ಯಡಿಯೂರಪ್ಪನಿಂದ ಕೇಂದ್ರ ಬಿಜೆಪಿ ನಾಯಕರಿಗೆ 1800 ಕೋಟಿ ಪಾವತಿ!

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಬಿಜೆಪಿಯ ಕೇಂದ್ರ ನಾಯಕರಿಗೆ 1800 ಕೋಟಿಗೂ ಅಧಿಕ ಮೊತ್ತದ ಪಾವತಿಗಳನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ನವದೆಹಲಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ವಕ್ತಾರ ರಂಧೀಪ್ ಸಿಂಗ್ ಸುರ್ಜೆವಾಲಾ ಈ ಆರೋಪಗಳನ್ನು ಮಾಡಿದ್ದು ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಯನ್ನು ಮುಜುಗರಕ್ಕೆ ಈಡು ಮಾಡಿದ್ದಾರೆ.

2009ರ ಕರ್ನಾಟಕ ವಿಧಾನಸಭೆಯ ಡೈರಿ ಒಂದರಲ್ಲಿ ಯಡಿಯೂರಪ್ಪ ತಮ್ಮ ಸ್ವಹಸ್ತಾಕ್ಷರದಲ್ಲೆ ಈ ಕುರಿತು ಬರೆದಿಟ್ಟ ದಾಖಲೆ ಕಾರವಾನ್ ಮ್ಯಾಗಝೀನ್‌ಗೆ ದೊರೆತಿದೆ ಎನ್ನಲಾಗಿದೆ. ಈ ಕುರಿತು ಕಾರವಾನ್ ಪತ್ರಿಕೆ ಲೇಖನವೊಂದನ್ನು ಪ್ರಕಟಿಸಿದೆ.

ಕಾರವಾನ್ ಗೆ ಲಭಿಸಿರುವ ಡೈರಿ ಪುಟಗಳ ಪ್ರಕಾರ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಯಡಿಯೂರಪ್ಪ 1000 ಕೋಟಿಯನ್ನು ಪಾವತಿ ಮಾಡಿದ್ದಾರೆ. ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ನಿತಿನ್ ಗಡ್ಕರಿಗೆ 150 ಕೋಟಿ, ಗೃಹ ಸಚಿವ ರಾಜನಾಥ ಸಿಂಗ್‍ಗೆ 100 ಕೋಟಿ, ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿಗೆ 50 ಕೋಟಿ, ಮುರಳಿ ಮನೋಹರ ಜೋಶಿಗೆ 50 ಕೋಟಿ ಕೊಟ್ಟಿದ್ದಾರೆ. ಜೊತೆಗೆ ನಿತಿನ್ ಗಡ್ಕರಿಯ ಮಗಳ ಮದುವೆಗೆ ಹತ್ತು ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದು ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ ನ್ಯಾಯಾಧೀಶರು, ವಕೀಲರಿಗೆ ಪಾವತಿ ಮಾಡಿದ ಹಣದ ವಿವರಗಳೂ ಈ ಡೈರಿಯಲ್ಲಿ ಇದೆ ಎಂದು ಕಾರವಾನ್ ಮ್ಯಾಗಝೀನ್ ಪ್ರಕಟಿಸಿದೆ.

ಈ ಡೈರಿಯು ಐಟಿ ದಾಳಿಯ ವೇಳೆ ಅಧಿಕಾರಿಗಳಿಗೆ ಸಿಕ್ಕಿದ್ದು ಕೇಂದ್ರ ಸರ್ಕಾರದ ಗಮನಕ್ಕೆ ತಂದರೂ ಅವರು ಸರ್ಕಾರ ಕ್ರಮಕೈಗೊಳ್ಳಲಿಲ್ಲ ಎನ್ನಲಾಗುತ್ತಿದೆ. ಈ ಡೈರಿಯಲ್ಲಿರುವ ವಿಷಯಗಳನ್ನು ಲೋಕಪಾಲ್ ತನಿಖೆಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ