ಮೋದಿ ಪ್ರಧಾನಿ ಆಗಬೇಕು, ಆದರೆ ಕ್ರಿಯಾಶೀಲ ಸಂಸದರೂ ಬೇಕು ತಾನೆ? ಶೋಭಾ ವಿರುದ್ಧ ಇನ್ನೂ ತಣಿದಿಲ್ಲ ಅಸಮಾಧಾನ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ವ್ಯಾಪಕ ವಿರೋಧದ ನಡುವೆಯೂ ಮತ್ತೆ ಬಿಜೆಪಿ ಟಿಕೆಟ್ ಗಿಟ್ಟಿಸಿದ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಇನ್ನೂ ಶಮನಗೊಂಡಂತಿಲ್ಲ. ಬಿಜೆಪಿ ಕಾರ್ಯಕತರಲ್ಲಿ ಹಲವರು ಶೋಭಾ ಕರಂದ್ಲಾಜೆ ಮೋದಿ ಹೆಸರು ಹೇಲಿ ಮತ ಯಾಚನೆ ಮಾಡುತ್ತಿರುವುದನ್ನು ವಿರೋಧಿಸುತ್ತಿದ್ದಾರೆ. ಮೋದಿ ಪ್ರಧಾನಿ ಆಗಬೇಕು ನಿಜ, ಆದರೆ ನಮಗೆ ಸ್ಥಳೀಯವಾಗಿ ಕ್ರಿಯಾಶೀಲರಾದ ಸಮರ್ಥ ಸಂಸದರು ಬೇಕು ಎನ್ನುವುದು ಅವರ ಆಗ್ರಹವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಮೋದಿ ಹೆಸರಿನಲ್ಲಿ ಮತ ಕೇಳುವುದನ್ನು ಬಿಡಬೇಕು ಮತ್ತು ಉಡುಪಿಯಲ್ಲಿ ಮೋದಿ ಮುಖ ನೋಡಿ ಮತದಾನ ಮಾಡಿ ಎನ್ನುವುದನ್ನೂ ನಿಲ್ಲಿಸಬೇಕು ಎಂಬುದು ಬಿಜೆಪಿಯ ಒಂದು ವರ್ಗದ ಕೂಗಾಗಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಶೋಭಾ ಕರಂದ್ಲಾಜೆ ಅವರ ವಿರುದ್ಧ ಅಸಮಾಧಾನದ ಸಂದೇಶಗಳನ್ನು ಬಿಜೆಪಿ ಕಾರ್ಯಕರ್ತರೆ ವೈರಲ್ ಮಾಡುತ್ತಿದ್ದಾರೆ. ಅಂತಹ ಇನ್ನೊಂದು ಸಂದೇಶ ಇತ್ತೀಚೆಗೆ ವೈರಲ್ ಆಗಿದೆ. ಅದರಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನು ಕುರಿತು ಅಂಧಾಭಿಮಾನ ಸರಿಯಲ್ಲ ಎಂಬಂತೆ ಬರೆಯಲಾಗಿದೆ. ಆ ಸಂದೇಶದ ಸ್ಂಪೂರ್ಣ ಪಾಠ ಇಂತಿದೆ.

ಮೋದಿ ಪ್ರಧಾನಿ ಆಗಬೇಕು, ಆದರೆ ಕ್ರಿಯಾಶೀಲ ಸಂಸದರೂ ಬೇಕು. ಅಭಿಮಾನ ಇರಬೇಕು - ಅಂಧಾಬಿಮಾನವಲ್ಲ
ಒಬ್ಬ ವ್ಯಕ್ತಿ ತಪ್ಪು ಮಾಡಿದಾಗ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಆತನಿಗೆ ತಿಳಿ ಹೇಳುವುದು ಪರಂಪರೆ, ಅಲ್ಲಿ ಹಿರಿಯರು, ಕಿರಿಯರು ಎಂಬ ವಯಸ್ಸಿನ ವ್ಯತ್ಯಾಸ ಇರುವುದಿಲ್ಲ. ಗುರು, ಶಿಷ್ಯ ಎಂಬ ಅಂತರವಿರುವುದಿಲ್ಲ.  ತನಗಿಂತ ಕಿರಿಯನಾಗಿರಲಿ ಅಥವಾ ತನ್ನ ಶಿಷ್ಯನೇ ಆಗಿರಲಿ,ನನಗೆ  ಬುದ್ದಿ ಹೇಳಲು  ಹೊರಟಿದ್ದಾನಲ್ಲ ಎಂಬ ಅಹಂ ಇರಬಾರದು, ಹಾಗೇನಾದರು ಆದರೆ ಅದು ಅವನ ಬೆಳವಣಿಗೆಗೆ ಪೂರಕವಾಗಲಾರದು.  ಬದಲಿಗೆ ಅವನನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತದೆ. ಎಂಬುದು ಸಾರ್ವಕಾಲಿಕ ಸತ್ಯ.

ಒಂದು ವಿಷಯವನ್ನು ಪರಾಮರ್ಶಿಸದೆ ಅದು ಸರಿ ಎಂಬ ತೀರ್ಮಾನಕ್ಕೆ ಬರುವುದಾಗಲಿ, ಕುರುಡಾಗಿ ಅದನ್ನು ಒಪ್ಪಿಕೊಳ್ಳುವುದಾಗಲಿ, ಬೆಳವಣಿಗೆಯ ದೃಷ್ಟಿಯಿಂದ ಹಿತಕರವಾಗಿರಲಾರದು. ನಾನು ಹೇಳಿದ್ದನ್ನೆ ನನ್ನ ಹಿಂಬಾಲಕರು ಅನುಸರಿಸಿಕೊಂಡು ಹೋದರೆ ನನ್ನ ತಪ್ಪುಗಳು ನನ್ನ ಅರಿವಿಗೆ ಬರುವುದೇ ಇಲ್ಲ. ಈ  ತಪ್ಪುಗಳು, ನನ್ನನ್ನು ಅನುಸರಿಸಿಕೊಂಡು ಬಂದವರಿಗೂ ಮಾರಕ, ನಾನು ಹೇಳಿದ್ದೆಲ್ಲವನ್ನು ಸರಿ ಎಂದು ಪ್ರತಿಪಾದಿಸುವ ತಮ್ಮ ತಪ್ಪು ನಡೆಯಿಂದ ಪಶ್ಚಾತ್ತಾಪ ಪಡಬೇಕಾದ ದಿನಗಳು ಬಂದೊದಗಬಹುದು.

ಈ ಪೀಠಿಕೆಗೆ ಕಾರಣವಿಷ್ಟೆ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದೆಗೆ ಟಿಕೆಟ್ ಅಂತಿಮವಾಗುವ ಮೊದಲು, ಅವರು ಮತ್ತೊಮ್ಮೆ ಬೇಡ, ಎನ್ನುವ ಸಕಾರಣವನ್ನು ನೀಡಿ, ಅವರ ಸ್ಪರ್ಧೆಯ ಇಂಗಿತಕ್ಕೆ ಹೆಚ್ಚಿನವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ವಿರೋಧಿಸಿದವರಲ್ಲಿ ಜನಪ್ರತಿನಿಧಿಗಳು, ಕಾರ್ಯಕರ್ತರು, ಮತದಾರರು, ವಿರೋಧಿಗಳು ಅಥವಾ ಪಕ್ಷದ ಇನ್ನೊಂದು ಬಣದವರು ಎಂಬ ತಾರತಮ್ಯವಿರಲಿಲ್ಲ. ಬಹುತೇಕ 8 ವಿಧಾನಸಭಾ ಕ್ಷೇತ್ರದ ಎಲ್ಲರೂ ಇವರ ಅಭ್ಯರ್ಥಿತನವನ್ನು ವಿರೋಧಿಸಿದ್ದರು. ಇಷ್ಟೆಲ್ಲ ಆಗಿಯೂ, ಆಕೆ ತನ್ನೆಲ್ಲ ಬಲವನ್ನು ಪ್ರಯೋಗಿಸಿ ಟಿಕಟ್ ದಕ್ಕಿಸಿಕೊಂಡು ಬಂದರು. ಈಗ, ಅಂದು ವಿರೋಧಿಸಿದವರು, ನಮಗೆ ಅಭ್ಯರ್ಥಿ ಮುಖ್ಯವಲ್ಲ ಮೋದಿ ಪ್ರಧಾನಿಯಾಗುವುದು ಮುಖ್ಯ ಎಂಬ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೋದಿಯೇ ಪ್ರಧಾನಿಯಾಗುತ್ತಾರೆ ಎಂಬ ಭರವಸೆ ಮತ್ತು ನಂಬಿಕೆ ಆರಂಭದಲ್ಲಿಯೂ ಇತ್ತು, ಈಗಲೂ ಇದೆ. ಹಾಗಿರುವಾಗ ಅಂದು ವಿರೋಧಿಸಿ ಇಂದು ತಮ್ಮ ನಿಲುವುಗಳನ್ನು ಬದಲಾಯಿಸಿಕೊಂಡದ್ದು ಎಷ್ಟು ಸರಿ? ಒಬ್ಬ ಉತ್ತಮ ನಾಯಕನ, ನಾಯಕತ್ವದ ಅಧೀನದಲ್ಲಿ ಇರುವವರು ತಕ್ಕ ಮಟ್ಟಿಗಾದರೂ ಆ ನಾಯಕನ ಗುಣ ಲಕ್ಷಣಗಳನ್ನು, ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕಾಗಿರುವುದು ತೀರ ಅವಶ್ಯಕ. ಆದರೆ ಯಾವುದೊ ಒಂದು ಕಾರಣಕ್ಕಾಗಿ, 8 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಭಾವನೆಗೆ ಬೆಲೆ ಕೊಡದೆ ಹೋದದ್ದು, ಕಾರ್ಯಕರ್ತರ ಗೆಲುವೋ ಪಕ್ಷದ ಗೆಲುವೋ? ಎಂದು ನಿರ್ಣಯಿಸಬೇಕಾಗಿದೆ.

ಮೋದಿಯನ್ನು ಗೆಲ್ಲಿಸಬೇಕೆಂದು ಪಣ ತೊಟ್ಟು ಆ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ನಾವು ಬಯಸುತ್ತಿರುವಾಗ ಕ್ರೀಯಾಶೀಲ, ವ್ಯಕ್ತಿತ್ವದ ಪ್ರತಿನಿಧಿಯೆ ಸಂಸತ್ತಿಗೆ ಆಯ್ಕೆಯಾಗಿ ಬರಬೇಕು  ಎಂಬುದು ಕೂಡಾ ನಮ್ಮ ಅಪೇಕ್ಷೆ ಆಗಿರಬೇಕು ತಾನೆ? ಹಾಗಾದರೆ ಆ ಜವಾಬ್ದಾರಿಯಿಂದ ಪಕ್ಷ ನುಣಿಚಿಕೊಂಡರೆ ಅದಕ್ಕೆ ಪಕ್ಷ ಬೆಲೆ ತರಬೇಕೆ ಹೊರತು ನಾವಲ್ಲ.ಇನ್ನು ನಾಳಿನ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂಧಿಸುವ ಪ್ರತಿನಿಧಿ ಯಾರು? ಮೋದಿಯೋ ಅಥವಾ ಇಲ್ಲಿ ಗೆಲುವು ಸಾಧಿಸಿದ ಸಂಸದೆಯೋ? ಹಾಗಾದರೆ ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಕಾರ್ಯಕರ್ತರ ಮೇಲೆ ಪಕ್ಷ ಸವಾರಿ ಮಾಡಿದಂತಾಗಿಲ್ಲವೇ....?

ಎಂತಾದರು ಸರಿ, ನಾವು ಮೋದಿಗೆ ಮತ ಹಾಕುವುದು ಎಂದು ಹೇಳುವ ನಮ್ಮ ಮುಗ್ಧತೆ ನಮ್ಮ ದೌರ್ಬಲ್ಯವಾಗಿ , ನಿಷ್ಕ್ರಿಯರಿಗೆ ವರವಾಗಿ ಪರಿಣಮಿಸುತ್ತದೆ.

ಈ ಹಿಂದಿನ 5 ವರುಷದಲ್ಲಿ  ಹಾಲಿ ಸಂಸದೆಯ ಕಾರ್ಯಕ್ಷಮತೆ ನೋಡಿ, ತಿಳಿದ ಅನುಭವ ನಮಗಿದೆ, ಅವರು ಎನೆಂದು  ಅವರಿಗೂ ಗೊತ್ತಿದೆ. ಈ ಕೀಳರಿಮೆಯಿಂದಾಗಿ ಸ್ವತಃ ಅಭ್ಯರ್ಥಿಯೇ , ಮೋದಿಯನ್ನು ನೋಡಿ ನನಗೆ ಮತ ಹಾಕಿ ಎಂದು ಹೇಳುತ್ತಿದ್ದಾರೆ, ನಾವು ಅದನ್ನೆ ಹೇಳುತ್ತಿದ್ದೇವೆ.

ನಾವು ಮತ ಹಾಕಿದ್ದು ಮೋದಿಗೆ, ಅಭ್ಯರ್ಥಿ ಮತ ಕೇಳಿದ್ದು ಮೋದಿಗೆ, ಅಂದರೆ ಅಭ್ಯರ್ಥಿ ಗೆದ್ದ ಮೇಲೆ ಸಮಾಜದ ಸಮಸ್ಯೆಗಳಿಗೆ ಉತ್ತರದಾಯಿ ಯಾರು? ಇದನ್ನು ಈಗಲೇ ಯೊಚಿಸುವುದೊಳಿತು. ಹಾಗಾಗಿ, ಇರುಳಿನಲ್ಲಿ ಕಂಡ ಬಾವಿಗೆ ಹಗಲಿನಲ್ಲಿ ಬೀಳುವ ಸಾಹಸ ನಮ್ಮದಾಗುವುದು ಬೇಡ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸೋಲು, ಗೆಲುವು, ಮೋದಿಯವರು ಪ್ರಧಾನಿಯಾಗುವುದನ್ನು ನಿರ್ಣಯಿಸುವುದಿಲ್ಲ.

ಅಮೇರಿಕಾದಲ್ಲಿ ನಡೆಯುವ, ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಚುನಾವಣಾ ಶೈಲಿಯಂತೆ, ನೇರವಾಗಿ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವ ಕಾನೂನು ಭಾರತದಲ್ಲಿ ಇಲ್ಲ .ಇಲ್ಲಿ ನಮ್ಮ ಮತ ನಮ್ಮ ಪ್ರತಿನಿಧಿಗೆ ಹೊರತು ಪ್ರಧಾನಿಗೆ ಅಲ್ಲ.ಇದು ನಮಗೆ ಗೊತ್ತಿರಬೇಕು.

ಮೋದಿಯವರ ಕೈಯನ್ನು ಬಲಪಡಿಸುವುದಕ್ಕೆ , ಅವರ ಯೋಗ್ಯತೆ ಮತ್ತು ಅರ್ಹತೆಗೆ ಸರಿಸಮಾನರಾದ, ಸಮರ್ಥರನ್ನು ಆರಿಸುವುದು ಈ ದೇಶದ ಜನತೆಯ ಜವಾಬ್ದಾರಿ.  ಅಂತಹ ಯೋಗ್ಯರನ್ನು ಆಯ್ಕೆ ಮಾಡುವ ಅವಕಾಶ ಈಗ ನಮಗೆ ದೊರಕಿಲ್ಲ. ಹಾಗಾಗಿ ನಾವು ಆಯ್ಕೆ ಮಾಡುವ ಸಂಸದೆಯಿಂದಾಗಿ ಮೋದಿಯವರಿಗೆ ಕಳಂಕ ತರುವ ಕೆಲಸ ನಮ್ಮಿಂದಾಗುವುದು ಬೇಡ. ಹಾಗಾದಾಗ ಮಾತ್ರ ,  ಪಾರ್ಟಿ ವಿತ್ ಡಿಪರೆನ್ಸ್ ಎಂದು ಹೇಳುವ ಬಿಜೆಪಿಯ  ಘೋಷಣಾ ವಾಕ್ಯಕ್ಕೆ ಮೌಲ್ಯ ಬರುತ್ತದೆ.

ತಾನು ಎಂ.ಪಿ  ಆಗುವುದಕ್ಕಾಗಿ ಮೋದಿಯ ಹೆಸರನ್ನು ಬಳಕೆ ಮಾಡಿಕೊಳ್ಳುವುದನ್ನು ವಿರೋಧಿಸೋಣ.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಭಾರತ ಮಾತೆ ವಿಜೃಂಬಿಸಲಿ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ