ಉಡುಪಿ-ಚಿಕ್ಕಮಗಳೂರು! ಯಾರೇ ಕೂಗಾಡಲಿ, ಬಿಜೆಪಿ ಟಿಕೆಟ್ ಮಾತ್ರ ಶೋಭಾ ಕರಂದ್ಲಾಜೆಗೆ

ಶಶಿಧರ ಹೆಮ್ಮಾಡಿ
ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿವೆ. ಯಾರು ಯಾವ ಕ್ಷೇತ್ರಕ್ಕೆ ಅಭ್ಯರ್ಥಿ ಎಂಬ ಕುರಿತು ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಆದರೆ ಸ್ಪರ್ಧೆ ಮಾಡಲಿರುವ ಆಯಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಹೆಚ್ಚು ಕಡಿಮೆ ಅಂತಿಮಗೊಳಿಸಿವೆ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಊಹಾಪೋಹಗಳು, ಆಂತರಿಕ ಭಿನ್ನಮತ ಅಲ್ಲಲ್ಲಿ ಕೇಳಿಬರುತ್ತಿದೆ. ಬಿಜೆಪಿಯ ಪಾಲಿಗೆ ಅಂತಹ ಒಂದು ಕ್ಷೇತ್ರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.

ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕಳೆದ ಬಾರಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆಯವರ ಎದುರು ಭಾರಿ ಅಂತರದಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದವರು. ಶೋಭಾ ಇಲ್ಲಿ ಗೆಲ್ಲುವುದೇ ಕಷ್ಟ ಎಂಬಂತಹ ವಾತಾವರಣವಿದ್ದಾಗ ಮತ್ತು ಜಯಪ್ರಕಾಶ ಹೆಗ್ಡೆ ಅಲ್ಪ ಅವಧಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಒಳ್ಳೆಯ ಕೆಲಸಗಳನ್ನು ಮಾಡಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಶೋಭಾ ಕರಂದ್ಲಾಜೆ ಇಲ್ಲಿ ಭರ್ಜರಿ ಗೆಲುವು ಸಾಧಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಈಗ ಮತ್ತೆ ಪುನಃ ಶೋಭಾ ಕರಂದ್ಲಾಜೆ ಈ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ರಾಜಕೀಯದಲ್ಲಿ ಏನೂ ನಡೆಯಬಹುದು ಎಂಬ ಮಾತಿಗೆ ನಿದರ್ಶನ ಎಂಬಂತೆ ಕಳೆದ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಪರಸ್ಪರ ಎದುರಾಳಿಯಾಗಿ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ ಮತ್ತು ಜಯಪ್ರಕಾಶ ಹೆಗ್ಡೆ ಈಗ ಬಿಜೆಪಿಯಲ್ಲಿ ಟಿಕೆಟ್ಗಾಗಿ ಸ್ಪರ್ಧೆ ನಡೆಸಿದ್ದಾರೆ. ಜೊತೆಗೆ ಉದುಪಿ ನಗರಸಭಾ ಸದಸ್ಯರಾಗಿ, ಮೀನುಗಾರ ಫೆಡರೇಶನ್ ಅಧ್ಯಕ್ಷರಾಗಿ ಆರೆಸ್ಸೆಸ್ನ ಆಪ್ತವಲಯದಲ್ಲಿರುವ ಯಶ್ಪಾಲ್ ಸುವರ್ಣ ಕೂಡ ಈ ಕ್ಷೇತ್ರದಲ್ಲಿ ಟಿಕೆಟ್ ಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ. ಸಂಘಪರಿವಾರದ ಕಟ್ಟಾಳು ವಿಶ್ವ ಹಿಂದೂ ಪರಿಷತ್ ಮುಖಂಡ, ಉದ್ಯಮಿ ವಿಲಾಸ್ ನಾಯಕ್ ಕೂಡ ಆರೆಸ್ಸೆಸ್ ಕೃಪಾಕಟಾಕ್ಷದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ವಿಶೇಷವೆಂದರೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚಿಕ್ಕಮಗಳೂರು ಕಡೆಯಿಂದ ಟಿಕೆಟ್ ಆಕಾಂಕ್ಷಿಗಳು ಹೆಚ್ಚುಕಡಿಮೆ ಸುದ್ದಿಯಲ್ಲೇ ಇಲ್ಲ. ಬಿಜೆಪಿ ಮಟ್ಟಿಗೆ ಟಿಕೆಟ್‌ನ ಆಟ ಏನಿದ್ದರೂ ಉಡುಪಿಯಲ್ಲಿಯೆ!


                                         ಜಯಪ್ರಕಾಶ ಹೆಗ್ಡೆ

ಶೋಭಾ ಕರಂದ್ಲಾಜೆಗೆ ಸೀಟು ಸಿಗುವುದಿಲ್ಲ ಎಂದು ಬಿಜೆಪಿಯ ಒಂದು ವರ್ಗ ಗಾಢವಾಗಿ ನಂಬಿದೆ. ಅದಕ್ಕೆ ಕಾರಣವೂ ಇದೆ. ಸಂಸದರಾಗಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಶೋಭಾ ಅವರ ಮೇಲೆ ಬಿಜೆಪಿಯೇ ಆರೋಪ ಮಾಡುತ್ತಿದೆ. ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಸ್ಥಳೀಯ ಘಟಕಗಳ ಹಲವು ಪದಾಧಿಕಾರಿಗಳು ಶೋಭಾ ಅವರ ವಿರುದ್ಧ ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ಪಕ್ಷದ ಸಭೆಗಳಲ್ಲೂ ಶೋಭಾ ಅವರಿಗೆ ಹಲವೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಇದು ಒಂದು ಬಗೆಯ ವಿರೋಧವಾದರೆ ಇನ್ನೊಂದು ಕಡೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಮತ್ತು ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಶೋಭಾ ಅವರಿಗೆ ಬಿರುಸಿನ ಸ್ಪರ್ಧೆ ಒಡ್ಡಿದ್ದಾರೆ.

ಶಾಸಕರಾಗಿ, ಸಂಸದರಾಗಿ, ರಾಜ್ಯದ ಸಚಿವರಾಗಿ ಅಪಾರ ಅನುಭವ ಉಳ್ಳ ಜಯಪ್ರಕಾಶ ಹೆಗ್ಡೆ ಕಾಂಗ್ರೆಸ್ನಿಂದ ಬೇಸತ್ತು ಬಿಜೆಪಿ ಸೇರಿದ್ದಾರೆ. ಬಿಜೆಪಿ ಸೇರಿದಂದಿನಿಂದಲೂ ಅವರ ಕಣ್ಣು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೇಲೆಯೇ ಇದೆ ಎನ್ನುವುದು ಪರಮ ಸತ್ಯ. ಹೀಗಾಗಿ ಆ ದಿಸೆಯಲ್ಲಿ ಅವರು ನಿತ್ಯವೂ ಪ್ರಯತ್ನ ನಾಡೆಸುತ್ತಿದ್ದಾರೆ ಮತ್ತು ಚುನಾವಣೆ ಸಮೀಪಿಸುತ್ತಿರುವಂತೆ ಜಯಪ್ರಕಾಶ ಹೆಗ್ಡೆ ಅವರ ಬಣ ಶೋಭಾ ಕರಂದ್ಲಾಜೆಗೆ ಮತ್ತೆ ಈ ಕ್ಷೇತ್ರದಿಂದ ಟಿಕೆಟ್ ಸಿಗದಂತೆ ವಿರುದ್ಧ ಎಲ್ಲೆಲ್ಲಿ ಸಾಧ್ಯವೊ ಅಲ್ಲಲ್ಲಿ ಪ್ರತಿರೋಧ ಒಡ್ಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ‘ಗೋ ಬ್ಯಾಕ್ ಶೋಭಾ’ ಎಂಬ ಅಭಿಯಾನ ನಡೆಯುತ್ತಿದೆ. ಶೋಭಾ ಅವರಿಗಿಂತ ಜಯಪ್ರಕಾಶ ಹೆಗ್ಡೆ ಹೆಚ್ಚು ಪರಿಣಾಮಕಾರಿಒಯಾಗಿ ಕೆಲಸ ಮಾಡಬಲ್ಲರು ಎಂದು ಬಿಜೆಪಿಯ ಒಂದು ಬಣ ಹೆಗ್ಡೆ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಪಟ್ಟುಹಿಡಿದು ಕೂತಿದೆ. ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಟ್ಟರೆ ಕ್ಷೇತ್ರದಲ್ಲಿ ಗೆಲುವು ಅಸಾಧ್ಯ ಎಂದು ಅಮಿತ್ ಶಾ ತನಕ ಸುದ್ದಿ ಮುಟ್ಟಿಸಲು, ಮನವೊಲಿಸಲು ಕಸರತ್ತು ನಡೆದಿದೆ. ಆದರೆ ಇದೆಲ್ಲ ಫಲ ನೀಡುತ್ತಿದೆಯೆ ಎಂದು ಕೇಳಿದರೆ ಉತ್ತರ ಮಾತ್ರ ಉಹೂಂ…ಸದ್ಯಕ್ಕೆ ಶೋಭಾ ಕರಂದ್ಲಾಜೆ ಅವರ ಪರವಾಗಿಯೇ ಬಿಜೆಪಿ ಹೈಕಮಾಂಡ್ ಗಟ್ಟಿಯಾಗಿ ನಿಂತಿದೆ.

ಶೋಭಾ ಕರಂದ್ಲಾಜೆಯ ಮೇಲೆ ಹೈಕಮಾಂಡ್ಗೆ ಪ್ರೀತಿ ಏಕೆ?
ಶೋಭಾ ಕರಂದ್ಲಾಜೆ ಓರ್ವ ಸಂಸದೆಯಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ ಎಂಬುದಕ್ಕಿಂತ ಅವರು ಪಕ್ಷಕ್ಕಾಗಿ ಏನು ಮಾಡಿದ್ದಾರೆ ಎಂಬುದನ್ನು ಪಕ್ಷಕ್ಕೆ ಮನವರಿಕೆ ಮಾಡಿಕೊಡುವಲಿ ಶೋಭಾ ಕರಂದ್ಲಾಜೆ ಅವರ ಪರವಾಗಿ ಇರುವ ಬಿಜೆಪಿ ಪಾಳಯ ಯಶಸ್ವಿಯಾಗಿದೆ. ಕರಾವಳಿ ಎಂಬ ಸಂಘಪರಿವಾರದ ಹಿಂದೂತ್ವದ ಲ್ಯಾಬೊರೇಟರಿಯಲ್ಲಿ ಶೋಭಾ ಕರಂದ್ಲಾಜೆ ತರಹದ ಫೈರ್ ಬ್ರಾಂಡ್ ನಾಯಕಿಯೆ ಬೇಕು ಎಂಬುದು ಆರೆಸ್ಸೆಸ್ಗೂ ಮನವರಿಕೆಯಾಗಿದೆ. ರಾಜದಲ್ಲಿ ಎಲ್ಲೆಲ್ಲ ಹಿಂದೂ-ಮುಸ್ಲಿಮ್ ಸಂಘರ್ಷದ ಸ್ಥಿತಿ ನಿರ್ಮಾಣವಾಗಿತ್ತೊ ಅಂತಹ ಕೊಲೆ, ಅತ್ಯಾಚಾರ, ಹಿಂಸೆ ಮುಂತಾದ ಎಲ್ಲ ಸಂದರ್ಭಗಳಲ್ಲೂ ಶೋಭಾ ಕರಂದ್ಲಾಜೆ ಭಾರಿ ಹೋರಾಟ ನೀಡಿದವರು. ಎಲ್ಲೆಲ್ಲಿ ಬಿಜೆಪಿ ಮತ್ತು ಸಂಘಪರಿವಾರಕ್ಕೆ ರಾಜಕೀಯ ಲಾಭ ತರುವಂತಹ ಪ್ರಸಂಗಗಳು ನಡೆದಿದೆಯೊ ಅಲ್ಲೆಲ್ಲ ಶೋಭಾ ಅವರ ನಿರಂತರ ಉಪಸ್ಥಿತಿ, ಭಾಷಣ, ಪತ್ರಿಕಾ ಹೇಳಿಕೆಗಳು ಇತ್ಯಾದಿ ಶೋಬಾ ಕರಂದ್ಲಾಜೆ ಅವರನ್ನು ಆರೆಸ್ಸೆಸ್ ವಲಯಕ್ಕೆ ಆಪ್ತವಾಗಿಸಿದೆ. ಬೆಂಗಳೂರಿನ ರುದ್ರೇಶ್ ಕೊಲೆ, ಹೊನ್ನಾವರದ ಪರೇಶ್ ಮೇಸ್ತ ಅನುಮಾನಾಸ್ಪದ ಸಾವು, ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣ ಹೀಗೆ ಶೋಭಾ ಸುದ್ದಿ ಮಾಡದ ಪ್ರಕರಣಗಳಿಲ್ಲ. ಹೀಗಾಗಿ ಬಿಜೆಪಿಯ ಭದ್ರ ಕೋಟೆಯಾಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಏನಿದ್ದರೂ ಆರೆಸ್ಸೆಸ್ ಅನ್ನು ಖುಷಿಪಡಿಸುವವರಿಗೆ ಟಿಕೆಟ್ ಸಿಗಬೇಕು ಎಂಬುದು ಹಾರ್ಡ್ಕೋರ್ ಬಿಜೆಪಿಗರ ವಾದ.

ಇದರ ಜೊತೆಗೆ ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪನವರಿಗೆ ಪರಮಾಪ್ತರು.ಈ ಕಾರಣದಿಂದ ಶೋಭಾಗೆ ಟಿಕೆಟ್ ತಪ್ಪಿ ಹೋಗುವ ಪ್ರಶ್ನೆಯೆ ಉದ್ಭವಿಸದು ಎಂದು ಬಿಜೆಪಿಯಲ್ಲಿ ಅನೇಕರು ನಂಬಿದ್ದಾರೆ. ಮಾತ್ರವಲ್ಲ ಹಾಲಿ ಸಂಸದರನ್ನು ಆಯಾ ಕ್ಷೇತ್ರಗಳಲ್ಲಿ ಮತ್ತೆ ಕಣಕ್ಕಿಳಿಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಹೆಚ್ಚುಕಡಿಮೆ ಘೋಷಿಸಿಯೂ ಆಗಿದೆ. ಸ್ವತಃ ಶೋಭಾ ಕರಂದ್ಲಾಜೆ ಕೂಡ ತಾನೇ ಇಲ್ಲಿಂದ ಮತ್ತೆ ಅಭ್ಯರ್ಥಿ ಎಂಬುದನ್ನು ಪರೋಕ್ಷವಾಗಿ ಆದರೆ ಜೋರಾಗಿಯೇ ಹೇಳಿಕೊಂಡಿದ್ದಾರೆ.  ಹೀಗಾಗಿ ಯಾರು ಎಷ್ಟೇ ಕೂಗಾಡಿದರೂ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಮತ್ತೆ ಬಿಜೆಪಿಯಿಂದ ಕಣಕ್ಕಿಳಿಯುವುದು ಮಾತ್ರ ಸ್ಪಷ್ಟವಾಗುತ್ತಾ ಸಾಗಿದೆ.

ಜಯಪ್ರಕಾಶ ಹೆಗ್ಡೆಗೆ ಏಕೆ ವಿರೋಧ?
ಬಿಜೆಪಿ ಸೇರಿಯಾಯ್ತು. ಕೇಸರಿ ಶಾಲನ್ನೂ ಹಾಕಿ ಆಯ್ತು. ತಾನೊಬ್ಬ ಅಪ್ಪಟ ಹಿಂದೂವಾದಿ ಎಂದೂ ಪೋಸ್ ಕೊಡಲು ಅವರ ಬೆಂಬಲಗರಿಂದ ಪ್ರಯತ್ನವೂ ಆಯ್ತು. ಆದರೂ ಜಯಪ್ರಕಾಶ ಹೆಗ್ಡೆ ಇಂದಿಗೂ ಬಿಜೆಪಿಯ ಒಳಚಾವಡಿಯಲ್ಲಿ ಇರುವ ಜನರಿಗೆ ಆಪ್ತರಾಗಿಲ್ಲ. ಅದಕ್ಕೆ ಕಾರಣ ಜಯಪ್ರಕಾಶ ಹೆಗ್ಡೆ ಅವರ ಜಾತ್ಯತೀತ ರಾಜಕಾರಣದ ಹಿನ್ನೆಲೆ. ಹೆಗ್ಡೆ ಎಷ್ಟೇ ಆದರೂ ಬಿಜೆಪಿಯ ಹಿಂದೂತ್ವವಾದಿ ರಾಜಕಾರಣಕ್ಕೆ ಫಿಟ್ ಆಗಲು ಸಾಧ್ಯವಿಲ್ಲ ಮತ್ತು ಆರೆಸ್ಸೆಸ್ ಹೆಗ್ಡೆಯವರನ್ನು ತಮ್ಮವರು ಎಂದು ಒಪ್ಪಲು ಸಾಧ್ಯವಿಲ್ಲ ಎಂಬ ಮಾತು ಬಿಜೆಪಿ ವಲಯದಲ್ಲೆ ಚಾಲ್ತಿಯಲ್ಲಿದೆ. ಬಿಜೆಪಿ ಇಂದಿಗೂ ಹೆಗ್ಡೆಯವರನ್ನು ಅನುಮಾನದಿಂದಲೇ ನೋಡುತ್ತಿದೆ. ಆರೆಸ್ಸೆಸ್ ಅನ್ನು ತೃಪ್ತಿಪಡಿಸಲು ಯಾವ ಮಟ್ಟಕ್ಕೆ ಇಳಿಯಬೇಕೊ ಆ ಮಟ್ಟಕ್ಕೆ ಇಳಿಯಲು ಹೆಗ್ಡೆ ಕೂಡ ತಯಾರಿಲ್ಲ.

ಕಾಂಗ್ರೆಸ್ ನಲ್ಲಿ ಜಾಗವಿಲ್ಲ ಎಂದು ಇಲ್ಲಿಗೆ ಬಂದವರು, ಅವರು ಯಾವುದೆ ಸ್ಥಾನಮಾನದ ಆಕಾಂಕ್ಷಿಯಾಗಿ ಬಂದವರಲ್ಲ’ ಎಂದು ಶೋಭಾ ಕರಂದ್ಲಾಜೆ ಬಣ ಬಹಿರಂಗವಾಗಿ ಹೆಗ್ಡೆಯವರನ್ನು ಅಣಕಿಸುತ್ತಿದೆ. ಜೊತೆಗೆ ಕರಾವಳಿಯ ಕೆಲವು ಬಿಜೆಪಿ ಶಾಸಕರಿಗೆ ಹೆಗ್ಡೆಯವರನ್ನು ಸಂಸತ್ ಸದಸ್ಯರಾಗಿ ನೋಡಲು ಇಷ್ಟವಿಲ್ಲ ಎಂಬುದೂ ಅಷ್ಟೇ ಸತ್ಯ. ಹೆಗ್ಡೆ ಏನಾದರೂ ಸಂಸದರಾದರೆ ಅವರ ವರ್ಚಸ್ಸು, ಜನಪ್ರಿಯತೆ, ರಾಜಕೀಯ ಅನುಭವ ಮತ್ತು ಸಂಸದೀಯ ಪಾಂಡಿತ್ಯದಿಂದ ತಾವೆಲ್ಲ ಬಿಜೆಪಿಯಲ್ಲಿ ಮೂಲೆಗುಂಪಾಗಿಬಿಡುತ್ತೇವೆ ಎಂದು ಕರಾವಳಿಯ ಅನೇಕ ಬಿಜೆಪಿ ಶಾಸಕರು ಮತ್ತು ನಾಯಕರು ಖಚಿತವಾಗಿ ನಂಬಿದ್ದಾರೆ. ಹೀಗಾಗಿ ಅಂತಹವರೆಲ್ಲ ಹೆಗ್ಡೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಹೆಗ್ಡೆ ಬೆಂಬಲಿಗರು ಆರಂಭಿಸಿರುವ ಹ್ಯಾಶ್ ಟ್ಯಾಗ್ ಅಭಿಯಾನ, ಅಮಿತ್ ಶಾಗೆ ಅವರ ಬೆಂಬಲಿಗರು ಬರೆಯುತ್ತಿರುವ ಪತ್ರಗಳು, ಇತರ ಹೋರಾಟಗಳು ಸದ್ಯಕ್ಕೆ ಹೆಗ್ಡೆ ಪರವಾಗಿ ದೊಡ್ಡ ಮಟ್ಟದಲ್ಲಿ ಲಾಬಿ ಮಾಡುವ ಹಂತಕ್ಕೆ ತಲುಪಿಲ್ಲ.

ಇನ್ನು ಟಿಕೆಟ್ ಆಕಾಂಕ್ಷಿಗಳಾಗಿರುವ ಯಶಪಾಲ್ ಸುವರ್ಣ, ವಿಲಾಸ್ ನಾಯಕ್ ಮುಂತಾದವರು ಸದ್ಯಕ್ಕೆ ರೇಸ್ನಲ್ಲಿ ಇದ್ದ ಹಾಗೆ ಕಾಣಿಸುವುದಿಲ್ಲ. ಶೋಭಾ ಮಾತ್ರ ಟಿಕೆಟ್ ರೇಸ್ ನಲ್ಲಿ ಹೆಗ್ಡೆ ಅವರಿಗಿಂತ ತುಂಬಾ ಮುಂದಿದ್ದಾರೆ.

ಬಿಜೆಪಿಯಿಂದ ಯಾರು ನಿಂತರೆ ಗೆಲ್ಲುತ್ತಾರೆ?
ಸದ್ಯಕ್ಕೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಯಾರನ್ನೇ ನಿಲ್ಲಿಸಿದರೂ ಗೆಲುವು ನಿರಾಯಾಸ ಎನ್ನುವ ಆತ್ಮವಿಶ್ವಾಸದಲ್ಲಿ ಬಿಜೆಪಿ ಇದೆ. ಕ್ಷೇತ್ರದಲ್ಲಿ ಎಲ್ಲೆ ಸಂಚರಿಸಿದರೂ ಬಿಜೆಪಿಯ ಆತ್ಮವಿಶ್ವಾಸ ಸುಳ್ಳಲ್ಲ ಎಂಬುದು ಕಂಡುಬರುತ್ತದೆ. ಶೋಭಾ ಕರಂದ್ಲಾಜೆ ಅವರ ಬಗ್ಗೆ ಕ್ಷೇತ್ರದಾದ್ಯಂತ ಅಸಮಾಧಾನ ಇದೆ ನಿಜ. ಆದರೆ ಆಕೆ ಮತ್ತೊಮ್ಮೆ ಸ್ಪರ್ಧಿಸಿದರೆ ಗೆಲ್ಲುವುದಿಲ್ಲ ಎಂದು ಹೇಳಲು ಹಲವರು ಸಿದ್ಧರಿಲ್ಲ. ಕ್ಷೇತ್ರದಾದ್ಯಂತ ಬಿಜೆಪಿ ಪರವಾದ ಒಲವಿದೆ. ಮೋದಿ ಅಲೆ ಇಲ್ಲದಿದ್ದರೂ ಮೋದಿಯನ್ನು ಆರಾಧಿಸುವ ಯುವ ಮತದಾರರ ಪಡೆ ಇದೆ. ಸದ್ಯಕ್ಕೆ ಇಲ್ಲಿ ಯಾರೇ ಬಿಜೆಪಿಯಿಂದ ನಿಂತರೂ ಗೆಲ್ಲುತ್ತಾರೆ ಎಂಬ ವಾತಾವರಣವಿದೆ. ಆದರೆ ವಿಶೇಷ ಏನು ಗೊತ್ತೆ? ಜಯಪ್ರಕಾಶ ಹೆಗ್ಡೆ ಬಿಜೆಪಿ ಅಭ್ಯರ್ಥಿಯಾದಲ್ಲಿ ಶೋಭಾ ಅವರಿಗಿಂತ ಹೆಚ್ಚು ಮಗತಳ ಅಂತರದಿಂದ ಗೆಲ್ಲುತ್ತಾರೆ ಮತ್ತು ಹೆಗ್ಡೆ ಅವರ ಗೆಲುವು ಅತ್ಯಂತ ಸುಲಭವಾಗಲಿದೆ ಎಂದು ಬಿಜೆಪಿಗರು ಜೊತೆಗೆ ಮತದಾರರು ಸ್ಪಷ್ಟವಾಗಿ ಹೇಳುತ್ತಾರೆ.

ಇಷ್ಟೆಲ್ಲ ಹೇಳಿದ ಬಳಿಕವೂ ಶೋಭಾ ಕರಂದ್ಲಾಜೆ ಅವರೇ  ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುಂದಿನ ಅಭ್ಯರ್ಥಿ. ಇದರಲ್ಲಿ ಏನಾದರೂ ಬದಲಾವಣೆ ಆಗಬೆಕೆಂದರೆ ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಪವಾಡವೇ ಆಗಬೇಕು. ಸದ್ಯಕ್ಕೆ ಅಂತಹ ಪವಾಡ ನಡೆಯುವ ಸಾಧ್ಯತೆ ತೀರಾ ಕಡಿಮೆ. 

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ