ಕರಾವಳಿಯಲ್ಲಿ ಕಮಲ: ನಳಿನ್, ಶೋಭಾ, ಅನಂತ್ ಗೆಲುವು. ಎಕ್ಸಿಟ್ ಪೋಲ್‌ಗಳ ಭವಿಷ್ಯ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಭಾರಿ ಗೆಲುವಿನ ಸುಳಿವು ಸಿಕ್ಕಿದೆ. ಮಾತ್ರವಲ್ಲ ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.

ಮಂಗಳೂರಿನಿಂದ ನಳಿನ್ ಕುಮಾರ್ ಗೆಲುವು ಸಾಧಿಸಲಿದ್ದಾರೆ ಎಂದು ಎಲ್ಲ ಎಕ್ಸಿಟ್ ಪೋಲ್‌ಗಳು ಹೇಳುತ್ತಿವೆ. ಚುನಾವಣೆಯ ಆರಂಭದಲ್ಲಿ ನಳಿನ್ ಕುಮಾರ್ ಅವರ ವಿರುದ್ಧ ಇದ್ದ ಅಸಮಾಧಾನಗಳು ಮತದಾನದ ವೇಳೆ ದೂರವಾಗಿ ಮತದಾರ ನಳಿನ್ ಪರ ಮತ ಚಲಾಯಿಸಿದ್ದಾರೆ ಎಂಬುದು ಸಮೀಕ್ಷೆಗಳ ಅಂಬೋಣ. ಈ ಬಾರಿ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸಿ ಬಿಜೆಪಿಗೆ ಪ್ರಬಲ ಪ್ರತಿರೋಧ ಒಡ್ಡಿತ್ತು. ಮಿಥುನ್ ರೈ ಗೆಲ್ಲುತ್ತಾರೆ ಎಂಬ ವಾತಾವರಣವೂ ಇತ್ತು. ಆದರೆ ಮೋದಿಗೆ ಮತ ಹಾಕಿ ಎಂದು ಬಿಜೆಪಿ ಪ್ರಚಾರ ಮಾಡಿದ್ದು ಫಲ ಕೊಟ್ಟಿದೆಯೆ ಎಂಬುದನ್ನು ಮತ ಎಣಿಕೆಯ ದಿನವೇ ಕಾದು ನೋಡಬೇಕಾಗಿದೆ.

ಸ್ವಪಕ್ಷೀಯರಿಂದಲೇ ಸಾಕಷ್ಟು ವಿರೋಧದ ನಡುವೆಯೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಮತ್ತೊಮ್ಮೆ ಸಂಸದರಾಗಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. ಕ್ಷೇತ್ರದಲ್ಲಿ ಮತದಾರರಿಂದಲೂ ಶೋಭಾ ವಿರುದ್ಧ ಸಾಕಷ್ಟು ಅಸಮಾಧಾನ ಇತ್ತು. ಕ್ಷೇತ್ರದಲ್ಲಿ ಇರುವುದೂ ಇಲ್ಲ. ಕ್ಷೇತ್ರಕ್ಕಾಗಿ ಏನೂ ಮಾಡಿಲ್ಲ ಎಂದು ಶೋಭಾ ವಿರುದ್ಧ ಅಲ್ಲಲ್ಲಿ ಬಹಿರಂಗ ವಿರೋಧ ವ್ಯಕ್ತವಾಗಿತ್ತು. ಆದರೆ ಇಲ್ಲಿಯೂ ಮೋದಿ ಹೆಸರಿನಲ್ಲಿ ಮತ ಕೇಳಲಾಗಿತ್ತು. ಮೋದಿ ಮ್ಯಾಜಿಕ್ ಉಡುಪಿಯಲ್ಲೂ ಕೆಲಸ ಮಾಡಿದೆಯೆ ಎಂಬುದು ಮೇ 23 ನೆಯ ತಾರೀಕು ತಿಳಿಯಲಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನಿಜವಾಗಿಯೂ ಸೋಲುತ್ತಾರಾ ಎಂಬುದು ಅಂದೇ ತಿಳಿಯಲಿದೆ.

ಸಚಿವರಾದ ಬಳಿಕ ದಿನಕ್ಕೊಂದು ಅಸಂಬದ್ದ ಹೇಳಿಕೆ ನೀಡಿ ವಿವಾದದ ಕೇಂದ್ರ ಬಿಂದುವಾಗಿದ್ದ ಅನಂತ ಕುಮಾರ ಹೆಗಡೆ ಕೂಡ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ನಿರಾಯಾಸವಾಗಿ ಆಯ್ಕೆಯಾಗಲಿದ್ದಾರೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ಬಹಿರಂಗಪಡಿಸಿದೆ. ಮೈತ್ರಿಕೂಟದ ಆನಂದ್ ಆಸ್ನೋಟಿಕರ್ ಹೆಗಡೆ ವಿರುದ್ಧ ಪರಿಣಾಮಕಾರಿಯಾಗಿ ಪ್ರಚಾರ ಮಾಡಿ ಪ್ರಬಲ ಪ್ರತಿಸ್ಪರ್ಧೆ ಒಡ್ಡಿದ್ದರು. ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದ ಹೆಗಡೆ ಈ ಬಾರಿ ಸೋಲಬಹುದು ಎಂಬ ಸುದ್ದಿಗಳೂ ಇತ್ತು. ಆದರೆ ಎಲ್ಲವನ್ನೂ ಮೀರಿ ಹೆಗಡೆ ಗೆಲುವು ಸಾಧಿಸಲಿದ್ದಾರಾ? ಮೇ 23ರ ತನಕ ಕಾಯಬೇಕಾಗಿದೆ. ಎಕ್ಸಿಟ್ ಪೋಲ್‌ಗಳು ನಿಜವಾದರೆ ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಕಮಲ ಮತ್ತೆ ಅರಳಲಿದ್ದು ಮೂರು ಹಾಲಿ ಸಂಸದರು ಪುನ್ ಅರಾಯ್ಕೆಯಾಗಲಿದ್ದಾರೆ.   

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ