ಹಿರಿಯ ಸಾಹಿತಿ ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆ ಕೊ. ಚನ್ನಬಸಪ್ಪ ವಿಧಿವಶ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ನಾಡಿನ ಹಿರಿಯ ಸಾಹಿತಿ, ಚಿಂತಕರಾಗಿದ್ದ ನಾಡೋಜ ಕೊ. ಚನ್ನಬಸಪ್ಪ (96) ಶನಿವಾರ ವಿಧಿವಶರಾದರು.

ವೃತ್ತಿಯಲ್ಲಿ ನ್ಯಾಯವಾದಿ, ನ್ಯಾಯಾಧೀಶರಾಗಿದ್ದ ಕೊ. ಚನ್ನಬಸಪ್ಪ ಸಾಹಿತ್ಯ ವಲಯದಲ್ಲಿ ಕೊಚೆ ಎಂದೇ ಪ್ರಖ್ಯಾತರಾಗಿದ್ದರು. ಕನ್ನಡದ ಮಹತ್ವದ ಚಿಂತಕ, ಸಾಹಿತಿಗಳಲ್ಲಿ ಒಬ್ಬರಾಗಿದ್ದ ಇವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರಿನಲ್ಲಿ ಜನಿಸಿದ್ದ ಚನ್ನಬಸಪ್ಪ ಸ್ವಾತಂತ್ರ ಹೋರಾಟಗಾರ, ನ್ಯಾಯವಾದಿಯಾಗಿದ್ದರು. ಅವರು ವಿದ್ಯಾರ್ಥಿ ಆಗಿದ್ದಾಗಲೇ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಕುವೆಂಪು ಆಪ್ತವರ್ಗದಲ್ಲಿ ಗುರುತಿಸಿಕೊಂಡಿದ್ದ ಇವರು ಸಾಹಿತ್ಯ ಪ್ರೇಮಿಯಷ್ಟೇ ಅಲ್ಲದೆ ಅನೇಕ ಕೃತಿಗಳ ರಚನಾಕಾರರೂ ಸಹ ಆಗಿದ್ದಾರೆ.

 'ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ' ಸೇರಿದಂತೆ ಹಲವಾರು ಮಹತ್ವದ ಕೃತಿಗಳನ್ನು ಇವರು ರಚಿಸಿದ್ದು ಖಜಾನೆ, ರಕ್ತತರ್ಪಣ, ಹಿಂದಿರುಗಿ ಬರಲಿಲ್ಲ, ನ್ಯಾಯಾಲಯದ ಸತ್ಯಕಥೆಗಳು, ಹೃದಯ ನೈವೇದ್ಯ, ಬೆಳಕಿನೆಡೆಗೆ ಇನ್ನೂ ಮೊದಲಾದವು ಇವರ ಪ್ರಮುಖ ಕೃತಿಗಳಾಗಿದೆ.
ವಿಜಯಪುರದಲ್ಲಿ 2015ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಚನ್ನಬಸಪ್ಪ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ಲಭಿಸಿತ್ತು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ಚಿಂತನಶ್ರೀ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳೂ ಇವರಿಗೆ ಸಂದಿದೆ. ’ ಟಿಪ್ಪು ಜಯಂತಿ ಆಚರಣೆ ಕುರಿತು ಇವರು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಆಸ್ಪದ ನೀಡಿತ್ತು.

ಸಿದ್ದರಾಮಯ್ಯ ಸಂತಾಪ
ಹಿರಿಯ ಸಾಹಿತಿ ಕೊ. ಚೆನ್ನಬಸಪ್ಪ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ."ಕರ್ನಾಟಕ ಏಕೀಕರಣದ ಹೋರಾಟಗಾರ, ಕ‌ನ್ನಡ ಪ್ರಜ್ಞೆಯನ್ನು ಉಸಿರಾಗಿಸಿಕೊಂಡ ಹಿರಿಜೀವ,  ಕುವೆಂಪು ಅವರ ಪರಮಾಪ್ತ ಶಿಷ್ಯ, ವೈಯಕ್ತಿಕವಾಗಿ ಸದಾ ನನಗೆ ಮಾರ್ಗದರ್ಶನ ನೀಡುತ್ತಿದ್ದ ಹಿತೈಷಿ ಕೋ.ಚೆನ್ನಬಸಪ್ಪನವರ‌ ಅಗಲಿಕೆಯ ಸುದ್ದಿ ಆಘಾತವನ್ನುಂಟು ಮಾಡಿದೆ. ಆ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ." ಎಂದು ಅವರು ಟ್ವೀಟ್ ಮಾಡಿದ್ದಾರೆ.

ಚಿಂತಕ ಮತ್ತು ಲೇಖಕ ಸನತ್ ಕುಮಾರ್ ಬೆಳಗಲಿ ಕೋ. ಚೆನ್ನಬಸಪ್ಪ ಅವರ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ ಪೋಸ್ಟ್ 
ಕನ್ನಡದ ಸಾಕ್ಷಿ ಪ್ರಜ್ಞೆ ಕೋ,ಚೆನ್ನಬಸಪ್ಪನವರು ಇಂದು ಕೊನೆಯುಸಿರೆಳೆದಿದ್ದಾರೆ,ರಾಷ್ಟ್ರಕವಿ ಕುವೆಂಪು ಅವರ ಪ್ರೀತಿಯ ಶಿಷ್ಯರಾಗಿದ್ದ ಕೋ ಚೆ ಅವರು ನನಗೂ ಗುರು ಸಮಾನರು,ಆಗಾಗ ಫೋನ್ ಮಾಡಿ‌ಮಾತಾಡುತ್ತಿದ್ದ‌ರು ಹೆಚ್ಚು ಮಾತಾಡಬೇಕೆನಿಸಿದಾಗ ಮನೆಗೆಕರೆಯುತ್ತಿದ್ದರು ನನ್ನ ಲೇಖನಗಳನ್ನು ಓದಿ ಅಭಿಪ್ರಾಯ ಹೇಳುತ್ತಿದ್ದರು, ಟಿಪ್ಪು ಸುಲ್ತಾನ ಬಗ್ಗೆ ಸಂಪಾದಿಸಿದ ಪುಸ್ತಕಕ್ಕೆ ನನ್ನ ಲೇಖನವನ್ನು ಆಯ್ಕೆ ಮಾಡಿಕೊಂಡಿದ್ದರು , ಪಾಟೀಲ ಪುಟ್ಟಪ್ಪ,ದೊರೆಸ್ವಾಮಿ ಮತ್ತು ಕೋ ಚೆ ಅವರು ಸಮಕಾಲೀನರು,ಐವತ್ತರ ದಶಕದಲ್ಲಿ ಪ್ರಗತಿಶೀಲ ಸಾಹಿತ್ಯ ಚಳವಳಿ ಆರಂಭವಾದಾಗ ‌‌.ಅನಕೃ ಬಸವರಾಜ ಕಟ್ಟೀಮನಿ,ನಿರಂಜನ ಬೀಚಿ ,ತರಾಸು ಜೊತೆಗೆ ಕೋಚೆ ಅವರು‌ಹೆಗಲಿಗೆ ಹೆಗಲು‌ಕೊಟ್ಟವರು,ಕತೆ ಕಾದಂಬರಿ ,ಅನುವಾದ ಹೀಗೆ ಅಭಿವ್ಯಕ್ತಿ ಯ ಎಲ್ಲ ಪ್ರಾಕಾರಗಳಲ್ಲಿ ಸಾಧನೆ ಮಾಡಿದ ಕೋಚೆ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಹಳ್ಳಿಯೊಂದರಲ್ಲಿ ಜನಿಸಿದರು,ಸ್ವಾತಂತ್ರ್ಯ ಹೋರಾಟ ,ಕರ್ನಾಟಕ ಏಕೀಕರಣ ಚಳವಳಿ,ನಂತರದ ರೈತ ಆಂದೋಲನ ಹೀಗೆ ಮುಂತಾದ ‌ಕಡೆ ತಮ್ಮನ್ನು ತೊಡಗಿಸಿಕೊಂಡರು, ಅನಂತಪುರದಲ್ಲಿ ವ್ಯಾಸಂಗ ‌ಮಾಡುವಾಗ ಹಿರಿಯ ಕಮ್ಯುನಿಸ್ಟ್ ನಾಯಕ ನೀಲಮ್ ರಾಜಶೇಖರ ರೆಡ್ಡಿ ಇವರ ಸಹಪಾಠಿಯಾಗಿದ್ದರು,ನಂತರ ಕಾನೂನು ವ್ಯಾಸಂಗ ಮಾಡಿ ನ್ಯಾಯಾಧೀಶರರಾಗಿ ಸೇವೆ ಸಲ್ಲಿಸಿದರು ,ನಿವ್ರತ್ತಿನಂತರ ತೊಂಬತ್ತೆಂಟರ ಇಳಿ ವಯಸ್ಸಿನಲ್ಲೂ ಹೈಕೋರ್ಟ್ ಗೆ ಬರುತ್ತಿದ್ದರು, ಅರವಿಂದರ ಮಹಾಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿರುವ ಕೋಚೆ ಅವರು ಮುಹಮ್ಮದ ಇಕ್ಬಾಲ್ ಸಾಹಿತ್ಯವನ್ನು ಕನ್ನಡಕ್ಕೆ ತಂದಿದ್ದಾರೆ,ನವ ಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಅವರ "ಬೇಡಿ ಕಳಚಿತು ದೇಶ ಒಡೆಯಿತು" ಸ್ವಾತಂತ್ರ್ಯ ಹೋರಾಟದ ಸಮಗ್ರ ಇತಿಹಾಸವನ್ನು ಕಟ್ಟಿಕೊಡುತ್ತದೆ ಅವರ "ಗಾಂಧಿ ಕಗ್ಗೊಲೆ ಮತ್ತು ಪರಿಣಾಮ" ಪುಸ್ತಕ ಬಾಪು ಹತ್ಯೆಯಲ್ಲಿ‌ ಕೋಮುವಾದಿ ಸಂಘ ಪರಿವಾರದ ಕೈವಾಡದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ, ,ಲಿಂಗಾಯತರು ಹಿಂದುಗಳಲ್ಲ ಎಂಬ ಅವರ ಕೊನೆಯ ಪುಸ್ತಕ ಓದುಗರ ಮೆಚ್ಚುಗೆ ಗಳಿಸಿದೆ ಇಂಥ ಕೋ ಚೆ ನೂರರ ಹೊಸ್ತಿಲಲ್ಲಿ ನಮ್ಮನ್ನು ಅಗಲಿದ್ದಾರೆ, ಈ ಮಹಾಚೇತನಕ್ಕೆ ಹಾರ್ದಿಕ ನಮನಗಳು,ಅವರು ನೀಡಿದ ಬೆಳಕು ನಮ್ಮನ್ನು ಸದಾ ಮುನ್ನಡೆಸಲಿ,

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ