ಸಮುದ್ರದಾಳದಲ್ಲಿರುವ ಸುವರ್ಣ ತ್ರಿಭುಜ ಬೋಟ್: ಚಿತ್ರ ಬಿಡುಗಡೆ ಮಾಡಿದ ನೌಕಾಪಡೆ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಏಳು ಜನ ಮೀನುಗಾರರು ಸೇರಿದಂತೆ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳು ಮಹಾರಾಷ್ಟ್ರದ ಮಾಲ್ವಾನ್ ಸಮುದ್ರ ತೀರದಲ್ಲಿ ಇತ್ತೀಚೆಗೆ ನೌಕಾಪಡೆ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದ್ದವು. ಇದೀಗ ಸಮುದ್ರದಾಳದಲ್ಲಿ ಮುಳುಗಡೆಯಾಗಿರುವ ಈ ಬೋಟಿನ ಚಿತ್ರಗಳು ಲಭಿಸಿದ್ದು ನೌಕಾಪಡೆ ಅಧಿಕಾರಿಗಳು ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಕಳೆದ 2018 ರ ಡಿ.13 ರಂದು ಮಲ್ಪೆ ಬಂದರಿನಿಂದ  ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಡಿ.15 ರಂದು ಮಹಾರಾಷ್ಟ್ರದ ಬಳಿಯ ಸಮುದ್ರದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಬೋಟಿನಲ್ಲಿ‌ ಉತ್ತರ ಕನ್ನಡ ಜಿಲ್ಲೆಯ 5 ಹಾಗೂ ಉಡುಪಿ ಜಿಲ್ಲೆಯ ಇಬ್ಬರು‌ ಸೇರಿ ಒಟ್ಟೂ 7 ಜನ ಮೀನುಗಾರರಿದ್ದರು.

ತಮ್ಮವರನ್ನು ಪತ್ತೆಹಚ್ಚುವಂತೆ ಕುಟುಂಬದವರು ಹಲವಾರು ಬಾರಿ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಸರಕಾರಗಳ ಹಲವು ಪ್ರಯತ್ನಗಳು ನಡೆಸಿದರೂ ಏಪ್ರಿಲ್ ವರೆಗೆ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.

ಬಳಿಕ ಮೇ 1 ರಂದು ನೌಕಾಪಡೆಯು ಹಡಗು ಐಎನ್ಎಸ್ ನಿರೀಕ್ಷಕದಲ್ಲಿ ಮೀನುಗಾರ ಮುಖಂಡರ ತಂಡದೊಂದಿಗೆ ಶೋಧ ಕಾರ್ಯಕ್ಕೆ ಇಳಿದಿತ್ತು. ಬೋಟ್ ಸಂಪರ್ಕ ಕಳೆದುಕೊಂಡಿದ್ದ ಮಹರಾಷ್ಟ್ರದ ಸಿಂಧುದುರ್ಗದ ಆಳಸಮುದ್ರದ ಸುತ್ತಮುತ್ತ ಎರಡು ದಿನಗಳ ಕಾಲ ಸೋನಾರ್ ತಂತ್ರಜ್ಞಾನ ಬಳಸಿ ನಿರಂತರವಾಗಿ ಹುಡುಕಾಟ ನಡೆಸಲಾಗಿತ್ತು. ಮೂರನೇ ದಿನ ಮಾಲ್ವನ್ ಎಂಬಲ್ಲಿ 60 ಮೀಟರ್ ಆಳದಲ್ಲಿ ಬೋಟಿನ ಅವಶೇಷವೊಂದು ಪತ್ತೆಯಾಗಿತ್ತು. ಅದು ಸುವರ್ಣ ತ್ರಿಭುಜದ ಬೋಟ್ ಎಂಬುದನ್ನು ತಿಳಿಯಲು ಆಳಸಮುದ್ರದಲ್ಲಿ ಕ್ಯಾಮರಾ ಬಿಡಲಾಗಿತ್ತು. ಮಾರನೇ ದಿನ ನೌಕಾಸೇನೆಯ ಪರಿಣಿತ ಮುಳುಗು ತಜ್ಞರನ್ನು ನೀರಿನಾಳಕ್ಕೆ ಇಳಿಸಿ ಪರಿಶೀಲಿಸಲಾಯಿತು.ಆದರೆ ಮೀನುಗಾರರ ಯಾವುದೇ ದೇಹದ ಕುರುಗಳು ಪತ್ತೆಯಾಗಿಲ್ಲ. ಇದರ ಪೋಟೋ ಮತ್ತು ವಿಡಿಯೋ ವೀಕ್ಷಿಸಿದಾಗ ಇದು ಸುವರ್ಣ ತ್ರಿಭುಜದ ಬೋಟ್ ಎಂಬುದು ಇದೀಗ ಮೀನುಗಾರರ ಕುಟುಂಬದವರಿಗೂ ಮನವರಿಕೆಯಾಯಿತು.

ಇದೀಗ ಸುವರ್ಣ ತ್ರಿಭುಜ ಬೋಟಿನ ಹೆಸರು ಇರುವ ಚಿತ್ರಗಳನ್ನು ನೌಸೇನಾ ಅಧಿಕಾರಿಗಳು  ಬಿಡುಗಡೆ ಮಾಡಿದ್ದಾರೆ.

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ