ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅನಾಹುತ : ಓರ್ವ ಕಮಾಂಡರ್ ಮೃತ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಇಲ್ಲಿನ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಸೇನೆಯ ಏಕೈಕ ಯುದ್ದ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಈ ವೇಳೆ ಓರ್ವ ಕಮಾಂಡರ್ ಮೃತಪಟ್ಟಿದ್ದು ಇನ್ನಿಬ್ಬರು ಗಾಯಗೊಂಡಿದ್ದಾರೆ.

ನೌಕಾನೆಲೆಯಲ್ಲಿ ನೌಕೆಯು ಲಂಗರು ಹಾಕುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್. ಚೌವ್ಹಾಣ್ ಮೃತಪಟ್ಟವರಾಗಿದ್ದಾರೆ. ಬೆಂಕಿ ತಗಲುತ್ತಿದ್ದಂತೆ ನೌಕೆಯ ಇತರ ಭಾಗಗಳಿಗೆ ಹಾನಿ ಸಂಭವಿಸುವುದನ್ನು ತಡೆಯಲು ಕಮಾಂಡರ್ ಡಿ.ಎಸ್. ಚೌವ್ಹಾಣ್ ಇತರ ಸಿಬ್ಬಂದಿಗಳೊಂದಿಗೆ ಧೈರ್ಯದಿಂದ ಮುನ್ನುಗ್ಗಿ ಬೆಂಕಿ ನಂದಿಸಲು ಪ್ರಯತ್ನಿಸಿದರು.

ನೌಕಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸೇರಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದ ವೇಳೆ ಕಮಾಂಡರ್ ಚೌವ್ಹಾಣ್ ಪ್ರಜ್ಞೆ ಕಳೆದುಕೊಂಡರು. ಅವರನ್ನು ತಕ್ಷಣ ಐಎನ್‌ಎಸ್ ಪತಂಜಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತರಾದರು. ಇನ್ನಿಬ್ಬರು ಘಟನೆಯಲ್ಲಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಲಾಗುತ್ತದೆ ಎಂದು ನೌಸೇನಾ ಪ್ರಕಟಣೆ ತಿಳಿಸಿದೆ.

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ