ಎಸ್ಪಿ ಲಕ್ಷ್ಮಣ ನಿಂಬರ್ಗಿ ವರ್ಗಾವಣೆ: ನಿರಾಳರಾದರೆ ಉಡುಪಿ ಪೊಲೀಸರು?

ಕರಾವಳಿ ಕರ್ನಾಟಕ ವರದಿ/ಮಝರ್ ಮುಂದಾಪುರ

ಕುಂದಾಪುರ
: ಯಾವುದೇ ಪ್ರಭಾವ, ವಶೀಲಿ, ಮುಲಾಜಿಗೆ ಒಳಗಾಗದೇ ಕಾನೂನಿನ ಎದುರು ಎಲ್ಲರೂ ಒಂದೇ ಎಂದು ಉಡುಪಿಯಲ್ಲಿ ತನ್ನದೇ ಇಮೇಜನ್ನು ಸೃಷ್ಟಿಸಿದ ಎಸ್ಪಿ ಲಕ್ಷ್ಮಣ ನಿಂಬರ್ಗಿ ಅವರನ್ನು ಚುನಾವಣೆಯ ನೆಪದಲ್ಲಿ ಸರ್ಕಾರ ದಿಢೀರ್ ವರ್ಗ ಮಾಡಿದರೂ ಅವರ ವರ್ಗಾವಣೆಯಿಂದ ಪೊಲೀಸರು ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ನಿಂಬರ್ಗಿ ಅವರು ಬಂದ ಅರಂಭದಲ್ಲಿ ಸದ್ದು ಗದ್ದವಿಲ್ಲದ ಓರ್ವ ತಣ್ಣಗಿನ ಸಾಮಾನ್ಯ ಅಧಿಕಾರಿಯಂತ್ತಿದ್ದು, ಬರಬರುತ್ತಾ ಅವರೊಳಿಗಿದ್ದ ಓರ್ವ  ಕಟ್ಟುನಿಟ್ಟಿನ ಅಧಿಕಾರಿಗೆ ಉಡುಪಿ ಜಿಲ್ಲೆಯೇ ಅಚ್ಚರಿಯಿಂದ ಗಮನಿಸುವಂತಾಗಿತ್ತು. ಅದರಲ್ಲೂ ದನದ ವ್ಯಾಪಾರಿ ಹಾಜಬ್ಬನ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ತಮ್ಮದೇ ಇಲಾಖೆಯ ಇಬ್ಬರು ಪೊಲೀಸ್ ಸಿಬಂದಿಗಳನ್ನು ವಶಕ್ಕೆ ಪಡೆದಿದ್ದು ಇಡೀ ಜಿಲ್ಲಾ ಪೊಲೀಸ್ ಗಢಣವೇ ಬೆಚ್ಚಿ ಬೀಳುವಂತಾಗಿತ್ತು.

ಲೈಂಗಿಕ ಪ್ರಕರಣ ಹಾಗೂ ಅಲ್ಲೊಂದು ಇಲ್ಲೊಂದು ಇನ್ನಿತರ ಪ್ರಕರಣಗಳಲ್ಲಿ ಕೆಲವು ಪೊಲೀಸ್ ಹೆಸರುಗಳು ಹರಿದಾಡತೊಡಗಿದಾಗಲೂ ಯಾವುದೇ ಮುಲಾಜಿಲ್ಲದೆ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದ ನಿಂಬರ್ಗಿ ಅಂತಾ ಏಸ್ಪಿಯವರ ಹೆಸರು ಕೇಳಿದೊಡನೆ  ಕ್ರಿಮಿನಲ್ ಗಳಿಗಿಂತಲೂ ಹೆಚ್ಚಿನ ರೀತಿಯಲ್ಲಿ ಪೊಲೀಸರು ನಡುಗುವಂತಾಗಿತ್ತು.

ಉಡುಪಿಯಲ್ಲಿ ಜರಗಿದ ಕಾಂಗ್ರೆಸ್ ಪ್ರತಿಭಟನೆಯೊಂದರಲ್ಲಿ ಕಾನೂನು ಮೀರಿದ್ದಾರೆಂಬ ನೆಲೆಯಲ್ಲಿ ಖುದ್ದು ನಿಂಬರ್ಗಿಯವರೇ ಅಖಾಡಕ್ಕಿಳಿದು ಓರ್ವ ಸಾಮಾನ್ಯ ಸಿಬಂದಿಯಂತೆ ಕಾಂಗ್ರೆಸ್ ಮರಿ ಪುಢಾರಿಗಳ ಮೇಲೆ ಲಾಠಿ ಬೀಸಿದ್ದು ಸ್ಥಳೀಯ ಕಾಂಗ್ರೆಸ್ ಮರಿ ಪುಢಾರಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಆ ಕಾರಣದಿಂದಲೇ ಅವರನ್ನು ಕೂಡಲೇ ವರ್ಗಾಯಿಸಬೇಕೆಂಬ ಕೂಗು ಸಹಾ ಆವತ್ತಿಗೆ ವಿಧಾನಸಭಾ ಮೆಟ್ಟಲುಗಳ ತನಕವೂ ತೆವಳಾಡಿತ್ತು. ಆದರೆ ಯಾವುದಕ್ಕೂ ಕ್ಯಾರೇ ಎನ್ನದ ನಿಂಬರ್ಗಿ ಮಾತ್ರ ತನ್ನ ದಿಟ್ಟ  ಹಾಗೂ ಕಟ್ಟು ನಿಟ್ಟಿನ ಕಾರ್ಯವೈಖರಿಯಿಂದ ಹತ್ತು ಹಲವಾರು ಜಟಿಲ ಪ್ರಕರಣಗಳನ್ನು ಲೀಲಾಜಾಲವಾಗಿ  ಬೇಧಿಸಿ ಇಷ್ಟರ ತನಕ ಸೇವೆ ಸಲ್ಲಿಸಿದ್ದ  ಉಡುಪಿ ಏಸ್ಪಿಯವರ ಲೀಸ್ಟಿನಲ್ಲಿ ತನ್ನ ಹೆಸರನ್ನು ವಿಶಿಷ್ಠವಾಗಿರಿಸಿಹೋಗಿದ್ದಾರೆ.

ಇತ್ತೀಚೆಗೆ ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿದ ಕೋಟದ ಅವಳಿ ಹತ್ಯೆಯಲ್ಲಂತೂ ಜಿಲ್ಲೆಯೇ ಆಶ್ಚರ್ಯ ಪಡುವಂತೆ ಬೆರಳೆಣಿಕೆಯ ದಿನಗಳೊಳಗೆ ಹಂತಕರನ್ನು ಹೆಡೆಮುರಿ ಕಟ್ಟಿದ್ದಲ್ಲದೆ ಹಂತಕ ಆರೋಪಿಗಳಿಗೆ ಸಹಕಾರ ನೀಡಿದ ಹಿನ್ನಲೆಯಲ್ಲಿ ಇಬ್ಬರು ಪೊಲೀಸರನ್ನು ಸಹಾ ಸೆರೆಮನೆಗೆ ತಳ್ಳಿದ್ದು ಪೊಲೀಸರ ಪಾಲಿಗೆ ಪೊಲೀಸ್ ಅಧಿಕಾರಿ ನಿಂಬರ್ಗಿಯೇ ಶತ್ರು ಎಂಬಂತೆ ಅವರ ಹೆಸರು ಕೇಳಿದೊಡನೆ ಪೊಲೀಸರು ಬೆವರು ಒರೆಸಿಕೊಳ್ಳುವಂತಾಗಿದ್ದು ಸುಳ್ಳಲ್ಲಾ.  ಎಲ್ಲೋ ಒಂದೆಡೆ ರಜೆ ಕೊಡುವಲ್ಲಿ, ಡ್ಯೂಟಿಗೆ  ನಿಯುಕ್ತಿ ಗೊಳಿಸುವಲ್ಲಿಯೂ ಸಹಾ ಪೊಲೀಸರನ್ನು ಗೋಳು ಹೊಯ್ದು ಕೊಳ್ಳುತ್ತಾರೆಂಬ ಆರೋಪ ಸಹಾ ಖುದ್ದು ಪೊಲೀಸರಿಂದಲೇ ಕೇಳಿ ಬಂದಿತ್ತು.  ಆದರೆ ಯಾವತ್ತಿಗೂ ಪ್ರಚಾರಗಳಿಂದ ಮಾಧ್ಯಮಗಳಿಂದ ದೂರವೇ ಉಳಿದು ಕಾನೂನು ಎಲ್ಲರಿಗೂ ಸಮಾನ ಎಂಬ ಶಾಸನವನ್ನೇ ಉಡುಪಿಯಲ್ಲಿ ಅನುಷ್ಠಾನ ಗೊಳಿಸಿದ ನಿಂಬರ್ಗಿ ಇದೀಗ ದಡಾದಿಢೀರನೆ ವರ್ಗವಾಗಿರುವುದು ಉಳಿದವರಿಗಿಂತಲೂ ಮುಖ್ಯವಾಗಿ ಪೊಲೀಸರ ಪಾಲಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆಯೆಂದು ಕೇಳಿ ಬರುತ್ತಲಿದೆ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ