ಬಿಲ್ಕಿಸ್ ಬಾನೊಗೆ 50 ಲಕ್ಷ ಪರಿಹಾರ, ವಸತಿ, ಉದ್ಯೋಗ ಕಲ್ಪಿಸಲು ಸುಪ್ರೀಂ ಆದೇಶ!

ಕರಾವಳಿ ಕರ್ನಾಟಕ ವರದಿ

ನವದೆಹಲಿ:
2002 ರಲ್ಲಿ ನಡೆದ ಭೀಕರ ಗುಜರಾತ್ ದಂಗೆಯ ವೇಳೆ ಗ್ಯಾಂಗ್ ರೇಪ್‌ಗೆ ಒಳಗಾಗಿದ್ದ ಬಿಲ್ಕಿಸ್ ಬಾನೊಗೆ 50 ಲಕ್ಷ ರೂಪಾಯಿ ಪರಿಹಾರ, ವಸತಿ ಮತ್ತು ಸರ್ಕಾರಿ ಉದ್ಯೋಗ ನೀಡಬೇಕೆಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಗುಜರಾತ್‌ನಲ್ಲಿ ನಡೆದ ಗೋಧ್ರೋತ್ತರ ಗಲಭೆಗಳ ವೇಳೆ 21 ವರ್ಷ ಪ್ರಾಯದ ಬಿಲ್ಕಿಸ್ ಬಾನೊ ಅವರ ಮೇಲೆ ಗುಂಪೊಂದು ಎರಗಿ ಅತ್ಯಾಚಾರಗೈದಿತ್ತು. ಮುಸ್ಲಿಂ ವಿರೋಧಿ ಗುಂಪಿನಲ್ಲಿದ್ದ ಹನ್ನೊಂದು ಜನರು ಬಿಲ್ಕಿಸ್ ಅವರನ್ನು ಅತ್ಯಾಚಾರಗೈದಿದ್ದಲ್ಲದೆ ಆಕೆಯ ಮೂರು ಮಕ್ಕಳನ್ನು ಹತ್ಯೆಗೈದಿದ್ದರು. ಆ ವೇಳೆ ಬಿಲ್ಕಿಸ್ ಐದು ತಿಂಗಳ ಗರ್ಭಿಣಿಯೂ ಆಗಿದ್ದರು. ದಂಗೆಯಲ್ಲಿ ತನ್ನ ಕುಟುಂಬದ ಏಳು ಸದಸ್ಯರನ್ನು ಬಿಲ್ಕಿಸ್ ಕಳೆದುಕೊಂಡಿದ್ದರು.

ಅಹ್ಮದಾಬಾದ್ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಬಳಿಕ ಮುಂಬೈಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣದಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಿತ್ತು.

ಗುಜರಾತ್ ಸರ್ಕಾರ ಬಿಲ್ಕಿಸ್ ಬಾನೊ ಅವರಿಗೆ ಐದು ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿತ್ತು. ಆದರೆ ಬಿಲ್ಕಿಸ್ ಹೆಚ್ಚಿನ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಲೆಮಾರಿಯಾಗಿ ಬದುಕುತ್ತಿರುವ ಬಿಲ್ಕಿಸ್ ಬಾನೊಫ಼ೆ ವಸತಿ ಕಲ್ಪಿಸಬೇಕು, 50 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಹಾಗೂ ಸರ್ಕಾರಿ ಉದ್ಯೋಗ ನೀಡಬೇಕೆಂದು ಇದೀಗ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ವಿಚಾರಣೆಗೆ ತಡೆಯೊಡ್ಡಿದ ಆರೋಪದಲ್ಲಿ ಇಬ್ಬರು ಸರ್ಕಾರಿ ವೈದ್ಯರು ಹಾಗೂ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕೋರ್ಟ್ ಕ್ರಮಕ್ಕೆ ಆದೇಶಿಸಿದ್ದು ಕೋರ್ಟ್ ಆದೇಶವನ್ನು ಪಾಲಿಸದಿರುವ ಗುಜರಾತ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಗುಜರಾತ್ ದಂಗೆಯ ವೇಳೆ ಇಂದಿನ ಪ್ರಧಾನಿ ನರೇಂದ್ರ ಮೋದಿ ಗುಜರಾತ್‍ನಲ್ಲಿ ಮುಖ್ಯಮಂತ್ರಿ ಆಗಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಗುಜರಾತ್ ಸರ್ಕಾರಕ್ಕೂ ಮತ್ತು ನರೇಂದ್ರ ಮೋದಿಗೂ ಮುಖಭಂಗ ಅನುಭವಿಸುವಂತೆ ಮಾಡಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ