ವಯನಾಡ್‌ನಲ್ಲಿ ಸ್ಪರ್ಧೆ ಮಾಡಿದರೂ ಮನೆಯ ಮಗನಿಗೆ ನಮ್ಮ ಮತ ಎಂದ ಅಮೇಠಿಯ ಮತದಾರ!

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಎರಡನೆಯ ಕ್ಷೇತ್ರವಾಗಿ ಕೇರಳದ ವಯನಾಡ್ ಅನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಯ್ಕೆ ಮಾಡಿಕೊಂಡಿದ್ದರೂ ಸಹ ಮನೆಯ ಮಗನ ಕೈ ಬಿಡಲು ಅಮೇಠಿಯ ಮತದಾರ ತಯಾರಿಲ್ಲ ಎಂದು ಅಮೇಠಿ ಕ್ಷೇತ್ರದ ಮತದಾರರು ಅಭಿಪ್ರಾಯಪಡುತ್ತಿದ್ದಾರೆ.

ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ಅಮೇಠಿಯ ಮತದಾರ ಈ ಬಾರಿಯೂ ರಾಹುಲ್ ಗಾಂಧಿಯ ಕೈ ಬಿಡುವುದಿಲ್ಲ ಎಂಬ ಭರವಸೆ ಕ್ಷೇತ್ರದಾದ್ಯಂತ ವ್ಯಕ್ತವಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ.

ರಾಹುಲ್ ಗಾಂಧಿ ವಯನಾಡ್‌ನಿಂದಲೂ ಸ್ಪರ್ಧೆ ಮಾಡುತ್ತಿದ್ದಾರೆ, ಇದರಿಂದಾಗಿ ಅಮೇಠಿಯ ಕಾಂಗ್ರೆಸ್ ಪಕ್ಷದ ಮತದಾರರು ಮತ್ತು ರಾಹುಲ್ ಗಾಂಧಿಯ ಅಭಿಮಾನಿಗಳು ವಿಚಲಿತರಾಗಿರಬಹುದೆ ಎಂದು ಕ್ಷೇತ್ರದಲ್ಲಿ ಸುತ್ತಾಡಿದಾಗ ಅಮೇಠಿಯ ಮತದಾರ ರಾಹುಲ್ ಗಾಂಧಿಯ ನಿರ್ಧಾರದಿಂದ ವಿಚಲಿತರಾದಂತೆ ಕಂಡುಬಂದಿಲ್ಲ. ರಾಹುಲ್ ಗಾಂಧಿ ಅಮೇಠಿಯ ಮನೆಯ ಮಗನಾಗಿದ್ದು ಇಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಹೊರಗಿನವರಾಗಿದ್ದಾರೆ. ರಾಹುಲ್ ಗಾಂಧಿ ಇಲ್ಲಿ ಪ್ರತಿಯೊಂದು ಮನೆಯಲ್ಲೂ ಮನೆಯ ಮಗನಂತೆ ಎಂದು ಭಾವಿಸುತ್ತಾರೆ. ಹೀಗಾಗಿ ರಾಹುಲ್ ಗಾಂಧಿ ಈ ಬಾರಿಯೂ ಅಮೇಠಿಯಲ್ಲಿ ಭಾರಿ ಅಂತರದಿಂದ ಗೆಲ್ಲುತ್ತಾರೆ ಎಂದು ಅಮೇಠಿಯ ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಈ ಮಾತನ್ನು ಅಮೇಠಿಯ ಸಾಮಾನ್ಯ ಮತದಾರರೂ ಒಪ್ಪುತ್ತಿದ್ದಾರೆ. ‘ಅಮೇಠಿಯಲ್ಲಿ ಏನೆಲ್ಲ ಅಭಿವೃದ್ಧಿ ನಡೆದಿದೆಯೊ ಅದೆಲ್ಲವೂ ಕಾಂಗ್ರೆಸ್ ಪಕ್ಷದಿಂದಲೇ ಆಗಿದೆ’ ಎಂದು ದಾರ್ದಾ ಗ್ರಾಮದ ರಾಮ್ ಮಿಶ್ರಾ ಹೇಳುತ್ತಾರೆ.

ಅಮೇಠಿಯ ಹಳ್ಳಿಗಳ ನಡುವೆ ಸಂಪರ್ಕ ರಸ್ತೆಗಳು ರಾಜೀವ್ ಗಾಂಧಿಯ ಕಾಲದಲ್ಲಿ ಆಯಿತು. ರಾಹುಲ್ ಗಾಂಧಿ ಅದೇ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅಮೇಠಿ ರಾಹುಲ್ ಗಾಂಧಿಯ ಕಾರಣ ಒಂದು ವಿಐಪಿ ಕ್ಷೇತ್ರವಾಗಿದೆ. ಬಿಜೆಪಿಗೆ ಮತ ಹಾಕುವ ಮೂಲಕ ನಾವು ಆ ವಿಐಪಿ ಸ್ಥಾನ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಕ್ಷೇತ್ರದ ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜೀವ್ ಮತ್ತು ರಾಹುಲ್ ಗಾಂಧಿಯ ದೂರದೃಷ್ಟಿಯ ಪರಿಣಾಮ ಅಮೇಠಿ ಅಭಿವೃದ್ಧಿ ಕಂಡಿದೆ ಎಂದು ಮತದಾರರು ಹೇಳಿದ್ದಾರೆ.

ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ‘ರಾಹುಲ್ ಗಾಂಧಿ ಗೆದ್ದರೆ ಅವರು ವಿಐಪಿ ಆಗಿರುತ್ತಾರೆ, ನಿಮ್ಮ ಕೈಗೆ ಸಿಗುವುದಿಲ್ಲ’ ಎಂದು ಹೇಳುತ್ತಿದ್ದರು. ಆದರೆ ಸಚಿವೆ ಆದ ಬಳಿಕ ಸ್ವತಃ ಸ್ಮೃತಿ ಇರಾನಿ ಅವರೇ ವಿಐಪಿ ಆಗಿದ್ದಾರೆ. ಅವರು ಈ ಕ್ಷೇತ್ರಕ್ಕೆ ಮಾಡುತ್ತೇನೆ ಎಂದು ಹೇಳಿದ ಯಾವ ಕೆಲಸಗಳನ್ನೂ ಮಾಡಿಲ್ಲ ಎಂದು ಮತದಾರರು ದೂರಿದರು.

ಅಮೇಠಿಯ ವಿಧಾನ ಪರಿಷತ್ ಸದಸ್ಯರಾಗಿರುವ ದೀಪಕ್ ಸಿಂಗ್ ಅವರ ಪ್ರಕಾರ ಈಗ ಸ್ಪರ್ಧೆ ಏನಿದ್ದರೂ ಅಮೇಠಿ ಮತ್ತು ವಯನಾಡ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಿನಃ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಲ್ಲ. ಯಾವ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರಿಗೆ ಹೆಚ್ಚು ಮತಗಳು ಸಿಗುತ್ತವೆ ಎಂಬ ಬಗ್ಗೆ ಈಗ ಸ್ಪರ್ಧೆ ನಡೆಯಲಿದೆ ಎಂದು ದೀಪಕ್ ಸಿಂಗ್ ಹೇಳುತ್ತಾರೆ.

ಕ್ಷೇತ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರದ ಬಗ್ಗೆ ಹಲವರಲ್ಲಿ ಸಂತೃಪ್ತಿ ಇದ್ದರೂ ರಾಹುಲ್ ಗಾಂಧಿಯನ್ನು ಸೋಲಿಸಲು ಸದ್ಯಕ್ಕೆ ಈ ಕ್ಷೇತ್ರದಲ್ಲಿ ಬಿಜೆಪಿ ಹರಸಾಹಸವೇ ಪಡಬೇಕಾದೀತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ