ಸ್ಮಶಾನ ಕಾಯುವ ಧೀರ ಮಹಿಳೆ ಉಡುಪಿಯ ವನಜಾ ಪೂಜಾರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ

ಕರಾವಳಿ ಕರ್ನಾಟಕ ವರದಿ

ಉಡುಪಿ
: 27 ವರ್ಷಗಳಿಂದ ಉಡುಪಿಯ ಬೀಡನಗುಡ್ಡೆ ಸ್ಮಶಾನದಲ್ಲಿ ಕಾವಲುಗಾರ್ತಿಯಾಗಿರುವ ವನಜಾ ಪೂಜಾರಿ ನಿಜಕ್ಕೂ ‘ವೀರ ಮಹಿಳೆ’. ಅದಕ್ಕಾಗಿಯೇ ಈಗ ಕರ್ನಾಟಕ ರಾಜ್ಯ ಸರ್ಕಾರ ವೀರ ಮಹಿಳೆ ವಿಭಾಗದಲ್ಲಿ  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ವನಜಾ ಪೂಜಾರಿ ಅವರನ್ನು ಗೌರವಿಸಿದೆ.

ಸ್ಮಶಾನಕ್ಕೆ ಹಿಂದೂ ಹೆಂಗಸರು ಹೋಗುವುದು ಕಡಿಮೆ. ಆದರೆ ಈ ದಿಟ್ಟ ಮಹಿಳೆ ಸ್ಮಶಾನ ಕಾಯುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಸ್ಮಶಾನ ಕಾಯುತ್ತಿದ್ದ ತನ್ನ ಪತಿ ನಿಧನದ ಬಳಿಕ ಅವರ ಕೆಲಸವನ್ನೇ ವನಜಾ ಪೂಜಾರಿ ಮುಂದುವರಿಸಿಕೊಂಡು ಹೋಗಿದ್ದಾರೆ. 27 ವರ್ಷಗಳ ಸ್ಮಶಾನ ಕಾಯುವ ಕಾಯಕದಲ್ಲಿ 50 ಸಾವಿರಕ್ಕೂ ಹೆಚ್ಚು ಶವಗಳನ್ನು ಇದೆ ಸ್ಮಶಾನದಲ್ಲಿ ದಹನ ಅಥವಾ ದಫನ ಮಾಡುವ ಕಾರ್ಯದ ಉಸ್ತುವಾರಿಯನ್ನು ವನಜಾ ಪೂಜಾರಿ ನೋಡಿಕೊಂಡಿದ್ದಾರೆ.

‘ಸ್ಮಶಾನದಲ್ಲಿ ಭಯವಾಗುವುದಿಲ್ಲವೆ’ ಎಂದು ಕೇಳಿದರೆ ‘ಹೊರ ಪ್ರಪಂಚಕ್ಕಿಂತ ಸ್ಮಶಾನದಲ್ಲೆ ಹೆಚ್ಚು ನೆಮ್ಮದಿ ಇದೆ’ ಎನ್ನುತ್ತಾರೆ ವನಜಾ. ಪತಿಯ ನಿಧನದ ಬಳಿಕ ಮೂವರು ಮಕ್ಕಳ ಜವಾಬ್ದಾರಿ ನನ್ನ ಹೆಗಲಿಗೆ ಬಿತ್ತು. ಪತಿಗೆ ಕೊಟ್ಟ ಮಾತಿನಂತೆ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ. ಇಬ್ಬರು ಹೆಣ್ಣೂ ಮಕ್ಕಳಿಗೆ ಮದುವೆ ಮಾಡಿಸಿದ್ದೇನೆ. ಮಗ ಇಂದು ಸ್ವ ಉದ್ಯೋಗ ಮಾಡಿಕೊಂಡಿದ್ದಾನೆ. ಇದೆಲ್ಲವೂ ಸಾಧ್ಯವಾಗಿದ್ದು ಈ ಸ್ಮಶಾನದ ದುಡಿಮೆಯಿಂದಲೆ ಎನ್ನುತ್ತಾರೆ ಧೀರ ಮಹಿಳೆ ವನಜಾ.

ಸ್ಮಶಾನ ನಡೆಸುವ ಟ್ರಸ್ಟ್ನಿಂದ ಸಾವಿರವೂ ದಾಟದ ಸಹಾಯಧನ ಬರುತ್ತದೆ. ಆದರೆ ಬದುಕು ನಡೆಯುವುದು ಇಲ್ಲಿ ಬಂದು ಶವಸಂಸ್ಕಾರ ನಡೆಸುವ ಜನರು ಕೊಡುವ ಕಾಣಿಕೆಯಿಂದ ಎಂದು ವನಜಾ ಪೂಜಾರಿ ಹೇಳುತ್ತಾರೆ. ಮಕ್ಕಳು ಈ ಕೆಲಸ ಬಿಡು, ಸಾಕು ಎನ್ನುತ್ತಿದ್ದಾರೆ. ಆದರೆ ಕೈಕಾಲಿನಲ್ಲಿ ಶಕ್ತಿ ಇರುವ ತನಕ ಈ ಕೆಲಸವನ್ನೆ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ವನಜಾ ಪೂಜಾರಿ ಹೇಳುವಾಗ ಅವರ ಅದಮ್ಯ ಆತ್ಮವಿಶ್ವಾಸ ಮುಖದಲ್ಲಿ ಎದ್ದು ಕಾಣುತ್ತದೆ.

ಕರಾವಳಿಯ ಮಹಿಳೆಯರು ಧೈರ್ಯ, ಶ್ರಮದ ಬದುಕಿಗೆ ಹೆಆರಾದವರು. ವನಜಾ ಪೂಜಾರಿ ಆ ಧೀರ, ಶ್ರಮಜೀವಿಗಳ ಪರಂಪರೆಯ ಕೊಂಡಿ. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿರುವ ವನಜಾ ಪೂಜಾರಿ ಅವರಿಗೆ ‘ಕರಾವಳಿ ಕರ್ನಾಟಕ’ ಅಭಿನಂದಿಸುತ್ತಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ