ಕರಾವಳಿ ಕರ್ನಾಟಕ ವರದಿಉಡುಪಿ: ಕುತೂಹಲಕರ ಬೆಳವಣಿಗೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಎಲ್ಲ ಗೊಂದಲಗಳಿಗೆ ತೆರೆ ಎಳೆದು ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕಿಳಿಸುವ ಮೂಲಕ ಜಯಪ್ರಕಾಶ ಹೆಗ್ಡೆ ಮತ್ತು ಅವರ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಅಭ್ಯರ್ಥಿಯಾಗುವ ಕುರಿತು ಪಕ್ಷದ ಹೈಕಮಾಂಡ್ ಪ್ರಮೋದ್ಗೆ ಅನುಮತಿ ನೀಡಿಲ್ಲ. ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರವಷ್ಟೆ ಪ್ರಮೋದ್ ಜೆಡಿಎಸ್ ಅಭ್ಯರ್ಥಿಯಾಗಬಹುದು ವಿನಃ ಪಕ್ಷದಲ್ಲಿದ್ದುಕೊಂಡೆ ಜೆಡಿಎಸ್ ಅಭ್ಯರ್ಥಿಯಾಗಲು ಸಾಧ್ಯವಿಲ್ಲ, ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದರೂ ಅಧಿಕೃತವಾಗಿ ಅವರು ಜೆಡಿಎಸ್ ಸದಸ್ಯರಾಗಿ ಇರುತ್ತಾರೆ ಎಂದು ಕಾಂಗ್ರೆಸ್ ಈಗಾಗಲೇ ಸ್ಪಷ್ಟಪಡಿಸಿದೆ ಎನ್ನಲಾಗುತ್ತಿದೆ. ಆದರೂ ಜಿದ್ದಿಗೆ ಬಿದ್ದಿರುವ ಪಮೋದ್ ಸ್ಥಳೀಯ ಕಾಂಗ್ರೆಸ್ ನಾಯಕರ ಅಸಮಾಧಾನವನ್ನೂ ಲೆಕ್ಕಿಸದೆ ಜೆಡಿಎಸ್ ಬಿ ಫಾರ್ಮ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಪಾಳಯದಲ್ಲಿ ಶೋಭಾ ಕರಂದ್ಲಾಜೆ ಅವರ ಕುರಿತು ಒಂದು ಬಣದಲ್ಲಿ ವ್ಯಾಪಕ ಅಸಮಾಧಾನವಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರ ಆಪ್ತರಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಜಯಪ್ರಕಾಶ ಹೆಗ್ಡೆ ಪರ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಅಭಿಯಾನ, ಬಿಜೆಪಿಯ ಒಂದು ಬಣದಿಂದ ‘ಗೋ ಬ್ಯಾಕ್ ಶೋಭಾ’ ಘೋಷಣೆಗಳ ಹೊರತಾಗಿಯೂ ಶೋಭಾ ಕರಂದ್ಲಾಜೆ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.ಉದುಪಿ-ಚಿಕ್ಕಮಗಳೂರು ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಜೆದಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಎಷ್ಟರ ಮಟ್ಟಿಗೆ ಬೆಂಬಲಿಸುತ್ತಾರೆ ಮತ್ತು ಜಯಪ್ರಕಾಶ ಹೆಗ್ಡೆ ಅವರ ಅಭಿಮಾನಿಗಳು ಮತ್ತು ಶೋಭಾ ಕರಂದ್ಲಾಜೆ ಅವರ್ ವಿರೋಧಿ ಬಿಜೆಪಿ ಬಣ ಶೋಭಾ ಕರಂದ್ಲಾಜೆ ಅವರನ್ನು ಬೆಂಬಲಿಸುತ್ತದೆಯೆ ಎಂಬುದನ್ನು ಕಾದುನೋಡಬೇಕಾಗಿದೆ.
5 ಗ್ರಾ.ಪಂ.ಗಳನ್ನು ಸೇರಿಸಿ ಗ್ರೇಟರ್ ಉಡುಪಿ!