ಶಾಕಿಂಗ್! ದಲಿತರ ಪರ ಸಿಎಂ ಬಳಿ ಮನವಿ ಮಾಡಲು ಹೋಗಿದ್ದ ದಲಿತ ಶಿಕ್ಷಕನಿಗೆ ಅಮಾನತು ಶಿಕ್ಷೆ!

ಕರಾವಳಿ ಕರ್ನಾಟಕ ವರದಿ

ಉಡುಪಿ:
ದಲಿತರಿಗೆ ಡಿಸಿ ಮನ್ನಾ ಭೂಮಿಯನ್ನು ಹಂಚಿಕೆ ಮಾಡಲು ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡಲು ಹೋಗಿದ್ದ ನಿಯೋಗದಲ್ಲಿದ್ದ ದಲಿತ ಸಮುದಾಯದ ಶಿಕ್ಷಕರೋರ್ವರನ್ನು ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಅಮಾನತು ಮಾಡಲಾಗಿರುವ ಆಘಾತಕಾರಿ ಸುದ್ದಿ ವರದಿಯಾಗಿದೆ.

ಏಪ್ರಿಲ್ 7ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಕಳಕ್ಕೆ ಆಗಮಿಸಿದ್ದರು. ಈ ವೇಳೆ ಮನವಿಗಳೇನಾದರೂ ಇದ್ದರೆ ಸ್ವೀಕರಿಸಲಾಗುವುದು ಎಂಬ ಮಾಹಿತಿ ಇದ್ದ ಕಾರಣ ಹಲವಾರು ಸಂಘಸಂಸ್ಥೆ ಮತ್ತು ಸಮುದಾಯಗಳ ಮುಖಂಡರು ಕಾರ್ಕಳಕ್ಕೆ ಆಗಮಿಸಿದ್ದರು. ದಲಿತ ಸಂಘಟನೆಗಳ ನಿಯೋಗವೊಂದು ಸಹ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಹವಲಾಉ ಸಲ್ಲಿಸಲು ಕಾರ್ಕಳಕ್ಕೆ ಆಗಮಿಸಿತ್ತು. ಈ ನಿಯೋಗದಲ್ಲಿ ದಲಿತ ಸಂಘರ್ಷ ಸಮಿತಿಯ ಸುಂದರ್ ಮಾಸ್ತರ್ ಕೂಡ ಇದ್ದರು.

ಜಿಲ್ಲೆಯಲ್ಲಿ ಈಗಾಗಲೇ ಸಮೀಕ್ಷೆ ಮುಗಿದು ಹಂಚಿಕೆಗೆ ಸಿದ್ಧವಾಗಿರುವ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚಬೇಕೆಂದು ದಲಿತ ಸಂಘಟನೆಗಳ ನಿಯೋಗ ಮುಖ್ಯಮಂತ್ರಿಗೆ ಮನವಿ ಮಾಡಿತ್ತು. ಚುನಾವಣೆ ಮುಗುದ ಬಳಿಕ ಈ ಕುರಿತು ಗಮನ ಹರಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಹೀಗೆ ಮನವಿ ಮಾಡಿದ್ದ ನಿಯೋಗದಲ್ಲಿದ್ದ ಶಿಕ್ಷಕ ಸುಂದರ್ ಮಾಸ್ತರ್ ಅವರನ್ನು ಚುನಾವಣಾ ನೀತಿ ಸಂಹಿತೆಯ ನೆಪ ಹೇಳಿ ಇದೀಗ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಅಮಾನತು ಮಾಡಿ ಆದೇಶಹೊರಡಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ನೌಕರರು ಯಾವುದೆ ಅಭ್ಯ್ರಥಿಯ ಪರ ಪ್ರಚಾರ ಮಾಡುವಂತಿಲ್ಲ, ಪ್ರಚಾರ ಸಭೆಗಳಲ್ಲಿ ಭಾಗವಹಿಸುವಂತಿಲ್ಲ ಎಂದೆಲ್ಲ ನಿಯಮಗಳಿವೆ. ಆದರೆ ಸರ್ಕಾರಿ ನೌಕರರು ಅದರಲ್ಲೂ ದಲಿತ ಸಂಘಟನೆಗಳಲ್ಲಿ ಇರುವ ಸರ್ಕಾರಿ ನೌಕಕರು ತಮ್ಮ ಕುಂದುಕೊರತೆಗಳನ್ನು ಮುಖ್ಯಮಂತ್ರಿಗಲ ಬಳಿ ಹೇಳಿಕೊಳ್ಳಲು ಯಾವ ಅಭ್ಯಂತರವೂ ಕಾನೂನಿನಲ್ಲಿ ಇಲ್ಲ. ಸುಂದರ್ ಮಾಸ್ತರ್ ಕೂಡ ಯಾವುದೆ ರಾಜಕೀಯ ಪಕ್ಷಗಳ ಪರ ಪ್ರಚಾರಕ್ಕಾಗಿ ಹೋಗಿಲ್ಲ. ಪ್ರಚಾರ ಮಾಡಿಲ್ಲ. ಸಭೆಯಲ್ಲಿ ಭಾಗವಹಿಸಿಲ್ಲ. ದಲಿತ ಸಮುದಾಯದ ಹಕ್ಕಿನ ಭೂಮಿಯನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಲಷ್ಟೆ ಹೋಗಿದ್ದ ಸುಂದರ್ ಮಾಸ್ತರ್ ಅವರನ್ನು ಯಾವುದೆ ಶೋಕಾಸ್ ನೊಟೀಸ್ ಕೂಡ ಕೊಡದೆ ಅಮಾನತು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ದಲಿತ ಸಂಘಟನೆಗಳು ಸುಂದರ್ ಮಾಸ್ತರ್ ಅವರ ಅಮಾನತಿನ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿವೆ ಎನ್ನಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ