ್ಟಿಲ್ ಎಸೆದ ಚೆಂಡು ಕ್ಷಣಮಾತ್ರದಲ್ಲಿ ಬೇಲ್ಸ್ ಎಗರಿಸಿತ್ತು. ಆ ಮೂಲಕ ಭಾರತದ ಫೈನಲ್ ಗೇರುವ ಕನಸು ಬಹುತೇಕ ಭಗ್ನವಾಗಿತ್ತು. ಅಂತಿಮವಾಗಿ ಭುವನೇಶ್ವರ್ ಕುಮಾರ್ ಮತ್ತು ಚಹಲ್ ಔಟಾಗುವುದರೊಂದಿಗೆ ಭಾರತದ ಇನ್ನಿಂಗ್ಸ್ ಗೆ ತೆರೆ ಬಿತ್ತು.

ಕೇವಲ 18 ರನ್ ಗಳ ಅಂತರದಲ್ಲಿ ಭಾರತ ಸೋಲುಕಾಣುವುದರೊಂದಿಗೆ ಭಾರತದ ವಿಶ್ವಕಪ್ ಅಭಿಯಾನ ಕೊನೆಗೊಂಡಿದೆ.

ಈ ಮೈದಾನದಲ್ಲಿ ಈ ಹಿಂದೆ ನ್ಯೂ ಝೀಲಂಡ್ ತಂಡ ಆಡಿದ್ದ ಎರಡು ಸೆಮಿ ಫೈನಲ್ ಪಂದ್ಯಗಳಲ್ಲಿ ಕಿವೀಸ್ ಪಡೆ ಹೀನಾಯ ಸೋಲು ಕಂಡಿತ್ತು. 1979ರಲ್ಲಿ ಮೊದಲ ಬಾರಿಗೆ ಈ ಮೈದಾನದಲ್ಲಿ ನ್ಯೂ ಝೀಲಂಡ್ ತಂಡ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್ 9 ರನ್‌ಗಳ ರೋಚಕ ಜಯ ಸಾಧಿಸಿತ್ತು.

ಅಂದು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ನಿಗದಿತ 60 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. ಇದನ್ನು ಬೆನ್ನು ಹತ್ತಿದ್ದ ನ್ಯೂ ಝೀಲಂಡ್ ತಂಡ 60 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿ ಕೇವಲ 9 ರನ್ ಅಂತರದಲ್ಲಿ ಕಿವೀಸ್ ತಂಡ ಸೋಲು ಕಂಡಿತ್ತು.

ಇದಾದ ಬಳಿಕ 1999ರ ವಿಶ್ವಕಪ್ ಟೂರ್ನಿಯಲ್ಲೂ ನ್ಯೂ ಝೀಲಂಡ್ ತಂಡ ತಮ್ಮ ಸೆಮಿ ಫೈನಲ್ ಪಂದ್ಯವನ್ನು ಇದೇ ಮೈದಾನದಲ್ಲಿ ಆಡಿತ್ತು. ಅಂದು ಪಾಕಿಸ್ತಾನದ ವಿರುದ್ಧ 9 ವಿಕೆಟ್ ಹೀನಾಯ ಸೋಲು ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂ ಝೀಲಂಡ್ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಪಾಕಿಸ್ತಾನ ಸೈಯ್ಯದ್ ಅನ್ವರ್ ಅವರ ಅಮೋಘ ಶತಕ (ಅಜೇಯ 113) ಮತ್ತು ವಜಾಹತುಲ್ಲಾ ವಾಸ್ತಿ (84 ರನ್) ಅವರ ಅದ್ಭುತ ಜೊತೆಯಾಟದ ನೆರವಿನಿಂದ ನ್ಯೂ ಝೀಲಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಆ ಬಳಿಕ ಮತ್ತೆ ನಿನ್ನೆ ನ್ಯೂ ಝೀಲಂಡ್ ತಂಡ ತನ್ನ ಮೊದಲ ಬ್ಯಾಟಿಂಗ್ ವೇಳೆ ಭಾರತದ ಸಾಂಘಿಕ ಬೌಲಿಂಗ್ ಪ್ರದರ್ಶನದ ಪರಿಣಾಮ 239ರನ್ ಗಳ ಅಲ್ಪ ಮೊತ್ತಕ್ಕೆ ಕುಸಿಯಿತು. ಅದಾಗಲೇ ಕ್ರಿಕೆಟ್ ಪಂಡಿತರು ಈ ಮೈದಾನ ನ್ಯೂ ಝೀಲಂಡ್ ಪಾಲಿಗೆ ದುರಾದೃಷ್ಟದ ಮೈದಾನ ಎಂದು ವಿಶ್ಲೇಷಿಸಿದ್ದರು. ಆದರೆ ನ್ಯೂ ಝೀಲಂಡ್ ತಂಡ ಇಂದು ತನ್ನ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ತಬ್ಬಿಬ್ಬು ಮಾಡಿ 18 ರನ್ ಗಳ ಭರ್ಜರಿ ಜಯ ಸಾಧಿಸಿತು.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ