ಟಿಕ್‌ಟಾಕ್‌ ಬಳಸಬೇಡ ಎಂದಿದ್ದಕ್ಕೆ ಗೃಹಿಣಿ ಆತ್ಮಹತ್ಯೆ: ವಿಷ ಸೇವಿಸುವ ವಿಡಿಯೋ ಕೂಡ ಟಿಕ್​ಟಾಕ್​‌ಗೆ ಅಪ್‌ಲೋಡ್

ಕರಾವಳಿ ಕರ್ನಾಟಕ ವರದಿ

ಚೆನ್ನೈ:
ಟಿಕ್‌ಟಾಕ್‌‌ನಲ್ಲೇ ಹೆಚ್ಚು ಸಮಯ ಕಳೆಯಬೇಡಎಂದು ಹಿತವಚನ ಹೇಳಿದ್ದಕ್ಕ ಮನನೊಂದು ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರಿನಲ್ಲಿ ನಡೆದಿದೆ. ಕೀಟನಾಶಕ ಸೇವಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವೀಡಿಯೋವನ್ನೂ ಸಹ ಆಕೆ ಟಿಕ್‌ಟಾ‌ಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾಳೆ.

ಪೆರಂಬೂರ್​ ಮೂಲದ ಅನಿತಾ(24) ಹೀಗೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಈಕೆ ಪಳನಿವೇಲ್ ಎಂಬುವವನ ಪತ್ನಿಯಾಗಿದ್ದು ನಾಲ್ಕು ವರ್ಷದ ಹೆಣ್ಣು ಮಗಳು ಹಾಗೂ ಎರಡು ವರ್ಷದ ಗಂಡು ಮಗುವಿನ ತಾಯಿ.

ಕೃಷಿ ವ್ಯಾಪಾರಿಯಾಗಿರುವ ಪಳನಿವೇಲನ್ ವರ್ಷಗಳ ಹಿಂದೆ ಸಿಂಗಾಪುರಕ್ಕೆ ತೆರಳಿದ್ದರು. ತನ್ನ ಸ್ನೇಹಿತೆಯ ಮೂಲಕ ಟಿಕ್‌ಟಾಕ್‌ ಬಗ್ಗೆ ತಿಳಿದುಕೊಂಡಿದ್ದ ಅನಿತಾ ಬರಬರುತ್ತಾ ದಿನವಿಡೀ ಅದರಲ್ಲೇ ಮಗ್ನಳಾಗಿರುತ್ತಿದ್ದಳು.

ಟಿಕ್‌ಟಾಕ್‌ ವ್ಯಸನಿಯಾಗಿ ಬದಲಾದ ಈಕೆ ಗಂಡ, ಮನೆ, ಮಕ್ಕಳ ಬಗ್ಗೆ ನಿರ್ಲಕ್ಷ ತೋರಲು ಪ್ರಾರಂಭಿಸಿದಾಗ ಬೇಸರಗೊಂಡ ಕುಟುಂಬಿಕರು ಅನಿತಾ ಬಗ್ಗೆ ಆಕೆಯ ಪತಿಯಲ್ಲಿ ದೂರಿದ್ದಾರೆ. ಆಗ  ಪಳನಿವೇಲ್ ಅನಿತಾಗೆ ಮೊಬೈಲ್ ನಿಂದ ಟಿಕ್‌ಟಾಕ್‌ ಆಪ್ ಡಿಲಿತ್ ಮಾಡುವಂತೆ ಹೇಳಿದ್ದಾರೆ. "ಆಪ್ ಗೆ ನೀಡುವ ಸಮಯವನ್ನು ಮಕ್ಕಳು, ಮನೆಗಾಗಿ ನಿಡು" ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಆಕೆ ನಿರಾಕರಿಸಿದ್ದಾಳೆ ಎನ್ನಲಾಗಿದೆ.

ಒಮ್ಮೆ ಅನಿತಾ ಟಿಕ್‌ಟಾಕ್‌ ಮಾಡುತ್ತಿದ್ದಾಗ ಆಕೆಯ ಮಗಳು ಬಿದ್ದು ಪೆಟ್ಟು ಮಾಡಿಕೊಂಡಿದ್ದಾಳೆ. ಆದರೂ ಅನಿತಾ ಮಾತ್ರ ಮಗಳ ಬಗೆಗೆ ಗಮನಿಸದೆ ಟಿಕ್‌ಟಾಕ್‌‌ನಲ್ಲೇ ನಿರತವಾಗಿದ್ದಳು. ಇದರಿಂದ ಮತ್ತಷ್ಟು ಬೇಸರಗೊಂಡ ಪತಿ ಹಾಗೂ ಮನೆಯವರು ಅವಳಿಗೆ ಮತ್ತೆ ಬುದ್ದಿವಾದ ಹೇಳಿದ್ದಾರೆ. ಇದರಿಂದ ಬೇಸರಗೊಂಡ ಅನಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವೀಡಿಯೋ ಮಾಡಿಟ್ಟಿರುವ ಅನಿತಾ ತನ್ನಿಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿರೆಂದು ಪತಿಗೆ ಹೇಳಿದ್ದಾಳೆ ಹಾಗೂ  ಕೀಟನಾಶಕ ಸೇವನೆ ಮಾಡಿ ಸಾಯುವ ದೃಶ್ಯವನ್ನು ಟಿಕ್‌ಟಾಕ್‌ ಗೆ ಅಪ್ ಲೋಡ್ ಮಾಡಿದ್ದಾಳೆ.

ವಿಷ ಸೇವಿಸಿದ್ದ  ಆಕೆಯನ್ನು ಮೊದಲಿಗೆ ಅರಿಯಲೂರ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸಗೆ ಸ್ಪಂದಿಸದೇ ಆಕೆ ಮೃತಪಟ್ಟಿದ್ದಾಳೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ